PM Kisan: ಲಕ್ಷಾಂತರ ಮಂದಿಗೆ ಕೈತಪ್ಪಿದೆ ಪಿಎಂ ಕಿಸಾನ್ ಹಣ; ಕಾರಣ ಏನು?

|

Updated on: Mar 09, 2023 | 12:12 PM

13th Installment of PM Kisan Scheme: ಪಿಎಂ ಕಿಸಾನ್ ಯೋಜನೆಯ 11ನೇ ಕಂತಿನ ಹಣ 11.27 ಕೋಟಿ ಮಂದಿಗೆ ಸಿಕ್ಕಿತ್ತು. ಈಗ 13ನೇ ಕಂತಿನ ಹಣ ಪಡೆದವರ ಸಂಖ್ಯೆ 8.54 ಮಾತ್ರ. ಫಲಾನುಭವಿಗಳ ಸಂಖ್ಯೆ ಶೇ. 25ರಷ್ಟು ಕಡಿಮೆ ಆಗಿದೆ. ಇದಕ್ಕೆ ಕಾರಣಗಳೇನು?

PM Kisan: ಲಕ್ಷಾಂತರ ಮಂದಿಗೆ ಕೈತಪ್ಪಿದೆ ಪಿಎಂ ಕಿಸಾನ್ ಹಣ; ಕಾರಣ ಏನು?
ರೈತ
Follow us on

ಬೆಂಗಳೂರು: ಕಳೆದ ತಿಂಗಳು, ಫೆಬ್ರುವರಿ 27ರಂದು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13ನೇ ಕಂತಿನ ಹಣ (PM Kisan Samman Nidhi 13th Installment) ಬಿಡುಗಡೆ ಆಗಿತ್ತು. ಬೆಳಗಾವಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಿಎಂ ಕಿಸಾನ್ ಕಂತಿನ ಹಣ ಬಿಡುಗಡೆ ಆಗಿರುವುದನ್ನು ಘೋಷಿಸಿದ್ದರು. ಆದರೆ, ಹಿಂದಿನ ಕಂತುಗಳಿಗೆ ಹೋಲಿಸಿಕೊಂಡರೆ ಈ ಬಾರಿ ಹಣ ಪಡೆದಿರುವವರ ಸಂಖ್ಯೆ ಬಹಳ ಕಡಿಮೆ ಇದೆ. 8.54 ಕೋಟಿ ಫಲಾಭವಿಗಳಿಗೆ ಮಾತ್ರ ಪಿಎಂ ಕಿಸಾನ್ ಯೋಜನೆಯ ಹೊಸ ಕಂತಿನ ಹಣ ಸಿಕ್ಕಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

2022, ಅಕ್ಟೋಬರ್ 17ರಂದು ಬಿಡುಗಡೆಯಾದ 12ನೇ ಕಂತಿನ ಹಣ 8.99 ಕೋಟಿ ಫಲಾನುಭವಿ ರೈತರನ್ನು ತಲುಪಿತ್ತು. ಅದಕ್ಕೂ ಹಿಂದಿನ ಕಂತು ಮೇ 31ರಂದು ಬಿಡುಗಡೆಯಾಗಿದ್ದು, ಅದು 11.27 ಕೋಟಿ ರೈತರ ಕೈಸೇರಿತ್ತು. ಪಿಎಂ ಕಿಸಾನ್​ನ ಅಧಿಕೃತ ಪೋರ್ಟಲ್​ಗೆ ಹೋದರೆ 13ನೇ ಕಂತಿನ ಹಣ ಎಷ್ಟು ಮಂದಿಗೆ ಕೈಸೇರಿದೆ ಎನ್ನುವ ಡೇಟಾ ಸಿಗುತ್ತದೆ. ಅದರ ಪ್ರಕಾರ 2022ರ ಡಿಸೆಂಬರ್​ನಿಂದ 2023 ಮಾರ್ಚ್​ವರೆಗಿನ 4 ತಿಂಗಳ ಅವಧಿಯ ಕಂತಿನ ಹಣ 8,53,80,362 ಮಂದಿಗೆ ತಲುಪಿದೆ ಎಂದು ಹೇಳಲಾಗಿದೆ. ಏಪ್ರಿಲ್​ನಿಂದ ಜುಲೈವರೆಗಿನ ಅವಧಿಗೆ ಕೊಡಲಾದ ಕಂತಿನ ಹಣಕ್ಕೆ ಹೋಲಿಸಿದರೆ ಈ 13ನೇ ಕಂತಿನ ಹಣ ಪಡೆದವರ ಸಂಖ್ಯೆಯಲ್ಲಿ ಶೇ. 25ರಷ್ಟು ಕಡಿಮೆ ಆಗಿದೆ.

ಕಳೆದ ವರ್ಷದ ಮೇ 31ರಂದು 11ನೇ ಕಂತಿಗೆ ಒಟ್ಟು 21,000 ಕೋಟಿ ರೂ ಬಿಡುಗಡೆ ಆಗಿತ್ತು. ಪ್ರತಿಯೊಬ್ಬ ಫಲಾನುಭವಿ ರೈತರ ಖಾತೆಗಳಿಗೆ ತಲಾ 2,000 ರೂ ಹಣ ವರ್ಗಾವಣೆ ಆಗಿತ್ತು. 13ನೇ ಕಂತಿಗೆ ಬಿಡುಗಡೆಯಾದ ಹಣ 16,800 ಕೋಟಿ ರೂ ಮಾತ್ರ. ಅಂದರೆ ಬಹಳಷ್ಟು ಫಲಾನುಭವಿಗಳು ಪಟ್ಟಿಯಿಂದ ಕೈಬಿಟ್ಟುಹೋಗಿರುವುದು ಸ್ಪಷ್ಟವಾಗಿದೆ.

ಫಲಾನುಭವಿಗಳು ಕಡಿಮೆ ಆಗಿರುವುದಕ್ಕೆ ಏನು ಕಾರಣ?

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಸಂಖ್ಯೆ ಕಡಿಮೆಗೊಂಡಿರುವುದಕ್ಕೆ ಸರ್ಕಾರದಿಂದ ಅಧಿಕೃತವಾಗಿ ಕಾರಣ ಕೊಡಲಾಗಿಲ್ಲ. ಆದರೆ ಈ ಬಾರಿಯ ಕಂತಿನ ಹಣ ಬಿಡುಗಡೆಗೆ ಮುನ್ನ ಎಲ್ಲಾ ಫಲಾಭವಿಗಳಿಂದ ಕೆವೈಸಿ ಅಪ್​ಡೇಟ್ ಮಾಡಲು ಸರ್ಕಾರ ನಿರ್ದೇಶಿಸಿತ್ತು. ಸರಿಯಾಗಿ ಕೆವೈಸಿ ಪರಿಷ್ಕರಿಸದ ರೈತರಿಗೆ 13ನೇ ಕಂತಿನ 2 ಸಾವಿರ ರೂ ಹಣ ಕೈಸೇರಿಲ್ಲದೇ ಇರಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿPM KUSUM Scheme: ಪಿಎಂ ಕುಸುಮ್- ಕೇಂದ್ರದ ದೂರದೃಷ್ಟಿಯ ಒಂದು ಯೋಜನೆ

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಫಲಾನುಭವಿ ರೈತರು ಕೆವೈಸಿ ಅಪ್​ಡೇಟ್ ಮಾಡುವುದರ ಜೊತೆಗೆ ಇನ್ನೂ ಕೆಲ ದಾಖಲೆಗಳನ್ನು ಸರಿಯಾಗಿ ಒದಗಿಸುವಂತೆ ತಿಳಿಸಲಾಗಿತ್ತು.

  1. ಜಮೀನು ದಾಖಲೆಯನ್ನು ಮಾರ್ಕ್ ಮಾಡಿರಬೇಕು
  2. ಪಿಎಂ ಕಿಸಾನ್ ಪೋರ್ಟಲ್​ನಲ್ಲಿ ಇಕೆವೈಸ್ ಪೂರ್ಣಗೊಳಿಸಿರಬೇಕು
  3. ಫಲಾನುಭವಿ ರೈತನ ಬ್ಯಾಂಕ್ ಖಾತೆಗೆ ಆಧಾರ್ ಜೋಡಿತವಾಗಿರಬೇಕು
  4. ಬ್ಯಾಂಕ್ ಖಾತೆಯು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್​ಗೂ ಲಿಂಕ್ ಆಗಿರಬೇಕು.

ಈ ನಾಲ್ಕು ಷರುತ್ತುಗಳಿಗೆ ಬದ್ಧವಾಗಿರುವ ಫಲಾನುಭವಿ ರೈತರು ಮಾತ್ರ ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣ ಪಡೆದಿರಬಹುದು ಎಂದು ಭಾವಿಸಲಾಗಿದೆ.

ಫಲಾನುಭವಿಗಳ ಪಟ್ಟಿ ವೀಕ್ಷಿಸಿ

ನೀವು ಪಿಎಂ ಕಿಸಾನ್ ಪೋರ್ಟಲ್​ಗೆ ಹೋದರೆ ಬೆನಿಫಿಷಿಯರಿ ಸ್ಟೇಟಸ್, ಬೆನಿಫಿಷಿಯರಿ ಲಿಸ್ಟ್ ಇತ್ಯಾದಿಯನ್ನು ನೋಡಬಹುದು. ಬೆನಿಫಿಶಿಯರಿ ಲಿಸ್ಟ್ ಒತ್ತಿದರೆ ಫಲಾನುಭವಿಗಳ ಪಟ್ಟಿ ನೋಡುವ ಅವಕಾಶ ಸಿಗುತ್ತದೆ. ಅದರಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು ಮತ್ತು ಗ್ರಾಮವನ್ನು ಆಯ್ದುಕೊಂಡರೆ ಪಟ್ಟಿ ತೆರೆದುಕೊಳ್ಳುತ್ತದೆ.

ಇಲ್ಲ, ನೀವು ಫಲಾನುಭವಿಗಳಾಗಿದ್ದರೆ ನಿಮ್ಮ ಬ್ಯಾಂಕ್ ಖಾತೆಯ ಸ್ಟೇಟ್ಮೆಂಟ್ ತೆರೆಸಿ ನೋಡಿ, ಹಣ ಕೈಸೇರಿದೆಯಾ ಇಲ್ಲವಾ ಎಂದು ಖಚಿತಪಡಿಸಿಕೊಳ್ಳಿ. ಒಂದು ವೇಳೆ ಹಣ ಬಂದಿಲ್ಲದಿದ್ದರೆ ನಿಮ್ಮ ಸಮೀಪದ ರೈತ ಕೇಂದ್ರ ಅಥವಾ ಪಂಚಾಯತಿ ಕೇಂದ್ರಕ್ಕೆ ಹೋಗಿ ವಿಚಾರಿಸಿ ಮಾಹಿತಿ ಪಡೆಯಬಹುದು.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:46 am, Thu, 9 March 23