Fact Check: ಆರು ವರ್ಷ ಹಿಂದೆ ಬ್ಯಾನ್ ಆದ 500 ರು, 1000 ರು ನೋಟುಗಳ ವಿನಿಮಯಕ್ಕೆ ಇನ್ನೂ ಅವಕಾಶ ಇದೆಯಾ?
Fake Letter For Exchange of Demonetised Notes: ಡೀಮಾನಿಟೈಸ್ ಆದ 500 ರೂ ಮತ್ತು 1000 ರೂ ಮುಖಬೆಲೆಯ ನೋಟುಗಳನ್ನು ವಿದೇಶೀ ಪ್ರಜೆಗಳು ವಿನಿಯಮ ಮಾಡಿಕೊಳ್ಳಲು ಕೊನೆಯ ಅವಕಾಶ ಇದೆ ಎನ್ನುವಂತಹ ಸುತ್ತೋಲೆಯೊಂದು ಹರಿದಾಡುತ್ತಿದ್ದು, ಅದು ಸುಳ್ಳು ಎಂದು ಪಿಐಬಿ ಫ್ಯಾಕ್ಟ್ ಚೆಕ್ ಸ್ಪಷ್ಟಪಡಿಸಿದೆ.
ನವದೆಹಲಿ: 2016ರಲ್ಲಿ ಹಿಂಪಡೆಯಲಾದ ಅಂದಿನ 500 ರೂ ಮತ್ತು 1000 ರೂ ಮುಖಬೆಲೆಯ ನೋಟುಗಳನ್ನು ಹೊಂದಿರುವ ವಿದೇಶೀ ಪ್ರಜೆಗಳಿಗೆ ಅವನ್ನು ವಿನಿಮಯ (Exchange of Demonetized Notes) ಮಾಡುವ ಅವಕಾಶ ಕಲ್ಪಿಸಲಾಗಿದೆ ಎನ್ನುವಂತಹ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ (Social Media) ಹಬ್ಬುತ್ತಿದೆ. ಬಹಳಷ್ಟು ಮಂದಿ ನೆಟ್ಟಿಗರು ಈ ಸುದ್ದಿ ಕಂಡು ಚಕಿತರಾಗಿದ್ದಾರೆ. ಡೀಮಾನಿಟೈಸ್ ಆದ ನೋಟುಗಳನ್ನು ವಿನಿಯಮ ಮಾಡಲು ವಿದೇಶ ನಾಗರಿಕರಿಗೆ ಕೊನೆಯ ಸೌಲಭ್ಯ ಎನ್ನುವಂತಹ ಹೆಡಿಂಗ್ ಹೊಸಂದಿರುವ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಮುದ್ರೆ ಇರುವ ಲೆಟರ್ ಹೆಡ್ನಲ್ಲಿ ಮುದ್ರಿಸಲಾಗಿರುವ ಲೆಟರ್ ಈ ಗೊಂದಲ ಸೃಷ್ಟಿಸಿದೆ. ಈ ಬಗ್ಗೆ ಸರ್ಕಾರದ ಪಿಐಬಿ ಸಂಸ್ಥೆಯ ಫ್ಯಾಕ್ಟ್ ಚೆಕ್ ವಿಭಾಗವು ಸ್ಪಷ್ಟನೆ ನೀಡಿದ್ದು, ಈ ಸುತ್ತೋಲೆ ನಿಜವಲ್ಲ, ನಕಲಿ ಎಂದು ಸ್ಪಷ್ಟಪಡಿಸಿದೆ.
ಈ ನಕಲಿ ನೋಟೀಸ್ ಅನ್ನು ಲಗತ್ತಿಸಿ ಟ್ವೀಟ್ ಮಾಡಿರುವ ಪಿಐಬಿ ಫ್ಯಾಕ್ಟ್ ಚೆಕ್, ಡೀಮಾನಿಟೈಸ್ ಆದ ಕರೆನ್ಸಿ ನೋಟುಗಳನ್ನು ವಿನಿಯಮ ಮಾಡುವ ಸೌಲಭ್ಯವನ್ನು ವಿದೇಶೀ ಪ್ರಜೆಗಳಿಗೆ 2017ರಲ್ಲೇ ನಿಲ್ಲಿಸಲಾಗಿದೆ ಎಂದು ತಿಳಿಸಿದೆ.
An order issued in the name of @RBI claims that exchange facility for Indian demonetized currency notes for foreign citizens has been extended#PIBFactCheck
✅This order is #fake
✅The exchange facility for Indian demonetized currency notes for foreign citizens ended in 2017. pic.twitter.com/cF0IwMu3Wb
— PIB Fact Check (@PIBFactCheck) March 6, 2023
ಇದನ್ನೂ ಓದಿ: Cryptos Under Law: ಕ್ರಿಪ್ಟೋ ವಹಿವಾಟಿಗೆ ಪಿಎಂಎಲ್ಎ ಕಾನೂನು ಅನ್ವಯ; ಗುಪ್ತ ವ್ಯವಹಾರ ರಹಸ್ಯವಾಗಿ ಉಳಿಯಲ್ಲ
ನೋಟ್ ಬ್ಯಾನ್ ಕಥೆ
ಎಲ್ಲರಿಗೂ ಗೊತ್ತಿರುವಂತೆ 2016 ನವೆಂಬರ್ 8ರಂದು ಸರ್ಕಾರ ಡೀಮಾನಿಟೈಸೇಶನ್ ಕ್ರಮ ಘೋಷಿಸಿತು. ಆಗ ಚಾಲನೆಯಲ್ಲಿದ್ದ 500 ರೂ ಮತ್ತು 1000 ರೂ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿ ಆದೇಶ ಹೊರಡಿಸಿತು. ಈ ಎಲ್ಲಾ ಅಮಾನ್ಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಕಾಲಾವಕಾಶ ಕೊಡಲಾಗಿತ್ತು. 2017ರವರೆಗೂ ಅವಕಾಶ ವಿಸ್ತರಿಸಲಾಗಿತ್ತು. ಭಾರತದ ನಾಗರಿಕರು ಮತ್ತು ವಿದೇಶಗಳ ನಾಗರಿಕರಿಗೂ ಆಗಲೇ ಅಂತಿಮ ಗಡುವು ಕೊಟ್ಟಾಗಿತ್ತು.
ನೋಟು ಅಮಾನ್ಯಗೊಳಿಸಿದ ಬಳಿಕ ಸರ್ಕಾರ 2000 ರೂ ಮುಖಬೆಲೆಯ ಹೊಸ ನೋಟುಗಳನ್ನು ಮುದ್ರಿಸಿ ಬಿಡುಗಡೆ ಮಾಡಿತು. ಅದರ ಬೆನ್ನಲ್ಲೇ 500 ಮುಖಬೆಲೆಯ ಹೊಸ ರೀತಿಯ ನೋಟುಗಳೂ ಮುದ್ರಣಗೊಂಡವು. ಕೆಲವಾರು ತಿಂಗಳ ಕಾಲ ಜನಸಾಮಾನ್ಯರು ನೋಟುಗಳು ಸರಿಯಾಗಿ ಲಭ್ಯವಾಗದೇ ಪರದಾಡಿದ್ದು ಹೌದು.
ಆಗ ದೇಶದಲ್ಲಿ ಚಲಾವಣೆಯಲ್ಲಿತ್ತೆನ್ನಲಾದ ಕಪ್ಪು ಹಣವನ್ನು ನಿಯಂತ್ರಿಸಲೆಂದು ನೋಟ್ ಬ್ಯಾನ್ ಕ್ರಮ ಕೈಗೊಳ್ಳಲಾಗಿತ್ತು ಎಂದು ಹೇಳಲಾಗಿತ್ತು. ಕಾರಣ ಅದೇನೇ ಇದ್ದರೂ ನೋಟ್ ಬ್ಯಾನ್ ಆದ ಬಳಿಕ ಭಾರತದ ಡಿಜಿಟಲ್ ವಹಿವಾಟು ಗಮನಾರ್ಹವಾಗಿ ಹೆಚ್ಚತೊಡಗಿದ್ದು ನಿಜ. ಸರಿಯಾದ ಪ್ರಮಾಣದಲ್ಲಿ ನಗದು ಹಣ ಲಭ್ಯ ಇಲ್ಲದ ಕಾರಣ ಜನರು ಅನಿವಾರ್ಯವಾಗಿ ಯುಪಿಐ ಇತ್ಯಾದಿ ಡಿಜಿಟಲ್ ವಹಿವಾಟು ವ್ಯವಸ್ಥೆಯನ್ನು ಅಪ್ಪಬೇಕಾಯಿತು. ಸರ್ಕಾರ ಕೂಡ ಅಷ್ಟರೊಳಗೆ ಸಮರ್ಪಕವಾದ ಡಿಜಿಟಲ್ ವಹಿವಾಟು ವ್ಯವಸ್ಥೆ ರೂಪಿಸಿದ್ದು ಅನುಕೂಲವಾಗಿತ್ತು.
ನೋಟ್ ಬ್ಯಾನ್ ಆಗಿ ಆರೇಳು ವರ್ಷಗಳ ಬಳಿಕ ಈಗ ಭಾರತದಲ್ಲಿ ಡಿಜಿಟಲ್ ವಹಿವಾಟು ಗಣನೀಯವಾಗಿ ವೃದ್ಧಿಸಿದೆ. ಭಾರತದ ಯುಪಿಐ ವ್ಯವಸ್ಥೆ ಇಡೀ ವಿಶ್ವದ ಗಮನ ಸೆಳೆದಿದೆ. ಕೆಲ ದೇಶಗಳು ಯುಪಿಐ ಮಾದರಿಯ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಮುಂದಾಗುತ್ತಿವೆ.
ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ