ರೆಗ್ಯುಲರ್ ಆದಾಯ ಕೊಡುವ ಮ್ಯೂಚುವಲ್ ಫಂಡ್ ಎಸ್ಡಬ್ಲ್ಯುಪಿ ಹೇಗೆ ಕೆಲಸ ಮಾಡುತ್ತೆ ನೋಡಿ
Mutual Fund SWP details: ರಿಟೈರ್ಮೆಂಟ್ ಪ್ಲಾನ್ ಮಾಡುತ್ತಿರುವವರಿಗೆ ಅಥವಾ ರೆಗ್ಯುಲರ್ ಆಗಿ ಪಾಸಿವ್ ಇನ್ಕಮ್ ಸೃಷ್ಟಿಸಿಕೊಳ್ಳಲು ಬಯಸುವವರಿಗೆ ಮ್ಯುಚುವಲ್ ಫಂಡ್ ಎಸ್ಡಬ್ಲ್ಯುಪಿ ಪ್ಲಾನ್ ಬಗ್ಗೆ ತಿಳಿದಿರಲಿ. ಇದು ರೆಗ್ಯುಲರ್ ಮ್ಯುಚುವಲ್ ಫಂಡ್ನಂತೆಯೇ ಆದರೂ ನಿಯಮಿತವಾಗಿ ಹೂಡಿಕೆ ಹಿಂಪಡೆಯಲು ಸುಲಭ ಮಾಡಿಕೊಡುತ್ತದೆ. ನಿಮ್ಮ ಹೂಡಿಕೆ ಮುಂದುವರಿಯುತ್ತಿರುವಂತೆಯೇ, ನಿಗದಿತ ಹಣವನ್ನು ಹಿಂಪಡೆಯುತ್ತಾ ಹೋಗಬಹುದು.
ನಿಮ್ಮಲ್ಲಿ ಲಂಪ್ಸಮ್ ಆಗಿ ಹಣ ಇದ್ದು ಅದರಿಂದ ನಿಯಮಿತ ಆದಾಯ ಸೃಷ್ಟಿಸಲು ಕೆಲ ಪ್ರಮುಖ ಮಾರ್ಗಗಳಿವೆ. ಕೆಲವರು ನಿಶ್ಚಿತ ಠೇವಣಿ ಇಡುತ್ತಾರೆ. ಕೆಲವರು ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಗೆ ತೊಡಗಿಸುತ್ತಾರೆ. ಇನ್ಷೂರೆನ್ಸ್ ಆನ್ಯುಟಿ ಪ್ಲಾನ್ಗಳನ್ನು ಕೆಲವರು ಖರೀದಿಸುತ್ತಾರೆ. ಇಲ್ಲೆಲ್ಲಾ ವಾರ್ಷಿಕವಾಗಿ ಸಿಗುವ ಬಡ್ಡಿ ಶೇ. 7 ಆಸುಪಾಸು ಇರಬಹುದು. ಈ ಸಂದರ್ಭದಲ್ಲಿ ಮ್ಯೂಚುವಲ್ ಫಂಡ್ ಎಸ್ಡಬ್ಲ್ಯುಪಿ ಗಮನ ಸೆಳೆಯುತ್ತದೆ. ಇದು ಸಿಸ್ಟಮ್ಯಾಟಿಕ್ ವಿತ್ಡ್ರಾಯಲ್ ಪ್ಲಾನ್. ಎಸ್ಐಪಿಯಲ್ಲಿ ನೀವು ನಿಯಮಿತವಾಗಿ ಹಣ ಹೂಡಿಕೆ ಮಾಡಬಹುದು. ಎಸ್ಡಬ್ಲ್ಯುಪಿಯಲ್ಲಿ ನೀವು ನಿಯಮಿತವಾಗಿ ಹಣ ಹಿಂಪಡೆಯಬಹುದು.
ಮ್ಯುಚುವಲ್ ಫಂಡ್ ಎಸ್ಡಬ್ಲ್ಯುಪಿ ಹೇಗೆ ಕೆಲಸ ಮಾಡುತ್ತೆ?
ರೆಗ್ಯುಲರ್ ಮ್ಯೂಚುವಲ್ ಫಂಡ್ನಲ್ಲಿ ನೀವು ಹಣ ಹಿಂಪಡೆಯಬೇಕೆಂದರೆ ಯೂನಿಟ್ಗಳ ಲೆಕ್ಕದಲ್ಲಿ ಖುದ್ದಾಗಿ ಮಾರುತ್ತಿರಬೇಕು. ಆದರೆ, ಎಸ್ಡಬ್ಲ್ಯುಪಿ ಪ್ಲಾನ್ ಆಯ್ದುಕೊಂಡರೆ ನೀವು ನಿಗದಿ ಮಾಡಿದ ಮೊತ್ತವನ್ನು ಸ್ವಯಂಚಾಲಿತವಾಗಿ ಹಿಂಪಡೆದು ನಿಮ್ಮ ಖಾತೆಗೆ ಹಾಕುತ್ತದೆ. ನೀವು ಮ್ಯಾನುಯಲ್ ಆಗಿ ಹೂಡಿಕೆ ಹಿಂಪಡೆಯುವ ಅವಶ್ಯಕತೆ ಅಥವಾ ತಲೆನೋವು ಇರುವುದಿಲ್ಲ.
ಇದನ್ನೂ ಓದಿ: ಎನ್ಪಿಎಸ್ ಯೋಜನೆ: ತಿಂಗಳಿಗೆ 21,000 ರೂ ಉಳಿಸಿ, 2 ಲಕ್ಷ ರೂ ಮಾಸಿಕ ಆದಾಯ ಸೃಷ್ಟಿಸಿ
ಎಸ್ಐಪಿ ಮೂಲಕವೋ ಅಥವಾ ಇನ್ಯಾವುದರ ಮೂಲಕವೋ ನೀವು ಲಂಪ್ಸಮ್ ಹಣ ಹೊಂದಿದ್ದರೆ ಅದನ್ನು ಮ್ಯೂಚುವಲ್ ಫಂಡ್ನ ಎಸ್ಡಬ್ಲ್ಯುಪಿ ಪ್ಲಾನ್ಗೆ ಹಾಕಬಹುದು. ಫಂಡ್ಗಳು ಸಾಮಾನ್ಯವಾಗಿ ವರ್ಷಕ್ಕೆ ಶೇ. 10ರಿಂದ 14ರಷ್ಟು ಲಾಭ ತರುತ್ತವೆ. ಫಂಡ್ನಿಂದ ನೀವು ರೆಗ್ಯುಲರ್ ಆಗಿ ಹಣ ಹಿಂಪಡೆದರೂ ಇನ್ನುಳಿದ ಮೊತ್ತವು ಬೆಳೆಯುತ್ತಾ ಹೋಗುತ್ತದೆ. ಹೀಗಾಗಿ, ನೀವು ಹೆಚ್ಚು ಕಾಲ ಆದಾಯ ಹೊಂದಲು ಸಾಧ್ಯವಾಗುತ್ತದೆ.
ನೀವು ಮಾಸಿಕವಾಗಿಯೋ, ದ್ವೈಮಾಸಿಕವಾಗಿಯೋ, ತ್ರೈಮಾಸಿಕವಾಗಿಯೋ ಅಥವಾ ಆರು ತಿಂಗಳಿಗೊಮ್ಮೆಯೋ, ವರ್ಷಕ್ಕೊಮ್ಮೆಯೋ ಯಾವಾಗಲಾದರೂ ನೀವು ನಿಗದಿ ಮಾಡಿದ ಅವಧಿಗೆ ನೀವು ನಿಗದಿ ಮಾಡಿದ ಮೊತ್ತವನ್ನು ವಿತ್ಡ್ರಾ ಮಾಡುವಂತೆ ಸೂಚಿಸಬಹುದು.
ಮ್ಯೂಚುವಲ್ ಫಂಡ್ ಆದಾಯಕ್ಕೆ ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್?
ಮ್ಯೂಚುವಲ್ ಫಂಡ್ನಿಂದ ನೀವು ಗಳಿಸುವ ಲಾಭಕ್ಕೆ ತೆರಿಗೆ ಇರುತ್ತದೆ. ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್ ಮತ್ತು ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್ ಇರುತ್ತದೆ. 12 ತಿಂಗಳೊಳಗೆ ನೀವು ಮಾರಿ ಗಳಿಸಿದ ಲಾಭದ ಹಣಕ್ಕೆ ಶೇ. 20ರಷ್ಟು ಎಸ್ಟಿಸಿಜಿ ಅನ್ವಯ ಆಗುತ್ತದೆ. 12 ತಿಂಗಳಿಗೆ ಮೇಲ್ಪಟ್ಟಾದರೆ ಶೇ. 12.5ರಷ್ಟು ಎಲ್ಟಿಸಿಜಿ ತೆರಿಗೆ ಅನ್ವಯ ಆಗುತ್ತದೆ.
ಇದನ್ನೂ ಓದಿ: ಕಸ ಗುಡಿಸುವ ಕಾಯಕ; ಸಾಯುವಾಗ ಹೊಂದಿದ್ದ ಆಸ್ತಿ 60 ಕೋಟಿ ರೂ; ಮಾದರಿಯಾಗುವ ರೊನಾಲ್ಡ್ ರೀಡ್ ಕಥೆ
ಹೀಗಾಗಿ, ನೀವು ರೆಗ್ಯುಲರ್ ಆದಾಯ ಪಡೆಯಬಯಸಿದರೆ ಲಂಪ್ಸಮ್ ಹಣವನ್ನು ಹೂಡಿಕೆ ಮಾಡಿ ಒಂದು ವರ್ಷದವರೆಗೂ ಹಿಂಪಡೆಯದೇ ಬಿಟ್ಟರೆ ಆಗ ಶೇ. 20ರ ಎಸ್ಟಿಸಿಜಿ ಅನ್ವಯ ಆಗುವುದಿಲ್ಲ. ಹಾಗೆಯೇ, ಮ್ಯುಚುವಲ್ ಫಂಡ್ನಿಂದ ಗಳಿಸಿದ ಲಾಭವು ಒಂದು ವರ್ಷದಲ್ಲಿ 1.25 ಲಕ್ಷ ರೂನ ಮಿತಿಯೊಳಗೆ ಇದ್ದರೆ ಆಗ ತೆರಿಗೆ ವಿನಾಯಿತಿ ಸಿಗುತ್ತದೆ. ಅದರ ಮೇಲ್ಪಟ್ಟ ಆದಾಯಕ್ಕೆ ಶೇ. 12.5ರಷ್ಟು ಎಲ್ಟಿಸಿಜಿ ಅನ್ವಯ ಅಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ