ಉಡಾನ್ ಸ್ಕೀಮ್ ಮತ್ತಷ್ಟು 10 ವರ್ಷ ವಿಸ್ತರಿಸಿದ ಸರ್ಕಾರ; ಏನಿದು ಯೋಜನೆ?
UDAN scheme updates: ದೇಶದ ವಿವಿಧ ಪ್ರದೇಶಗಳಿಗೆ ವೈಮಾನಿಕ ಸಂಪರ್ಕ ಕಲ್ಪಿಸಲು ನೆರವಾಗುವ ಉಡಾನ್ ಸ್ಕೀಮ್ ಅನ್ನು ಕೇಂದ್ರ ಸರ್ಕಾರ ಇನ್ನೂ 10 ವರ್ಷ ವಿಸ್ತರಿಸಲು ನಿರ್ಧರಿಸಿದೆ. 2016ರ ಅಕ್ಟೋಬರ್ 21ಕ್ಕೆ ಆರಂಭವಾದ ಈ ಯೋಜನೆ ಇವತ್ತಿಗೆ 8 ವರ್ಷ ಪೂರ್ಣಗೊಳಿಸಿದೆ. 2026ರವರೆಗೂ ಜಾರಿಯಲ್ಲಿರುವ ಉಡಾನ್ ಸ್ಕೀಮ್ನ ಅವಧಿ ಈಗ 2036ರವರೆಗೂ ವಿಸ್ತರಣೆ ಆಗುತ್ತಿದೆ.
ನವದೆಹಲಿ, ಅಕ್ಟೋಬರ್ 21: ದೇಶದಲ್ಲಿ ವೈಮಾನಿಕ ಕ್ಷೇತ್ರಕ್ಕೆ ಪುಷ್ಟಿ ಕೊಡಲು, ಹೆಚ್ಚೆಚ್ಚು ಪ್ರದೇಶಗಳಿಗೆ ವಾಯು ಮಾರ್ಗ ಕಲ್ಪಿಸಲು ನೆರವಾಗಲೆಂದು ಶುರುವಾದ ಉಡಾನ್ ಸ್ಕೀಮ್ ಮತ್ತಷ್ಟು ಕಾಲ ಮುಂದುವರಿಯಲಿದೆ. ಹತ್ತು ವರ್ಷಕ್ಕೆಂದು ರೂಪಿಸಲಾದ ಉಡಾನ್ ಸ್ಕೀಮ್ ಅನ್ನು ಇನ್ನೂ 10 ವರ್ಷ ವಿಸ್ತರಿಸಲಾಗಿದೆ. ಕೇಂದ್ರ ವಿಮಾನಯಾನ ಸಚಿವ ಕೆ ರಾಮಮೋಹನ್ ನಾಯ್ಡು ಇಂದು ಸೋಮವಾರ ಈ ನಿರ್ಧಾರವನ್ನು ಘೋಷಿಸಿದ್ದಾರೆ. ಸದ್ಯ 2016ರ ಅಕ್ಟೋಬರ್ 21ಕ್ಕೆ ಈ ಸ್ಕೀಮ್ ಆರಂಭವಾಗಿತ್ತು. ಇವತ್ತಿಗೆ ಈ ಯೋಜನೆಗೆ ಎಂಟು ವರ್ಷ ಆಗಿದೆ. ಈ ಸಂದರ್ಭದಲ್ಲಿ ಸರ್ಕಾರವು ಉಡಾನ್ ಯೋಜನೆಯ ಅವಧಿಯನ್ನು ವಿಸ್ತರಿಸುವ ನಿರ್ಧಾರ ಪ್ರಕಟಿಸಿದೆ.
ಉಡಾನ್ ಎಂದರೆ ಉಡೇ ದೇಶ್ ಕಾ ಆಮ್ ನಾಗರಿಕ್. ಅಂದರೆ ದೇಶದ ಜನಸಾಮಾನ್ಯರಿಗೆ ಮೇಲೇರುವುದು. ಹೆಚ್ಚೆಚ್ಚು ಪ್ರದೇಶಗಳಿಗೆ ಏರ್ ಕನೆಕ್ಟಿವಿಟಿ ಒದಗಿಸಿದಲ್ಲಿ ಬಿಸಿನೆಸ್ಗಳು ಬೆಳೆಯಲು ಅನುಕೂಲವಾಗುತ್ತದೆ. ಪ್ರವಾಸೋದ್ಯಮ ಬೆಳೆಯುತ್ತದೆ. ಉದ್ಯೋಗ ಸೃಷ್ಟಿ ಇತ್ಯಾದಿ ಮೂಲಕ ಆರ್ಥಿಕ ಬೆಳವಣಿಗೆಯೂ ಆಗುತ್ತದೆ. ಹಾಗೆಯೇ, ವಿಮಾನ ಪ್ರಯಾಣವನ್ನು ಕಡಿಮೆ ಬೆಲೆ ಸಾಧ್ಯವಾಗುವಂತೆ ಮಾಡುವುದೂ ಕೂಡ ಈ ಸ್ಕೀಮ್ನ ಉದ್ದೇಶ. ಉಡಾನ್ ಯೋಜನೆಯಿಂದ 601 ಮಾರ್ಗಗಳು ಸೃಷ್ಟಿಯಾಗಿವೆ. 71 ಹೊಸ ಏರ್ಪೋರ್ಟ್ಗಳು ನಿರ್ಮಾಣವಾಗಿವೆ.
ಇದನ್ನೂ ಓದಿ: Diwali Muhurat Trading: ದೀಪಾವಳಿಯಂದು ಮುಹೂರ್ತ ವ್ಯಾಪಾರ; ಸಂಜೆ 1 ಗಂಟೆ ಮಾತ್ರವೇ ಟ್ರೇಡಿಂಗ್
‘ಉಡಾನ್ ಸ್ಕೀಮ್ ಮೂಲಕ 71 ಏರ್ಪೋರ್ಟ್, 13 ಹೆಲಿಪೋರ್ಟ್ ಮತ್ತು 2 ವಾಟರ್ ಏರೋಡ್ರೋಮ್ ಸೇರಿ ಒಟ್ಟು 86 ಏರೋಡ್ರೋಮ್ಗಳನ್ನು ನಿರ್ಮಿಸಿ ಕಾರ್ಯಾಚರಿಸಲಾಗುತ್ತಿದೆ. 2.8 ಲಕ್ಷ ಫ್ಲೈಟ್ಗಳು ಸಂಚರಿಸಿವೆ. 1.44 ಕೋಟಿ ಜನರು ಪ್ರಯಾಣಿಸಿದ್ದಾರೆ,’ ಎಂದು ಕೇಂದ್ರ ವಿಮಾನ ಯಾನ ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
2014ರಲ್ಲಿ ಭಾರತದಲ್ಲಿ ಕಾರ್ಯಾಚರಣೆಯಲ್ಲಿದ್ದ ವಿಮಾನ ನಿಲ್ದಾಣಗಳ ಸಂಖ್ಯೆ 74 ಇತ್ತು. 2024ರಲ್ಲಿ ಏರ್ಪೋರ್ಟ್ಗಳ ಸಂಖ್ಯೆ 157ಕ್ಕೆ ಏರಿದೆ. 2047ರಷ್ಟರಲ್ಲಿ ಈ ಸಂಖ್ಯೆಯನ್ನು 350-400ಕ್ಕೆ ಹೆಚ್ಚಿಸುವ ಗುರಿ ಇಡಲಾಗಿದೆ. ಈ ನಿಟ್ಟಿನಲ್ಲಿ ಉಡಾನ್ ಸ್ಕೀಮ್ ಅನ್ನು ಹತ್ತು ವರ್ಷ ವಿಸ್ತರಿಸಲಾಗಿದೆ. ಅಂದರೆ, 2036ರವರೆಗೂ ಉಡಾನ್ ಸ್ಕೀಮ್ ಜಾರಿಯಲ್ಲಿರುತ್ತದೆ.
ಇದನ್ನೂ ಓದಿ: ಮುಂದಿನ ಎರಡು ದಶಕದಲ್ಲಿ ಭಾರತದ ಆರ್ಥಿಕತೆ ಹತ್ತು ಪಟ್ಟು ಬೆಳೆಯುತ್ತಾ? ಎಸ್ ಅಂಡ್ ಪಿ ವರದಿ ಹೇಳೋದಿದು
ಈ ಸ್ಕೀಮ್ ವಿಸ್ತರಣೆ ಹಿನ್ನೆಲೆಯಲ್ಲಿ ಹಣಕಾಸು ಅಗತ್ಯತೆ ಎಷ್ಟು ಬೇಕಾಗಬಹುದು, ವಿಧಾನಗಳನ್ನು ಯಾವ ರೀತಿ ರೂಪಿಸಬಹುದು ಇತ್ಯಾದಿಯನ್ನು ವಿಮಾನ ಯಾನ ಸಚಿವಾಲಯವು ಪರಿಶೀಲನೆ ನಡೆಸುತ್ತಿದೆ. ಉಡಾನ್ 2.0 ಚಾಲ್ತಿಗೆ ಬರಲು ಇನ್ನೂ ಎರಡು ವರ್ಷ ಸಮಯಾವಕಾಶ ಇರುವುದರಿಂದ ಅಷ್ಟರೊಳಗೆ ಎರಡನೇ ಆವೃತ್ತಿಯ ಉಡಾನ್ ಸ್ಕೀಮ್ನ ರೂಪುರೇಖೆ ರಚಿಸಲು ಪ್ರಯತ್ನಗಳು ನಡೆಯಲಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ