Layoffs: ಟೆಕ್ ಉದ್ಯೋಗಿಗಳಿಗೆ ಕಹಿ ತಂದ ಹೊಸ ವರ್ಷ; ದಿನಕ್ಕೆ ಸರಾಸರಿ 1,600 ಮಂದಿ ಕೆಲಸದಿಂದ ವಜಾ

ಟೆಕ್ ಕಂಪನಿಗಳ ಉದ್ಯೋಗಿಗಳಿಗೆ 2023 ಕೆಟ್ಟ ಆರಂಭ ನೀಡಿದೆ. ಹೊಸ ವರ್ಷದ ಮೊದಲ 15 ದಿನಗಳಲ್ಲಿ ಜಾಗತಿಕವಾಗಿ 91 ಕಂಪನಿಗಳು 24,000 ಮಂದಿಯನ್ನು ಉದ್ಯೋಗದಿಂದ ವಜಾಗೊಳಿಸಿವೆ.

Layoffs: ಟೆಕ್ ಉದ್ಯೋಗಿಗಳಿಗೆ ಕಹಿ ತಂದ ಹೊಸ ವರ್ಷ; ದಿನಕ್ಕೆ ಸರಾಸರಿ 1,600 ಮಂದಿ ಕೆಲಸದಿಂದ ವಜಾ
ಸಾಂದರ್ಭಿಕ ಚಿತ್ರ
Image Credit source: google image
Edited By:

Updated on: Jan 17, 2023 | 6:38 PM

ನವದೆಹಲಿ: ಜಾಗತಿಕವಾಗಿ 2023ರಲ್ಲಿ ಪ್ರತಿ ದಿನ ಸರಾಸರಿ 1,600 ಮಂದಿ ಟೆಕ್ (Tech Companies) ಉದ್ಯೋಗಿಗಳು ಕೆಲಸದಿಂದ ವಜಾಗೊಂಡಿದ್ದಾರೆ (Layoffs) ಎಂದು ವರದಿಯೊಂದು ತಿಳಿಸಿದೆ. ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯಿಂದ ಟೆಕ್ ಕಂಪನಿಗಳು ವೆಚ್ಚ ಕಡಿತ, ಉದ್ಯೋಗಿಗಳ ವಜಾ ಮೊರೆ ಹೋಗಿದ್ದು, ಇದರಲ್ಲಿ ಭಾರತೀಯ ಕಂಪನಿಗಳೂ ಸೇರಿವೆ. 2022ರಲ್ಲಿ ಜಾಗತಿಕವಾಗಿ ಸುಮಾರು 1,000 ಕಂಪನಿಗಳು 1,54,336 ಉದ್ಯೋಗಿಗಳನ್ನು ವಜಾಗೊಳಿಸಿದ್ದವು ಎಂದು ಲೇಆಫ್ಸ್​​ ಟ್ರ್ಯಾಕಿಂಗ್ ವೆಬ್​ಸೈಟ್ ‘ಲೇಆಫ್ಸ್​​ ಡಾಟ್ ಎಫ್​ವೈಐ’ ಅಂಕಿಅಂಶಗಳು ತಿಳಿಸಿವೆ. ತಂತ್ರಜ್ಞಾನ ಕಂಪನಿಗಳಲ್ಲಿ 2022ರಲ್ಲಿ ನಡೆದ ಸಾಮೂಹಿಕ ವಜಾ ಪ್ರಕ್ರಿಯೆಯು 2023ರಲ್ಲಿಯೂ ಮುಂದುವರಿದಿದೆ. ಭಾರತದ ಕಂಪನಿಗಳು, ಸ್ಟಾರ್ಟಪ್​ಗಳೂ ಕೂಡ ಉದ್ಯೋಗಿಗಳನ್ನು ವಜಾಗೊಳಿಸುವುದರಲ್ಲಿ ಮುಂಚೂಣಿಯಲ್ಲಿವೆ ಎಂದು ವರದಿ ಹೇಳಿದೆ.

ಟೆಕ್ ಕಂಪನಿಗಳ ಉದ್ಯೋಗಿಗಳಿಗೆ 2023 ಕೆಟ್ಟ ಆರಂಭ ನೀಡಿದೆ. ಹೊಸ ವರ್ಷದ ಮೊದಲ 15 ದಿನಗಳಲ್ಲಿ ಜಾಗತಿಕವಾಗಿ 91 ಕಂಪನಿಗಳು 24,000 ಮಂದಿಯನ್ನು ಉದ್ಯೋಗದಿಂದ ವಜಾಗೊಳಿಸಿವೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚುವ ಆತಂಕವಿದೆ ಎಂದು ವರದಿ ತಿಳಿಸಿದೆ. ಭಾರತದಲ್ಲಿಯೂ ಸೇರಿದಂತೆ ಜಾಗತಿಕವಾಗಿ 18,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಅಮೆಜಾನ್ ವರ್ಷಾರಂಭದಲ್ಲಿ ಹೇಳಿತ್ತು.

ಇದನ್ನು ಓದಿ: Dunzo Layoffs: ಬೆಂಗಳೂರು ಮೂಲದ ಡುಂಜೋದಲ್ಲಿ ಶೇ 3ರಷ್ಟು ಉದ್ಯೋಗಿಗಳ ವಜಾ

ಲಿಂಕ್ಡ್ ಇನ್, ಶೇರ್‌ಚಾಟ್ ಸೇರಿದಂತೆ ಪ್ರಮುಖ ಕಂಪನಿಗಳು ಹೊಸ ವರ್ಷದಲ್ಲಿ ಉದ್ಯೋಗ ಕಡಿತದ ಮೊರೆ ಹೋಗಿವೆ. ವೆಚ್ಚವನ್ನು ಕಡಿತಗೊಳಿಸುವುದಕ್ಕಾಗಿ ಶೇ 20ರಷ್ಟು, ಅಂದರೆ ಸುಮಾರು 500 ಜನರನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಶೇರ್​ಚಾಟ್ ಕೆಲವು ದಿನಗಳ ಹಿಂದೆ ತಿಳಿಸಿತ್ತು. ಕ್ಯಾಬ್ ಸೇವೆ ಒದಗಿಸುವ ಮತ್ತು ಎಲೆಕ್ಟ್ರಿಕ್ ವಾಹನ ತಯಾರಿಕಾ ಕಂಪನಿ ಓಲಾ ಕೂಡ ವಿವಿಧ ಘಟಕಗಳಿಂದ 200 ಮಂದಿ ಉದ್ಯೋಗಿಗಳನ್ನು ಕೆಲವು ದಿನಗಳ ಹಿಂದಷ್ಟೇ ವಜಾಗೊಳಿಸಿದೆ. ವಿತರಣಾ ಉದ್ಯಮ ಸಂಸ್ಥೆ, ಬೆಂಗಳೂರು ಮೂಲದ ಡುಂಜೋ ಕೂಡ ಶೇ 3ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿರುವುದಾಗಿ ವರದಿಯಾಗಿದೆ.

ಮೆಟಾ, ಟ್ವಿಟರ್, ಮೈಕ್ರೋಸಾಫ್ಟ್, ಫಿಲಿಪ್ಸ್ ಸೇರಿದಂತೆ ಅನೇಕ ಕಂಪನಿಗಳು 2022ರಲ್ಲಿ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದ್ದವು. ಜಾಗತಿಕ ಆರ್ಥಿಕ ಹಿಂಜರಿತ ಭೀತಿ, ಆರ್ಥಿಕ ಬೆಳವಣಿಗೆ ಕುಂಠಿತವಾಗಿರುವುದು, ಲಾಭದಲ್ಲಿ ಕುಸಿತವಾಗಿರುವುದು ಟೆಕ್ ಕಂಪನಿಗಳ ಕಠಿಣ ನಿರ್ಧಾರಕ್ಕೆ ಕಾರಣವಾಗಿದೆ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ