ಡಿಜಿಟಲ್ ಟೆಕ್ನಾಲಜಿಯಿಂದ ಪರಿವರ್ತನೆ; ಅಭಿವೃದ್ಧಿಶೀಲ ದೇಶಗಳಿಗೆ ಭಾರತವೇ ಮಾದರಿ: ಪ್ರೊ. ರೋಮರ್
Prof Paul Michael Romer suggestions to digital south countries: ಭಾರತ ಆಧಾರ್ ಯೋಜನೆಯ ಪ್ರಯೋಗ ಹೇಗೆ ಮಾಡಿತೋ, ಅದೇ ರೀತಿ ಅಭಿವೃದ್ಧಿಶೀಲ ದೇಶಗಳೂ ಕೂಡ ಹೊಸ ಪ್ರಯೋಗಕ್ಕೆ ಹಿಂಜರಿಯಬಾರದು ಎಂದು ನೊಬೆಲ್ ಪುರಸ್ಕೃತ ಆರ್ಥಿಕ ತಜ್ಞ ಪ್ರೊ. ಪೌಲ್ ಮೈಕೇಲ್ ರೋಮರ್ ಹೇಳಿದ್ದಾರೆ. ಐಎಎನ್ಎಸ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅವರು, ಸೌತ್ ದೇಶಗಳು ಶ್ರೀಮಂತ ದೇಶಗಳ ಮೇಲೆ ಅವಲಂಬಿತವಾಗದೇ ಭಾರತವನ್ನು ಮಾದರಿಯನ್ನಾಗಿರಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ನವದೆಹಲಿ, ಅಕ್ಟೋಬರ್ 20: ಡಿಜಿಟಲ್ ತಂತ್ರಜ್ಞಾನದಲ್ಲಿ ಹಿಂದುಳಿದ ದೇಶಗಳಿಗೆ ಭಾರತವೇ ಮಾದರಿಯಾಗಬೇಕು. ಭಾರತಕ್ಕೆ ಈ ಬೆಳವಣಿಗೆ ಸಾಧ್ಯವಾಗುತ್ತದೆ ಎಂದಾದಲ್ಲಿ ತಮಗೇಕೆ ಸಾಧ್ಯವಿಲ್ಲ ಎಂದು ಈ ದೇಶಗಳು ಪ್ರಶ್ನಿಸಿಕೊಳ್ಳಬೇಕು ಎಂದು ಅಮೆರಿಕದ ಆರ್ಥಿಕ ತಜ್ಞ ಪ್ರೊಫೆಸರ್ ಪೌಲ್ ಮೈಕೇಲ್ ರೋಮರ್ ಅಭಿಪ್ರಾಯಪಟ್ಟಿದ್ದಾರೆ. ಭಾರತ ಆಧಾರ್ ಎಂಬ ವಿನೂತನ ಯೋಜನೆ ಆರಂಭಿಸಿತು. ಅದರಂತೆಯೇ ಇತರ ದೇಶಗಳು ಕೂಡ ಈ ಹಿಂದೆ ಮಾಡದೇ ಇದ್ದ ಪ್ರಯತ್ನಕ್ಕೆ ಕೈ ಹಾಕುವ ಸಾಹಸ, ಆಕಾಂಕ್ಷೆ ಮತ್ತು ಆತ್ಮವಿಶ್ವಾಸ ಹೊಂದಿರಬೇಕು. ಭಾರತದ ಪ್ರಯೋಗವನ್ನು ಈ ದೇಶಗಳು ಅನುಕರಿಸಬಹುದು. ಭಾರತದ ಅನುಭವದಿಂದ ಕಲಿಯಬಹುದು ಎಂದು ಪ್ರೊಫೆಸರ್ ರೋಮರ್ ಹೇಳಿದ್ದಾರೆ.
ಡಿಜಿಟಲ್ ಸೌತ್ ದೇಶಗಳು (ಅಭಿವೃದ್ದಿಶೀಲ) ಶ್ರೀಮಂತ ರಾಷ್ಟ್ರಗಳ ಮೇಲೆ ಎಲ್ಲದಕ್ಕೂ ಅವಲಂಬಿತ ಆಗಬಾರದು. ಇದು ಬಹಳ ಮುಖ್ಯ. ಶ್ರೀಮಂತ ದೇಶಗಳನ್ನು ಸೂತ್ರಧಾರನಾಗಿ ಇರುಸುವ ತಪ್ಪು ಬೇಡ. ನಮ್ಮ ನಾಗರಿಕರಿಗೆ ಅಗತ್ಯ ಇರುವ ಜೀವನದ ಗುಣಮಟ್ಟದಲ್ಲಿ ಬೇಕಾಗಿರುವ ಸುಧಾರಣೆಗಳನ್ನು ತರಲು ಈ ಸಿರಿವಂತ ದೇಶಗಳಿಂದ ನೆರವಾಗದೇ ಹೋಗಬಹುದು ಎಂದು ವರ್ಲ್ಡ್ ಬ್ಯಾಂಕ್ನ ಮಾಜಿ ಚೀಫ್ ಎಕನಾಮಿಸ್ಟ್ ಆದ ಪ್ರೊಫೆಸರ್ ರೋಮರ್ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಕಳೆದ ಮೂರು ತಿಂಗಳಲ್ಲಿ ಭಾರತದಲ್ಲಿ ಮಾರಾಟವಾದ ಸ್ಮಾರ್ಟ್ಫೋನ್ಗಳ ಸಂಖ್ಯೆ 5 ಕೋಟಿ ಸಮೀಪ
Watch: Professor Paul Michael Romer says, “I think one of the first things is that the other countries in the Digital South should say to themselves, if India can do it, we can do it too. Countries need to have the confidence and the ambition to try something that hasn’t been… pic.twitter.com/qWipT8hQrZ
— IANS (@ians_india) October 20, 2024
ನೊಬೆಲ್ ಸ್ಮಾರಕ ಪ್ರಶಸ್ತಿ ಪುರಸ್ಕೃತರೂ ಆಗಿರುವ ಪೌಲ್ ಮೈಕೇಲ್ ರೋಮರ್ ಅಮೆರಿದಕ ಕೊಲೊರಾಡೋದ ಡೆನ್ವರ್ ನಗರದಲ್ಲಿ ಜನಿಸಿ, ಆರ್ಥಿಕ ವಿಷಯದಲ್ಲಿ ಪರಿಣಿತಿ ಹೊಂದಿದ್ದಾರೆ.
ದೀರ್ಘಾವಧಿ ಆರ್ಥಿಕ ಬೆಳವಣಿಗೆಗೆ ಪುಷ್ಟಿ ನೀಡಲು ಜ್ಞಾನ ಹೇಗೆ ನೆರವಾಗುತ್ತದೆ ಎಂಬುದನ್ನು ಪೌಲ್ ರೋಮರ್ ತಮ್ಮ ಅಧ್ಯಯನದಲ್ಲಿ ನಿರೂಪಿಸಿದ್ದಾರೆ. ಸಂಸ್ಥೆಗಳಿಗೆ ಹೊಸ ಐಡಿಯಾಗಳನ್ನು ಹೊರತರುವ ಇಚ್ಛೆ ಬರಲು ಆರ್ಥಿಕ ಶಕ್ತಿಗಳ ಪ್ರಭಾವ ಹೇಗೆ ಇರುತ್ತದೆ ಎಂಬುದನ್ನೂ ಅವರು ತೋರಿಸಿಕೊಟ್ಟಿದ್ದಾರೆ. 1990ರಲ್ಲಿ ಅವರ ಈ ಆರ್ಥಿಕ ಪರಿಕಲ್ಪನೆ ಪ್ರಕಟವಾಗಿತ್ತು. ಅವರ ಈ ಕಾರ್ಯಕ್ಕೆ 2018ರಲ್ಲಿ ಸ್ವೆರಿಗೆಸ್ ರಿಕ್ಸ್ಬ್ಯಂಕ್ ಪ್ರಶಸ್ತಿ (ನೊಬೆಲ್ ಸ್ಮಾರಕ ಪ್ರಶಸ್ತಿ) ಸಿಕ್ಕಿತ್ತು.
ಇದನ್ನೂ ಓದಿ: ಅಂಬಾನಿ ವರ್ಸಸ್ ಮಸ್ಕ್; ಭಾರತೀಯ ಸೆಟಿಲೈಟ್ ಇಂಟರ್ನೆಟ್ ಯುದ್ಧದಲ್ಲಿ ಗೆಲ್ಲೋದ್ಯಾರು?
ಪ್ರೊಫೆಸರ್ ಪೌಲ್ ಮೈಕೇಲ್ ರೋಮರ್ ಅವರು 2016ರ ಅಕ್ಟೋಬರ್ನಿಂದ 2018ರ ಜನವರಿ 24ರವರೆಗೂ ವಿಶ್ವಬ್ಯಾಂಕ್ನಲ್ಲಿ ಮುಖ್ಯ ಆರ್ಥಿಕ ತಜ್ಞರಾಗಿ ಜವಾಬ್ದಾರಿ ನಿಭಾಯಿಸಿದ್ದರು. ವಿವಿಧ ಯೂನಿವರ್ಸಿಟಿಗಳಲ್ಲಿ ಅವರು ಪಾಠ ಮಾಡಿದ್ದಾರೆ. 68 ವರ್ಷದ ಅವರು ಪ್ರಸಕ್ತ ವಿಶ್ವದ ಶ್ರೇಷ್ಠ ಅರ್ಥ ವಿಜ್ಞಾನಿಗಳ ಪೈಕಿ ಒಬ್ಬರೆನಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ