ನವದೆಹಲಿ, ಅಕ್ಟೋಬರ್ 21: ಜಗತ್ತಿನ ಹಲವು ದೇಶಗಳ ಗಮನ ಸೆಳೆದಿರುವ, ಮತ್ತು ಕೆಲ ದೇಶಗಳಲ್ಲಿ ಈಗಾಗಲೇ ಅಳವಡಿಕೆ ಆಗಿರುವ ಭಾರತದ ಪೇಮೆಂಟ್ ಸಿಸ್ಟಂ ಅದ ಯುಪಿಐ ಅನ್ನು ಮಾಲ್ಡೀವ್ಸ್ ಕೂಡ ಅಪ್ಪಿಕೊಂಡಿದೆ. ಹಣಕಾಸು ವಹಿವಾಟು ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಆರ್ಥಿಕತೆಗೆ ಉತ್ತೇಜನ ನೀಡಲು ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ ಅನ್ನು ಜಾರಿ ಮಾಡುತ್ತಿರುವುದಾಗಿ ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು ಹೇಳಿದ್ದಾರೆ. ಆ ದೇಶದ ಸಂಪುಟದಿಂದ ಈ ಹಿಂದೆ ಯುಪಿಐ ಅಳವಡಿಕೆಗೆ ಶಿಫಾರಸು ಮಾಡಲಾಗಿತ್ತು. ಈಗ ಅಧ್ಯಕ್ಷರು ಈ ಪ್ರಸ್ತಾಪಕ್ಕೆ ಸಮ್ಮತಿ ಸೂಚಿಸಿದ್ದಾರೆ.
ಭಾರತದ ಯುಪಿಐ ಅಳವಡಿಕೆಯಿಂದ ಹಣಕಾಸು ಒಳಗೊಳ್ಳುವಿಕೆ, ವಹಿವಾಟು ಕ್ಷಮತೆ ಹೆಚ್ಚಿಸಬಹುದು, ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್ ಅನ್ನು ಉನ್ನತೀಕರಿಸಬಹುದು. ಹೀಗಾಗಿ, ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ ಸಿಸ್ಟಂ ಅನ್ನು ಅಳವಡಿಸುವುದು ಉತ್ತಮ ಎಂದು ಮಾಲ್ಡೀವ್ಸ್ನ ಆರ್ಥಿಕ ಅಭಿವೃದ್ಧಿ ಮತ್ತು ವ್ಯಾಪಾರ ಸಚಿವರು ಪ್ರಸ್ತಾವನೆ ಮಾಡಿದ್ದರು. ಇತ್ತೀಚೆಗೆ ಅಲ್ಲಿನ ಕ್ಯಾಬಿನೆಟ್ ಈ ಪ್ರಸ್ತಾಪವನ್ನು ಪರಿಗಣಿಸಿ ಅಂಗೀಕಾರ ನೀಡಿತ್ತು. ಈಗ ಅಧ್ಯಕ್ಷರು ಅಧಿಕೃತವಾಗಿ ಯುಪಿಐ ವ್ಯವಸ್ಥೆ ಜಾರಿ ಮಾಡಲಾಗುತ್ತಿರುವುದನ್ನು ಘೋಷಿಸಿದ್ದಾರೆ.
ಇದನ್ನೂ ಓದಿ: ಡಿಜಿಟಲ್ ಟೆಕ್ನಾಲಜಿಯಿಂದ ಪರಿವರ್ತನೆ; ಅಭಿವೃದ್ಧಿಶೀಲ ದೇಶಗಳಿಗೆ ಭಾರತವೇ ಮಾದರಿ: ಪ್ರೊ. ರೋಮರ್
ಇತ್ತೀಚೆಗಷ್ಟೇ, ನೊಬೆಲ್ ಪುರಸ್ಕೃತ ಆರ್ಥಿಕ ತಜ್ಞ ಪ್ರೊಫೆಸರ್ ಪೌಲ್ ಮೈಕೇಲ್ ರೋಮರ್ ಅವರು ಭಾರತದ ಹಣಕಾಸು ವಹಿವಾಟು ವ್ಯವಸ್ಥೆಯನ್ನು ಶ್ಲಾಘಿಸಿದ್ದರು. ಭಾರತದ ಆಧಾರ್, ಯುಪಿಐನಂತಹ ವ್ಯವಸ್ಥೆಯನ್ನು ಇತರ ಅಭಿವೃದ್ದಿಶೀಲ ದೇಶಗಳು ಅನುಕರಿಸಬೇಕು ಎಂದು ಸಲಹೆ ನೀಡಿದ್ದರು.
ಯುಪಿಐ ಅಳವಡಿಕೆ ಆಗಬೇಕಾದರೆ ವಿವಿಧ ಕ್ಷೇತ್ರದ ಸಂಸ್ಥೆಗಳ ನೆಟ್ವರ್ಕ್ ರಚಿಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ಮಾಲ್ಡೀವ್ಸ್ ಹೆಜ್ಜೆ ಇಡುತ್ತಿದೆ. ಮಾಲ್ಡೀವ್ಸ್ನ ಬ್ಯಾಂಕುಗಳು, ಟೆಲಿಕಾಂ ಕಂಪನಿಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಹಣಕಾಸು ತಂತ್ರಜ್ಞಾನ ಕಂಪನಿಗಳ ಒಂದು ಗುಂಪನ್ನು ಅಲ್ಲಿನ ಸರ್ಕಾರ ಸ್ಥಾಪಿಸುತ್ತಿದೆ. ಟ್ರೇಡ್ನೆಟ್ ಮಾಲ್ಡೀವ್ಸ್ ಕಾರ್ಪೊರೇಶನ್ ಲಿ ಸಂಸ್ಥೆಗೆ ಈ ಕನ್ಸಾರ್ಟಿಯಂನ ಮುಂದಾಳತ್ವ ವಹಿಸಲಾಗಿದೆ.
ಭಾರತದಲ್ಲಿ ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್ ಪ್ರಬಲವಾಗಿದೆ. ಆಧಾರ್ನಿಂದ ಶುರುವಾಗಿ, ಸಾಕಷ್ಟು ಸ್ತರಗಳಲ್ಲಿ ಡಿಜಿಟಲ್ ಮೂಲಸೌಕರ್ಯವನ್ನು ಅಭಿವೃದ್ದಿಪಡಿಸಲಾಗಿದೆ. ಈ ವ್ಯವಸ್ಥೆಯನ್ನು ಇತರ ದೇಶಗಳಲ್ಲೂ ಅಳವಡಿಕೆಯಾಗಲು ಭಾರತ ಬಯಸುತ್ತಿದೆ. ಹಲವು ದೇಶಗಳು ಇದಕ್ಕೆ ಆಸಕ್ತಿ ತೋರಿವೆ. ಹಣಕಾಸು ವ್ಯವಸ್ಥೆಯಲ್ಲಿ ತೊಡಕು ಅನುಭವಿಸುತ್ತಿರುವ ಮಾಲ್ಡೀವ್ಸ್ ದೇಶಕ್ಕೆ ಭಾರತ ನೆರವಿನ ಹಸ್ತ ಚಾಚಿದೆ. ಮಾಲ್ಡೀವ್ಸ್ ಅಧ್ಯಕ್ಷರು ಇತ್ತೀಚೆಗೆ ಭಾರತದ ಭೇಟಿಗೆ ಬಂದಾಗ ನಡೆದ ಮಾತುಕತೆಗಳು ಫಲಪ್ರದವಾಗಿದ್ದವು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ