ನವದೆಹಲಿ, ಮೇ 24: ಭಾರತ ವಿರೋಧಿ ಧೋರಣೆಯಿಂದ ಗುರುತಾಗಿರುವ ಈಗಿನ ಮಾಲ್ಡೀವ್ಸ್ ಸರ್ಕಾರ ಭಾರತದಿಂದ ವಿನಾಯಿತಿಗಳನ್ನು ಗಿಟ್ಟಿಸಿಕೊಳ್ಳಲು ಯಶಸ್ವಿಯಾಗುತ್ತಾ ಬಂದಿದೆ. ಇತ್ತೀಚೆಗೆ ಭಾರತ ಮಾಲ್ಡೀವ್ಸ್ ದೇಶಕ್ಕೆ ಹೆಚ್ಚು ಆಹಾರ ವಸ್ತುಗಳನ್ನು ರಫ್ತು ಮಾಡಿದೆ. ಶೀಘ್ರದಲ್ಲೇ ಮಾಲ್ಡೀವ್ಸ್ನಲ್ಲಿ ಭಾರತದ ರುಪೇ ಸರ್ವಿಸ್ (RuPay Service) ಚಾಲನೆಗೊಳ್ಳಲಿದೆ. ಭಾರತದಿಂದ ಆಮದು ಮಾಡಿಕೊಳ್ಳಲಾಗುವ ವಸ್ತುವಿಗೆ ಮಾಲ್ಡೀವ್ಸ್ ದೇಶ ತನ್ನಸ್ಥಳೀಯ ರುಫಿಯಾದಲ್ಲೇ (Maldivian Rufiyaa) ಹಣ ಪಾವತಿಸಲು ಭಾರತ ಅವಕಾಶ ಕೊಡುತ್ತಿದೆ. ಆರ್ಥಿಕವಾಗಿ ನಲುಗುತ್ತಿರುವ ಮಾಲ್ಡೀವ್ಸ್ ದೇಶಕ್ಕೆ ಭಾರತ ಒಂದಿಲ್ಲೊಂದು ರೀತಿಯಲ್ಲಿ ಸಹಾಯ ಮಾಡಲು ಮುಂದಾಗಿದೆ.
ಅತ್ತ ಮಾಲ್ಡೀವ್ಸ್ ದೇಶ ಭಾರತದಿಂದ ಲಾಭ ಮಾಡಿಕೊಳ್ಳುತ್ತಲೇ ಭಾರತ ವಿರೋಧಿ ಶಕ್ತಿಗಳೊಂದಿಗೆ ಕೈ ಜೋಡಿಸುತ್ತಿದೆ. ಮಾಲ್ಡೀವ್ಸ್ನಲ್ಲಿದ್ದ ಬೆರಳೆಣಿಕೆಯ ಭಾರತೀಯ ಸೈನಿಕರನ್ನು ವಾಪಸ್ ಕಳುಹಿಸಿದೆ. ಚೀನಾ ಜೊತೆ ಹಲವು ಒಪ್ಪಂದಗಳನ್ನು ಮಾಡಿಕೊಂಡಿದೆ. ಇತ್ತೀಚೆಗೆ ಟರ್ಕಿ ದೇಶದಿಂದ ಬಯ್ರಾಕ್ತರ್ ಟಿಬಿ2 ಡ್ರೋನ್ಗಳನ್ನು (Bayraktar TB2 drone) ಖರೀದಿಸಿದೆ. ಭಾರತದ ಡಾರ್ನಿಯರ್ ಹೆಲಿಕಾಪ್ಟರ್ಗೆ ಬದಲಾಗಿ ಈ ಡ್ರೋನ್ಗಳನ್ನು ರಾಷ್ಟ್ರೀಯ ಭದ್ರತೆ ಮತ್ತು ಸಾಗರ ಕಾವಲು ಕಾರ್ಯಕ್ಕೆ ಬಳಸಲಿದೆ.
ಇದನ್ನೂ ಓದಿ: ವಿಕಸಿತ ಭಾರತದ ಗುರಿಗೆ ದೈವ ಪ್ರೇರಣೆ; ಆ ದೈವವೇ ನನಗೆ ಶಕ್ತಿ ತುಂಬುತ್ತಿದೆ: ಪ್ರಧಾನಿ ಮೋದಿ
ಭಾರತ ವಿರೋಧಿ ಶಕ್ತಿಗಳೆಂದು ಗುರುತಿಸಲಾಗಿರುವ ಚೀನಾ ಮತ್ತು ಟರ್ಕಿ ದೇಶಗಳಿಗೆ ಮಾಲ್ಡೀವ್ಸ್ ನೆಲೆ ಕಲ್ಪಿಸುತ್ತಿದೆಯಾ ಎನಿಸಬಹುದು. ಶ್ರೀಲಂಕಾದಲ್ಲಿ ಚೀನಾ ಈಗಾಗಲೇ ನಿಧಾನವಾಗಿ ನೆಲೆಗಳನ್ನು ಆಕ್ರಮಿಸಿಕೊಳ್ಳುವ ಹಾದಿಯಲ್ಲಿದೆ. ಮಾಲ್ಡೀವ್ಸ್ ಕೂಡ ಚೀನಾ ತೆಕ್ಕೆಗೆ ಜಾರುತ್ತಿದೆ. ಇದು ಭಾರತದ ಭದ್ರತೆಗೆ ಅಪಾಯ ತಂದಂತೆ. ಟರ್ಕಿ ದೇಶದ ಡ್ರೋನ್ಗಳು ಭಾರತದ ಭದ್ರತಾ ವ್ಯವಸ್ಥೆಯನ್ನು ಕದ್ದು ನೋಡಲು ಬಳಕೆ ಆಗಬಹುದು.
ಆಮದು ಮಾಡಿಕೊಂಡ ವಸ್ತುಗಳಿಗೆ ಮಾಲ್ಡೀವ್ಸ್ ಕರೆನ್ಸಿಯಲ್ಲಿ ಪಾವತಿಸಲು ಭಾರತ ಮತ್ತು ಚೀನಾ ದೇಶಗಳು ಒಪ್ಪಿಕೊಂಡಿವೆ ಎಂದು ಮಾಲ್ಡೀವ್ಸ್ನ ಆರ್ಥಿಕ ಅಭಿವೃದ್ಧಿ ಸಚಿವ ಮೊಹಮ್ಮದ್ ಸಯೀದ್ ಹೇಳಿದ್ದಾರೆ. ಈ ಎರಡು ದೇಶಗಳಿಂದ ಮಾಲ್ಡೀವ್ಸ್ ಒಂದ ವರ್ಷದಲ್ಲಿ 1.5 ಮಿಲಿಯನ್ ಡಾಲರ್ನಷ್ಟು ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಭಾರತ ಮತ್ತು ಚೀನಾ ಪಾಲು ಸಮಸಮ ಇದೆ. ಈಗ ಸ್ಥಳೀಯ ಕರೆನ್ಸಿಯಲ್ಲಿ ಹಣ ಪಾವತಿಸಿದರೆ ಮಾಲ್ಡೀವ್ಸ್ ದೇಶಕ್ಕೆ ಸಾಕಷ್ಟು ಹಣ ಉಳಿತಾಯ ಆಗುತ್ತದೆ.
ಇದನ್ನೂ ಓದಿ: ಸೆನ್ಸೆಕ್ಸ್ನಲ್ಲಿ ವಿಪ್ರೋ ಸ್ಥಾನಕ್ಕೆ ಏರಲಿರುವ ಅದಾನಿ ಎಂಟರ್ಪ್ರೈಸಸ್; ಏನಿದರ ಪರಿಣಾಮ?
ಭಾರತದ ರುಪೇ ನೆಟ್ವರ್ಕ್ ಜಾಗತಿಕವಾಗಿ ಮನ್ನಣೆ ಪಡೆಯುತ್ತಿದೆ. ಕೆಲ ದೇಶಗಳು ಈಗಾಗಲೇ ಇದನ್ನು ಬಳಸುತ್ತಿವೆ. ಮಾಲ್ಡೀವ್ಸ್ ದೇಶವು ರುಪೇ ಅಳವಡಿದರೆ ಅದರ ಕರೆನ್ಸಿ ಮೌಲ್ಯಕ್ಕೆ ಪುಷ್ಟಿ ಸಿಗುತ್ತದೆ. ಹಾಗೆಯೇ, ಭಾರತದಿಂದ ಮಾಲ್ಡೀವ್ಸ್ಗೆ ಹೋಗುವ ಪ್ರವಾಸಿಗರಿಗೂ ಅನುಕೂಲವಾಗುತ್ತದೆ. ಇದರಿಂದ ಮಾಲ್ಡೀವ್ಸ್ ಪ್ರವಾಸೋದ್ಯಮಕ್ಕೂ ಸಹಾಯಕವಾಗಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ