ಇಲ್ಲೊಬ್ಬ ಯುವಕ ತಾನು ಮರಡೋನ ಮಗನೆಂದು ಹೇಳಿ ಡಿಎನ್​ಎ ಪರೀಕ್ಷೆಗೆ ಒತ್ತಾಯಿಸುತ್ತಿದ್ದಾನೆ!

ಲೆಜೆಂಡರಿ ಫುಟ್ಬಾಲ್ ಆಟಗಾರ ಡೀಗೊ ಮರಡೋನ ಅವರ ಮಗನೆಂದು ಹೇಳಿಕೊಳ್ಳುತ್ತಿರುವ ಯುವಕನೊಬ್ಬ, ಆಟಗಾರನ ಹೂತಿರುವ ದೇಹವನ್ನು ಹೊರತೆಗೆದು ಡಿಎನ್​ಎ ಪರೀಕ್ಷೆ ಮಾಡಿಸಬೇಕೆಂದು ನ್ಯಾಯಾಲಯದ ಮೊರೆ ಹೊಕ್ಕಿದ್ದಾನೆ. ಮರಡೋನ ಅವರ ಆಸ್ತಿಯ ಬಗ್ಗೆ ತನಗೆ ಎಳ್ಳಷ್ಟೂ ಆಸಕ್ತಿಯಿಲ್ಲವೆಂದು ಈ ಯುವಕ ಹೇಳಿರುವುದು ಸೋಜಿಗದ ಸಂಗತಿಯಾಗಿದೆ.

  • Arun Belly
  • Published On - 21:15 PM, 28 Nov 2020
ಇಲ್ಲೊಬ್ಬ ಯುವಕ ತಾನು ಮರಡೋನ ಮಗನೆಂದು ಹೇಳಿ ಡಿಎನ್​ಎ ಪರೀಕ್ಷೆಗೆ ಒತ್ತಾಯಿಸುತ್ತಿದ್ದಾನೆ!

ಒಬ್ಬ ಪ್ರತಿಷ್ಠಿತ ವ್ಯಕ್ತಿ, ಅಥವಾ ಒಬ್ಬ ವಿಖ್ಯಾತ ಕ್ರೀಡಾಪಟು ಮರಣ ಹೊಂದಿದಾಗ ಆತ ಬಿಟ್ಟುಹೋಗಿರುವ ಸಂಪತ್ತಿಗಾಗಿ ವ್ಯಾಜ್ಯಗಳು ನಡೆಯುವುದನ್ನು ನಾವು ಕೇಳಿದ್ದೇವೆ. ಆತ ಭಾರಿ ಶ್ರೀಮಂತನಾಗಿದ್ದರೆ, ಆತನ ಸಂಬಂಧಿಕರು, ಅಥವಾ ಅನಧಿಕೃತ ಮಕ್ಕಳೆಂದು ಹೇಳಿಕೊಳ್ಳುವವರು ಕೋರ್ಟಿನ ಮೊರೆ ಹೋಗಿ ಆಸ್ತಿಯಲ್ಲಿ ಭಾಗಕ್ಕಾಗಿ ಮೊಕದ್ದಮೆ ದಾಖಲಿಸುವುದು ನಮಗೆ ಗೊತ್ತಿದೆ. ಆದರೆ ಇಲ್ಲೊಬ್ಬ ಹದಿಹರೆಯುದ ಯುವಕ ತನ್ನ ಗುರುತಿಗಾಗಿ (ಐಡೆಂಟಿಟಿ) ಕೋರ್ಟಿನ ಕದ ತಟ್ಟಿದ್ದಾನೆ. ಅಂದ ಹಾಗೆ, ಈ ಯುವಕ ಯಾರು ಗೊತ್ತಾ?

ಮೊನ್ನೆಯಷ್ಟೇ ನಿಧನ ಹೊಂದಿದ ಲೆಜೆಂಡರಿ ಫುಟ್ಬಾಲ್ ಆಟಗಾರ ಡೀಗೊ ಮರಡೊನ ಅವರ ಮಗನೆಂದು ಹೇಳಿಕೊಳ್ಳುತ್ತಿರುವ ಸ್ಯಾಂಟಿಯಾಗೊ ಲಾರಾ. ತನ್ನ ವಕೀಲನ ಮೂಲಕ ಅರ್ಜೆಂಟೀನಾದ ರಾಜಧಾನಿ ಬ್ಯೂನಸ್ ಐರಸ್ ದಕ್ಷಿಣ ಬಾಗದಲ್ಲಿರುವ ಲಾ ಪ್ಲಾಟಾ ಕೌಟುಂಬಿಕ ನ್ಯಾಯಾಲಯಕ್ಕೆ ಮನವಿಯಂದನ್ನು ಸಲ್ಲಿಸಿರುವ ಸ್ಯಾಂಟಿಯಾಗೊ, ಹೂತಿರುವ ಮರೊಡೊನ ಅವರ ದೇಹವನ್ನು ಹೊರತೆಗೆದು ತನ್ನ ಡಿಎನ್​ಎ ಟೆಸ್ಟ್ ಮಾಡಿಸಬೇಕೆಂದು ಕೋರಿದ್ದಾನೆ. ಮನವಿಯಲ್ಲಿ ಅವನು ತಾನು ಮರಡೋನ ಅವರ ಮಗನೆಂದು ಹೇಳಿಕೊಂಡಿದ್ದಾನೆ. ಅವನ ವಕೀಲ ಜೋಸ್ ನುನೆಜ್ ಅರ್ಜೆಂಟೀನಾದ ರಾಷ್ಟ್ರೀಯ ಚ್ಯಾನೆಲೊಂದರಲ್ಲಿ ಶುಕ್ರವಾರ ರಾತ್ರಿ ಕಾಣಿಸಿಕೊಂಡು, ಸ್ಯಾಂಟಿಯಾಗೊ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.

ಸೋಜಿಗದ ಸಂಗತಿಯೆಂದರೆ, ಸ್ಯಾಂಟಿಯಾಗೊ ತನ್ನ 13 ನೇ ವಯಸ್ಸಿನಿಂದ ಅಂದರೆ 2014ರಿಂದ ತಾನು ಮರಡೊನ ಅವರ ಮಗನೆಂದು ಹೇಳಿಕೊಳ್ಳುತ್ತಾ ಕಾನೂನು ಹೋರಾಟ ನಡೆಸಿದ್ದಾನೆ. ಆದರೆ ತನ್ನ ಗುರುತಿಗಾಗಿ ನಡೆಸುತ್ತಿರುವ ಹೋರಾಟವನ್ನು ಅವನು ಕೇವಲ 4 ವರ್ಷಗಳ ಹಿಂದೆ ಬಹಿರಂಗಗೊಳಿಸಿದ್ದ. ಇದು ನಿಜವೇ ಆಗಿದ್ದರೆ, ಸ್ಯಾಂಟಿಯಾಗೊ, ಮರಡೋನ ಅವರ 6ನೇ ಸಂತಾನವೆನಿಸಿಕೊಳ್ಳುತ್ತಾನೆ.
ಅಧಿಕೃತವಾಗಿ, ಮರಡೋನ ಅವರಿಗೆ 5 ಮಕ್ಕಳಿದ್ದಾರೆ. ಅದರೆ ಅವರಲ್ಲಿ ಇಬ್ಬರನ್ನು ಹಲವು ವರ್ಷಗಳ ನಂತರ ಅವರು ತನ್ನ ಮಕ್ಕಳೆಂದು ಗುರುತಿಸಿದರು ಮತ್ತು ಅಂಗೀಕರಿಸಿದರು.

ಸ್ಯಾಂಟಿಯಾಗೊ ಲಾರಾ

ಸ್ಯಾಂಟಿಯಾಗೊ ಹೇಳುವಂತೆ ಪರಿಚಾರಕಿಯಾಗಿ ಕೆಲಸ ಮಾಡುತ್ತಿದ್ದ ಅವನ ತಾಯಿ ನತಾಲಿಯಾ ಗಾರತ್, ಮರಡೊನ ಅವರೊಂದಿಗಿನ 7-ವರ್ಷಗಳ ಸ್ನೇಹದ ನಂತರ ತನ್ನ 23ನೇ ವಯಸ್ಸಿನಲ್ಲಿ ಕ್ಯಾನ್ಸರ್​ಗೆ ಬಲಿಯಾದಳು. ಆಕೆಯ ಮರಣದ ನಂತರ ಆಕೆಯ ಮಾಜಿ ಬಾಯ್​ಫ್ರೆಂಡ್ ಮಾರ್ಸಿಲೊ ಲಾರಾ, ಸ್ಯಾಂಟಿಯಾಗೊನನ್ನು ಬೆಳಸಿದನಂತೆ.

ನುನೆಜ್ ಟೀವಿಯಲ್ಲಿ ಸ್ಯಾಂಟಿಯಾಗೊನ ಬೇಡಿಕೆ ಬಗ್ಗೆ ಮಾತಾಡಿದ ನಂತರ, ಮತ್ತೊಂದು ಟಿವಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಸ್ಯಾಂಟಿಯಾಗೊ, ‘‘ನನ್ನ ತಾಯಿ ನಿಧನ ಹೊಂದಿದಾಗ ನಾನು ಕೇವಲ3 ವರ್ಷದವನಾಗಿದ್ದೆ. ಆದರೆ ಸಾಯುವ ಮೊದಲು ಆಕೆ ತನಗೆ ಅಳವಡಿಸಿದ್ದ ವೆಂಟಿಲೇಟರನ್ನು ತೆಗೆಯಲು ಹೇಳಿ ಅಲ್ಲಿದ್ದ ವಕೀಲರಿಗೆ ನಾನು ಮರಡೋನ ಅವರಿಗೆ ಹುಟ್ಟಿದ ಮಗನೆಂದು ಹೇಳಿದ್ದಳು,’’ ಅಂತ ಸ್ಯಾಂಟಿಯಾಗೊ ಹೇಳಿದ್ದಾನೆ.

ತಾನು ಮರಡೊನ ಅವರ ಮಗನೆಂದು ಐಡೆಂಟಿಟಿ ಸಿಕ್ಕರೆ ಸಾಕು, ಅವರ ಆಸ್ತಿಯ ಬಗ್ಗೆ ತನಗ್ಯಾವ ಖಯಾಲಿಯೂ ಇಲ್ಲವೆಂದು ಸ್ಯಾಂಟಿಯಾಗೊ ಸ್ಪಷ್ಟಪಡಿಸಿದ್ದಾನೆ.

‘‘ನಾನು ಯಾರೆನ್ನುವುದು ನನಗೆ ಗೊತ್ತಾಗಬೇಕಿದೆ. ಅವರ ಸಂಪತ್ತು ನನಗೆ ಬೇಕಿಲ್ಲ. ನನ್ನ ಈ ಬೇಡಿಕೆ ಅರ್ಜೆಂಟೀನಾದಲ್ಲಿ ಕೋಲಾಹಲ ಹುಟ್ಟಿಸಲಿದೆಯೆನ್ನುವುದು ನನಗೆ ಗೊತ್ತಿದೆ. ಆದರೆ ಇದನ್ನು ನಾನು ಮಾಡದಿದ್ದರೆ ನಂಗ್ಯಾರು ಡಿಎನ್​ಎ ನೀಡುತ್ತಾರೆ? ನನ್ನ ತಂದೆ ಯಾವತ್ತಿಗೂ ಮಾರ್ಸಿಲೊ ಲಾರಾ ಅವರೇ ಅಗಿರುತ್ತಾರೆ, ಅದರೆ ನನ್ನನ್ನು ಹುಟ್ಟಿಸಿದವರು ಯಾರೆಂದು ಗೊತ್ತಾಗಬೇಕಿದೆ. ನಾನು ಮರಡೊನ ಅವರಿಗೆ ಹುಟ್ಟಿದವನೆಂದು ಎಲ್ಲರೂ ಹೇಳುತ್ತಾರೆ. ನೋಡಲು ನಾನು ಆವರಂತೆಯೇ ಕಾಣುತ್ತೇನೆ, ಮಾರ್ಸಿಲೊ ಅವರನ್ನ ನೋಡಿದಾಗ ಅವರನ್ನು ನಾನು ಹೋಲುವುದಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಇಂಥ ಭಾವನೆಯೊಂದಿಗೆ ಬೆಳಗ್ಗೆ ಹಾಸಿಗೆಯಿಂದ ಏಳುವುದು ಬಹಳ ಯಾತನಾಮಯ ಸಂಗತಿ,’’ ಎಂದು ಸ್ಯಾಂಟಿಯಾಗೊ ಹೇಳಿದ್ದಾನೆ.

ಟಿವಿಯಲ್ಲಿ ಮಾತಾಡುವಾಗ ನುನೆಜ್, ‘‘ಡೀಗೊ ಅರ್ಮ್ಯಾಂಡೊ ಮರಡೊನ ಅವರ ದೇಹವಿರುವ ಶವಪೆಟ್ಟಿಗೆಯನ್ನು ಹೊರತೆಗೆದು ಲಾ ಪ್ಲಾಟಾ ನ್ಯಾಯಾಂಗ ಅಧೀನದಲ್ಲಿರುವ ಮಾರ್ಚುರಿಗೆ ರವಾನಿಸಬೇಕು, ನ್ಯಾಯಾಧೀಶರು ಇದಕ್ಕೆ ಅಪ್ಪಣೆ ನೀಡಬೇಕೆಂದು ಕೋರುತ್ತಿದ್ದೇನೆ. ಒಬ್ಬ ಯುವಕ ತನ್ನ ಐಡೆಂಟಿಟಿಗಾಗಿ ಹೋರಾಡುತ್ತಿದ್ದಾನೆ, ಅವನಿಗೆ ಅದು ದಕ್ಕಬೇಕು, ಸ್ಯಾಂಟಿಯಾಗೊ ಈ ವಿಷಯದಲ್ಲಿ ಬಹಳ ಭಾವುಕನಾಗಿದ್ದಾನೆ. ಹಾಗಾಗೇ, ಅವನ ನನ್ನೊಂದಿಗೆ ಬರಲಿಲ್ಲ,’’ ಎಂದು ಹೇಳಿದರು.

ಅಂದಹಾಗೆ, ಮರಡೋನ ಅವರ ಮಕ್ಕಳು ಯಾರು ಎನ್ನುವುದನ್ನು ನೋಡೋಣ. ಅಧಿಕೃತ ಐವರು ಮಕ್ಕಳೆಂದರೆ, 34 ವರ್ಷ ವಯಸ್ಸಿನ ಡೀಗೋ ಜ್ಯೂನಿಯರ್, ಜನಾ 23, ದಾಲ್ಮಾ 32, ಗಿಯಾನಿನ್ನ 30, ಮತ್ತು ಡೀಗೊ ಫರ್ನ್ಯಾಂಡೊ 7.
ಅವರ ಅನಧಿಕೃತ ಮಕ್ಕಳು; ಕ್ಯೂಬಾದ ತ್ರಿವಳಿಗಳಾದ ಜೋನಾ, ಲು ಮತ್ತು ಜಾವಿಲಿಟೊ, ಮಗಾಲಿ ಗಿಲ್ 23 ಮತ್ತು ಸ್ಯಾಂಟಿಯಾಗೊ ಲಾರಾ 19.