Invest Karnataka 2022: ಕರ್ನಾಟಕದಲ್ಲಿ 7 ವರ್ಷಗಳಲ್ಲಿ 1 ಲಕ್ಷ ಕೋಟಿ ರೂ. ಹೂಡಿಕೆ: ಅದಾನಿ ಗ್ರೂಪ್
ರಾಜ್ಯದಲ್ಲಿ ಮುಂದಿನ 7 ವರ್ಷಗಳ ಅವಧಿಯಲ್ಲಿ 1 ಲಕ್ಷ ಕೋಟಿ ರೂ. ಹೂಡಿಕೆ ಮಾಡುವುದಾಗಿ ಅದಾನಿ ಗ್ರೂಪ್ ಘೋಷಿಸಿದೆ. ಕರಾವಳಿ ನಗರ ಮಂಗಳೂರಿನಲ್ಲಿ ತನ್ನ ಅಸ್ತಿತ್ವ ಹೆಚ್ಚಿಸಿಕೊಳ್ಳುವತ್ತ ಅದಾನಿ ಗ್ರೂಪ್ ಈಗಾಗಲೇ ಕಾರ್ಯತತ್ಪರವಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಮುಂದಿನ 7 ವರ್ಷಗಳ ಅವಧಿಯಲ್ಲಿ 1 ಲಕ್ಷ ಕೋಟಿ ರೂ. ಹೂಡಿಕೆ ಮಾಡುವುದಾಗಿ ಅದಾನಿ ಗ್ರೂಪ್ (Adani Group) ಘೋಷಿಸಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ‘ಇನ್ವೆಸ್ಟ್ ಕರ್ನಾಟಕ’ದಲ್ಲಿ (Invest Karnataka 2022) ‘ಅದಾನಿ ಪೋರ್ಟ್ಸ್ ಆ್ಯಂಡ್ ಎಸ್ಇಝಡ್ ಲಿಮಿಟೆಡ್’ ಸಿಇಒ ಕರಣ್ ಗೌತಮ್ ಅದಾನಿ (Karan Gautam Adani) ಈ ಕುರಿತು ಘೋಷಣೆ ಮಾಡಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಕಂಪನಿ ಉತ್ಸುಕವಾಗಿದೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಈಗಾಗಲೇ 20,000 ಕೋಟಿ ರೂ. ಹೂಡಿಕೆ ಮಾಡಲಾಗಿದೆ. ಸಿಮೆಂಟ್, ವಿದ್ಯುತ್, ಗ್ಯಾಸ್ಲೈನ್, ಖಾದ್ಯ ತೈಲ, ಸಾರಿಗೆ, ಡಿಜಿಟಲ್ ಹಾಗೂ ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಹೂಡಿಕೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
‘ಕರ್ನಾಟಕದಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ನಮ್ಮ ಹೂಡಿಕೆಯನ್ನು ವಿಸ್ತರಿಸಲಾಗುತ್ತಿದೆ. ಮುಂದಿನ 7 ವರ್ಷಗಳಲ್ಲಿ 1 ಲಕ್ಷ ಕೋಟಿ ರೂ. ಹೂಡಿಕೆ ಮಾಡಲು ಉತ್ಸುಕವಾಗಿದ್ದೇವೆ. ಅದಾನಿ ಗ್ರೂಪ್ ವಿಶ್ವದ ಅತಿ ದೊಡ್ಡ ಸೌರ ಶಕ್ತಿ ಉತ್ಪಾದಕ ಕಂಪನಿಯಾಗಿರುವುದರಿಂದ ಕರ್ನಾಟಕದಲ್ಲಿಯೂ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದೇವೆ’ ಎಂದು ಅದಾನಿ ಹೇಳಿದ್ದಾರೆ.
ಇದನ್ನೂ ಓದಿ: Invest Karnataka 2022: ಕರ್ನಾಟಕದಲ್ಲಿ 1 ಲಕ್ಷ ಕೋಟಿ ರೂ. ಹೂಡಿಕೆ, ಸಜ್ಜನ್ ಜಿಂದಾಲ್ ಘೋಷಣೆ
ಕರ್ನಾಟಕದಲ್ಲಿ ಸಿಮೆಂಟ್ ಉತ್ಪಾದನಾ ಸಾಮರ್ಥ್ಯವನ್ನು ಅದಾನಿ ಗ್ರೂಪ್ 70 ಲಕ್ಷ ಟನ್ಗಿಂತಲೂ ಹೆಚ್ಚು ಮಾಡಿಕೊಂಡಿದೆ. ನಾಲ್ಕು ಘಟಕಗಳಲ್ಲಿ ಸಿಮೆಂಟ್ ಉತ್ಪಾದಿಸಲಾಗುತ್ತಿದೆ. ಇದೇ ರೀತಿಯಲ್ಲಿ ಇತರ ಕ್ಷೇತ್ರಗಳಲ್ಲೂ ಹೂಡಿಕೆ ವಿಸ್ತರಿಸುವುದು ಕಂಪನಿಯ ಯೋಜನೆಯಾಗಿದೆ ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ.
‘ಮಂಗಳೂರು ವಿಮಾನ ನಿಲ್ದಾಣ ವಿಸ್ತರಣೆ’
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆ ಹೊಣೆಯನ್ನೂ ಸದ್ಯ ಅದಾನಿ ಗ್ರೂಪ್ ನಿರ್ವಹಿಸುತ್ತಿದೆ. ವಿಮಾನ ನಿಲ್ದಾಣದ ವಿಸ್ತರಣೆ ಕಾರ್ಯದಲ್ಲೂ ತೊಡಗಿಕೊಳ್ಳುವುದಾಗಿ ಅವರು ಮಾಹಿತಿ ನೀಡಿದ್ದಾರೆ. ಕರಾವಳಿ ನಗರ ಮಂಗಳೂರಿನಲ್ಲಿ ತನ್ನ ಅಸ್ತಿತ್ವ ಹೆಚ್ಚಿಸಿಕೊಳ್ಳುವತ್ತ ಅದಾನಿ ಗ್ರೂಪ್ ಈಗಾಗಲೇ ಕಾರ್ಯತತ್ಪರವಾಗಿದೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಮೊದಲ ದಿನವೇ 5 ಲಕ್ಷ ಕೋಟಿ ರೂ.ಗೂ ಹೆಚ್ಚಿನ ಒಪ್ಪಂದಗಳು ಏರ್ಪಟ್ಟಿವೆ. ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಬೆಳಿಗ್ಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದರು. ಕರ್ನಾಟಕದಲ್ಲಿ 1 ಲಕ್ಷ ಕೋಟಿ ರೂ. ಹೂಡಿಕೆ ಮಾಡುವುದಾಗಿ ಜೆಎಸ್ಡಬ್ಲ್ಯೂ ಗ್ರೂಪ್ ಅಧ್ಯಕ್ಷ ಸಜ್ಜನ್ ಜಿಂದಾಲ್ ಕೂಡ ಬುಧವಾರ ಘೋಷಿಸಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ