5G Service in India: ಬೆಂಗಳೂರು ಸೇರಿ ಭಾರತದ 13 ನಗರಗಳಲ್ಲಿ ಲಭ್ಯವಾಗಲಿದೆ 5ಜಿ ನೆಟ್‌ವರ್ಕ್!
5G Network Cities: ಭಾರತದ 13 ನಗರಗಳಲ್ಲಿ ಆರಂಭದ ಹಂತದಲ್ಲಿ 5G ಇಂಟರ್ನೆಟ್ ಸೇವೆಗಳು ಲಭ್ಯವಾಗಲಿವೆ. ಈ ಪಟ್ಟಿಯಲ್ಲಿ ನಮ್ಮ ಬೆಂಗಳೂರು ಕೂಡ ಸ್ಥಾನ ಪಡೆದಿದೆ.
ನವದೆಹಲಿ: ಇಂದು ಭಾರತದ 5G ಸೇವೆಗಳನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ದೆಹಲಿಯಲ್ಲಿ ಉದ್ಘಾಟಿಸಿದ್ದಾರೆ. ನವದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC)ನಲ್ಲಿ 5ಜಿ ತಂತ್ರಜ್ಞಾನ ಸೇವೆಗಳನ್ನು ಪರಿಚಯಿಸಲಾಗಿದೆ. ಈ ಮೂಲಕ ಭಾರತ 5ಜಿ ಯುಗಕ್ಕೆ ತೆರೆದುಕೊಳ್ಳಲಿದೆ. ಸದ್ಯಕ್ಕೆ ವಾಣಿಜ್ಯ ಉದ್ದೇಶಗಳಿಗೆ ಮಾತ್ರ 5ಜಿ ಸೌಲಭ್ಯ ಲಭ್ಯವಾಗಲಿದ್ದು, ಇನ್ನೊಂದು ವರ್ಷದೊಳಗೆ ಜನಸಾಮಾನ್ಯರಿಗೂ ಈ ಸೇವೆ ಸಿಗಲಿದೆ.
ಹೆಚ್ಚಿನ ಡೇಟಾ ವೇಗ, ಯಾವುದೇ ಬಫರಿಂಗ್ ಇಲ್ಲದೆ ವಿಡಿಯೋ ಪ್ಲೇ ಮಾಡುವ ಅವಕಾಶ, ತಡೆರಹಿತ ಕವರೇಜ್ ಇವೆಲ್ಲವೂ 5G ತಂತ್ರಜ್ಞಾನದ ಭರವಸೆಯಾಗಿದೆ. ಏರ್‌ಟೆಲ್, ಜಿಯೋ, ವೊಡಾಫೋನ್ 5ಜಿ ನೆಟ್ವರ್ಕ್ಗೆ ಅಪ್ಗ್ರೇಡ್ ಆಗಲಿವೆ. ಹಾಗಾದರೆ, ಮೊದಲ ಹಂತದಲ್ಲಿ ಯಾವೆಲ್ಲ ನಗರಗಳಲ್ಲಿ ಈ 5ಜಿ ಸೇವೆ ಲಭ್ಯವಾಗಲಿವೆ ಎಂಬ ಮಾಹಿತಿ ಇಲ್ಲಿದೆ.
ಭಾರತದ 13 ನಗರಗಳಲ್ಲಿ ಆರಂಭದ ಹಂತದಲ್ಲಿ 5G ಇಂಟರ್ನೆಟ್ ಸೇವೆಗಳು ಲಭ್ಯವಾಗಲಿವೆ. ಅಹಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ದೆಹಲಿ, ಗಾಂಧಿನಗರ, ಗುರುಗ್ರಾಮ, ಹೈದರಾಬಾದ್, ಜಾಮ್‌ನಗರ, ಕೊಲ್ಕತ್ತಾ, ಲಕ್ನೋ, ಮುಂಬೈ ಮತ್ತು ಪುಣೆ ನಗರಗಳಲ್ಲಿ 5ಜಿ ಇಂಟರ್ನೆಟ್ ಸೇವೆ ಲಭ್ಯವಾಗಲಿವೆ.
ಈ ವರ್ಷ 5G ಸೇವೆಗಳು ಪ್ರಾರಂಭವಾಗುವುದರಿಂದ ಟೆಲಿಕಾಂ ಸಂಸ್ಥೆಗಳು ಶೀಘ್ರದಲ್ಲೇ 5G ದರದ ಆಯ್ಕೆಗಳನ್ನು ಪರಿಚಯಿಸುವ ನಿರೀಕ್ಷೆಯಿದೆ. ರಿಲಯನ್ಸ್ ಜಿಯೋ ಈ ವರ್ಷದ ದೀಪಾವಳಿಯ ವೇಳೆಗೆ ಕನಿಷ್ಠ 4 ನಗರಗಳಲ್ಲಿ 5G ಸೇವೆಗಳನ್ನು ಹೊರತರುವುದಾಗಿ ಘೋಷಿಸಿದೆ. ದೆಹಲಿ, ಮುಂಬೈ, ಕೊಲ್ಕತ್ತಾ ಮತ್ತು ಚೆನ್ನೈನಲ್ಲಿ ಜಿಯೋ 5ಜಿ ಸೇವೆ ಲಭ್ಯವಾಗಲಿದೆ. ಏರ್‌ಟೆಲ್ ಕೂಡ ಈ ವರ್ಷಕ್ಕೆ 5G ಸೇವೆಯನ್ನು ಪರಿಚಯಿಸುವ ಯೋಜನೆಗಳನ್ನು ಹೊಂದಿದೆ.
WATCH | Prime Minister @narendramodi tries his hands on virtual wheels at the exhibition put up at Pragati Maidan before the launch of 5G services in the country. pic.twitter.com/zpbHW9OiOU
— Prasar Bharati News Services & Digital Platform (@PBNS_India) October 1, 2022
ರಾಷ್ಟ್ರದಾದ್ಯಂತ 17 ವಲಯಗಳಲ್ಲಿ ಸ್ಪೆಕ್ಟ್ರಮ್ ಅನ್ನು ಖರೀದಿಸಿದರೂ ಭಾರತದಲ್ಲಿ ಮೂರನೇ ಅತಿದೊಡ್ಡ ಟೆಲಿಕಾಂ ಪೂರೈಕೆದಾರರಾದ ವೊಡಾಫೋನ್ ಐಡಿಯಾ 5G ಸೇವೆಗಳನ್ನು ಹೊರತರುವ ತನ್ನ ಯೋಜನೆಗಳನ್ನು ಘೋಷಿಸಲು ವಿಫಲವಾಗಿದೆ. ಎರಡು ವರ್ಷಗಳಲ್ಲಿ ಭಾರತದಾದ್ಯಂತ 5G ಟೆಲಿಕಾಂ ಸೇವೆಗಳು ಲಭ್ಯವಾಗುವುದು ಸರ್ಕಾರದ ಗುರಿಯಾಗಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಭಾನುವಾರ ಹೇಳಿದ್ದಾರೆ. ಭಾರತದಲ್ಲಿ 5G ಟೆಲಿಕಾಂ ಸೇವೆಗಳನ್ನು ಶೀಘ್ರದಲ್ಲೇ ನೀಡಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: India 5G Launch: ಭಾರತದಲ್ಲಿ 5ಜಿ ಯುಗ ಆರಂಭ; ಹೈಸ್ಪೀಡ್ ಇಂಟರ್ನೆಟ್ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ಮುಂದಿನ ತಿಂಗಳುಗಳಲ್ಲಿ ಭಾರತದ ಉಳಿದ ನಗರಗಳು, ಪಟ್ಟಣಗಳು ಮತ್ತು ಹಳ್ಳಿಗಳು 5ಜಿ ನೆಟ್‌ವರ್ಕ್ ಸೌಲಭ್ಯ ಪಡೆಯಲಿವೆ. ಇನ್ನು 2ರಿಂದ 3 ವರ್ಷಗಳಲ್ಲಿ 5G ನೆಟ್‌ವರ್ಕ್ ಇಡೀ ಭಾರತಕ್ಕೆ ಬರಲು ಸಿದ್ಧವಾಗಿದೆ. 5G ಇಂಟರ್ನೆಟ್ ಸೇವೆಯಲ್ಲಿ ಯಾವುದೇ ಬಫರಿಂಗ್ ಇಲ್ಲದೆ ಉತ್ತಮ ಗುಣಮಟ್ಟದ ವೀಡಿಯೊಗಳನ್ನು ಸ್ಟ್ರೀಮ್ ಮಾಡಬಹುದು. ಇಂಟರ್ನೆಟ್ ಕರೆಗಳಲ್ಲಿ ಧ್ವನಿ ಬಹಳ ಸ್ಪಷ್ಟವಾಗಿರುತ್ತದೆ. 2 ಜಿಬಿಯ ಸಂಪೂರ್ಣ ಚಲನಚಿತ್ರವು ಕೇವಲ 10 ರಿಂದ 20 ಸೆಕೆಂಡುಗಳಲ್ಲಿ ಡೌನ್‌ಲೋಡ್ ಆಗುತ್ತದೆ. ವಿಡಿಯೋ ಗೇಮಿಂಗ್ ಕ್ಷೇತ್ರಕ್ಕೂ 5G ಇಂಟರ್ನೆಟ್ ಸೇವೆಯಿಂದ ಅವಕಾಶಗಳು ಹೆಚ್ಚಾಗುತ್ತವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:12 am, Sat, 1 October 22