ಮಹುವಾ ಮೋಯಿತ್ರಾ ವಿರುದ್ಧದ ಆರೋಪದಲ್ಲಿ ಹೆಸರು ಕೇಳಿಬಂದ ಹೀರಾನಂದಾನಿ ಯಾರು? ಬೃಹತ್ ಅದಾನಿ ಬಿಸಿನೆಸ್ ಸಾಮ್ರಾಜ್ಯಕ್ಕೂ ಇವರಿಗೂ ಏನು ಸಂಬಂಧ?

|

Updated on: Oct 17, 2023 | 3:39 PM

Mahua Moitra vs Hiranandani vs Adani: ಮಹುವಾ ಅವರು ಹಣಕ್ಕಾಗಿ ಸಂಸತ್​ನಲ್ಲಿ ಪ್ರಶ್ನೆ ಕೇಳುತ್ತಿದ್ದರು. ಉದ್ಯಮಿ ದರ್ಶನ್ ಹೀರಾನಂದಾನಿ ಉದ್ದಿಮೆಗಳಿಗೆ ಅನುಕೂಲವಾಗುವ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅದಕ್ಕೆ ಬದಲಾಗಿ ಅವರಿಗೆ ಉಡುಗೊರೆಗಳು ಮತ್ತು ಹಣ ಪಡೆಯುತ್ತಿದ್ದರು ಎಂದು ನಿಶಿಕಾಂತ್ ದುಬೇ ಲೋಕಸಭಾ ಸ್ಪೀಕರ್ ಅವರಿಗೆ ಲಿಖಿತವಾಗಿ ದೂರು ನೀಡಿದ್ದಾರೆ. ಜೈ ಅನಂತ್ ದೇಹಾದ್​ರಾಯ್ ಅವರು ನೀಡಿದ್ದ ದೂರಿನಲ್ಲಿರುವ ಅಂಶಗಳನ್ನು ಆಧರಿಸಿ ಬಿಜೆಪಿ ಸಂಸದರು ಆರೋಪ ಮಾಡಿದ್ದಾರೆ. ಅಷ್ಟಕ್ಕೂ ಗೌತಮ್ ಅದಾನಿಗೂ, ಮಹುವಾ ಮೋಯಿತ್ರಾಗೂ, ದರ್ಶನ್ ಹೀರಾನಂದಾನಿಗೂ ಏನು ಸಂಬಂಧ?

ಮಹುವಾ ಮೋಯಿತ್ರಾ ವಿರುದ್ಧದ ಆರೋಪದಲ್ಲಿ ಹೆಸರು ಕೇಳಿಬಂದ ಹೀರಾನಂದಾನಿ ಯಾರು? ಬೃಹತ್ ಅದಾನಿ ಬಿಸಿನೆಸ್ ಸಾಮ್ರಾಜ್ಯಕ್ಕೂ ಇವರಿಗೂ ಏನು ಸಂಬಂಧ?
ಮಹುವಾ ಮೋಯಿತ್ರಾ
Follow us on

ನವದೆಹಲಿ, ಅಕ್ಟೋಬರ್ 17: ಲೋಕಸಭೆಯಲ್ಲಿ ಅತ್ಯಂತ ಸಕ್ರಿಯವಾಗಿರುವ ಮತ್ತು ಮೊನಚು ಮಾತುಗಳಿಂದ ಖ್ಯಾತವಾಗಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಮಹುವಾ ಮೋಯಿತ್ರಾ (mahua moitra) ವಿರುದ್ಧ ಬಿಜೆಪಿ ಸಂಸದರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಲೋಕಸಭೆಯಲ್ಲಿ ಅವರ ತೀಕ್ಷ್ಣ ಮಾತುಗಳ ಹಿಂದೆ ಭ್ರಷ್ಟಾಚಾರ ಇದೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೇ ಬೊಟ್ಟು ಮಾಡಿದ್ದಾರೆ. ಮಹುವಾ ಅವರು ಹಣಕ್ಕಾಗಿ ಸಂಸತ್​ನಲ್ಲಿ ಪ್ರಶ್ನೆ ಕೇಳುತ್ತಿದ್ದರು. ಉದ್ಯಮಿ ದರ್ಶನ್ ಹೀರಾನಂದಾನಿ ಉದ್ದಿಮೆಗಳಿಗೆ ಅನುಕೂಲವಾಗುವ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅದಕ್ಕೆ ಬದಲಾಗಿ ಅವರಿಗೆ ಉಡುಗೊರೆಗಳು ಮತ್ತು ಹಣ ಪಡೆಯುತ್ತಿದ್ದರು ಎಂದು ನಿಶಿಕಾಂತ್ ದುಬೇ ಲೋಕಸಭಾ ಸ್ಪೀಕರ್ ಅವರಿಗೆ ಲಿಖಿತವಾಗಿ ದೂರು ನೀಡಿದ್ದಾರೆ. ಇದರೊಂದಿಗೆ ಪ್ರಶ್ನೆಗಾಗಿ ಲಂಚ ಪ್ರಕರಣ (bribe for questions) ಹೆಡೆ ಎತ್ತಿದೆ. ಜೈ ಅನಂತ್ ದೇಹಾದ್​ರಾಯ್ (Jai Anant Dehadrai) ಅವರು ನೀಡಿದ್ದ ದೂರಿನಲ್ಲಿರುವ ಅಂಶಗಳನ್ನು ಆಧರಿಸಿ ಬಿಜೆಪಿ ಸಂಸದರು ಆರೋಪ ಮಾಡಿದ್ದಾರೆ. ಮಹುವಾ ಅವರು ಲೋಕಸಭೆಯಲ್ಲಿ ಕೇಳಿದ ಬಹುಪಾಲು ಪ್ರಶ್ನೆಗಳಿಗೆ ಹಣ ಪಡೆದಿದ್ದಾರೆ ಎಂಬುದು ಪ್ರಮುಖ ಆರೋಪ. ಹಾಗೆಯೇ, ಅವರ ಬಹುಪಾಲು ಪ್ರಶ್ನೆಗಳು ಅದಾನಿ ಗ್ರೂಪ್​ನ ವ್ಯವಹಾರಗಳಿಗೆ ಸಂಬಂಧಿಸಿದ್ದವೇ ಆಗಿದ್ದವು ಎಂಬುದು ಗಮನಾರ್ಹ.

ಅದಾನಿ ಗ್ರೂಪ್ ಈ ಬೆಳವಣಿಗೆಯಲ್ಲಿ ಪ್ರತಿಕ್ರಿಯಿಸಿದೆ. ಅದಾನಿ ಗ್ರೂಪ್ ವಿರುದ್ಧ ಕೆಲ ಶಕ್ತಿಗಳು ಮತ್ತು ವ್ಯಕ್ತಿಗಳು ಅವಿಶ್ರಾಂತವಾಗಿ ಕೆಲಸ ಮಾಡುತ್ತಿವೆ ಎಂದು ತಾನು ಈ ಹಿಂದೆ ಮಾಡಿದ್ದ ಆರೋಪಗಳನ್ನು ಮತ್ತೆ ಮೆಲುಕು ಹಾಕಿ ಮಹುವಾ ಮೋಯಿತ್ರಾ ಪ್ರಕರಣವನ್ನು ಉಲ್ಲೇಖಿಸಿದೆ. ಅಷ್ಟಕ್ಕೂ ಗೌತಮ್ ಅದಾನಿಗೂ, ಮಹುವಾ ಮೋಯಿತ್ರಾಗೂ, ದರ್ಶನ್ ಹೀರಾನಂದಾನಿಗೂ ಏನು ಸಂಬಂಧ?

ಇದನ್ನೂ ಓದಿ: ಅಭಿಬಸ್ 1 ರೂ ಟಿಕೆಟ್; ಕೆಎಸ್ಸಾರ್ಟಿಸಿ ದಸರಾ ಕೊಡುಗೆ; ಆಂಧ್ರ ಬಸ್ ಡಿಸ್ಕೌಂಟ್; ಏರ್ ಇಂಡಿಯಾ ಫ್ಲೈಟ್ ಆಫರ್

ಮಹುವಾ ಮೋಯಿತ್ರಾ ಲೋಕಸಭೆಯಲ್ಲಿ ಕೇಳಿದ ಕೆಲ ಪ್ರಶ್ನೆಗಳು…

  • ಬಂಗಾಳದ ಪಾರದೀಪ್ ಬಂದರು ಯೋಜನೆಯಲ್ಲಿ ಅದಾನಿ, ಗ್ಯಾಸ್ ಅಥಾರಿಟಿ ಮತ್ತು ಐಒಸಿ ನಡುವೆ ಆದ ಎಂಒಯು ಬಗ್ಗೆ
  • ಭಾರತದಲ್ಲಿ ಟೆಲಿಕಾಂ ಸರ್ವಿಸ್ ನೀಡುಗರ (ಟಿಎಸ್​ಪಿ) ಸೇವಾ ಗುಣಮಟ್ಟ ಸೂಚಿಸುವ ಅಂಕಿ ಅಂಶಗಳು
  • ಕೋಲ್ಕತಾ ಪೋರ್ಟ್ ಟ್ರಸ್ಟ್​ನ ನಿರ್ವಹಣಾ ಸಾಮರ್ಥ್ಯ ಎಷ್ಟಿದೆ..?
  • ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶ ಗಡಿಭಾಗದಲ್ಲಿ ಏಕೀಕೃತ ಚೆಕ್​ಪೋಸ್ಟ್​ಗಳ (ಐಸಿಪಿ) ಬಗ್ಗೆ ಮಾಹಿತಿ
  • ಭಾರತದಲ್ಲಿ 5ಜಿ ತಂತ್ರಜ್ಞಾನ ಅಳವಡಿಕೆಗೆ ಪೂರಕವಾದ ವಾತಾವರಣ ಹೇಗಿದೆ?
  • ಅದಾನಿ ಗ್ರೂಪ್ ಕಂಪನಿಗಳಲ್ಲಿ ಫಾರೀನ್ ಪೋರ್ಟ್​ಫೋಲಿಯೋ ಇನ್ವೆಸ್ಟರ್​ಗಳ ಪಾಲು ಎಷ್ಟಿದೆ ಎಂಬಿತ್ಯಾದಿ ಮಾಹಿತಿ.
  • ಸೌರಶಕ್ತಿ ನಿಗಮದ ಟೆಂಡರ್​ಗಳ ಬಗ್ಗೆ ಮಾಹಿತಿ
  • ಉಕ್ಕು ಬೆಲೆ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳು

ಹೀಗೆ ಮಹುವಾ ಮೋಯಿತ್ರಾ ಲೋಕಸಭೆಯಲ್ಲಿ ಕೇಳಿದ ಬಹಳಷ್ಟು ಪ್ರಶ್ನೆಗಳಲ್ಲಿ ಮೇಲಿನವು ಕೆಲವು ಮಾತ್ರ. ಇಲ್ಲಿ ಕುತೂಹಲ ಎಂದರೆ, ಇವರ ಪ್ರತೀ ಪ್ರಶ್ನೆಗಳ ಹಿಂದೆ ಹೀರಾನಂದಾನಿ ಅವರ ಉದ್ದಿಮೆ ಹಿತಾಸಕ್ತಿ ಅಡಗಿವೆ ಎನ್ನುವ ಆರೋಪ ಇದೆ.

ಇದನ್ನೂ ಓದಿ: LinkedIn Layoff: ಲಿಂಕ್ಡ್​ಇನ್​ನಲ್ಲಿ ಲೇ ಆಫ್; ಕೆಲಸ ಹುಡುಕಿ ತೋರಿಸುವ ಕಂಪನಿಯಲ್ಲಿ ಕೆಲಸ ಕಳೆದುಕೊಳ್ಳಲಿರುವ 668 ಉದ್ಯೋಗಿಗಳು

ಯಾರಿದು ದರ್ಶನ್ ಹೀರಾನಂದಾನಿ?

42 ವರ್ಷದ ದರ್ಶನ್ ಅವರು ಹೀರಾನಂದಾನಿ ಗ್ರೂಪ್​ನ ಮುಖ್ಯಸ್ಥ. ಇದರ ಸಂಸ್ಥಾಪಕ ನಿರಂಜನ್ ಹೀರಾನಂದಾನಿ ಅವರ ಮಗ. ಹೀರಾನಂದಾನಿ ಗ್ರೂಪ್ ಅನೇಕ ಉದ್ದಿಮೆಗಳನ್ನು ಹೊಂದಿದೆ. ರಿಯಲ್ ಎಸ್ಟೇಟ್, ತೈಲ ಮತ್ತು ಅನಿಲ, ಪೋರ್ಟ್ ಇತ್ಯಾದಿ ಸೌಕರ್ಯ ನಿರ್ಮಾಣ, ಸೆಮಿಕಂಡಕ್ಟರ್, ತಂತ್ರಜ್ಞಾನ ಸೇವೆ ಇತ್ಯಾದಿ ಬಿಸಿನೆಸ್ ಹೊಂದಿದೆ. ಯೋಟ್ಟಾ ಡಾಟಾ ಎಂಬ ಡಾಟಾ ಸೆಂಟರ್ ಆಪರೇಟಿಂಗ್ ಕಂಪನಿ, ಕನ್ಸೂಮರ್ ಸರ್ವಿಸ್ ನೀಡುವ ತೇಜ್ ಪ್ಲಾಟ್​ಫಾರ್ಮ್ಸ್, ತಾರ್ಕ್ ಸೆಮಿಕಂಡರ್ಟರ್ಸ್, ಎಚ್-ಎನರ್ಜಿ ಇತ್ಯಾದಿ ಕಂಪನಿಗಳು ಹೀರಾನಂದಾನಿ ಗ್ರೂಪ್ ಅಡಿಯಲ್ಲಿ ಬರುತ್ತವೆ.

ದರ್ಶನ್ ಹೀರಾನಂದಾನಿ ತಮ್ಮ ತಂದೆಯ ಬಿಸಿನೆಸ್ ಸಾಮ್ರಾಜ್ಯವನ್ನು ಹೊಸ ಸ್ತರಕ್ಕೆ ಕರೆದೊಯ್ಯಲು ಹೊರಟಿದ್ದಾರೆ. ದುಬೈನಲ್ಲಿ ವಿಶ್ವದ ಅತಿದೊಡ್ಡ ವಸತಿ ಕಟ್ಟಡ, ಮಹಾರಾಷ್ಟ್ರದಲ್ಲಿ ಭಾರತದ ಮೊದಲ ಫ್ಲೋಟಿಂಗ್ ಎಲ್​ಎನ್​ಜಿ ಟರ್ಮಿನಲ್ ನಿರ್ಮಾಣದ ಹಿಂದಿನ ಶಕ್ತಿ ಮತ್ತು ಯುಕ್ತಿ ಅವರದ್ದೇ ಆಗಿದೆ.

ಇದನ್ನೂ ಓದಿ: ಇಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಜೊತೆ ಒಪ್ಪಂದ; ಈ ವಿಮಾನ ಪ್ರಯಾಣದಲ್ಲಿ 350 ಎಂಬಿಪಿಎಸ್ ವೇಗದ ವೈಫೈ ಸೌಲಭ್ಯ

ಅದಾನಿ ಗ್ರೂಪ್​ಗೂ ಹೀರಾನಂದಾನಿಗೂ ಏನು ಸಂಬಂಧ?

ಪೋರ್ಟ್​ಗಳು ಮತ್ತು ಗಡಿಭಾಗದಲ್ಲಿ ಇನ್​ಫ್ರಾಸ್ಟ್ರಕ್ಚರ್​ನ ನಿರ್ಮಾಣ ಇತ್ಯಾದಿ ಕಾರ್ಯಗಳಲ್ಲಿ ಅದಾನಿ ಗ್ರೂಪ್ ಮತ್ತು ಹೀರಾನಂದಾನಿ ಗ್ರೂಪ್ ಮಧ್ಯೆ ಪೈಪೋಟಿ ಇದೆ. ಅದಾನಿ ಗ್ರೂಪ್ ಪಾಲಾದ ಏರ್​ಪೋರ್ಟ್​​ಗಳ ನಿರ್ವಹಣೆಯ ಗುತ್ತಿಗೆಗೆ ಹೀರಾನಂದಾನಿ ಗ್ರೂಪ್ ಕೂಡ ಪ್ರಯತ್ನಿಸಿತ್ತು. ಹಾಗೆಯೇ, ಪೋರ್ಟ್​ಗಳ ನಿರ್ಮಾಣದಲ್ಲೂ ಅದಾನಿ ಮತ್ತು ಹೀರಾನಂದಾನಿ ಮಧ್ಯೆ ಪೈಪೋಟಿ ಇದೆ. ಇವೆಲ್ಲವೂ ಮಹುವಾ ಮೋಯಿತ್ರಾ ವಿರುದ್ಧ ವಕೀಲ ಜೈ ಅನಂತ್ ದೇಹದ್ರಾಯ್ ಮಾಡಿರುವ ಆರೋಪದಲ್ಲಿ ಕೇಳಿಬಂದಿರುವ ಪ್ರಮುಖ ಅಂಶಗಳು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ