AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೈನ್ ಸ್ಮೋಕರ್ಸ್ 30 ವರ್ಷ ಬದುಕಬಲ್ಲುರು, ಈ ಎಫ್ ಅಂಡ್ ಒ ಟ್ರೇಡರ್ಸ್ ಬೇಗ ‘ಹೊಗೆ’ನೇ: ವಿಜಯ್ ಕೇದಿಯಾ

Vijay Kedia Warns of F&O Trading: ಷೇರು ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಟ್ರೇಡಿಂಗ್​ಗಳು ನಡೆಯುತ್ತವೆ. ಅದರಲ್ಲಿ ಫ್ಯೂಚರ್ಸ್ ಮತ್ತು ಆಪ್ಷನ್ಸ್ ಟ್ರೇಡಿಂಗ್​​ಗಳೂ ಇವೆ. ಸಾಕಷ್ಟು ಜನರು ಎಫ್ ಅಂಡ್ ಒ ಟ್ರೇಡಿಂಗ್ ಎಂಬ ಆಸೆಯ ಬಾವಿಗೆ ಬಿದ್ದು ಜೇಬು ಖಾಲಿ ಮಾಡಿಕೊಂಡವರಿದ್ದಾರೆ. ಖ್ಯಾತ ಹೂಡಿಕೆದಾರ ವಿಜಯ್ ಕೇದಿಯಾ ಎಫ್ ಅಂಡ್ ಟ್ರೇಡಿಂಗ್ ಸಹವಾಸಕ್ಕೆ ಬರಬೇಡಿ ಎಂದು ಜನರಿಗೆ ತಿಳಿಹೇಳಿದ್ದಾರೆ. ಧೂಮಪಾನಿಗಳು 20ರಿಂದ 30 ವರ್ಷದಲ್ಲಿ ಸಾಯುತ್ತಾರೆ. ಆದರೆ, ಎಫ್ ಅಂಡ್ ಒ ಟ್ರೇಡರ್ಸ್ ಒಂದೇ ದಿನದಲ್ಲಿ ಸತ್ತುಹೋಗುತ್ತಾರೆ ಎಂದಿದ್ದಾರೆ ಕೇದಿಯಾ.

ಚೈನ್ ಸ್ಮೋಕರ್ಸ್ 30 ವರ್ಷ ಬದುಕಬಲ್ಲುರು, ಈ ಎಫ್ ಅಂಡ್ ಒ ಟ್ರೇಡರ್ಸ್ ಬೇಗ ‘ಹೊಗೆ’ನೇ: ವಿಜಯ್ ಕೇದಿಯಾ
ಷೇರು ಮಾರುಕಟ್ಟೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 17, 2024 | 4:28 PM

Share

ನವದೆಹಲಿ, ಏಪ್ರಿಲ್ 17: ಷೇರು ಮಾರುಕಟ್ಟೆಯಲ್ಲಿ ಟ್ರೇಡಿಂಗ್ ಮಾಡುವವರು ಕೋಟಿಗಟ್ಟಲೆ ಹಣ ಸಂಪಾದಿಸುತ್ತಾರೆ ಎನ್ನುವ ಮಾತುಗಳನ್ನು ಕೇಳಿರುತ್ತೇವೆ. ಅಧಿಕ ಹಣ ಮಾಡುವ ಆಸೆಯಲ್ಲಿ ಬಹಳಷ್ಟು ಜನರು ಷೇರುಗಳ ಮೇಲೆ ಹೂಡಿಕೆ ಮಾಡುವ ಬದಲು ಎಫ್ ಅಂಡ್ ಒದಂತಹ ಟ್ರೇಡಿಂಗ್​ನಲ್ಲಿ (futures & options trading) ಭಾಗಿಯಾಗುವುದುಂಟು. ಖ್ಯಾತ ಹೂಡಿಕೆದಾರ ವಿಜಯ್ ಕೇದಿಯಾ (Vijay Kedia) ಈ ಎಫ್ ಅಂಡ್ ಒ ಟ್ರೇಡಿಂಗ್ ಬಗ್ಗೆ ಮತ್ತೊಮ್ಮೆ ಎಚ್ಚರಿಸಿದ್ದಾರೆ. ದಿ ಮಿಂಟ್ ಪತ್ರಿಕೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಎಫ್ ಅಂಡ್ ಒ ಟ್ರೇಡಿಂಗ್ ಬಗ್ಗೆ ಮಾತನಾಡಿರುವ ಕೇದಿಯಾ, ದಯಮಾಡಿ ಯಾರೂ ಈ ಟ್ರೇಡಿಂಗ್ ಗೋಜಿಗೆ ಹೋಗಬೇಡಿ ಎಂದು ಮನವಿ ಮಾಡಿದ್ದಾರೆ.

ಫ್ಯೂಚರ್ ಅಂಡ್ ಆಪ್ಷನ್ಸ್ ಟ್ರೇಡಿಂಗ್ ಬಗ್ಗೆ ವಿಜಯ್ ಕೇದಿಯಾ ಈ ಹಿಂದೆಯೇ ಸಾಕಷ್ಟು ಬಾರಿ ಎಚ್ಚರಿಸಿರುವುಂಟು. ‘ಇಂಥ ಟ್ರೇಡಿಂಗ್​ಗಳ ಬಗ್ಗೆ ನಾನು ಕನಿಷ್ಠವೆಂದರೂ 10 ಪದ್ಯಗಳನ್ನು ಬರೆದಿರಬಹುದು. ಯಾರೂ ಇವನ್ನು ಕೇಳುವುದಿಲ್ಲ. ಕಣ್ಣು ತೆರೆದು ನೋಡು ಮಗಾ, ಹತ್ತರಲ್ಲಿ ಒಂಬತ್ತು ಮಂದಿ ಜೇಬು ಖಾಲಿ ಆಯ್ತು ನೋಡು ಮಗಾ ಎಂಬ ನನ್ನ ಹಾಡನ್ನು ಇಷ್ಟಪಟ್ಟಿದ್ದ ಒಬ್ಬ ವ್ಯಕ್ತಿ ಏರ್ಪೋರ್ಟ್​ನಲ್ಲಿ ಸಿಕ್ಕಿದ್ದರು. ಸ್ವಲ್ಪ ಹೊತ್ತಿನಲ್ಲೇ ಆತ ಫ್ಯೂಚರ್ಸ್ ಮಾರುಕಟ್ಟೆ ಬಗ್ಗೆ ಸಲಹೆ ಕೊಡುವಂತೆ ಸಲಹೆ ಕೇಳಿದ್ರು. ನಾನು ಆತನಿಗೆ ಕೈ ಮುಗಿದೆ,’ ಎಂದು ವಿಜಯ್ ಕೇದಿಯಾ ಆ ಘಟನೆಯನ್ನು ಸ್ಮರಿಸಿದ್ದಾರೆ.

ಸ್ಮೋಕಿಂಗ್ ಮಾಡುವವರಿಗಿಂತ ಮುಂಚೆಯೇ ಎಫ್ ಅಂಡ್ ಒ ಟ್ರೇಡರ್ಸ್ ಸತ್ತು ಹೋಗ್ತಾರೆ

ಹಣ ಮಾಡುವುದು ಬೇರೆ, ಹಣ ಉಳಿಸಿಕೊಳ್ಳುವುದು ಬೇರೆ. ಎಫ್ ಅಂಡ್ ಒದಿಂದ ಲಾಭ ಮಾಡಿಕೊಂಡವರು ಬ್ರೋಕರ್ಸ್ ಮಾತ್ರವೇ. ನೀವು ನಿತ್ಯ ಧೂಮಪಾನ ಮಾಡುತ್ತಿದ್ದರೆ 20-30 ವರ್ಷದಲ್ಲಿ ಸಾಯಬಹುದು. ಆದರೆ, ಎಫ್ ಅಂಡ್ ಒ ಟ್ರೇಡಿಂಗ್ ಮಾಡುತ್ತಿದ್ದರೆ ಮರುದಿನವೇ ಸಾಯುತ್ತೀರಿ, ನೆನಪಿರಲಿ ಎಂದು ಕೇದಿಯಾ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ನಿಮ್ಮ ಹೂಡಿಕೆ ಹೇಗಿರಬೇಕು, ಎಲ್ಲೆಲ್ಲಿ ಎಷ್ಟೆಷ್ಟು ಹೂಡಿಕೆ ಮಾಡಬೇಕು? ಇಲ್ಲಿದೆ ತಜ್ಞರ ಸಲಹೆ

ಷೇರು ಮಾರುಕಟ್ಟೆ ವ್ಯವಹಾರಕ್ಕೆ ಪ್ರವೇಶಿಸುವವರಿಗೆ ಕೇದಿಯಾ ಸಲಹೆ ತಪ್ಪದೇ ಓದಿ…

ನೀವು ಷೇರು ಮಾರುಕಟ್ಟೆಗೆ ಹೊಸಬರಾಗಿದ್ದರೆ ನನ್ನ ಸಲಹೆ ಎಂದರೆ ಮ್ಯೂಚುವಲ್ ಫಂಡ್​ನಿಂದ ಆರಂಭಿಸಿ. ನೇರವಾಗಿ ಷೇರನ್ನು ಆಯ್ದುಕೊಳ್ಳುವುದು ರಿಸ್ಕ್. ನೀವು ಬೇರೆಯವರನ್ನು ನೋಡಿ ಷೇರು ಆಯ್ಕೆ ಮಾಡುತ್ತೇನೆ ಎಂದರೆ ಆಗುವುದಿಲ್ಲ. ಬೇರೆಯವರು ಹೇರ್​ಕಟ್ ಮಾಡುತ್ತಿರುವುದನ್ನು ನೋಡಿ ನೀವು ಹೇರ್​ಕಟ್ ಮಾಡಲು ಸಾಧ್ಯವಾ? ಹಾಗಾಗುತ್ತಿದ್ದರೆ ನೀವೇ ಹೇರ್ ಕಟ್ ಮಾಡುತ್ತಿದ್ದಿರಿ. ಆದ್ದರಿಂದ ಮೊದಲು ಮ್ಯೂಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡಿ, ಬಳಿಕ ಹಂತ ಹಂತವಾಗಿ ಷೇರುಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಕಲಿತುಕೊಳ್ಳಬಹುದು ಎಂದು ಹೂಡಿಕೆದಾರ ವಿಜಯ್ ಕೇದಿಯಾ ಸಲಹೆ ನೀಡಿದ್ದಾರೆ.

ಏನಿದು ಫ್ಯೂಚರ್ಸ್ ಅಂಡ್ ಆಪ್ಷನ್ಸ್ ಟ್ರೇಡಿಂಗ್?

ಸ್ಟಾಕ್‌ ಮಾರ್ಕೆಟ್​ನಲ್ಲಿ ಫ್ಯೂಚರ್ಸ್‌ ಮತ್ತು ಆಪ್ಷನ್​ಗಳನ್ನ ಡಿರೈವೆಟಿವ್‌ ಪ್ರಾಡಕ್ಟ್ಸ್‌ ಅಂತಾ ಕರೆಯುತ್ತಾರೆ. ಫ್ಯೂಚರ್ಸ್‌ ಮಾರುಕಟ್ಟೆಯಲ್ಲಿ, ಪೂರ್ವನಿರ್ಧಾರಿತ ಬೆಲೆಯಲ್ಲಿ ನಿರ್ದಿಷ್ಟ ದಿನಾಂಕದಂದು ಸ್ಟಾಕ್‌ ಅಥವಾ ಅಸೆಟ್‌ ಮೇಲೆ ವಹಿವಾಟು ನಡೆಯುತ್ತದೆ. ಮತ್ತೊಂದೆಡೆ, ಆಪ್ಷನ್ಸ್‌ ಕಾಂಟ್ರ್ಯಾಕ್ಟ್​ನಲ್ಲಿ, ನಿರ್ದಿಷ್ಟ ದಿನಾಂಕದಂದು ಪೂರ್ವನಿರ್ಧಾರಿತ ಬೆಲೆಯಲ್ಲಿ ಅಸೆಟ್‌ ಖರೀದಿಸುವ ಹಕ್ಕು ವರ್ತಕರಿಗೆ ಇರುತ್ತದೆ. ಆದರೆ ಅವರು ಖರೀದಿ ಮಾಡಲೇಬೇಕು ಎಂದೇನು ಇಲ್ಲ. ಅಂದರೆ ಅವರು ಕಾಂಟ್ರ್ಯಾಕ್ಟ್‌ ಅಥವಾ ಒಪ್ಪಂದವನ್ನ ಬಿಟ್ಟುಕೊಡಬಹುದು. ಆದರೆ ಅವರು ತಾವು ಪಾವತಿಸಿರೋ ಪ್ರೀಮಿಯಂ ಮೊತ್ತವನ್ನ ಕಳೆದುಕೊಳ್ಳುತ್ತಾರೆ.

ಇದನ್ನೂ ಓದಿ: ಚಿನ್ನ ವರ್ಸಸ್ ಷೇರು, 2023-24ರಲ್ಲಿ ಹೆಚ್ಚು ಲಾಭ ತಂದಿದ್ದು ಯಾವುದು? ಇಂಟ್ರೆಸ್ಟಿಂಗ್ ವಿಷಯ

ಆಪ್ಷನ್ಸ್‌ ಟ್ರೇಡಿಂಗ್​ನಲ್ಲಿ ಹೂಡಿಕೆದಾರರು ಕಡಿಮೆ ವೆಚ್ಚದೊಂದಿಗೆ ಪಾಲ್ಗೊಳ್ಳಲು ಅವಕಾಶ ಇದೆ. ಹಾಗೇ ಲಾಭ ಇದ್ದಾಗ, ಅದು ಗಣನೀಯ ಪ್ರಮಾಣದಲ್ಲಿದ್ದರೆ ಅದು ಲಾಟರಿ ಗೆದ್ದಷ್ಟು ಖುಷಿ ಕೊಡುತ್ತದೆ. ಡೈಲಿ ಎಕ್ಸ್‌ ಪೈರಿ ಆಪ್ಷನ್​ನಿಂದಾಗಿ ಜನರು ಫಲಿತಾಂಶಕ್ಕೆ ದೀರ್ಘಾವಧಿ ಕಾಯೋದು ಬೇಕಾಗುವುದಿಲ್ಲ. ಒಡಿಟಿಇ ಆಪ್ಷನ್​ಗಳು ಈ ನಿಟ್ಟಿನಲ್ಲಿ ವಿಶೇಷವಾಗಿವೆ. ಯಾಕೆಂದರೆ ಅವು ಟ್ರೇಡ್‌ ಆದ ದಿನಾನೇ ಎಕ್ಸ್​ಪೈರ್‌ ಆಗತ್ತವೆ. ಕಡಿಮೆ ಹಣದೊಂದಿಗೆ ದೊಡ್ಡ ಪ್ರಮಾಣದಲ್ಲಿ ಸ್ಟಾಕ್​ಗಳಲ್ಲಿ ಅಥವಾ ಇತರ ಅಸೆಟ್​ಗಳಲ್ಲಿ ವಹಿವಾಟು ನಡೆಸಬಹುದು ಎನ್ನುವುದು ಖರೀದಿದಾರರಿಗೆ ಇರುವ ಒಂದು ಅನುಕೂಲ.

ಒಡಿಟಿಇ ಆಪ್ಷನ್​ಗಳಲ್ಲಿ, ಗಣನೀಯ ಲಾಭವಿದೆ. ಅದೇ ರೀತಿ ಹೆಚ್ಚಿನ ರಿಸ್ಕ್ ಸಹ ಇದೆ. ಏಕೆಂದರೆ ಬೆಲೆ ಮತ್ತು ಒಡಿಟಿಇ ಆಪ್ಷನ್​ಗಳ ಮೌಲ್ಯ ಕ್ಷಿಪ್ರವಾಗಿ ಬದಲಾಗುತ್ತಲೇ ಇರುತ್ತದೆ. ಇದನ್ನು ಸರಿಯಾಗಿ ಮ್ಯಾನೇಜ್ ಮಾಡುವುದು ಸವಾಲಿನ ಕೆಲಸ ಆಗಿರುತ್ತದೆ. ನಿರಂತರ ನಿಗಾ ಮತ್ತು ಸಮಯಕ್ಕೆ ತಕ್ಕ ನಿರ್ಧಾರ ಅಥವಾ ರಿಯಲ್‌ ಟೈಮ್‌ ಡಿಸಿಷನ್‌ ಮೇಕಿಂಗ್‌ ಇದಕ್ಕೆ ಬೇಕು. ತಕ್ಷಣ ನಿರ್ಧಾರ ಕೈಗೊಳ್ಳುವ ಶಕ್ತಿ ಇರಬೇಕು.

(ಎಫ್ ಅಂಡ್ ಒ ಮಾಹಿತಿ ಕೃಪೆ: ಮನಿ9)

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ