ಪಿಂಚಣಿದಾರು ಆನ್ಲೈನ್ನಲ್ಲಿ ಜೀವನ ಪ್ರಮಾಣಪತ್ರ ಪುರಾವೆ ಸಲ್ಲಿಸಲು ಇಲ್ಲಿದೆ 5 ಸುಲಭ ವಿಧಾನ
ಕೇಂದ್ರ ಸರ್ಕಾರದಿಂದ ತಿಂಗಳ ಪಿಂಚಣಿ ಪಡೆಯುವವರು ಜೀವನ ಪ್ರಮಾಣಪತ್ರ ಪುರಾವೆ ಅಥವಾ ಪ್ರೂಫ್ ಆಫ್ ಲೈಫ್ ವಾರ್ಷಿಕ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. ಪಿಂಚಣಿದಾರು ಆನ್ಲೈನ್ನಲ್ಲಿ ಜೀವನ ಪ್ರಮಾಣಪತ್ರ ಪುರಾವೆ ಸಲ್ಲಿಸಲು ಸುಲಭ ವಿಧಾನಗಳನ್ನು ಇಲ್ಲಿ ತಿಳಿಸಲಾಗಿದೆ.
ಕೇಂದ್ರ ಸರ್ಕಾರದಿಂದ ತಿಂಗಳ ಪಿಂಚಣಿ ಪಡೆಯುವವರು ಜೀವನ ಪ್ರಮಾಣಪತ್ರ ಪುರಾವೆ (Proof Of Life) ಅಥವಾ ಪ್ರೂಫ್ ಆಫ್ ಲೈಫ್ ವಾರ್ಷಿಕ ಪ್ರಮಾಣಪತ್ರವನ್ನು (Annual Life Certificate) ಸಲ್ಲಿಸಬೇಕಾಗುತ್ತದೆ. ಇದನ್ನು ಜೀವನ್ ಪ್ರಮಾಣ್ (Jeevan Pramaan) ಎಂದೂ ಕರೆಯಲಾಗುತ್ತಿದ್ದು, ಪಿಂಚಣಿ ವಿತರಣಾ ಸಂಸ್ಥೆಗೆ (PDA) ಸಲ್ಲಿಸಬೇಕಾಗುತ್ತದೆ. ಪಿಂಚಣಿದಾರ ಜೀವಂತವಾಗಿದ್ದಾರೆ ಎಂಬುದನ್ನು ಖಾತರಿಪಡಿಸುವ ಪ್ರಮಾಣಪತ್ರ ಇದಾಗಿದೆ.
80 ವರ್ಷ ಮೇಲ್ಪಟ್ಟ ಪಿಂಚಣಿದಾರರಿಗೆ ಗಡುವಿನಲ್ಲಿ ವಿನಾಯಿತಿ: ಪ್ರತಿ ವರ್ಷ ನವೆಂಬರ್ 1ರಂದು ಪಿಂಚಣಿದಾರರು ಪ್ರಮಾಣಪತ್ರ ಸಲ್ಲಿಸಬೇಕಾಗುತ್ತದೆ. ಹಿರಿಯ ನಾಗರಿಕರಿಗೆ ಮತ್ತು 80 ವರ್ಷ ಮೇಲ್ಪಟ್ಟವರಿಗೆ ಅಕ್ಟೋಬರ್ 1ರಿಂದಲೇ ಪ್ರಮಾಣಪತ್ರ ಸಲ್ಲಿಸಲು ಸರ್ಕಾರ ಅನುಮತಿ ನೀಡಿದೆ.
ಪ್ರಮಾಣಪತ್ರ ಸಲ್ಲಿಸಲು ಇರುವ ಆಯ್ಕೆಗಳು
ಪಿಂಚಣಿದಾರರು ಪಿಂಚಣಿ ವಿತರಣಾ ಸಂಸ್ಥೆಗಳಾದ ಬ್ಯಾಂಕ್, ಅಂಚೆ ಕಚೇರಿ, ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ ಕಚೇರಿಗಳಿಗೆ ತೆರಳಿ ಅಥವಾ ಡಿಜಿಟಲ್ ರೂಪದಲ್ಲಿ ಪ್ರಮಾಣಪತ್ರ ಸಲ್ಲಿಸಬಹುದಾಗಿದೆ. ಭೌತಿಕವಾಗಿ ಕಚೇರಿಗಳಿಗೆ ತೆರಳಲು ಇಚ್ಛಿಸದಿದ್ದಲ್ಲಿ ನಿಗದಿಪಡಿಸಿದ ಸ್ವರೂಪದಲ್ಲಿ ಸಹಿ ಮಾಡಿದ ಪ್ರಮಾಣಪತ್ರವನ್ನು ಗೊತ್ತುಪಡಿಸಿದ ಅಧಿಕಾರಿಗಳ ಬಳಿ ಸಲ್ಲಿಸಬಹುದು. ಕೇಂದ್ರ ಪಿಂಚಣಿ ಸಾಂಖ್ಯಿಕ ಕಚೇರಿಯ (CPIO) ನಿಯಮ ಪುಸ್ತಕದಲ್ಲಿ ಉಲ್ಲೇಖಿಸಿರುವ ಪ್ರಕಾರ, ಕೆಲವು ವ್ಯಕ್ತಿಗಳಿಗೆ ಪ್ರಮಾಣಪತ್ರ ಸಲ್ಲಿಕೆಗೆ ಭೌತಿಕ ಹಾಜರಾತಿಯಿಂದ ವಿನಾಯಿತಿ ನೀಡಲಾಗಿದೆ.
ಜೀವನ್ ಪ್ರಮಾಣ್ ಪೋರ್ಟಲ್
ಜೀವನ ಪ್ರಮಾಣಪತ್ರ ಪುರಾವೆ ಸಲ್ಲಿಸಲು ಪಿಂಚಣಿದಾರರು ಜೀವನ್ ಪ್ರಮಾಣ್ ಪೋರ್ಟಲ್ ಅನ್ನು ಬಳಸಿಕೊಳ್ಳಬಹುದು. ಇಲ್ಲಿ ಪಿಂಚಣಿದಾರರು ಜೀವನ್ ಪ್ರಮಾಣ್ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಯುಐಡಿಎಐ ಸೂಚಿಸಿರುವ ಸಾಧನಗಳ ಮೂಲಕ ಸೆರೆಹಿಡಿಯಲಾದ ಬಯೋಮೆಟ್ರಿಕ್ ದತ್ತಾಂಶವನ್ನು ಒದಗಿಸಿ ಅರ್ಜಿ ನಮೂನೆ ಪಡೆಯಬೇಕಾಗುತ್ತದೆ.
ಗೂಗಲ್ ಪ್ಲೇಸ್ಟೋರ್ನಿಂದ ಪೋಸ್ಟ್ ಇನ್ಫೋ ಅಪ್ಲಿಕೇಷನ್ ಡೌನ್ಲೋಡ್ ಮಾಡಿ
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ಗಳು 2020ರಲ್ಲಿ ಅಂಚೆ ಮೂಲಕ ಮನೆ ಮನೆಗೆ ತೆರಳಿ ಜೀವನ ಪ್ರಮಾಣಪತ್ರ ವಿತರಿಸುವ ಸೇವೆ ಆರಂಭಿಸಿವೆ. ಗೂಗಲ್ ಪ್ಲೇಸ್ಟೋರ್ನಿಂದ ಪೋಸ್ಟ್ ಇನ್ಫೋ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಪಿಂಚಣಿದಾರರು ಈ ಸೇವೆಯನ್ನು ಪಡೆಯಬಹುದಾಗಿದೆ.
ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ
ಜೀವನ ಪ್ರಮಾಣಪತ್ರ ವಿತರಣೆಗಾಗಿ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೌಲಭ್ಯ ಸೇವೆಯನ್ನೂ ಸರ್ಕಾರ ಒದಗಿಸುತ್ತಿದೆ. ಸರ್ಕಾರಿ ಸ್ವಾಮ್ಯದ 12 ಬ್ಯಾಂಕುಗಳು 100 ಪ್ರಮುಖ ನಗರಗಳಲ್ಲಿ ಈ ಸೇವೆ ಒದಗಿಸುತ್ತಿವೆ. ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ (DSB) ಮೊಬೈಲ್ ಆ್ಯಪ್ ಮೂಲಕ ಪಿಂಚಣಿದಾರರು ಸೇವೆಗೆ ಮನವಿ ಸಲ್ಲಿಸಬಹುದಾಗಿದೆ. ಅಥವಾ ಟೋಲ್-ಫ್ರೀ ಸಂಖ್ಯೆ 18001213721 ಹಾಗೂ 18001037188 ಗೆ ಕರೆ ಮಾಡಬಹುದಾಗಿದೆ.
ಫೇಸ್ ರೆಕಗ್ನಿಷನ್ ತಂತ್ರಜ್ಞಾನ
ಈ ವಿಧಾನದಲ್ಲಿ ಯುಐಡಿಎಐ ಆಧಾರ್ ಸಾಫ್ಟ್ವೇರ್ ತಂತ್ರಜ್ಞಾನವನ್ನು ಬಳಸಿಕೊಂಡು ಜೀವನ ಪ್ರಮಾಣಪತ್ರವನ್ನು ಜನರೇಟ್ ಮಾಡಬಹುದಾಗಿದೆ. ಸ್ಮಾರ್ಟ್ಫೋನ್ನಲ್ಲಿ ಪಿಂಚಣಿದಾರರ ಫೋಟೊ ಸೆರೆಹಿಡಿದು ಜೀವನ್ ಪ್ರಮಾಣ್ ಆ್ಯಪ್ಗೆ ಅಪ್ಲೋಡ್ ಮಾಡುವ ಮೂಲಕ ಜೀವನ ಪ್ರಮಾಣಪತ್ರವನ್ನು ಜನರೇಟ್ ಮಾಡಬಹುದಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ