Airtel 5G: ಕೇವಲ 30 ದಿನಗಳಲ್ಲಿ 10 ಲಕ್ಷ ಗ್ರಾಹಕರ ಸಂಪಾದಿಸಿದ ಏರ್ಟೆಲ್ 5ಜಿ
5G network; 5ಜಿ ಸೇವೆ ಆರಂಭಿಸಿದ 30 ದಿನಗಳಲ್ಲೇ 10 ಲಕ್ಷ ಗ್ರಾಹಕರನ್ನು ಹೊಂದಿದ್ದೇವೆ ಎಂದು ದೂರಸಂಪರ್ಕ ಕಂಪನಿ ಭಾರ್ತಿ ಏರ್ಟೆಲ್ ಬುಧವಾರ ತಿಳಿಸಿದೆ. ದೇಶದಲ್ಲಿ 5ಜಿ ಸೇವೆಗೆ ಅಕ್ಟೋಬರ್ 1ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.

ನವದೆಹಲಿ: 5ಜಿ ಸೇವೆ (5G network) ಆರಂಭಿಸಿದ 30 ದಿನಗಳಲ್ಲೇ 10 ಲಕ್ಷ ಗ್ರಾಹಕರನ್ನು ಹೊಂದಿದ್ದೇವೆ ಎಂದು ದೂರಸಂಪರ್ಕ ಕಂಪನಿ ಭಾರ್ತಿ ಏರ್ಟೆಲ್ (Bharti Airtel) ಬುಧವಾರ ತಿಳಿಸಿದೆ. 5ಜಿ ಸೇವೆಗೆ ಅಕ್ಟೋಬರ್ 1ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಬಳಿಕ ಬೆಂಗಳೂರು ಸೇರಿ ದೇಶದ 13 ನಗರಗಳಲ್ಲಿ 5ಜಿ ಸೇವೆ ಆರಂಭವಾಗಿತ್ತು. ಸದ್ಯ ಇನ್ನೂ ಪೂರ್ಣ ಪ್ರಮಾಣದಲ್ಲಿ ಏರ್ಟೆಲ್ 5ಜಿ ಸೇವೆ ಆರಂಭವಾಗಿಲ್ಲ. ಸೇವೆಯನ್ನು ಹಂತ ಹಂತವಾಗಿ ವಿಸ್ತರಿಸುವುದಾಗಿ ಕಂಪನಿ ತಿಳಿಸಿತ್ತು. ಇದೀಗ ಸೇವೆ ವಿಸ್ತರಿಸುವ ಹಂತದಲ್ಲಿರುವಾಗಲೇ ಭಾರಿ ಸಂಖ್ಯೆಯ ಗ್ರಾಹಕರು ದೊರೆತಿದ್ದಾರೆ ಎಂದು ಏರ್ಟೆಲ್ ಹೇಳಿದೆ.
ಬೆಂಗಳೂರು, ಮುಂಬೈ, ಚೆನ್ನೈ, ಹೈದರಾಬಾದ್, ಸಿಲಿಗುರಿ, ನಾಗ್ಪುರ ಹಾಗೂ ವಾರಾಣಸಿಗಳಲ್ಲಿ ಹಂತಹಂತವಾಗಿ 5ಜಿ ಸೇವೆ ಆರಂಭಿಸುವುದಾಗಿ ಏರ್ಟೆಲ್ ಹೇಳಿತ್ತು. ಈ ನಗರಗಳಲ್ಲಿ ಸೇವೆಯನ್ನು ವಿಸ್ತರಿಸುವ ಕೆಲಸ ನಡೆಯುತ್ತಿದೆ ಎಂದು ಇದೀಗ ಕಂಪನಿ ತಿಳಿಸಿದೆ.
‘ಭಾರ್ತಿ ಏರ್ಟೆಲ್ 5ಜಿ ಗ್ರಾಹಕರ ಸಂಖ್ಯೆ 10 ಲಕ್ಷ ದಾಟಿದೆ. ವಾಣಿಜ್ಯ ಸೇವೆಗೆ ಚಾಲನೆ ನೀಡಿದ ಕೇವಲ 30 ದಿನಗಳಲ್ಲಿ ಕಂಪನಿ ಈ ಸಾಧನೆ ಮಾಡಿದೆ. ನೆಟ್‌ವರ್ಕ್ ವಿಸ್ತರಣೆ ಕಾರ್ಯ ಪೂರ್ತಿ ನಡೆಯುವುದಕ್ಕೂ ಮುನ್ನವೇ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆತಿದೆ’ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: India 5G Launch: ಭಾರತದಲ್ಲಿ 5ಜಿ ಯುಗ ಆರಂಭ; ಹೈಸ್ಪೀಡ್ ಇಂಟರ್ನೆಟ್ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ಇದು ಆರಂಭಿಕ ಹಂತವಷ್ಟೇ. ಆದರೆ ಗ್ರಾಹಕರಿಂದ ದೊರೆಯುತ್ತಿರುವ ಪ್ರತಿಕ್ರಿಯೆ ಬಹಳ ಉತ್ತಮವಾಗಿದೆ. ಎಲ್ಲಾ 5ಜಿ ಸಾಧನಗಳು ಏರ್‌ಟೆಲ್ 5ಜಿ ಪ್ಲಸ್ನಲ್ಲಿ ಕಾರ್ಯನಿರ್ವಹಿಸಲು ಸಮರ್ಥವಾಗಿರುವಂತೆ ನಮ್ಮ ನೆಟ್‌ವರ್ಕ್ ಅನ್ನು ಪ್ರತಿದಿನ ವಿಸ್ತರಿಸಲಾಗುತ್ತಿದೆ. ಕೆಲವು ವಿನಾಯಿತಿಗಳನ್ನು ಹೊರತುಪಡಿಸಿದರೆ, ಮುಂದಿನ ವಾರಗಳಲ್ಲಿ ಇದು ಸಾಕಾರಗೊಳ್ಳಲಿದೆ ಎಂದು ಭಾರ್ತಿ ಏರ್ಟೆಲ್ ಮುಖ್ಯ ತಂತ್ರಜ್ಞಾನ ಅಧಿಕಾರಿ ರಣದೀಪ್ ಸೆಖಾನ್ ಹೇಳಿದ್ದಾರೆ.
ಇಡೀ ದೇಶವನ್ನು ಬೆಸೆಯುವ ದೃಷ್ಟಿಕೋನದೊಂದಿಗೆ ನಮ್ಮ 5ಜಿ ಸೇವೆಯನ್ನು ವಿಸ್ತರಿಸಲಿದ್ದೇವೆ ಎಂದು ಕಂಪನಿಯ ಹಿರಿಯ ಕಾರ್ಯನಿರ್ವಾಹಕರು ತಿಳಿಸಿದ್ದಾರೆ.
ದೇಶದಲ್ಲಿ ವಾಣಿಜ್ಯ 5ಜಿ ಸೇವೆ ಪ್ರಾರಂಭವಾಗುತ್ತಿದೆ. ಆದರೆ, ಈ ಸೇವೆ ಸಾಮಾನ್ಯ ಜನರಿಗೆ ತಲುಪಲು ಇನ್ನೂ 1 ವರ್ಷ ಬೇಕಾಗಬಹುದು. 5ಜಿ ತರಂಗಾಂತರ ಹರಾಜಿನಲ್ಲಿ ಹಲವು ವರ್ಷಗಳ ಕಠಿಣ ಪರಿಶ್ರಮದ ಬಳಿಕ 5ಜಿ ಸೇವೆಯನ್ನು ಆರಂಭಿಸುತ್ತಿದ್ದೇವೆ ಎಂದು ಸಂವಹನ ಸಚಿವಾಲಯ ಅಕ್ಟೋಬರ್ 1ರಂದು ಹೇಳಿಕೆಯಲ್ಲಿ ತಿಳಿಸಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ