Invest Karnataka 2022: ರಾಜ್ಯದಲ್ಲಿ ಹೂಡಿಕೆಗೆ ಬನ್ನಿ: ಹೂಡಿಕೆದಾರರಿಗೆ ಸಿಎಂ ಬೊಮ್ಮಾಯಿ ಕರೆ
ರಾಜ್ಯದಲ್ಲಿ ಹೂಡಿಕೆದಾರರಿಗೆ ಎಲ್ಲಾ ಸೌಲಭ್ಯಗಳನ್ನು ನೀಡುತ್ತೇವೆ. ಔದ್ಯೋಗಿಕ, ಸಂಶೋಧನೆ ಮತ್ತು ಅಭಿವೃದ್ಧಿ ನೀತಿ ತಂದಿದ್ದೇವೆ. ನೀವು ಹೆಚ್ಚು ಉದ್ಯೋಗ ನೀಡಿದರೆ ಹೆಚ್ಚುವರಿ ಹಣ ನೀಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರು: ನಿಮ್ಮ ಮನೆ ಅಂತ ಭಾವಿಸಿ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಬನ್ನಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೂಡಿಕೆದಾರರಿಗೆ ಕರೆ ನೀಡಿದರು. ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ‘ಇನ್ವೆಸ್ಟ್ ಕರ್ನಾಟಕ’ (Invest Karnataka) ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮಾತನಾಡಿದರು. ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಹೂಡಿಕೆದಾರರ ಸಮಾವೇಶ ನಡೆಯುತ್ತಿದೆ. ಕೋವಿಡ್ ನಂತರ ಯಾವುದಾದರೂ ರಾಜ್ಯ ಈ ರೀತಿ ಹೂಡಿಕೆದಾರರ ಸಮಾವೇಶ ಮಾಡಿದೆ ಅಂದರೆ ಅದು ಕರ್ನಾಟಕ. 7 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆ ರಾಜ್ಯದಲ್ಲಿ ಆಗುತ್ತಿದೆ. ಕೋವಿಡ್ ನಂತರ ನಮ್ಮ ಆರ್ಥಿಕ ಪರಿಸ್ಥಿತಿ ಬೆಳವಣಿಗೆಯಾಗಿದೆ. 13 ಸಾವಿರ ಕೋಟಿ ನಾವು ತೆರಿಗೆ ಸಂಗ್ರಹ ಮಾಡಿದ್ದೇವೆ. ಜಿಎಸ್ಟಿ ಸಂಗ್ರಹದಲ್ಲೂ ನಾವು ಎರಡನೇ ಸ್ಥಾನದಲ್ಲಿದ್ದೇವೆ. ಪಾಲಿಸಿಯಲ್ಲೂ ನಾವು ಮುಂದೆ ಇದ್ದೇವೆ. ನಾವು ಇನ್ನೊಬ್ಬರ ಮೇಲೆ ವಿಶ್ವಾಸ ಇಡೋದಕ್ಕಿಂತ ನಮ್ಮ ಮೇಲೆ ನಾವು ವಿಶ್ವಾಸವಿಡಬೇಕು. ಇದು ನಮ್ಮ ಶಕ್ತಿ, ಇದು ನಮ್ಮ ವಿಷನ್ ಎಂದು ಹೇಳಿದರು. ಈ ವೇಳೆ ವೇದಿಕೆ ಮೇಲೆ ಕೇಂದ್ರ ಸಚಿವ ಗೋಯೆಲ್ ಜೊತೆ ಸಚಿವ ಮುರುಗೇಶ್ ನಿರಾಣಿ ಮಾತಾಡುತ್ತಿದ್ದು, ಮುರುಗೇಶ್ ಸ್ವಲ್ಪ ಇರು, ನಾನು ನನ್ನ ವಿಷನ್ ಬಗ್ಗೆ ಹೇಳುತ್ತಿದ್ದೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
2025ಕ್ಕೆ ಮುಂದಿನ ಜಾಗತಿಕ ಹೂಡಿಕೆದಾರರ ಸಮಾವೇಶ
ರಾಜ್ಯದಲ್ಲಿ ಹೂಡಿಕೆದಾರರಿಗೆ ಎಲ್ಲಾ ಸೌಲಭ್ಯಗಳನ್ನು ನೀಡುತ್ತೇವೆ. ಔದ್ಯೋಗಿಕ, ಸಂಶೋಧನೆ ಮತ್ತು ಅಭಿವೃದ್ಧಿ ನೀತಿ ತಂದಿದ್ದೇವೆ. ನೀವು ಹೆಚ್ಚು ಉದ್ಯೋಗ ನೀಡಿದರೆ ಹೆಚ್ಚುವರಿ ಹಣ ನೀಡುತ್ತೇವೆ. ಉದ್ಯೋಗಿಗಳು ಖುಷಿಯಾಗಿದ್ದರೆ ಉತ್ಪಾದನೆ ಉತ್ತಮವಾಗಿರುತ್ತದೆ. ಮೂಲಭೂತ ಸೌಲಭ್ಯ ಸೇರಿ ಎಲ್ಲ ಸಮಸ್ಯೆಗಳನ್ನು ಪರಿಹರಿಸುತ್ತೇವೆ. ಹೂಡಿಕೆಗೆ ಕರ್ನಾಟಕ ಮನೆಯ ವಾತಾವರಣ ಇರುವ ರಾಜ್ಯ ಎಂದರು. ನಮ್ಮಲ್ಲಿ ಡಿಆರ್ಡಿಓ, ಹೆಚ್ಎಎಲ್ ಸೇರಿದಂತೆ ಅನೇಕ ಸಂಸ್ಥೆಗಳಿವೆ. ಮಾನವ ಸಂಪನ್ಮೂಲ ಸದ್ಬಳಕೆ ಮಾಡಿಕೊಳ್ಳುವ ಕೆಲಸ ಮಾಡಲಾಗುತ್ತಿದೆ. ಹೂಡಿಕೆ ಮಾಡುವವರ ನಡುವೆ ಜಾಗತಿಕ ಪೈಪೋಟಿ ಇರಲಿದೆ. ಕರ್ನಾಟಕದಲ್ಲಿ ಗುಣಮಟ್ಟ ಮತ್ತು ಹೆಚ್ಚು ಉತ್ಪಾದನೆಗೆ ಒತ್ತು ನೀಡುತ್ತೇವೆ. 2025ರಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಇದನ್ನೂ ಓದಿ: Invest Karnataka 2022: ಉದ್ಯೋಗ ಸೃಷ್ಟಿಯಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ; ಸಿಎಂ ಬೊಮ್ಮಾಯಿ
ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷವೇ ಅಧಿಕಾರಕ್ಕೆ ಬರುವುದು
2023ರ ಮೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಒಡಂಬಡಿಕೆ ಹೇಗೆ ಅನುಷ್ಠಾನಗೊಳಿಸುತ್ತೀರಿ ಅಂತಾ ಕೇಳಿದರು. ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷವೇ ಅಧಿಕಾರಕ್ಕೆ ಬರುತ್ತದೆ. ರಾಜ್ಯದ ಮತದಾರರು ನಮ್ಮ ಕೈ ಹಿಡಿಯುತ್ತಾರೆ. ಒಡಂಬಡಿಕೆ ಅನುಷ್ಠಾನಕ್ಕೆ ತರುತ್ತೇವೆ ಎಂಬ ಭರವಸೆ ನೀಡ್ತೇವೆ ಎಂದು ಹೇಳಿದರು. ಸಮಾವೇಶದಲ್ಲಿ ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಗುರುವಾರದಿಂದ 124 ಕಲ್ಲಿದ್ದಲು ಗಣಿ ಹರಾಜು ಹಾಕಲಿದ್ದೇವೆ. ಹರಾಜಿನಲ್ಲಿ ಎಲ್ಲಾ ರಾಜ್ಯದವರು ಇದರಲ್ಲಿ ಭಾಗವಹಿಸಬಹುದು. ಮೋದಿ ನೇತೃತ್ವದಲ್ಲಿ ನಮ್ಮ ಇಲಾಖೆ ಸಾಕಷ್ಟು ಬದಲಾವಣೆ ತಂದಿದ್ದೇವೆ ಎಂದು ಹೇಳಿದರು.
7 ಲಕ್ಷ ಕೋಟಿಗೂ ಅಧಿಕ ಬಂಡವಾಳ: ಸಚಿವೆ ನಿರ್ಮಲಾ ಸೀತಾರಾಮನ್
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ. ಕರ್ನಾಟಕ ಶೇ.63ರಷ್ಟು ಪಾಲು ಹೊಂದಿದೆ. ಐಟಿ ರಫ್ತು, ಬಯೋಟೆಕ್ನಾಲಜಿಯಲ್ಲೂ ಕರ್ನಾಟಕ ರಾಜ್ಯ ಮುಂದಿದೆ. ಕರ್ನಾಟಕ ಸರ್ಕಾರ ಉದ್ಯೋಗ ಸೃಷ್ಟಿಸುವಲ್ಲಿ ಮುಂಚೂಣಿಯಲ್ಲಿದೆ. ಸಮಾವೇಶದಲ್ಲಿ 5 ಲಕ್ಷ ಕೋಟಿ ಹೂಡಿಕೆಯ ಗುರಿ ಹೊಂದಲಾಗಿತ್ತು. ಆದರೆ 7 ಲಕ್ಷ ಕೋಟಿಗೂ ಅಧಿಕ ಬಂಡವಾಳ ಹರಿದು ಬಂದಿದೆ ಎಂದು ಸಮಾವೇಶದಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:22 pm, Wed, 2 November 22