Diwali Muhurat Trading: ದೀಪಾವಳಿಯಂದು ಮುಹೂರ್ತ ವ್ಯಾಪಾರ; ಸಂಜೆ 1 ಗಂಟೆ ಮಾತ್ರವೇ ಟ್ರೇಡಿಂಗ್
Stock market udpates: ದೀಪಾವಳಿ ಹಬ್ಬದಂದು ಷೇರು ಮಾರುಕಟ್ಟೆಯಲ್ಲಿ ಒಂದು ಗಂಟೆ ಅವಧಿ ಮುಹೂರ್ತ ಟ್ರೇಡಿಂಗ್ ನಡೆಯುತ್ತದೆ. ಈ ಬಾರಿ ನವೆಂಬರ್ 1, ಶುಕ್ರವಾರದಂದು ಸಂಜೆ 6ರಿಂದ 7ರವರೆಗೆ ಮುಹೂರ್ತ ವ್ಯಾಪಾರ ಇದೆ. ಬಿಎಸ್ಇ ಮತ್ತು ಎನ್ಎಸ್ಇ ಎರಡರಲ್ಲೂ ಈ ಟ್ರೇಡಿಂಗ್ ಇರುತ್ತದೆ. ಹೊಸ ಹಣಕಾಸು ಸಂವತ್ಸರದ ಆರಂಭವಾದ್ದರಿಂದ ಇದನನ್ನು ಶುಭಕರ ಎಂದು ಭಾವಿಸಲಾಗಿದೆ.
ನವದೆಹಲಿ, ಅಕ್ಟೋಬರ್ 21: ನವೆಂಬರ್ 1, ದೀಪಾವಳಿ ಹಬ್ಬವಿದ್ದು ಸಾರ್ವತ್ರಿಕ ರಜಾ ದಿನವಾಗಿದೆ. ಅಂದು ಷೇರು ಮಾರುಕಟ್ಟೆಗಳಾದ ಬಿಎಸ್ಇ ಮತ್ತು ಎನ್ಎಸ್ಇ ಎರಡೂ ಕೂಡ ಎಂದಿನ ವ್ಯಾಪಾರ ವಹಿವಾಟು ನಡೆಸುವುದಿಲ್ಲ. ಆದರೆ, ಎನ್ಎಸ್ಇನಲ್ಲಿ ಅಂದು ಶುಕ್ರವಾರ ಸಂಜೆ ಒಂದು ಗಂಟೆ ಮಾತ್ರವೇ ಸ್ಪೆಷಲ್ ಟ್ರೇಡಿಂಗ್ ನಡೆಯುತ್ತದೆ. ಅದುವೇ ಮುಹೂರತ್ ಟ್ರೇಡಿಂಗ್, ಅಥವಾ ಮುಹೂರ್ತ ವ್ಯವಹಾರ. ‘ನವೆಂಬರ್ 1ರಂದು ದೀಪಾವಳಿ ಹಬ್ಬವಿದ್ದು ಮುಹೂರ್ತ ವ್ಯಾಪಾರದ ನಿಮಿತ್ತ ವಿಶೇಷ ಲೈವ್ ಟ್ರೇಡಿಂಗ್ ಸೆಷನ್ ಇರುತ್ತದೆ. ಶುಕ್ರವಾರ ಸಂಜೆ 6ರಿಂದ 7 ಗಂಟೆಯಲ್ಲಿ ನಾರ್ಮಲ್ ಟ್ರೇಡಿಂಗ್ ಚಾಲನೆಯಲ್ಲಿರುತ್ತದೆ,’ ಎಂದು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಹೇಳಿಕೆಯಲ್ಲಿ ತಿಳಿಸಿದೆ.
ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನಲ್ಲೂ ದೀಪಾವಳಿ ಹಬ್ಬದಂದು ಒಂದು ಗಂಟೆ ಮುತೂರ್ತ ವ್ಯಾಪಾರ ನಡೆಯುತ್ತದೆ. ಸಾಮಾನ್ಯವಾಗಿ ಬಿಎಸ್ಇ ಮತ್ತು ಎನ್ಎಸ್ಇನಲ್ಲಿ ಏಕಕಾಲದಲ್ಲಿ ಮುಹೂರತ್ ಟ್ರೇಡಿಂಗ್ ಇಟ್ಟುಕೊಳ್ಳಲಾಗುತ್ತದೆ. ಸಂಜೆ 5:45ರಿಂದ 6ಗಂಟೆಯವರೆಗೆ ಪೂರ್ವಭಾವಿ ಸೆಷನ್ ನಡೆಯುತ್ತದೆ. 6ರಿಂದ 7ರವರೆಗೆ ಎಂದಿನಂತೆ ಟ್ರೇಡಿಂಗ್ ಚಾಲೂ ಇರುತ್ತದೆ. ಬಳಿಕ ಮುಕ್ತಾಯವಾಗುತ್ತದೆ.
ಇದನ್ನೂ ಓದಿ: ಭಾರತದ ಯುಪಿಐ ಸಿಸ್ಟಂ ಅಳವಡಿಕೆಗೆ ಮಾಲ್ಡೀವ್ಸ್ ಸಜ್ಜು; ಅಧ್ಯಕ್ಷ ಮುಯಿಝು ಘೋಷಣೆ
ಮುಹೂರ್ತ ವ್ಯಾಪಾರ ಎಂದರೇನು? ದೀಪಾವಳಿಯಂದು ಯಾಕೆ?
ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸಿದರೆ ಸಂಪತ್ ಸಮೃದ್ಧಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಅದೇ ರೀತಿ ದೀಪಾವಳಿಯ ಧನಲಕ್ಷ್ಮೀ ಪೂಜೆಯ ದಿನವನ್ನು ಶುಭಕರ ಎಂದು ಪರಿಗಣಿಸಲಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರ ಈ ದಿನವು ಹೊಸ ಹಣಕಾಸು ವರ್ಷದ ಆರಂಭವಾಗಿದೆ. ಹೀಗಾಗಿ, ಅಂದು ವ್ಯಾಪಾರ ಮಾಡಿದರೆ ಇಡೀ ವರ್ಷ ಲಾಭವಾಗುತ್ತದೆ ಎನ್ನುವ ನಂಬಿಕೆ ಹೂಡಿಕೆದಾರರಲ್ಲಿ ಇದೆ. ಹೀಗಾಗಿ, ಈ ಮುಹೂರ್ತ ವ್ಯಾಪಾರದಲ್ಲಿ ಜನರು ಪಾಲ್ಗೊಳ್ಳುತ್ತಾರೆ. ಅಂದು ಯಾರೂ ಕೂಡ ಷೇರು ವ್ಯಾಪಾರದಿಂದ ಲಾಭ ನಿರೀಕ್ಷಿಸುವುದಿಲ್ಲ.
ಷೇರು ವಿನಿಮಯ ಕೇಂದ್ರದಲ್ಲಿರುವ ಈಕ್ವಿಟಿ, ಕಮಾಡಿಟಿ ಡಿರೈವೇಟಿವ್, ಕರೆನ್ಸಿ ಡಿರೈವೇಟಿವ್, ಈಕ್ವಿಟಿ ಫ್ಯೂಚರ್ಸ್, ಈಕ್ವಿಟಿ ಆಪ್ಷನ್, ಎಸ್ಎಲ್ಬಿ ಇತ್ಯಾದಿ ವಿವಿಧ ಸೆಗ್ಮೆಂಟ್ಗಳಲ್ಲಿ ನವೆಂಬರ್ 1, ಶುಕ್ರವಾರದಂದು ಸಂಜೆ 6ರಿಂದ 7ರವರೆಗೆ ಒಂದು ಗಂಟೆ ಕಾಲ ಟ್ರೇಡಿಂಗ್ ನಡೆಯುತ್ತದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ ಖರೀದಿ ಹೆಚ್ಚಿರುವುದರಿಂದ ಅಂದು ಮಾರುಕಟ್ಟೆಯ ಸೂಚ್ಯಂಕಗಳು ತುಸು ಮೇಲೆ ಹೋಗಬಹುದು.
ಇದನ್ನೂ ಓದಿ: ಮುಂದಿನ ಎರಡು ದಶಕದಲ್ಲಿ ಭಾರತದ ಆರ್ಥಿಕತೆ ಹತ್ತು ಪಟ್ಟು ಬೆಳೆಯುತ್ತಾ? ಎಸ್ ಅಂಡ್ ಪಿ ವರದಿ ಹೇಳೋದಿದು
ದೀಪಾವಳಿ ಮುಹೂರ್ತ ವ್ಯಾಪಾರದಲ್ಲಿ ಯಾರಿಗೂ ನಿರ್ಬಂಧ ಇರುವುದಿಲ್ಲ. ಯಾವ ಷೇರುದಾರರೂ ಇದರಲ್ಲಿ ಪಾಲ್ಗೊಳ್ಳಬಹುದು. ಅವರವರ ವೈಯಕ್ತಿಕ ನಂಬಿಕೆಗೆ ಇದು ಸೀಮಿತವಾಗಿರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ