ಪಿಂಚಣಿದಾರರಿಗೆ ಒಳ್ಳೆ ಸುದ್ದಿ; ಆನ್‌ಲೈನ್‌ನಲ್ಲಿ ಸಮಸ್ಯೆ ಪರಿಹರಿಸಲು ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ
ಕೇಂದ್ರ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ ಹೊರಡಿಸಿದ ಹೊಸ ಮಾರ್ಗಸೂಚಿಗಳು ದೂರು ಸಲ್ಲಿಸುವ ಪ್ರಕ್ರಿಯೆಯನ್ನು ಹೆಚ್ಚು ಸುಲಭವಾಗಿಸುವ ಗುರಿಯನ್ನು ಹೊಂದಿದೆ. ಈ ಮೂಲಕ ಪಿಂಚಣಿದಾರರಿಗೆ ಕೇಂದ್ರ ಸರ್ಕಾರ ಖುಷಿ ಸುದ್ದಿಯನ್ನು ನೀಡಿದೆ.
ನವದೆಹಲಿ: ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ ಸಂತಸದ ಸುದ್ದಿಯನ್ನು ನೀಡಿದೆ. ಪಿಂಚಣಿಗೆ ಸಂಬಂಧಿಸಿದ ಕುಂದುಕೊರತೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯವು ಹೊರಡಿಸಿದ ಹೊಸ ಮಾರ್ಗಸೂಚಿಗಳು ದೂರು ಸಲ್ಲಿಸುವ ಪ್ರಕ್ರಿಯೆಯನ್ನು ಹೆಚ್ಚು ಸುಲಭವಾಗಿಸುವ ಮತ್ತು ಪರಿಣಾಮಕಾರಿಯಾಗಿ ಮಾಡುವ ಗುರಿಯನ್ನು ಹೊಂದಿವೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಈ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. CPENGRAMS ಪೋರ್ಟಲ್‌ನಲ್ಲಿ ಅಸ್ತಿತ್ವದಲ್ಲಿರುವ ಕುಂದುಕೊರತೆಗಳ ಪರಿಹಾರ ವ್ಯವಸ್ಥೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ. ಮಾರ್ಗಸೂಚಿಗಳ ಪ್ರಕಾರ, ಕುಂದುಕೊರತೆ ನಿವಾರಣಾ ಅಧಿಕಾರಿಗಳು ಎಲ್ಲಾ ದೂರುಗಳನ್ನು ಸರಿಯಾಗಿ ಪರಿಹರಿಸಬೇಕು. ಒಂದು ವೇಳೆ, ಆ ಕುಂದುಕೊರತೆ ತಮ್ಮ ಇಲಾಖೆಗೆ ಸಂಬಂಧಿಸಿಲ್ಲದಿದ್ದರೆ, ಅವರು ಅದನ್ನು ವಜಾಗೊಳಿಸುವ ಬದಲು ಸರಿಯಾದ ಅಧಿಕಾರಿಗೆ ತ್ವರಿತವಾಗಿ ಮರುನಿರ್ದೇಶಿಸಬೇಕು.
ಇದನ್ನೂ ಓದಿ: ನಾರಿ ಶಕ್ತಿ ನನಗೆ ಸದಾ ಪ್ರೇರಣೆ; ಒಡಿಶಾದ ಮಹಿಳೆಗೆ ಮೋದಿ ಧನ್ಯವಾದ
ಅರ್ಜಿದಾರರಿಗೆ ಅಂತಿಮ ಪರಿಹಾರವಿಲ್ಲದೆ ಯಾವುದೇ ದೂರುಗಳನ್ನು ಕ್ಲೋಸ್ ಮಾಡಬಾರದು ಎಂದು ಕೇಂದ್ರ ಸರ್ಕಾರ ಹೇಳಿದೆ. ನೋಡಲ್ ಅಧಿಕಾರಿಗಳು ಸಕಾಲಿಕ ಪರಿಹಾರವನ್ನು ನೀಡಲು ಪ್ರತಿ ತಿಂಗಳು ಪಿಂಚಣಿ ಸಂಬಂಧಿತ ದೂರುಗಳನ್ನು ಪರಿಶೀಲಿಸುತ್ತಾರೆ.
ಇದಲ್ಲದೆ, ಅವರು ದೂರುಗಳಲ್ಲಿನ ಪ್ರವೃತ್ತಿಯನ್ನು ವಿಶ್ಲೇಷಿಸುತ್ತಾರೆ ಮತ್ತು ಭವಿಷ್ಯದಲ್ಲಿ ಇದೇ ರೀತಿಯ ಸಮಸ್ಯೆಗಳನ್ನು ತಡೆಗಟ್ಟಲು ಪರಿಹಾರಗಳನ್ನು ಒದಗಿಸುವ ಬಗ್ಗೆ ನಿರ್ದೇಶಿಸುತ್ತಾರೆ. ಕೇಂದ್ರ ಸರ್ಕಾರವು 21 ದಿನಗಳಲ್ಲಿ ಪಿಂಚಣಿ ಕುಂದುಕೊರತೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ಈ ಮಾರ್ಗಸೂಚಿಗಳು ಪಿಂಚಣಿದಾರರ ಕುಂದುಕೊರತೆ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತವೆ. ಅವರಿಗೆ ಅಗತ್ಯವಿರುವ ಬೆಂಬಲವನ್ನು ಪಡೆಯುವುದನ್ನು ಸುಲಭಗೊಳಿಸುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:33 pm, Mon, 21 October 24