ದೆಹಲಿಗೆ ಹೋಗಿ ವಾಪಸ್ ಬಂದ ರಮೇಶ್ ಜಾರಕಿಹೊಳಿಗೆ ಸಿಎಂ ಖಡಕ್ ಮಾತು?..ಭೇಟಿ ವೇಳೆ ಅಸಮಾಧಾನ !
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿಯಾಗಿ ನಾನು ನಿರ್ಧಾರ ಕೈಗೊಳ್ಳಬೇಕು. ದೆಹಲಿ ವರಿಷ್ಠರ ಜತೆ ಮಾತುಕತೆ, ಚರ್ಚೆ ನಡೆಸಬೇಕಾದವನು ನಾನು. ಹೀಗಿದ್ದಾಗ್ಯೂ ನೀವೇಕೆ ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದೀರಿ. ಸಚಿವ ಸಂಪುಟ, ಮಂತ್ರಿ ಸ್ಥಾನದ ಬಗ್ಗೆ ದೆಹಲಿ ಸಚಿವರ ಬಳಿ ಯಾಕೆ ಮಾತುಕತೆ ನಡೆಸುತ್ತಿದ್ದೀರಿ ಎಂದು ಸಿಎಂ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ಒಂದೆಡೆ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿದ್ದರೆ, ಮತ್ತೊಂದೆಡೆ ಸಚಿವ ರಮೇಶ್ ಜಾರಕಿಹೊಳಿ ದೆಹಲಿ ಪ್ರಯಾಣವೂ ಹೆಚ್ಚುತ್ತಿದೆ. ರಮೇಶ್ ಜಾರಕಿಹೊಳಿ ಪದೇಪದೆ ದೆಹಲಿಗೆ ಹೋಗುತ್ತಿರುವುದು ಪಕ್ಷದೊಳಗೇ ಚರ್ಚೆಗೆ ಕಾರಣವಾಗಿದೆ..ಅಷ್ಟೇ ಅಲ್ಲ ಮುಖ್ಯಮಂತ್ರಿ ಯಡಿಯೂರಪ್ಪನವರೂ ಸಹ ಈ ಬಗ್ಗೆ ಸಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿ.ಪಿ.ಯೋಗೇಶ್ವರ್ ಸೇರಿ ಕೆಲವರಿಗೆ ಸಚಿವ ಸ್ಥಾನ ಕೊಡಿಸಲು ರಮೇಶ್ ಜಾರಕಿಹೊಳಿ ಪ್ರಯತ್ನ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಈಗಾಗಲೇ ಬಿ.ಎಲ್.ಸಂತೋಷ್ ಸೇರಿ ಕೆಲವು ಕೇಂದ್ರ ಸಚಿವರನ್ನೂ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇಂದು ಅವರು ದೆಹಲಿಯಿಂದ ವಾಪಸ್ ಬಂದ ಕೂಡಲೇ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿಯಾಗಿದ್ದ ವೇಳೆ, ಸಿಎಂ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿಯಾಗಿ ನಾನು ನಿರ್ಧಾರ ಕೈಗೊಳ್ಳಬೇಕು. ದೆಹಲಿ ವರಿಷ್ಠರ ಜತೆ ಮಾತುಕತೆ, ಚರ್ಚೆ ನಡೆಸಬೇಕಾದವನು ನಾನು. ಹೀಗಿದ್ದಾಗ್ಯೂ ನೀವೇಕೆ ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದೀರಿ. ಸಚಿವ ಸಂಪುಟ, ಮಂತ್ರಿ ಸ್ಥಾನದ ಬಗ್ಗೆ ದೆಹಲಿ ಸಚಿವರ ಬಳಿ ಯಾಕೆ ಮಾತುಕತೆ ನಡೆಸುತ್ತಿದ್ದೀರಿ ಎಂದು ಸೂಕ್ಷ್ಮವಾಗಿಯೇ ರಮೇಶ್ ಜಾರಕಿಹೊಳಿಗೆ ನೀವು ಮಾಡುತ್ತಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ. ಈ ವೇಳೆ ರಮೇಶ್ ಜಾರಕಿಹೊಳಿ, ತಾವು ನೀರಾವರಿ ಯೋಜನೆ ಬಗ್ಗೆ ಚರ್ಚಿಸಲು ಹೋಗಿದ್ದಾಗಿ ಸಿಎಂಗೆ ಹೇಳಿದರೂ, ಅವರು ಸಚಿವ ರಮೇಶ್ ನಡೆಯನ್ನು ಸ್ವಲ್ಪ ಖಾರವಾಗಿಯೇ ವಿರೋಧಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
Published On - 8:48 pm, Sat, 28 November 20