LIC Policy: ಎಲ್ಐಸಿ ಪಾಲಿಸಿ ಜತೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಮಾರ್ಚ್ 31 ಕೊನೆಯ ದಿನ
ಎಲ್ಐಸಿ ಪಾಲಿಸಿ ಜತೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಮಾರ್ಚ್ 31 ಕೊನೆಯ ದಿನವಾಗಿದೆ. ಆನ್ಲೈನ್ ಮೂಲಕ ಲಿಂಕ್ ಮಾಡುವುದು ಹೇಗೆಂಬ ಮಾಹಿತಿ ಇಲ್ಲಿದೆ.
ನವದೆಹಲಿ: ಎಲ್ಐಸಿ ಪಾಲಿಸಿ ಮತ್ತು ಪ್ಯಾನ್ ಕಾರ್ಡ್ (PAN Card) ಜೋಡಣೆಗೆ ಮಾರ್ಚ್ 31 ಕೊನೆಯ ದಿನವಾಗಿದೆ ಎಂದು ಭಾರತೀಯ ಜೀವ ವಿಮಾ ನಿಗಮ (LIC) ತಿಳಿಸಿದೆ. ಇತ್ತೀಚೆಗೆ ಹೊರಡಿಸಿರುವ ಅಧಿಸೂಚನೆಯಲ್ಲಿ ಪ್ಯಾನ್ ಮತ್ತು ಪಾಲಿಸಿಯನ್ನು ಲಿಂಕ್ ಮಾಡುವಂತೆ ಗ್ರಾಹಕರಿಗೆ ಎಲ್ಐಸಿ ಸೂಚಿಸಿತ್ತು. ಇದೀಗ ಗಡುವನ್ನು ವಿಸ್ತರಣೆ ಮಾಡಿರುವುದಾಗಿ ತಿಳಿಸಿದೆ. ಎಲ್ಐಸಿ ಇಂಡಿಯಾ ವೆಬ್ಸೈಟ್ (linkpan.licindia.in/UIDSeedingWebApp/getPolicyPANStatus) ಮೂಲಕ ಪಾಲಿಸಿ ಮತ್ತು ಪ್ಯಾನ್ ಲಿಂಕ್ ಮಾಡಬಹುದಾಗಿದೆ ಎಂದೂ ಸಂಸ್ಥೆ ತಿಳಿಸಿದೆ. ಮೊದಲಿಗೆ ಮೇಲೆ ಉಲ್ಲೇಖಿಸಿರುವ ಲಿಂಕ್ ಕ್ಲಿಕ್ ಮಾಡಿ. ಪಾಲಿಸಿ ಸಂಖ್ಯೆ, ಪ್ಯಾನ್ ವಿವರ ಹಾಗೂ ಕ್ಯಾಪ್ಚಾ ಕೋಡ್ ನಮೂದಿಸಿ. ನಂತರ ಸಬ್ಮಿಟ್ ಬಟನ್ ಕ್ಲಿಕ್ ಮಾಡಿ. ಅಷ್ಟರಲ್ಲಿ ಎಲ್ಐಸಿ ಪ್ಯಾನ್ ಲಿಂಕ್ ಸ್ಥಿತಿಗತಿ ವಿವರ ಕಾಣಿಸಲಿದೆ. ಒಂದು ವೇಳೆ ಪಾಲಿಸಿ ಜತೆ ಪ್ಯಾನ್ ಲಿಂಕ್ ಆಗಿಲ್ಲವೆಂದಾದರೆ, ‘ಪ್ಯಾನ್ ವಿವರ ನೋಂದಣಿ ಮಾಡಲು ಇಲ್ಲಿ ಕ್ಲಿಕ್ ಮಾಡಿ’ ಎಂಬ ಆಯ್ಕೆ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿದಾಗ ಮತ್ತೊಂದು ವೆಬ್ ಪುಟ ತೆರೆದುಕೊಳ್ಳುತ್ತದೆ.
ಎಲ್ಐಸಿ ಪಾಲಿಸಿ ಜತೆ ಪ್ಯಾನ್ ಲಿಂಕ್ ಮಾಡುವುದು ಹೇಗೆ?
- ಎಲ್ಐಸಿ ಇಂಡಿಯಾದ ಈ (linkpan.licindia.in/UIDSeedingWebApp/home) ಲಿಂಕ್ ಕ್ಲಿಕ್ ಮಾಡಿ.
- ಜನ್ಮ ದಿನಾಂಕ, ಲಿಂಗ ಹಾಗೂ ಪ್ಯಾನ್ ಸಂಬಂಧಿತ ವಿವರ ಭರ್ತಿ ಮಾಡಿ.
- ಇ-ಮೇಲ್ ವಿಳಾಸ ಮತ್ತು ಪ್ಯಾನ್ ಕಾರ್ಡ್ ವಿವರ ಭರ್ತಿ ಮಾಡಿ.
- ಪ್ಯಾನ್ ಕಾರ್ಡ್ನಲ್ಲಿ ಇರುವಂತೆಯೇ ನಿಮ್ಮ ಹೆಸರನ್ನು ಉಲ್ಲೇಖಿಸಿ. ನಂತರ ಫೋನ್ ನಂಬರ್, ಪಾಲಿಸಿ ಸಂಖ್ಯೆ ಭರ್ತಿ ಮಾಡಿ.
- ಕ್ಯಾಪ್ಚಾ ಭರ್ತಿ ಮಾಡಿದ ಬಳಿಕ ‘ಗೆಟ್ ಒಟಿಪಿ’ ಕ್ಲಿಕ್ ಮಾಡಿ. ನಂತರ ಒಟಿಪಿ ಭರ್ತಿ ಮಾಡಿ. ಪಾಲಿಸಿ ಮತ್ತು ಪ್ಯಾನ್ ಲಿಂಕ್ಗೆ ನಿಮ್ಮ ಮನವಿಯನ್ನು ಸ್ವೀಕರಿಸಲಾಗಿದೆ ಎಂಬ ಸಂದೇಶ ಕಾಣಿಸುತ್ತದೆ.