ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ; ಬಾಕಿ ಇರುವ ತುಟ್ಟಿಭತ್ಯೆ 3 ಕಂತಿನಲ್ಲಿ ನೀಡುವ ನಿರೀಕ್ಷೆ
7th Pay Commission latest update; ಇತ್ತೀಚೆಗಷ್ಟೇ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇಕಡಾ 4ರಷ್ಟು ಹೆಚ್ಚಿಸಿದ್ದ ಕೇಂದ್ರ ಸರ್ಕಾರ, 18 ತಿಂಗಳುಗಳಿಂದ ಬಾಕಿ ಇರುವ ತುಟ್ಟಿಭತ್ಯೆ ಮತ್ತು ತುಟ್ಟಿಪರಿಹಾರವನ್ನು ಶೀಘ್ರದಲ್ಲೇ 3 ಕಂತುಗಳಲ್ಲಿ ವಿತರಿಸಲಿದೆ ಎಂದು ವರದಿಯಾಗಿದೆ.
ನವದೆಹಲಿ: ಇತ್ತೀಚೆಗಷ್ಟೇ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು (Dearness allowance) ಶೇಕಡಾ 4ರಷ್ಟು ಹೆಚ್ಚಿಸಿದ್ದ ಕೇಂದ್ರ ಸರ್ಕಾರ, 18 ತಿಂಗಳುಗಳಿಂದ ಬಾಕಿ ಇರುವ ತುಟ್ಟಿಭತ್ಯೆ ಮತ್ತು ತುಟ್ಟಿಪರಿಹಾರ ನೀಡದಿರುವುದು ನೌಕರರಲ್ಲಿ ನಿರಾಶೆ ಉಂಟು ಮಾಡಿತ್ತು. ಇದೀಗ ಬಾಕಿ ಇರುವ ತುಟ್ಟಿಭತ್ಯೆ ಮತ್ತು ಪರಿಹಾರವನ್ನು ಮೂರು ಕಂತುಗಳಲ್ಲಿ ನೌಕರರಿಗೆ ನೀಡಲು ಉದ್ದೇಶಿಸಿದೆ ಎಂದು ವರದಿಯಾಗಿದೆ. 2020ರ ಜನವರಿಯಿಂದ 2021ರ ಜೂನ್ ವರೆಗಿನ ತುಟ್ಟಿಭತ್ಯೆ ಮತ್ತು ಪರಿಹಾರವನ್ನು ಸರ್ಕಾರ ಇನ್ನಷ್ಟೇ ನೌಕರರಿಗೆ ನೀಡಬೇಕಿದೆ. ಈ ವಿಚಾರ ಶೀಘ್ರದಲ್ಲೇ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬರಲಿದೆ ಎಂದು ಹೇಳಲಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, 3ನೇ ದರ್ಜೆಯ ನೌಕರರ ತುಟ್ಟಿಪರಿಹಾರ ಬಾಕಿ ಅಂದಾಜು 11,880 ರೂ.ಗಳಿಂದ 37,554 ರೂ. ಇದೆ. 13 ಹಾಗೂ 14ನೇ ದರ್ಜೆಯ ನೌಕರರ ತುಟ್ಟಿ ಪರಿಹಾರವು 1,44,200 ರೂ.ಗಳಿಂದ 2,18,200 ರೂ. ಇದೆ ಎಂದು ಅಂದಾಜಿಸಲಾಗಿದೆ. ಸರ್ಕಾರದ ಮಟ್ಟದಲ್ಲಿ ಈ ಕುರಿತು ಇನ್ನಷ್ಟು ಮಾತುಕರೆಗಳು ನಡೆಯಲಿದ್ದು, ಅಂತಿಮವಾಗಿ ಮೊತ್ತದಲ್ಲಿ ತುಸು ವ್ಯತ್ಯಾಸವಾಗುವ ಸಾಧ್ಯತೆ ಇದೆ.
7ನೇ ವೇತನ ಆಯೋಗದ ಶಿಫಾರಸು ಮತ್ತು ಡಿಎ ಹೆಚ್ಚಳ
ಸೆಪ್ಟೆಂಬರ್ 28ರಂದು ಕೇಂದ್ರ ಸಚಿವ ಸಂಪುಟ ಸಮಿತಿ ಸರ್ಕಾರಿ ನೌಕರರ ತುಟ್ಟಿಭತ್ಯೆ ಹಾಗೂ ತುಟ್ಟಿ ಪರಿಹಾರವನ್ನು ಶೇಕಡಾ 4ರಷ್ಟು ಹೆಚ್ಚಿಸಿ ಶೇಕಡಾ 38 ಮಾಡಿತ್ತು. ಜುಲೈ 1ರಿಂದ ಪೂರ್ವಾನ್ವಯವಾಗುವಂತೆ ಈ ನಿರ್ಧಾರ ಪ್ರಕಟಿಸಲಾಗಿತ್ತು. ಜೂನ್ಗೆ ಕೊನೆಗೊಂಡಂತೆ 12 ತಿಂಗಳಲ್ಲಿ ಅಖಿಲ ಭಾರತ ಗ್ರಾಹಕ ದರ ಸೂಚ್ಯಂಕದಲ್ಲಿ ಆಗಿರುವ ಏರಿಕೆಯನ್ನು ಗಣನೆಗೆ ತೆಗೆದುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿತ್ತು. ಇದರಿಂದಾಗಿ ಸರಿಸುಮಾರು 52 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಹಾಗೂ ಪಿಂಚಣಿದಾರರಿಗೆ ಪ್ರಯೋಜನವಾಗಿತ್ತು.
ಇದನ್ನೂ ಓದಿ: DA Hike: ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೀಘ್ರದಲ್ಲೇ ಹೆಚ್ಚಳ; ವರದಿ
ತುಟ್ಟಿಭತ್ಯೆ ಹಾಗೂ ಪರಿಹಾರ ಹೆಚ್ಚಳದಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 6,591.36 ಕೋಟಿ ರೂ. ಹೊರೆಯಾಗಲಿದೆ. 2022-23ನೇ ಹಣಕಾಸು ವರ್ಷದಲ್ಲಿ 4,394.24 ಕೋಟಿ ರೂ. ಹೊರೆಯಾಗಲಿದೆ ಎಂದು ಅಂದಾಜಿಸಲಾಗಿತ್ತು. ತುಟ್ಟಿ ಪರಿಹಾರ ಹೆಚ್ಚಳದಿಂದ ಬೊಕ್ಕಸಕ್ಕೆ 6,261.20 ಕೋಟಿ ರೂ. ವಾರ್ಷಿಕ ಹಾಗೂ 2022-23ನೇ ಹಣಕಾಸು ವರ್ಷದಲ್ಲಿ 4,174.12 ಕೋಟಿ ರೂ. ಹೊರೆಯಾಗಲಿದೆ ಎಂದು ಅಂದಾಜಿಸಲಾಗಿತ್ತು.
ಇದಕ್ಕೂ ಮುನ್ನ ಮಾರ್ಚ್ನಲ್ಲಿ ಶೇಕಡಾ 31ರಷ್ಟಿದ್ದ ತುಟ್ಟಿಭತ್ಯೆಯನ್ನು ಕೇಂದ್ರ ಸರ್ಕಾರ ಶೇಕಡಾ 34ಕ್ಕೆ ಹೆಚ್ಚಿಸಿತ್ತು. ಏಳನೇ ವೇತನ ಆಯೋಗ ಶಿಫಾರಸು ಮಾಡಿರುವ ಪ್ರಮಾಣದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ತುಟ್ಟಿಭತ್ಯೆ ಹೆಚ್ಚಳವಾಗುವ ನಿರೀಕ್ಷೆ ಇದೆ. ಡಿಎ ಹೆಚ್ಚಳದ ಬಗ್ಗೆ ಸರ್ಕಾರಿ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ ಎಂದು ಇತ್ತೀಚೆಗೆ ವರದಿಯಾಗಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ