ಜೆಪಿಪಿ ಸಲ್ಲಿಸಲು ಕೊನೆಯ ದಿನಾಂಕವನ್ನು ಫೆಬ್ರವರಿ 28, 2021ರವರೆಗೆ ವಿಸ್ತರಿಸಿದ ಇಪಿಎಫ್‌ಒ
ಕೊರೊನಾ ವೈರಸ್ನಿಂದ ಸೃಷ್ಟಿಯಾಗಿರುವ ಅಭೂತಪೂರ್ವ ಸನ್ನಿವೇಶದಲ್ಲಿ ಹಿರಿಯ ನಾಗರಿಕರಿಗೆ ಅನುಕೂಲವಾಗಲೆಂದು ಪಿಂಚಣಿ ಪಡೆಯುತ್ತಿರುವವರು ತಮ್ಮ ಜೀವಿತ ಪ್ರಮಾಣಪತ್ರವನ್ನು ಸಲ್ಲಿಸಬೇಕಿರುವ ಅವಧಿಯನ್ನು ಕಾರ್ಮಿಕ ಭವಿಷ್ಯನಿಧಿ ಸಂಘಟನೆಯು ಫೆಬ್ರವರಿ 28, 2021ರವರೆಗೆ ವಿಸ್ತರಿಸಿದೆ.
ಕೋವಿಡ್-19 ಸಾಂಕ್ರಾಮಿಕ ಮತ್ತು ವಯಸ್ಸಾದವರಿಗೆ ಕೊರೊನಾ ವೈರಸ್‌ನ ಹೆಚ್ಚಿನ ಅಪಾಯವನ್ನು ಗಮನದಲ್ಲಿಟ್ಟುಕೊಂಡು, ಪಿಂಚಣಿದಾರರು ತಮ್ಮ ಜೀವಿತ ಪ್ರಮಾಣಪತ್ರವನ್ನು (ಜೀವನ ಪ್ರಮಾಣ ಪತ್ರ-ಜೆಪಿಪಿ) ಸಲ್ಲಿಸುವ ಅವಧಿಯನ್ನು ಇಪಿಎಫ್‌ಒ 2021 ಫೆಬ್ರವರಿ 28ರವರೆಗೆ ವಿಸ್ತರಿಸಿದೆ.
ಇಪಿಎಸ್ 1995 ಮತ್ತು ಫೆಬ್ರವರಿ 21, 2021 ರವರೆಗೆ ಯಾವುದೇ ತಿಂಗಳಲ್ಲಿ ಜೀವಿತ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗಿರುವವರಿಗೆ ಇದು ಅನ್ವಯವಾಗಲಿದೆ. ಪ್ರಸ್ತುತ ಪಿಂಚಣಿದಾರರು ನವೆಂಬರ್ 30 ರವರೆಗೆ ಯಾವುದೇ ಸಮಯದಲ್ಲಿ ಜೆಪಿಪಿಯನ್ನು ಸಲ್ಲಿಸಬಹುದಾಗಿತ್ತು, ಇದು ವಿತರಣೆಯ ದಿನಾಂಕದಿಂದ ಒಂದು ವರ್ಷದವರೆಗೆ ಅವಧಿಗೆ ಮಾನ್ಯವಾಗಿರುತ್ತದೆ. ಈಗ ಅಂತಹ ಎಲ್ಲ ಪಿಂಚಣಿದಾರರು 2021 ರ ಫೆಬ್ರವರಿ 28 ರವರೆಗೆ ಜೀವಿತ ಪ್ರಮಾಣಪತ್ರವನ್ನು ಸಲ್ಲಿಸಬಹುದು.
3.65 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳು (ಸಿಎಸ್‌ಸಿ), ಬ್ಯಾಂಕುಗಳ ಪಿಂಚಣಿ ವಿತರಣಾ ಶಾಖೆಗಳು, 1.36 ಲಕ್ಷ ಅಂಚೆ ಕಚೇರಿಗಳು, 1.90 ಲಕ್ಷ ಅಂಚೆಯವರ ಅಂಚೆ ನೆಟ್‌ವರ್ಕ್ ಮತ್ತು ಅಂಚೆ ಇಲಾಖೆಯಡಿ ಬರುವ ಗ್ರಾಮೀಣ ಅಂಚೆ ಸೇವಕರು ಸೇರಿದಂತೆ ಹಲವಾರು ವಿಧಾನಗಳಲ್ಲಿ ಪಿಂಚಣಿದಾರರು ಜೀವಿತ ಪ್ರಮಾಣಪತ್ರವನ್ನು ಸಲ್ಲಿಸಬಹುದು.
ಪಿಂಚಣಿದಾರರು ತಮ್ಮ ಹತ್ತಿರದ ಸಿಎಸ್‌ಸಿಗಳನ್ನು ಪತ್ತೆಹಚ್ಚಲು https://locator.csccloud.in/ ಲಿಂಕ್ ಅನ್ನು ಬಳಸಬಹುದು ಮತ್ತು ಜೆಪಿಪಿಗಳನ್ನು ತಮ್ಮ ಮನೆ ಅಥವಾ ಬೇರೆಡೆಯಿಂದ ಸಲ್ಲಿಸಲು ಅಂಚೆ ಕಚೇರಿಗಳಿಗೆ ಆನ್‌ಲೈನ್ ವಿನಂತಿಯನ್ನು ಮಾಡಲು http://ccc.cept.gov.in/covid/request.aspx ಲಿಂಕ್ ಅನ್ನು ಬಳಸಬಹುದು.
ಇಪಿಎಫ್‌ಒನ ಪ್ರಯತ್ನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಸಂತೋಷ್ ಗಂಗ್ವಾರ್ ಅವರು, ಕಾರ್ಯವಿಧಾನಗಳನ್ನು ಸರಳೀಕರಿಸುವ ಮತ್ತು ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ಒತ್ತು ನೀಡುವ ಮೂಲಕ ಪಿಂಚಣಿದಾರರಿಗೆ ಸಹಾಯ ಮಾಡುವಲ್ಲಿ ಸಂಸ್ಥೆ ಶ್ಲಾಘನೀಯ ಕೆಲಸ ಮಾಡಿದೆ. 35 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗುವಂತೆ ಜೀವಿತ ಪ್ರಮಾಣ ಪತ್ರವನ್ನು ಸಲ್ಲಿಸಲು 2021 ಫೆಬ್ರವರಿ 28ರವರೆಗೆ ಅವಧಿಯನ್ನು ವಿಸ್ತರಿಸಿದೆ ಎಂದು ಹೇಳಿದರು.
2020 ರ ನವೆಂಬರ್‌ನಲ್ಲಿ ಜೆಪಿಪಿಯನ್ನು ಸಲ್ಲಿಸಲು ಸಾಧ್ಯವಾಗದಿರುವ ಇಂತಹ 35 ಲಕ್ಷ ಪಿಂಚಣಿದಾರರಿಗೆ ಈ ವಿಸ್ತರಿತ ಅವಧಿಯಲ್ಲಿ ಪಿಂಚಣಿಯನ್ನು ನಿಲ್ಲಿಸುವುದಿಲ್ಲ ಎಂದೂ ಶ್ರೀ ಗಂಗ್ವಾರ್ ಹೇಳಿದ್ದಾರೆ.