AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ತಿ ವರ್ಗಾವಣೆ ವೇಳೆ ಸಕ್ಸಶನ್ ಸರ್ಟಿಫಿಕೇಟ್ ಮಾಡಿಸಬೇಕಾ, ಪ್ರೊಬೇಟ್ ಮಾಡಿಸಬೇಕಾ? ಇವೆರಡರ ಪಾತ್ರವೇನು? ಇಲ್ಲಿದೆ ವಿವರ

Difference between Probate and Succession Certificate while inheriting property: ಪಿತ್ರಾರ್ಜಿತ ಆಸ್ತಿಯನ್ನು ವರ್ಗಾವಣೆ ಮಾಡಿಕೊಳ್ಳುವಾಗ ಕೆಲ ಸಂದರ್ಭದಲ್ಲಿ ಸಕ್ಸಶನ್ ಸರ್ಟಿಫಿಕೇಟ್ ಕೇಳುವುದುಂಟು. ಇನ್ನೂ ಕೆಲ ಸಂದರ್ಭದಲ್ಲಿ ಪ್ರೊಬೇಟ್ ಮಾಡಿಸಲು ಹೇಳಬಹುದು. ಇವೆರಡೂ ಏನು? ವಿಲ್ ಇದ್ದ ಸಂದರ್ಭದಲ್ಲಿ ಕೋರ್ಟ್​ನಲ್ಲಿ ಪ್ರೊಬೇಟ್ ಮಾಡಿಸಬೇಕಾಗುತ್ತದೆ. ವಿಲ್ ಇಲ್ಲದ ಸಂದರ್ಭದಲ್ಲಿ ಸಕ್ಸಶನ್ ಸರ್ಟಿಫಿಕೇಟ್ ಬೇಕಾಗುತ್ತದೆ.

ಆಸ್ತಿ ವರ್ಗಾವಣೆ ವೇಳೆ ಸಕ್ಸಶನ್ ಸರ್ಟಿಫಿಕೇಟ್ ಮಾಡಿಸಬೇಕಾ, ಪ್ರೊಬೇಟ್ ಮಾಡಿಸಬೇಕಾ? ಇವೆರಡರ ಪಾತ್ರವೇನು? ಇಲ್ಲಿದೆ ವಿವರ
ಕೋರ್ಟ್Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 06, 2026 | 5:39 PM

Share

ಆಸ್ತಿ ವರ್ಗಾವಣೆಯಲ್ಲಿ ಉಯಿಲು ಅಥವಾ ವಿಲ್ (Will) ಬರೆದಿಡುವುದು ಸಾಮಾನ್ಯವಾಗುತ್ತಿದೆ. ಈ ವಿಲ್ ಅನ್ನು ಎಕ್ಸಿಕ್ಯೂಟ್ ಮಾಡುವ ಸಂದರ್ಭದಲ್ಲಿ ಪ್ರೊಬೇಟ್ (Probate) ಮಾಡಿಸುವ ಪ್ರಕ್ರಿಯೆ ಬಗ್ಗೆ ಕೇಳಿರಬಹುದು. ಪಿತ್ರಾರ್ಜಿತ ಆಸ್ತಿ ವರ್ಗಾವಣೆ ಸಂದರ್ಭದಲ್ಲಿ ಸಕ್ಸಶನ್ ಸರ್ಟಿಫಿಕೇಟ್ ಮಾಡಿಸಬೇಕಾಗಬಹುದು. ಕೋರ್ಟ್​ನಲ್ಲಿ ಸಕ್ಸಶನ್ ಸರ್ಟಿಫಿಕೇಟ್ ಪಡೆಯುವುದು ಮತ್ತು ಪ್ರೊಬೇಟ್ (Probate) ಮಾಡಿಸುವುದು, ಇವೆರಡು ಸಂಗತಿಗಳ ಬಗ್ಗೆ ಕೆಲವರಲ್ಲಿ ಸಹಜ ಗೊಂದಲಗಳಿವೆ. ಈ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

ಪ್ರೋಬೇಟ್ ಎಂದರೇನು?

ಪ್ರೋಬೇಟ್ ಎಂದರೆ ಮರಣಶಾಸನ ಅಥವಾ ಉಯಿಲು ಅಥವಾ ವಿಲ್ (Will) ನೈಜವಾದುದು ಮತ್ತು ಮಾನ್ಯವಾದುದು ಎಂದು ಸಿವಿಲ್ ನ್ಯಾಯಾಲಯವು ನೀಡುವ ಅಧಿಕೃತ ಪ್ರಮಾಣಪತ್ರವಾಗಿದೆ. ಇದು ವಿಲ್ ಬರೆದ ವ್ಯಕ್ತಿಯು ಮಾನಸಿಕವಾಗಿ ಸ್ವಸ್ಥನಾಗಿದ್ದಾಗ ಅದನ್ನು ಬರೆದಿದ್ದಾನೆಯೇ ಎಂಬುದನ್ನು ಖಚಿತಪಡಿಸುತ್ತದೆ ಮತ್ತು ಅದನ್ನು ಜಾರಿಗೆ ತರಲು ವಿಲ್‌ನಲ್ಲಿ ಹೆಸರಿಸಲಾದ ವ್ಯಕ್ತಿಗೆ (Executor) ಕಾನೂನುಬದ್ಧ ಅಧಿಕಾರ ನೀಡುತ್ತದೆ. ಕೋರ್ಟ್​ನಿಂದ ಪ್ರೊಬೇಟ್ ಪಡೆದ ವ್ಯಕ್ತಿಯು ವಿಲ್​ನಲ್ಲಿರುವಂತೆ ಆಸ್ತಿಗಳನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಳ್ಳಲು ಕಾನೂನು ಪ್ರಕ್ರಿಯೆಗೆ ಮುಂದಾಗಬಹುದು.

ಪ್ರೋಬೇಟ್ ಈಗ ಕಡ್ಡಾಯವೇ?

2025 ರ ‘ರಿಪೀಲಿಂಗ್ ಅಂಡ್ ಅಮೆಂಡಿಂಗ್ ಆಕ್ಟ್’ ಮೂಲಕ ‘ಇಂಡಿಯನ್ ಸಕ್ಸೆಷನ್ ಆಕ್ಟ್ 1925’ ನ ಸೆಕ್ಷನ್ 213 ಅನ್ನು ರದ್ದುಗೊಳಿಸಲಾಗಿದೆ. ಈಗ ಪ್ರೋಬೇಟ್ ಪ್ರಕ್ರಿಯೆಯು ಐಚ್ಛಿಕ (Voluntary) ಮಾತ್ರವೇ ಆಗಿದೆ.

ಇದನ್ನೂ ಓದಿ: ಗ್ರಾಹಕರ ಮೇಲೆ ಡಾರ್ಕ್ ಪ್ಯಾಟರ್ನ್ ತಂತ್ರ: ಝೆಪ್ಟೋ, ಬುಕ್ ಮೈ ಶೋ, ಫಿಸಿಕ್ಸ್ ವಾಲಾ ಸೇರಿದಂತೆ 9 ಕಂಪನಿಗಳಿಗೆ ದಂಡ

ಪ್ರೋಬೇಟ್ ಯಾವಾಗ ಮತ್ತು ಏಕೆ ಬೇಕು?

ಪ್ರೋಬೇಟ್ ಈಗ ಕಡ್ಡಾಯವಲ್ಲದಿದ್ದರೂ, ಈ ಕೆಳಗಿನ ಸಂದರ್ಭಗಳಲ್ಲಿ ಇದು ಅತ್ಯಂತ ಉಪಯುಕ್ತ:

  • ಆಸ್ತಿ ವ್ಯಾಜ್ಯಗಳಿದ್ದರೆ: ಆಸ್ತಿ ಹಂಚಿಕೆಯಲ್ಲಿ ಕುಟುಂಬದ ಮಧ್ಯೆ ಭಿನ್ನಾಭಿಪ್ರಾಯ ಅಥವಾ ವ್ಯಾಜ್ಯಗಳಿದ್ದರೆ ಪ್ರೋಬೇಟ್ ಪಡೆಯುವುದು ಸೂಕ್ತ.
  • ಹೆಚ್ಚಿನ ಮೌಲ್ಯದ ಆಸ್ತಿಗಳು: ಬ್ಯಾಂಕ್‌ಗಳು, ಹೌಸಿಂಗ್ ಸೊಸೈಟಿಗಳು ಮತ್ತು ಆಸ್ತಿ ಖರೀದಿದಾರರು ವಿಲ್‌ನ ನೈಜತೆಯನ್ನು ನಂಬಲು ಪ್ರೋಬೇಟ್ ಪತ್ರವನ್ನು ಕೋರಬಹುದು.

ಗಮನಿಸಿ: ಪ್ರೋಬೇಟ್ ಎನ್ನುವುದು ಆಸ್ತಿಯ ಮಾಲೀಕತ್ವದ ಸಾಕ್ಷಿಯಲ್ಲ; ಇದು ವಿಲ್‌ನ ಸಿಂಧುತ್ವವನ್ನು ಮಾತ್ರ ಪ್ರಮಾಣೀಕರಿಸುತ್ತದೆ. ಪ್ರೋಬೇಟ್ ಬಂದ ನಂತರ ಖಾತೆ ಬದಲಾವಣೆ (Mutation) ಪ್ರಕ್ರಿಯೆಯ ಮೂಲಕ ಮಾಲೀಕತ್ವ ವರ್ಗಾವಣೆಯಾಗುತ್ತದೆ. ವಿಲ್ ಇದ್ದಾಗ ಮಾತ್ರವೇ ಈ ಪ್ರೊಬೇಟ್ ಪ್ರಕ್ರಿಯೆ ಇರುವುದು.

ವಿಲ್ (Will) ಇಲ್ಲದಿದ್ದರೆ ಏನಾಗುತ್ತದೆ?

ವ್ಯಕ್ತಿಯು ಯಾವುದೇ ವಿಲ್ ಬರೆಯದೆ ನಿಧನರಾದರೆ, ಪ್ರೋಬೇಟ್ ಅನ್ವಯಿಸುವುದಿಲ್ಲ. ಬದಲಾಗಿ, ಅವರ ಧರ್ಮ/ಸಂಪ್ರದಾಯಕ್ಕೆ ಅನುಗುಣವಾಗಿ ವಾರಸುದಾರರಿಗೆ ಆಸ್ತಿ ಹಂಚಿಕೆಯಾಗುತ್ತದೆ (ಉದಾಹರಣೆಗೆ: ಹಿಂದೂಗಳಿಗೆ ‘ಹಿಂದೂ ಉತ್ತರಾಧಿಕಾರ ಕಾಯ್ದೆ, 1956’).

ಇಂತಹ ಸಂದರ್ಭಗಳಲ್ಲಿ, ಸಕ್ಸಷನ್ ಸರ್ಟಿಫಿಕೇಟ್ (Succession Certificate) ಮತ್ತು ಲೀಗಲ್ ಹೇರ್ ಸರ್ಟಿಫಿಕೇಟ್ (Legal Heir Certificate) ಆಯ್ಕೆಗಳಿರುತ್ತವೆ.

ಇದನ್ನೂ ಓದಿ: ಆಫ್ರಿಕಾದ ಅತಿದೊಡ್ಡ ಏರ್ಲೈನ್ಸ್ ಬೆಳೆಸಿದ್ದ ತೆವೊಲ್ಡೆ ಗೆಬ್ರೆಮರಿಯಮ್ ಈಗ ಏರ್ ಇಂಡಿಯಾದ ನೂತನ ಸಾರಥಿ

  • ಸಕ್ಸೆಷನ್ ಸರ್ಟಿಫಿಕೇಟ್ : ಬ್ಯಾಂಕ್ ಡೆಪಾಸಿಟ್, ಷೇರುಗಳು ಮತ್ತು ಮ್ಯೂಚುವಲ್ ಫಂಡ್‌ಗಳಂತಹ ಚರ ಆಸ್ತಿಗಳನ್ನು ಪಡೆಯಲು ನ್ಯಾಯಾಲಯದಿಂದ ಇದನ್ನು ಪಡೆಯಬೇಕಾಗುತ್ತದೆ. ಸಿವಿಲ್ ಕೋರ್ಟ್ ಅಥವಾ ಜಿಲ್ಲಾ ನ್ಯಾಯಾಲಯವು ಈ ಪ್ರಮಾಣಪತ್ರ ನೀಡುತ್ತದೆ. ಇದಕ್ಕೆ ಕೆಲ ತಿಂಗಳುಗಳೇ ಆಗಬಹುದು.
  • ಲೀಗಲ್ ಹೇರ್ ಸರ್ಟಿಫಿಕೇಟ್ : ಕಂದಾಯ ಇಲಾಖೆಯಿಂದ ದೊರೆಯುವ ಈ ಪತ್ರವು ಕೇವಲ ವಾರಸುದಾರರ ಗುರುತಿಗಷ್ಟೇ ಸೀಮಿತವಾಗಿದ್ದು, ವ್ಯಾಜ್ಯಗಳಿದ್ದಾಗ ಮಾಲೀಕತ್ವವನ್ನು ನಿರ್ಧರಿಸುವುದಿಲ್ಲ. ಪಿಂಚಣಿ, ಯುಟಿಲಿಟಿ ವರ್ಗಾವಣೆಗೆ ಬಳಸಲಾಗುವ ಇದನ್ನು ತಹಶೀಲ್ದಾರ್ ಕಚೇರಿಯಲ್ಲಿ ಕೊಡಲಾಗುತ್ತದೆ. ಒಂದೆರಡು ವಾರದಲ್ಲಿ ಈ ಸರ್ಟಿಫಿಕೇಟ್ ಸಿಗುತ್ತದೆ.

ನಾಮಿನಿ ಮತ್ತು ವಾರಸುದಾರರ ವ್ಯತ್ಯಾಸ

ಬ್ಯಾಂಕ್ ಖಾತೆ ಅಥವಾ ಇನ್ಶೂರೆನ್ಸ್‌ನಲ್ಲಿ ‘ನಾಮಿನಿ’ (Nominee) ಆಗಿರುವ ವ್ಯಕ್ತಿಯು ಹಣ ಅಥವಾ ಆಸ್ತಿಯನ್ನು ಪಡೆಯುವ ಅರ್ಹತೆ ಹೊಂದಿದ್ದರೂ, ಅವರೇ ಅದರ ಪೂರ್ಣ ಕಾನೂನುಬದ್ಧ ಮಾಲೀಕರಾಗುವುದಿಲ್ಲ. ಅಂತಿಮವಾಗಿ ಕಾನೂನುಬದ್ಧ ವಾರಸುದಾರರೇ (Legal Heirs) ಆ ಆಸ್ತಿಗೆ ನಿಜವಾದ ಹಕ್ಕುದಾರರಾಗಿರುತ್ತಾರೆ. ನಾಮಿನಿ ಎನಿಸಿಕೊಂಡವರು, ಆಸ್ತಿಯನ್ನು ಕಾನೂನುಬದ್ಧ ವಾರಸುದಾರರಿಗೆ ತಲುಪಿಸಲು ಅಧಿಕಾರ ಹೊಂದಿರುತ್ತಾರೆ. ನಾಮಿನಿಯೇ ನೈಜ ವಾರಸುದಾರರಾಗಿದ್ದರೆ ಅವರೇ ಆಸ್ತಿಯನ್ನು ಪಡೆಯಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us