ನವದೆಹಲಿ: ಅಮೆರಿಕದ ಹಿಂಡನ್ಬರ್ಗ್ ರಿಸರ್ಚ್ (Hindenburg) ಆರೋಪ ಮಾಡಿರುವುದು ಮತ್ತು ನಂತರದ ಬೆಳವಣಿಗೆಗಳಿಗೆ ಸಂಬಂಧಿಸಿ ಅದಾನಿ ಸಮೂಹದ (Adani Group) ಮ್ಯಾನೇಜ್ಮೆಂಟ್ ಜತೆ ಮಾತುಕತೆ ನಡೆಸಲಿದ್ದೇವೆ. ಆ ಮೂಲಕ ಬಿಕ್ಕಟ್ಟಿನ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲಿದ್ದೇವೆ ಎಂದು ಎಲ್ಐಸಿ (LIC) ಚೇರ್ಮನ್ ಎಂಆರ್ ಕುಮಾರ್ (MR Kumar) ಶುಕ್ರವಾರ ತಿಳಿಸಿದ್ದಾರೆ. ಮುಂದಿನ ಏಳರಿಂದ ಹತ್ತು ದಿನಗಳ ಒಳಗೆ ಅದಾನಿ ಸಮೂಹವನ್ನು ಎಲ್ಐಸಿ ಸಂಪರ್ಕಿಸಲಿದೆ ಎಂದು ಅವರು ‘ಬ್ಯುಸಿನೆಸ್ ಟುಡೇ’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಹಿಂಡನ್ಬರ್ಗ್ ಆರೋಪದ ಬೆನ್ನಲ್ಲೇ ಅದಾನಿ ಸಮೂಹ ಕಂಪನಿಗಳ ಷೇರು ಮೌಲ್ಯದಲ್ಲಿ ಭಾರೀ ಕುಸಿತವಾಗಿತ್ತು. ಇದರ ಬೆನ್ನಲ್ಲೇ ಅದಾನಿ ಸಮೂಹದಲ್ಲಿ ಹೂಡಿಕೆ ಮಾಡಿರುವ ಎಲ್ಐಸಿಗೂ ನಷ್ಟವಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು.
ಇದಾದ ಬಳಿಕ ಸ್ಪಷ್ಟನೆ ನೀಡಿದ್ದ ಎಲ್ಐಸಿ, ಅದಾನಿ ಸಮೂಹದಲ್ಲಿ ಹೆಚ್ಚು ಹೂಡಿಕೆ ಮಾಡಿಲ್ಲ. 36,000 ಕೋಟಿ ರೂ. ಹೂಡಿಕೆ ಮಾಡಲಾಗಿದೆ. ಹೂಡಿಕೆದಾರರು ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿತ್ತು. ಅದಾನಿ ಸಮೂಹ ಕಂಪನಿಗಳಲ್ಲಿ ಎಲ್ಐಸಿಯ ಒಟ್ಟಾರೆ ಹೂಡಿಕೆ 36,000 ಕೋಟಿ ರೂ. ಆಗಿದೆ. ಜನವರಿ 27ರ ವೇಳೆಗೆ ಅದರ ಮಾರುಕಟ್ಟೆ ಮೌಲ್ಯ 56,142 ಕೋಟಿ ರೂ. ಆಗಿದೆ ಎಂದು ಎಲ್ಐಸಿ ತಿಳಿಸಿತ್ತು. ಆದರೆ, ಜನವರಿ 27ರ ನಂತರದ ಮಾಹಿತಿ ಬಹಿರಂಗಪಡಿಸಿಲ್ಲ.
ಇದನ್ನೂ ಓದಿ: LIC Policy: ಎಲ್ಐಸಿ ಪಾಲಿಸಿ ಜತೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಮಾರ್ಚ್ 31 ಕೊನೆಯ ದಿನ
ಹೂಡಿಕೆದಾರರ ಹಣ ಸುರಕ್ಷಿತವಾಗಿದೆ. ಈ ಕುರಿತು ಆತಂಕಪಡುವ ಅಗತ್ಯವಿಲ್ಲ ಎಂದು ಕುಮಾರ್ ಹೇಳಿದ್ದಾರೆ. ಆತಂಕಪಡುವ ಅಗತ್ಯವಿಲ್ಲ ಎಂದು ಎಲ್ಲ ಹೂಡಿಕೆದಾರರಿಗೂ ಹೇಳಬಯಸುತ್ತೇನೆ. ಶೇ 1ರಷ್ಟು ಅಪಾಯವೂ ಇಲ್ಲ. ಅದಾನಿ ಸಮೂಹದ ಪ್ರಕರಣದಿಂದ ಹೂಡಿಕೆ ಮೇಲೆ ಯಾವುದೇ ರೀತಿಯ ಪರಿಣಾಮವಾಗದು. ನಾವು ಆ ಬಗ್ಗೆ ಕಾಳಜಿವಹಿಸಲಿದ್ದೇವೆ. ಅದಾನಿ ಸಮೂಹದಲ್ಲಿ ಎಲ್ಐಸಿ ಮಾಡಿರುವ ಹೂಡಿಕೆ ಸಮುದ್ರದ ನೀರಿನ ಒಂದು ಬಿಂದಿನಷ್ಟು ಎಂದು ಅವರು ಹೇಳಿದ್ದಾರೆ.