ನವದೆಹಲಿ: ಉದ್ಯಮಿ ಎಲಾನ್ ಮಸ್ಕ್ (Elon Musk) ಅವರು ಟ್ವಿಟರ್ನ (Twitter) ಮಾಲೀಕತ್ವ ವಹಿಸಿದ ಬೆನ್ನಲ್ಲೇ ಮೈಕ್ರೋ ಬ್ಲಾಗಿಂಗ್ ಸೈಟ್ನಿಂದ ಉದ್ಯೋಗಿಗಳ ವಜಾದ ಬಗ್ಗೆ ಬಹಳಷ್ಟು ಚರ್ಚೆ ಆರಂಭವಾಗಿತ್ತು. ಮಾಲೀಕತ್ವ ವಹಿಸಿದ ಬಳಿಕ ಮೊದಲ ಕ್ರಮವಾಗಿ ಮಸ್ಕ್, ಕಂಪನಿಯ ಸಿಇಒ ಪರಾಗ್ ಅಗರ್ವಾಲ್, ನೀತಿ ನಿರೂಪಣೆ-ವಿಶ್ವಾಸಾರ್ಹತೆ ಮತ್ತು ಸುರಕ್ಷಾ ವಿಭಾಗದ ಮುಖ್ಯಸ್ಥರಾದ ವಿಜಯಾ ಗಡ್ಡೆ, ಮುಖ್ಯ ಹಣಕಾಸು ಅಧಿಕಾರಿ (ಸಿಎಫ್ಪ) ನೆಡ್ ಸೆಗಲ್ ಅವರನ್ನು ಕೆಲಸದಿಂದ ವಜಾಗೊಳಿಸಿದ್ದರು. ಇದೀಗ ಮತ್ತೆ 3,000ಕ್ಕೂ ಹೆಚ್ಚು ಉದ್ಯೋಗಿಗಳ ವಜಾಕ್ಕೆ ಚಿಂತನೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಟ್ವಿಟರ್ನ ಅರ್ಧದಷ್ಟು ಉದ್ಯೋಗ ಕಡಿತಕ್ಕೆ ಮಸ್ಕ್ ಚಿಂತನೆ ನಡೆಸಿದ್ದಾರೆ. 3,700ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುವ ಸಾಧ್ಯತೆ ಇದೆ ಎಂದು ‘ಬ್ಲೂಮ್ಬರ್ಗ್’ ತಾಣ ವರದಿ ಮಾಡಿದೆ. ಉದ್ಯೋಗದಿಂದ ವಜಾಗೊಳ್ಳುವ ಸಿಬ್ಬಂದಿಗೆ ಈ ವಾರಾಂತ್ಯದಲ್ಲಿ ಮಾಹಿತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಈ ವಿಚಾರವಾಗಿ ಟ್ವಿಟರ್ ಅಥವಾ ಮಸ್ಕ್ ಆಗಲೀ ಯಾವುದೇ ಹೇಳಿಕೆ ನೀಡಿಲ್ಲ ಎಂದು ವರದಿ ಉಲ್ಲೇಖಿಸಿದೆ.
ಮಸ್ಕ್ ಮಾಲೀಕರಾಗುತ್ತಿದ್ದಂತೆಯೇ ಉದ್ಯೋಗ ಕಡಿತದ ಬಗ್ಗೆ ಹಲವಾರು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಈ ವರದಿಗಳನ್ನು ಮಸ್ಕ್ ನಿರಾಕರಿಸಿದ್ದರು.
ಇದನ್ನೂ ಓದಿ: ಟ್ವಿಟರ್ನಲ್ಲಿ ಮಸ್ಕ್ ಕಾರ್ಯಭಾರ; ವಾರದ 7 ದಿನವೂ 12 ಗಂಟೆ ಕೆಲಸ, ಕಚೇರಿಯಲ್ಲೇ ರಾತ್ರಿ ಕಳೆದ ಕೆಲ ಸಿಬ್ಬಂದಿ!
ಎಲ್ಲಿಂದ ಬೇಕಾದರೂ ಕೆಲಸ ಮಾಡಿ (work-from-anywhere) ಎಂಬ ನೀತಿಯನ್ನು ಕೈಬಿಡುವ ಬಗ್ಗೆಯೂ ಮಸ್ಕ್ ಚಿಂತನೆ ನಡೆಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಟೆಸ್ಲಾದಲ್ಲಿ ಅನುಷ್ಠಾನಕ್ಕೆ ತಂದಿರುವ ನಿಯಮದಂತೆಯೇ ಟ್ವಿಟರ್ನಲ್ಲೂ ಉದ್ಯೋಗಿಗಳು ಕಚೇರಿಗೆ ಮರಳಬೇಕು ಎಂಬುದು ಮಸ್ಕ್ ಆಶಯ ಎನ್ನಲಾಗಿದೆ. ಕೆಲವು ತಿಂಗಳ ಹಿಂದಷ್ಟೇ ಟೆಸ್ಲಾ ಉದ್ಯೋಗಿಗಳಿಗೆ ಕಚೇರಿಯಿಂದಲೇ ಕೆಲಸ ನಿರ್ವಹಿಸುವಂತೆ ಮಸ್ಕ್ ಸೂಚಿಸಿದ್ದರು.
ಟ್ವಿಟರ್ ಸಿಬ್ಬಂದಿಗೆ ಓವರ್ ಟೈಂ ಕೆಲಸ
ಉದ್ಯೋಗ ಕಡಿತದ ಭೀತಿಯಲ್ಲಿರುವ ಟ್ವಿಟರ್ನ ಸಿಬ್ಬಂದಿ ಇದೀಗ ಹೆಚ್ಚುವರಿ ಸಮಯ ಕೆಲಸ ಮಾಡಬೇಕಾದ ಅನಿವಾರ್ಯತೆಯೂ ಎದುರಾಗಿದೆ. ಟ್ವಿಟರ್ ಮ್ಯಾನೇಜರ್ಗಳಿಗೆ ದಿನಕ್ಕೆ 12 ಗಂಟೆ ಹಾಗೂ ವಾರದ ಎಲ್ಲ ದಿನಗಳಲ್ಲಿಯೂ ಕೆಲಸ ಮಾಡುವಂತೆ ಸೂಚಿಸಲಾಗಿದೆ ಎಂದು ಕೆಲವು ಅಂತಾರಾಷ್ಟ್ರೀಯ ಮಾಧ್ಯಮಗಳು ಬುಧವಾರ ವರದಿ ಮಾಡಿದ್ದವು. ಟ್ವಿಟರ್ ಮ್ಯಾನೇಜರ್ಗಳಿಗೆ ದಿನಕ್ಕೆ 12 ಗಂಟೆ ಹಾಗೂ ವಾರದ ಎಲ್ಲ ದಿನಗಳಲ್ಲಿಯೂ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಕೆಲವರು ಶುಕ್ರವಾರ ಮತ್ತು ಶನಿವಾರಗಳಂದು ಕೆಲಸದ ಅವಧಿ ಮುಗಿದ ಬಳಿಕ ಮನೆಗೆ ತೆರಳದೆ ಕಚೇರಿಯಲ್ಲಿಯೇ ಮಲಗಿದ್ದಾರೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿತ್ತು.
ಬ್ಲೂಟಿಕ್ಗೆ ತಿಂಗಳಿಗೆ 8 ಡಾಲರ್ ಶುಲ್ಕ
ಟ್ವಿಟರ್ನಲ್ಲಿ ಅಧಿಕೃತ ಖಾತೆಗಳನ್ನು ಗುರುತಿಸಲು ನೆರವಾಗುವ ಬ್ಲೂಟಿಕ್ ಪಡೆಯಲು ಇನ್ನು ಮುಂದೆ 8 ಡಾಲರ್ ಶುಲ್ಕ ತೆರಬೇಕು ಎಂದು ಮಸ್ಕ್ ಹೇಳಿರುವುದಾಗಿ ಬುಧವಾರ ವರದಿಯಾಗಿತ್ತು. ಜನರು ಶುಲ್ಕ ನೀಡಲು ಆರಂಭಿಸಿದರೆ ಜಾಹೀರಾತುದಾರರ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಕಂಪನಿಯ ಕಾರ್ಯನಿರ್ವಹಣೆಗೆ ಇದರಿಂದ ಹೆಚ್ಚಿನ ಸ್ವಾತಂತ್ರ್ಯ ಸಿಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ