AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Adani Wilmar: ಅದಾನಿ ವಿಲ್ಮರ್ ನಿವ್ವಳ ಲಾಭದಲ್ಲಿ ಭಾರಿ ಕುಸಿತ, ಅದಾನಿ ಪೋರ್ಟ್ಸ್​​ ಲಾಭ ಹೆಚ್ಚಳ

ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯ ಕ್ರೂಡೀಕೃತ ನಿವ್ವಳ ಲಾಭ 48.76 ಕೋಟಿ ರೂ. ಆಗಿದೆ. ವರ್ಷದ ಹಿಂದೆ ಇದು 182 ಕೋಟಿ ರೂ. ಆಗಿತ್ತು ಎಂದು ಫಾರ್ಚೂನ್ ಅಡುಗೆ ಎಣ್ಣೆ ತಯಾರಕ ಕಂಪನಿ ತಿಳಿಸಿದೆ.

Adani Wilmar: ಅದಾನಿ ವಿಲ್ಮರ್ ನಿವ್ವಳ ಲಾಭದಲ್ಲಿ ಭಾರಿ ಕುಸಿತ, ಅದಾನಿ ಪೋರ್ಟ್ಸ್​​ ಲಾಭ ಹೆಚ್ಚಳ
ಅದಾನಿ ವಿಲ್ಮರ್Image Credit source: Adani Wilmar
Follow us
TV9 Web
| Updated By: Ganapathi Sharma

Updated on: Nov 03, 2022 | 2:45 PM

ಬೆಂಗಳೂರು: ಅದಾನಿ ವಿಲ್ಮರ್ (Adani Wilmar) ಎರಡನೇ ತ್ರೈಮಾಸಿಕ ಫಲಿತಾಂಶ ಪ್ರಕಟಗೊಂಡಿದ್ದು, ನಿವ್ವಳ ಲಾಭದಲ್ಲಿ ಶೇಕಡಾ 73ರಷ್ಟು ಕುಸಿತ ಉಂಟಾಗಿದೆ. ವೆಚ್ಚ ಹೆಚ್ಚಳ ಮತ್ತು ಗ್ರಾಮೀಣ ಪ್ರದೇಶದಲ್ಲಿ ಬೇಡಿಕೆ ಕುಸಿತದಿಂದಾಗಿ ಕಂಪನಿಯ ಲಾಭ ಪ್ರಮಾಣದಲ್ಲಿ ಕುಸಿತವಾಗಿದೆ. ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯ ಕ್ರೂಡೀಕೃತ ನಿವ್ವಳ ಲಾಭ 48.76 ಕೋಟಿ ರೂ. ಆಗಿದೆ. ವರ್ಷದ ಹಿಂದೆ ಇದು 182 ಕೋಟಿ ರೂ. ಆಗಿತ್ತು ಎಂದು ಫಾರ್ಚೂನ್ ಅಡುಗೆ ಎಣ್ಣೆ ತಯಾರಕ ಕಂಪನಿ ತಿಳಿಸಿದೆ. ಭಾರತದ ಅದಾನಿ ಸಮೂಹ ಮತ್ತು ಸಿಂಗಾಪುರದ ವಿಲ್ಮರ್ ಸಮೂಹ ಜತೆಯಾಗಿ ಸ್ಥಾಪಿಸಿರುವ ಉದ್ದಿಮೆಯಾಗಿದೆ ಅದಾನಿ ವಿಲ್ಮರ್.

ಕುಸಿದ ಷೇರು ಮೌಲ್ಯ

ತ್ರೈಮಾಸಿಕ ಫಲಿತಾಂಶ ವರದಿಯಲ್ಲಿ ನಿವ್ವಳ ಲಾಭ ಕುಸಿತವಾಗುತ್ತಿದ್ದಂತೆಯೇ ಅದಾನಿ ವಿಲ್ಮರ್ ಷೇರು ಮೌಲ್ಯದಲ್ಲಿ ಶೇಕಡಾ 2.81ರಷ್ಟು ಕುಸಿತವಾಗಿದೆ. ಬಿಎಸ್​ಇ ಮಾರುಕಟ್ಟೆಯಲ್ಲಿ ಹಿಂದಿನ ದಿನದ ವಹಿವಾಟಿನ ಮುಕ್ತಾಯದ ಅವಧಿಯಲ್ಲಿ ಕಂಪನಿಯ ಷೇರು ಮೌಲ್ಯ 698.45 ರೂ. ಇದ್ದುದು, ಗುರುವಾರ ಮಧ್ಯಾಹ್ನ 2 ಗಂಟೆ ವೇಳೆಗೆ 678.80 ರೂ. ಆಗಿದೆ.

ಅದಾನಿ ಪೋರ್ಟ್ಸ್ ಲಾಭದಲ್ಲಿ ಶೇಕಡಾ 68 ಹೆಚ್ಚಳ

ಅದಾನಿ ಸಮೂಹದ ಮತ್ತೊಂದು ಕಂಪನಿ ಅದಾನಿ ಪೋರ್ಟ್ಸ್ ಆ್ಯಂಡ್ ಸ್ಪೆಷಲ್ ಎಕಾನಮಿಕ್ ಝೋನ್ (ಎಸ್​ಇಝಡ್) ತ್ರೈಮಾಸಿಕ ಫಲಿತಾಂಶ ಬುಧವಾರ ಪ್ರಕಟವಾಗಿತ್ತು. ಕಂಪನಿ ನಿವ್ವಳ ಲಾಭದಲ್ಲಿ ಶೇಕಡಾ 68.5 ಹೆಚ್ಚಳವಾಗಿದ್ದು, 1,677.48 ಕೋಟಿ ರೂ. ಆಗಿದೆ. ಕಾರ್ಯಾಚರಣೆಗಳಿಂದ ದೊರೆತ ಕ್ರೂಡೀಕೃತ ಆದಾಯ ಶೇಕಡಾ 32.8ರಷ್ಟು ಹೆಚ್ಚಳವಾಗಿ 5,210.80 ಕೋಟಿ ರೂ. ತಲುಪಿದೆ. ಕಂಪನಿಯ ಬಂದರು ಮತ್ತು ಎಸ್​ಇಝಡ್ ಚಟುವಟಿಕೆಗಳಿಂದ ದೊರೆಯುವ ಆದಾಯ ಕಳೆದ ವರ್ಷ ಸೆಪ್ಟೆಂಬರ್​ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ 3,530.68 ಕೋಟಿ ರೂ. ಇದ್ದುದು ಈ ವರ್ಷ 4,609.29 ಕೋಟಿ ರೂ.ಗೆ ಹೆಚ್ಚಳಗೊಂಡಿದೆ.

ಇದನ್ನೂ ಓದಿ: Invest Karnataka 2022: ಕರ್ನಾಟಕದಲ್ಲಿ 7 ವರ್ಷಗಳಲ್ಲಿ 1 ಲಕ್ಷ ಕೋಟಿ ರೂ. ಹೂಡಿಕೆ: ಅದಾನಿ ಗ್ರೂಪ್

ಕಂಪನಿಯು ಬಂದರು ಮತ್ತು ಎಸ್​ಇಝಡ್ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಕರ್ನಾಟಕ ಕರಾವಳಿಯಲ್ಲಿಯೂ ಚಟುವಟಿಕೆ ಹೆಚ್ಚಿಸುವ ಸುಳಿವು ನೀಡಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ, ಮುಂದಿನ ವರ್ಷಗಳಲ್ಲಿ 1 ಲಕ್ಷ ಕೋಟಿ ರೂ. ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಜತೆಗೆ, ಮಂಗಳೂರು ಕರಾವಳಿಯಲ್ಲಿ ಚಟುವಟಿಕೆ ಹೆಚ್ಚಿಸಲು ಉತ್ಸುಕವಾಗಿರುವ ಬಗ್ಗೆ ಸುಳಿವು ನೀಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ