AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಹತ್ವದ ಜಾಗತಿಕ ಪಾತ್ರಕ್ಕೆ ಭಾರತ ಸಿದ್ಧ’: ಅಮೆರಿಕದ ಕೊಲಂಬಿಯಾ ಯೂನಿವರ್ಸಿಟಿಯಲ್ಲಿ ನಿರ್ಮಲಾ ಸೀತಾರಾಮನ್ ಭಾಷಣ

Nirmala Sitharaman at Columbia University, USA: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಮೆರಿಕದ ನ್ಯೂಯಾರ್ಕ್​ನ ಕೊಲಂಬಿಯಾ ಯೂನಿವರ್ಸಿಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದ ಜಾಗತಿಕ ಪಾತ್ರದ ಕುರಿತು ಮಾತನಾಡಿದರು. ಭಾರತದ ಆರ್ಥಿಕತೆ ಹೇಗೆ ಬೆಳೆಯುತ್ತಿದೆ, ಜಾಗತಿವಾಗಿ ಅದು ಯಾವ ಪಾತ್ರ ವಹಿಸುತ್ತಿದೆ ಎಂಬಿತ್ಯಾದಿ ಅಂಶಗಳ ಬಗ್ಗೆ ಅವರು ಬೆಳಕು ಚೆಲ್ಲಿದರು.

‘ಮಹತ್ವದ ಜಾಗತಿಕ ಪಾತ್ರಕ್ಕೆ ಭಾರತ ಸಿದ್ಧ’: ಅಮೆರಿಕದ ಕೊಲಂಬಿಯಾ ಯೂನಿವರ್ಸಿಟಿಯಲ್ಲಿ ನಿರ್ಮಲಾ ಸೀತಾರಾಮನ್ ಭಾಷಣ
ನಿರ್ಮಲಾ ಸೀತಾರಾಮನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 22, 2024 | 11:12 AM

Share

ನ್ಯೂಯಾರ್ಕ್, ಅಕ್ಟೋಬರ್ 22: ಜಾಗತಿಕವಾಗಿ ಭಾರತ ನಿರ್ವಹಿಸುತ್ತಿರುವ ಪಾತ್ರ ಹಿರಿದಾಗುತ್ತಿದೆ. ಹೊಸ ಆವಿಷ್ಕಾರಗಳನ್ನು ಹಂಚಿಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ರಚನಾತ್ಮಕವಾಗಿ ತೊಡಗಿಸಿಕೊಳ್ಳಲು ಭಾರತ ಸಿದ್ಧವಿದೆ. ಜಾಗತಿಕ ಶಾಂತಿ ಮತ್ತು ಸಮೃದ್ಧತೆ ಹೆಚ್ಚಿಸಲು ತನ್ನದೇ ಕೊಡುಗೆ ನೀಡುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಅಮೆರಿಕದ ನ್ಯೂಯಾರ್ಕ್​ನಲ್ಲಿರುವ ಕೊಲಂಬಿಯಾ ಯೂನಿವರ್ಸಿಟಿಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಭಾರತ ಜಾಗತಿಕವಾಗಿ ಹೇಗೆ ಪ್ರಮುಖ ಶಕ್ತಿಯಾಗಿ ರೂಪುಗೊಳ್ಳುತ್ತಿದೆ ಎಂಬುದನ್ನು ವಿವರಿಸಿದ್ದಾರೆ.

‘2047ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದು ಒಂದು ಶತಮಾನವಾಯಿತು. ಭಾರತೀಯರಿಗೆ ಮಾತ್ರವಲ್ಲ ಜಾಗತಿಕ ಸಮುದಾಯಕ್ಕೂ ಸಮೃದ್ಧತೆಯ ಹೊಸ ಯುಗವನ್ನು ಸೂಚಿಸಲು ಆ ಸಂದರ್ಭವು ಸದವಕಾಶ ಒದಗಿಸಿದೆ.

‘ಮುಂಬರುವ ದಶಕಗಳಲ್ಲಿ ಭಾರತ ತನ್ನ ಜನಸಂಖ್ಯಾ ಶಕ್ತಿಯನ್ನು ಹೇಗೆ ನಿಭಾಯಿಸುತ್ತದೆ, ಜಾಗತಿಕವಾಗಿ ಹೇಗೆ ಸಹಭಾಗಿತ್ವ ಸಾಧಿಸುತ್ತದೆ, ವೇಗವಾಗಿ ಬದಲಾಗುತ್ತಿರುವ ಜಗತ್ತಿನ ಸಂಕೀರ್ಣತೆಯಲ್ಲಿ ಹೇಗೆ ಸಾಗುತ್ತದೆ ಎಂಬುದು ಮುಖ್ಯವಾಗಲಿದೆ. ಮುಂದಿನ ಹಾದಿಯಲ್ಲಿ ಸವಾಲುಗಳು ಇದ್ದರೂ ಭಾರತಕ್ಕೆ ಸಾಕಷ್ಟು ಅವಕಾಶಗಳಿವೆ. ಈ ಅವಕಾಶಗಳು ಆರ್ಥಿಕತೆಗೆ ಮಾತ್ರ ಸಂಬಂಧಿಸಿದ್ದಲ್ಲ, ತಂತ್ರಜ್ಞಾನ, ಸುಸ್ಥಿರತೆ ಮತ್ತು ಸಮಗ್ರ ಪ್ರಗತಿ ವಿಚಾರದಲ್ಲಿ ಜಾಗತಿಕವಾಗಿ ಭಾರತ ದಾರಿದೀಪವಾಗಲಿದೆ’ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಇದನ್ನು ಓದಿ: ಪಿಂಚಣಿದಾರರಿಗೆ ಒಳ್ಳೆ ಸುದ್ದಿ; ಆನ್‌ಲೈನ್‌ನಲ್ಲಿ ಸಮಸ್ಯೆ ಪರಿಹರಿಸಲು ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

ಭಾರತದ ಆರ್ಥಿಕ ಮೂಲಭೂತ ಅಂಶಗಳು ಉತ್ತಮ

ಜಾಗತಿಕ ವಾತಾವರಣ ಹೆಚ್ಚೆಚ್ಚು ಸಂಕೀರ್ಣಗೊಳ್ಳುತ್ತಿದ್ದರೂ ಭಾರತದ ಸ್ಥೂಲ ಆರ್ಥಿಕ ಮೂಲಭೂತ ಅಂಶಗಳು ಗಟ್ಟಿಯಾಗಿವೆ. ಇದು ಭವಿಷ್ಯದ ಪ್ರಗತಿಗೆ ಪ್ರಬಲ ಬುನಾದಿಯಾಗುತ್ತಿದೆ. 2013ರಲ್ಲಿ ಭಾರತ ವಿಶ್ವದ 10ನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಿತ್ತು. ಈಗ ಐದನೇ ಸ್ಥಾನಕ್ಕೆ ಏರಿದೆ. 2027ಕ್ಕೆ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಬಹುದು ಎಂಬುದು ಐಎಂಎಫ್ ಅಂದಾಜು ಎಂದು ಕೊಲಂಬಿಯಾ ಯೂನಿವರ್ಸಿಟಿಯ ಸಭಾಂಗಣದಲ್ಲಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಕೋವಿಡ್ ಸಾಂಕ್ರಾಮಿಕ ಸಂದರ್ಭವನ್ನು ಸರಿಯಾಗಿ ನಿಭಾಯಿಸಿದ್ದು, ಉತ್ಪಾದನಾ ಸಾಮರ್ಥ್ಯಗಳನ್ನು ಬಲಪಡಿಸಲು ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಂಡಿದ್ದು, ಡಿಜಿಟಲ್ ಮತ್ತು ಹಣಕಾಸು ವ್ಯವಸ್ಥೆ ಮೇಲೆ ಗಮನ ಹರಿಸಿದ್ದು, ಕಾನೂನು ನಿಯಂತ್ರಣದ ನಿಯಮಗಳನ್ನು ಸರಳಗೊಳಿಸಿದ್ದು, ಉದ್ದಿಮೆ ವಾತಾವರಣ ಹೆಚ್ಚು ಸರಳಗೊಳಿಸಿದ್ದು ಇವೆಲ್ಲವೂ ಭಾರತದ ಉತ್ತಮ ಆರ್ಥಿಕ ಪ್ರಗತಿಗೆ ಕೊಡುಗೆ ನೀಡಿವೆ ಎಂದಿದ್ದಾರೆ ನಿರ್ಮಲಾ ಸೀತಾರಾಮನ್.

ಇದನ್ನೂ ಓದಿ: ಮುಂದಿನ ಎರಡು ದಶಕದಲ್ಲಿ ಭಾರತದ ಆರ್ಥಿಕತೆ ಹತ್ತು ಪಟ್ಟು ಬೆಳೆಯುತ್ತಾ? ಎಸ್ ಅಂಡ್ ಪಿ ವರದಿ ಹೇಳೋದಿದು

ನಿರ್ಮಲಾ ಸೀತಾರಾಮನ್ ಹೇಳಿದ ಇತರ ಪ್ರಮುಖ ಅಂಶಗಳಿವು…

  • 2011ರಿಂದೀಚೆ ಬ್ಯಾಂಕ್ ಅಕೌಂಟ್ ಹೊಂದಿರುವ ವಯಸ್ಕರ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ.
  • ಬ್ಯಾಂಕ್ ಖಾತೆದಾರರ ಸಂಖ್ಯೆ ಹೆಚ್ಚಳವಾಗುವುದರೊಂದಿಗೆ ಉಳಿತಾಯದಾರರು ಮತ್ತು ಹೂಡಿಕೆದಾರರ ಪ್ರಮಾಣವೂ ಹೆಚ್ಚಿದೆ.
  • ಹೆಚ್ಚು ಓದಿದ ಮತ್ತು ಹೆಚ್ಚು ಕೌಶಲ್ಯ ಇರುವ ಕೆಲಸಗಾರರ ಸಂಖ್ಯೆ ಹೆಚ್ಚಿರುವುದರಿಂದ ಜಾಗತಿಕ ಆರ್ಥಿಕತೆಯ ಹೊಸ ದಾರಿಗಳಲ್ಲಿ ಹೆಜ್ಜೆ ಹಾಕಲು ಸಾಧ್ಯವಾಗಿದೆ.
  • ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಆರೋಗ್ಯಯುತವಾಗಿದೆ. ಎನ್​ಪಿಎ ಕಡಮೆ ಇದೆ.
  • ಭಾರತದ ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿ ಹೆಚ್ಚುತ್ತಿದೆ. ಭಾರತ್​ಮಾಲಾ, ಸಾಗರ್​ಮಾಲ ಇತ್ಯಾದಿ ಬೃಹತ್ ಗಾತ್ರದ ಯೋಜನೆಗಳು ದೇಶಾದ್ಯಂತ ಸಂಪರ್ಕತೆಯನ್ನು ಪ್ರಬಲಗೊಳಿಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ