ನವದೆಹಲಿ, ಅಕ್ಟೋಬರ್ 22: ಎಂಟು ವರ್ಷದಲ್ಲಿ ದೇಶದ 95 ಪ್ರತಿಶತದಷ್ಟು ಗ್ರಾಮಗಳಲ್ಲಿನ ಭೂದಾಖಲೆಗಳನ್ನು ಡಿಜಿಟೈಸ್ ಮಾಡಲಾಗಿದೆ ಎನ್ನುವ ಮಾಹಿತಿಯನ್ನು ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ನೀಡಿದ್ದಾರೆ. ಅವರು ನೀಡಿರುವ ಹೇಳಿಕೆ ಪ್ರಕಾರ 2016ರಿಂದೀಚೆ 6,26,000 ಗ್ರಾಮಗಳ ಲ್ಯಾಂಡ್ ರೆಕಾರ್ಡ್ಗಳನ್ನು ಡಿಜಿಟೀಕರಣಗೊಳಿಸಲಾಗಿದೆ. ಸುಮಾರು 5,000 ಉಪನೊಂದಣಿ ಕಚೇರಿಗಳನ್ನು ಕಂಪ್ಯೂಟೀರಣಗೊಳಿಸಲಾಗಿದ್ದು, ಆ ಮೂಲಕ ಕ್ಷಿಪ್ರ ವೇಗದಲ್ಲಿ ದಾಖಲೆಗಳ ಡಿಜಿಟಲೀಕರಣ ಮಾಡಲು ಸಾಧ್ಯವಾಗಿದೆ.
2016ರ ಏಪ್ರಿಲ್ನಲ್ಲಿ ಡಿಜಿಟಲ್ ಇಂಡಿಯಾ ಭೂ ದಾಖಲೆಗಳ ಆಧುನೀಕರಣಗೊಳಿಸುವಿಕೆಯ ಯೋಜನೆ ಆರಂಭಿಸಲಾಗಿದೆ. ಇದರಲ್ಲಿ ಕೇಂದ್ರ ಸರ್ಕಾರವೇ ಪೂರ್ಣ ಅನುದಾನ ನೀಡುತ್ತದೆ. ಜಮೀನು ಮಾಲಕತ್ವದ ಬಗ್ಗೆ ಯಾವ ಗೊಂದಲ ಇಲ್ಲದಂತೆ ಎಚ್ಚರವಹಿಸಲು ಈ ಡಿಜಿಟಲೀಕರಣ ನೆರವಾಗಲಿದೆ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆದ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಇದನ್ನೂ ಓದಿ: ದೇಶಾದ್ಯಂತ ಜನೌಷಧ ಕೇಂದ್ರಗಳಲ್ಲಿ ಆದ ಒಟ್ಟು ಬಿಸಿನೆಸ್ ಈ ವರ್ಷ 1,000 ಕೋಟಿ ರೂಗಿಂತಲೂ ಹೆಚ್ಚು
ನಗರ ಭಾಗದಲ್ಲಿ ಭೂ ಸರ್ವೇಕ್ಷಣೆಯಲ್ಲಿ ಆಧುನಿಕ ತಂತ್ರಜ್ಞಾನಗಳ ಬಗ್ಗೆ ಎರಡು ದಿನದ ಜಾಗತಿಕ ತರಬೇತಿ ಕಾರ್ಯಗಾರಕ್ಕೆ ವರ್ಚುವಲ್ ಆಗಿ ಚಾಲನೆ ನೀಡಿ ಮಾತನಾಡಿದ ಕೇಂದ್ರ ಸಚಿವರು, ಆರು ಕೋಟಿಗೂ ಅಧಿಕ ಭೂದಾಖಲೆಗಳ ಜೊತೆಗೆ 2.23 ಕೋಟಿ ನಕ್ಷೆಗಳನ್ನೂ ಡಿಜಿಟೈಸ್ ಮಾಡಲಾಗಿದೆ. 1.4 ಕೋಟಿ ಭೂ ಆಧಾರ್ ಅನ್ನು ವಿತರಿಸಲಾಗಿದೆ ಎನ್ನುವ ಮಾಹಿತಿ ತಿಳಿಸಿದ್ದಾರೆ.
ಭೂ ವ್ಯಾಜ್ಯಗಳಿಂದಾಗಿ ಹಲವು ಯೋಜನೆಗಳು ನಿಂತು ಹೋಗಿ ದೇಶದ ಜಿಡಿಪಿಗೆ ಶೇ. 1.3ರಷ್ಟು ನಷ್ಟವಾಗುತ್ತಿರುವ ಅಂದಾಜಿದೆ. ಭಾರತದಲ್ಲಿ ದಾಖಲಾಗಿರುವ ಸಿವಿಲ್ ವ್ಯಾಜ್ಯಗಳಲ್ಲಿ ಶೇ. 66ರಷ್ಟು ಪ್ರಕರಣಗಳು ಜಮೀನು ಅಥವಾ ಆಸ್ತಿ ವ್ಯಾಜ್ಯಕ್ಕೆ ಸಂಬಂಧಿಸಿದ್ದೇ ಆಗಿವೆ. ಈ ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಇರುವ ಸರಾಸರಿ ಅವಧಿ 20 ವರ್ಷ ಎನ್ನಲಾಗಿದೆ. ಈ ಕಾರಣಕ್ಕೆ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ಸರ್ಕಾರ ಈ ಯೋಜನೆ ಆರಂಭಿಸಿತ್ತು.
ಇದನ್ನೂ ಓದಿ: ‘ಮಹತ್ವದ ಜಾಗತಿಕ ಪಾತ್ರಕ್ಕೆ ಭಾರತ ಸಿದ್ಧ’: ಅಮೆರಿಕದ ಕೊಲಂಬಿಯಾ ಯೂನಿವರ್ಸಿಟಿಯಲ್ಲಿ ನಿರ್ಮಲಾ ಸೀತಾರಾಮನ್ ಭಾಷಣ
ಕೇಂದ್ರ ಸರ್ಕಾರದ ಭೂಮಿ ಸಂಪನ್ಮೂಲ ವಿಭಾಗವು ಡಿಜಿಟಲ್ ಇಂಡಿಯಾ ಲ್ಯಾಂಡ್ ರೆಕಾರ್ಡ್ಸ್ ಮಾಡರ್ನೈಸೇಶನ್ ಪ್ರೋಗ್ರಾಮ್ ಅನ್ನು ಜಾರಿಗೊಳಿಸಿದೆ. ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೆಶಗಳ ಕಂದಾಯ ಮತ್ತು ನೊಂದಣಿ ಇಲಾಖೆಗಳ ಮೂಲಕ ಈ ಯೋಜನೆ ಜಾರಿ ಮಾಡಲಾಗುತ್ತಿದೆ. ಇದರ ಸಂಪೂರ್ಣ ಜಾರಿ ವೆಚ್ಚವನ್ನು ಕೇಂದ್ರವೇ ಭರಿಸುತ್ತದೆ.
ಡಿಜಿಟೈಸ್ ಮಾಡುವುದೆಂದರೆ, ಕಾಗದದಲ್ಲಿ ಇರುವ ಭೂದಾಖಲೆಗಳನ್ನು ಸ್ಕ್ಯಾನ್ ಮಾಡಿ ಅದರ ಪಿಡಿಎಫ್ ಪ್ರತಿಯನ್ನು ಕಂಪ್ಯೂಟರ್ನಲ್ಲಿ ಸಂಗ್ರಹಿಸಲಾಗಿ ಇಡಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ