ಚಿನ್ನ ಮತ್ತು ಬೆಳ್ಳಿ ಬೆಲೆಗಳು (gold and silver prices) ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಸತತವಾಗಿ ಮೀರಿ ಹೋಗುತ್ತಲೇ ಇವೆ. ನಿರೀಕ್ಷೆಗಿಂತ ಬಹಳ ವೇಗವಾಗಿ ಬೆಲೆಗಳು ಹೆಚ್ಚುತ್ತಿವೆ. ಅಚ್ಚರಿ ಎಂದರೆ ಅಮೆರಿಕದ ಡಾಲರ್ ಮೌಲ್ಯವೂ ಈ ಸಂದರ್ಭದಲ್ಲಿ ಹೆಚ್ಚುತ್ತಿದೆ. ಸಾಮಾನ್ಯವಾಗಿ ಡಾಲರ್ ಮೌಲ್ಯ ಹೆಚ್ಚಿದರೆ ಚಿನ್ನದ ಬೆಲೆ ಕಡಿಮೆ ಆಗುತ್ತದೆ. ಡಾಲರ್ ಮೌಲ್ಯ ಕುಸಿದರೆ ಚಿನ್ನಕ್ಕೆ ಬೇಡಿಕೆ ಹೆಚ್ಚುತ್ತದೆ. ಇದು ಮಾರುಕಟ್ಟೆಯ ಸಹಜ ಪ್ರವೃತ್ತಿ. ಆದರೆ, ಈಗ ಡಾಲರ್ ದರ ಹೆಚ್ಚುತ್ತಿದೆ. ಜೊತೆಜೊತೆಗೆ ಚಿನ್ನದ ಬೆಲೆಯೂ ಹೆಚ್ಚುತ್ತಿದೆ. ಕಳೆದ 10 ದಿನದಲ್ಲಿ ಚಿನ್ನದ ಬೆಲೆ ಗ್ರಾಮ್ಗೆ 450 ರೂನಷ್ಟು ಹೆಚ್ಚಾಗಿದೆ. ಈ ಅಸಹಜ ಮಾರುಕಟ್ಟೆ ಪ್ರವೃತ್ತಿಗೆ ಏನು ಕಾರಣ?
ಇದನ್ನೂ ಓದಿ: ಚಿನ್ನ, ಬೆಳ್ಳಿ ಮತ್ತೆ ದುಬಾರಿ; ಈ ವಾರವೂ ಬೆಲೆಗಳ ನಾಗಾಲೋಟ
ಇಸ್ರೇಲ್ ಪ್ಯಾಲಸ್ಟೀನ್ ಸಂಘರ್ಷ, ರಷ್ಯಾ ಉಕ್ರೇನ್ ಕಗ್ಗಂಟು ಇತ್ಯಾದಿ ಜಾಗತಿಕ ರಾಜಕೀಯ ಸೂಕ್ಷ್ಮ ಸಂಗತಿ ಒಂದು ರೀತಿಯಲ್ಲಿ ಅನಿಶ್ಚಿತ ವಾತಾವರಣ ನಿರ್ಮಿಸಿದೆ. ಪೆಟ್ರೋಲಿಯಂ ಹೊಂದಿದ ದೇಶಗಳು ಯುದ್ಧದಲ್ಲಿ ಭಾಗಿಯಾಗಿಬಿಟ್ಟರೆ ಜಾಗತಿಕ ಆರ್ಥಿಕತೆಗೆ ಹೊಡೆತ ಕೊಡಬಹುದು ಎನ್ನುವ ದೂರಾಲೋಚನೆಯು ಹೂಡಿಕೆದಾರರದ್ದಾಗಿದೆ. ಈ ಸಂದರ್ಭದಲ್ಲಿ ಸುರಕ್ಷಿತ ಹೂಡಿಕೆ ಎಂದರೆ ಚಿನ್ನ, ಬೆಳ್ಳಿ ಇತ್ಯಾದಿ ಅಪರೂಪದ ಲೋಹಗಳೇ.
ಚೀನಾದ ಸೆಂಟ್ರಲ್ ಬ್ಯಾಂಕ್ ಇತ್ತೀಚಿನ ಕೆಲ ವಾರಗಳಲ್ಲಿ ಚಿನ್ನ, ಬೆಳ್ಳಿಗಳನ್ನು ಯಥೇಚ್ಛವಾಗಿ ಖರೀದಿಸುತ್ತಿದೆ. ಇದೂ ಕೂಡ ಚಿನ್ನಕ್ಕೆ ಬೇಡಿಕೆ ಹೆಚ್ಚಿಸಿದೆ.
ಇದರ ಜೊತೆಗೆ, ಅಮೆರಿಕದ ಕೃಷಿಯೇತರ ಸಂಬಳದ ದತ್ತಾಂಶ ಬಿಡುಗಡೆ ಆಗಿದ್ದರ ಪರಿಣಾಮವೂ ಇದೆ. ಈ ದತ್ತಾಂಶದ ಪ್ರಕಾರ ಅಮೆರಿಕದಲ್ಲಿ ನಿರುದ್ಯೋಗ ಪ್ರಮಾಣವು ಶೇ. 3.9ರಿಂದ ಶೇ. 3.8ಕ್ಕೆ ಇಳಿದಿದೆ. ಇದಾದ ಬಳಿಕ ಚಿನ್ನ ಮತ್ತು ಬೆಳ್ಳಿ ಬೆಲೆಗಳು ದಾಖಲೆಯ ಮಟ್ಟಕ್ಕೆ ಏರತೊಡಗಿದವು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ