ನವದೆಹಲಿ, ಫೆಬ್ರುವರಿ 14: ಭಾರತ ರತ್ನ ಪುರಸ್ಕೃತ ಎಂಎಸ್ ಸ್ವಾಮಿನಾಥನ್ ನೇತೃತ್ವದ ರಾಷ್ಟ್ರೀಯ ರೈತರ ಆಯೋಗ (National Commission for Farmers) ಅಥವಾ ಸ್ವಾಮಿನಾಥನ್ ಆಯೋಗ 2004ರಿಂದ 2006ರ ಅವಧಿಯಲ್ಲಿ ನಾಲ್ಕೈದು ವರದಿಗಳನ್ನು ಬಿಡುಗಡೆ ಮಾಡಿತ್ತು. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವೇ ರಚಿಸಿದ್ದ ಸ್ವಾಮಿನಾಥನ್ ಆಯೋಗ ಈ ವರದಿಗಳ ಮೂಲಕ ಎಂಎಸ್ಪಿ ಸೇರಿದಂತೆ ರೈತರ ಬದುಕನ್ನು ಪರಿವರ್ತಿಸಬಲ್ಲಂತಹ ಹಲವು ಶಿಫಾರಸುಗಳನ್ನು ಮಾಡಿತ್ತು. ಆದರೆ, ಎರಡು ದಶಕವಾದರೂ ಸರ್ಕಾರಗಳು ಮಾತ್ರ ಇದನ್ನು ಜಾರಿಗೆ ತಂದಿಲ್ಲ. ರೈತರು ಕೈಗೊಳ್ಳುವ ಯಾವುದೇ ಪ್ರತಿಭಟನೆಯಲ್ಲಿ ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ ಇದ್ದೇ ಇರುತ್ತದೆ. ಈಗಲೂ ಇದೇ ವರದಿಯು ರೈತರ ಪ್ರಮುಖ ಆಗ್ರಹ ಆಗಿದೆ. ಸ್ವಾಮಿನಾಥನ್ ಆಯೋಗ ಜಾರಿ ಮಾಡುವುದಾಗಿ ಚುನಾವಣಾ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದಿದ್ದ ಎನ್ಡಿಎ ಸರ್ಕಾರವಾಗಲೀ, ಆಯೋಗ ರಚಿಸಿ ವರದಿಗಳನ್ನು ಸ್ವೀಕರಿಸಿದ್ದ ಸ್ವತಃ ಯುಪಿಎ ಸರ್ಕಾರವಾಗಲೀ ಎಂಎಸ್ಪಿ ಬಗ್ಗೆ ಆಯೋಗದ ಶಿಫಾರಸು ಜಾರಿ ಮಾಡಲು ಮನಸು ಮಾಡಲಿಲ್ಲ ಅಥವಾ ಮಾಡಿಲ್ಲ ಎನ್ನುವುದು ವಾಸ್ತವ.
ಈ ಬಾರಿ ಕೇಂದ್ರದಲ್ಲಿ ಯುಪಿಎ ಸರ್ಕಾರ ಬಂದರೆ ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಎಂಎಸ್ಪಿಗೆ ಕಾನೂನು ಗ್ಯಾರಂಟಿ ಕೊಡುವುದಾಗಿ ರಾಹುಲ್ ಗಾಂಧಿ ಘೋಷಿಸಿದ್ದಾರೆ. ಅಷ್ಟಕ್ಕೂ ಈ ಹಿಂದಿನ ಯುಪಿಎ ಸರ್ಕಾರ ಎಂಸಿಪಿ ಕುರಿದ ಆಯೋಗದ ಶಿಫಾರಸ್ಸನ್ನು ಜಾರಿಗಳಿಸುವ ಇಚ್ಛಾ ಶಕ್ತಿ ಯಾಕೆ ತೋರಲಿಲ್ಲ?
ಇದನ್ನೂ ಓದಿ: ಫೆಬ್ರವರಿ 16 ರಂದು ಗ್ರಾಮೀಣ ಭಾರತ ಬಂದ್ಗೆ ಕರೆ ನೀಡಿದ ಸಂಯುಕ್ತ ಕಿಸಾನ್ ಮೋರ್ಚಾ
2010ರಲ್ಲಿ ಅಂದಿನ ಕೃಷಿ ಖಾತೆ ರಾಜ್ಯ ಸಚಿವ ಕೆ.ವಿ. ಥಾಮಸ್ ಅವರು ರಾಜ್ಯಸಭೆಗೆ ನೀಡಿದ ಮಾಹಿತಿ ಈ ಬಗ್ಗೆ ಬೆಳಕು ಚೆಲ್ಲುತ್ತದೆ. ‘ಒಟ್ಟಾರೆ ಉತ್ಪಾದನಾ ವೆಚ್ಚಕ್ಕಿಂತ ಶೇ. 50ರಷ್ಟು ಹೆಚ್ಚು ಬೆಲೆ ನಿಗದಿ ಮಾಡಿದರೆ ಮಾರುಕಟ್ಟೆಯನ್ನು ವಿಚಲಿತಗೊಳಿಸಬಹುದು. ಉತ್ಪಾದನಾ ವೆಚ್ಚದ ಜೊತೆ ಎಂಎಸ್ಪಿಯನ್ನು ಯಾಂತ್ರಿಕವಾಗಿ ಜೋಡಿಸುವುದು ಕೆಲ ಸಂದರ್ಭದಲ್ಲಿ ವ್ಯತಿರಿಕ್ತ ಪರಿಣಾಮ ಬೀರಬಹುದು,’ ಎಂದು ಕೇಂದ್ರ ಸಚಿವರು ರಾಜ್ಯಸಭೆಗೆ ಉತ್ತರಿಸಿದ್ದರು.
ಒಂದು ಬೆಳೆಯ ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ ಶೇ. 50ರಷ್ಟಾದರೂ ಹೆಚ್ಚು ಮೊತ್ತವನ್ನು ಕನಿಷ್ಠ ಬೆಂಬಲ ಬೆಲೆಯಾಗಿ ನಿಗದಿ ಮಾಡಬೇಕು ಎಂಬುದು ನ್ಯಾಷನಲ್ ಕಮಿಷನ್ ಫಾರ್ ಫಾರ್ಮ್ಸ್ ಆಯೋಗ ಮಾಡಿದ ಒಂದು ಪ್ರಮುಖ ಸಲಹೆ. ಇದನ್ನು ಸಿ2+50% ಸೂತ್ರವಾಗಿಯೂ ನೋಡಬಹುದು. ಈ ಸೂತ್ರದಲ್ಲಿ ರೈತರು ಒಂದು ಬೆಳೆ ಬೆಳೆಯಲು ಮಾಡುವ ಎಲ್ಲಾ ವೆಚ್ಚವನ್ನೂ ಒಳಗೊಳ್ಳಲಾಗುತ್ತದೆ. ಗೊಬ್ಬರ, ಔಷಧ ಇತ್ಯಾದಿಗೆ ಮಾಡಿರುವ ವೆಚ್ಚ ಮಾತ್ರವಲ್ಲದೇ, ಅಷ್ಟೂ ದಿನ ಶ್ರಮದ ಬೆಲೆಯನ್ನೂ ಪರಿಗಣಿಸಲಾಗುತ್ತದೆ. ಉದಾಹರಣೆಗೆ, ಒಂದು ಎಕರೆಯಲ್ಲಿ ರಾಗಿ ಬೆಳೆಯಲು ಎಷ್ಟು ಮಂದಿ ಎಷ್ಟು ದಿನ ಜಮೀನಿನಲ್ಲಿ ದುಡಿದಿದ್ದಾರೆ, ಇದೂ ಕೂಡ ವೆಚ್ಚದಲ್ಲಿ ಒಳ್ಳಬೇಕು. ಆ ಜಮೀನಿನ ಬಾಡಿಗೆ ಬೆಲೆಯನ್ನೂ ಸೇರಿಸಬೇಕು. ಇಷ್ಟೆಲ್ಲಾ ಅಂಶಗಳನ್ನು ಒಳಗೊಂಡ ಒಟ್ಟಾರೆ ವೆಚ್ಚಕ್ಕೆ ಶೇ. 50ರಷ್ಟು ಹೆಚ್ಚು ಮೊತ್ತವನ್ನು ಎಂಎಸ್ಪಿಯಾಗಿ ನಿಗದಿ ಮಾಡಬೇಕೆನ್ನುವುದು ಸ್ವಾಮಿನಾಥನ್ ಆಯೋಗ ಮಾಡಿದ ಶಿಫಾರಸು.
ಇದನ್ನೂ ಓದಿ: ತರಾತುರಿಯಲ್ಲಿ ಎಂಎಸ್ಪಿ ತರಲು ಸಾಧ್ಯವಿಲ್ಲ; ಸರ್ಕಾರದೊಂದಿಗೆ ಮಾತುಕತೆಗೆ ರೈತರು ಮುಂದಾಗಬೇಕು:ಕೇಂದ್ರ ಕೃಷಿ ಸಚಿವ ಮುಂಡಾ
ಸ್ವಾಮಿನಾಥನ್ ಆಯೋಗದ ಶಿಫಾರಸಿನ ಪ್ರಕಾರ ಎಲ್ಲಾ ಬೆಳೆಗಳಿಗೂ ಎಂಎಸ್ಪಿ ನಿಗದಿ ಮಾಡಿದರೆ ಸರ್ಕಾರ ಬಳಿ ಉಳಿಯುವ ಹಣ ಅಲ್ಪ ಮಾತ್ರ. ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಸರ್ಕಾರ ಈಗ ಬೇರೆ ಅಭಿವೃದ್ಧಿ ಕಾರ್ಯಗಳಿಗೆ ಹಿಂದೇಟು ಹಾಕುವ ಪರಿಸ್ಥಿತಿ ಇದೆ. ಕೇಂದ್ರವೂ ಇದೇ ಸ್ಥಿತಿಗೆ ಸಿಲುಕಬಹುದು ಎಂಬ ಅಭಿಪ್ರಾಯ ತಜ್ಞರಿಂದ ವ್ಯಕ್ತವಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ