PF- Aadhaar Seeding: ಸೆಪ್ಟೆಂಬರ್​ 1ರಿಂದ ಪಿಎಫ್​- ಆಧಾರ್ ಜೋಡಣೆ ಕಡ್ಡಾಯ; ಆನ್​ಲೈನ್ ಪ್ರಕ್ರಿಯೆ ಹೇಗೆ?

| Updated By: Srinivas Mata

Updated on: Aug 28, 2021 | 12:46 PM

ಆಧಾರ್ ಜತೆಗೆ ಪಿಎಫ್​ ಯುಎಎನ್​ ಜತೆಗೆ ಜೋಡಣೆ ಮಾಡುವುದು ಸೆಪ್ಟೆಂಬರ್ 1ರಿಂದ ಕಡ್ಡಾಯ ಮಾಡಲಾಗಿದೆ. ಒಂದು ವೇಳೆ ಮಾಡದಿದ್ದರೆ ಏನಾಗುತ್ತದೆ ಎಂಬ ವಿವರ ಇಲ್ಲಿದೆ.

PF- Aadhaar Seeding: ಸೆಪ್ಟೆಂಬರ್​ 1ರಿಂದ ಪಿಎಫ್​- ಆಧಾರ್ ಜೋಡಣೆ ಕಡ್ಡಾಯ; ಆನ್​ಲೈನ್ ಪ್ರಕ್ರಿಯೆ ಹೇಗೆ?
ಸಾಂದರ್ಭಿಕ ಚಿತ್ರ
Follow us on

ಪ್ರಾವಿಡೆಂಟ್ ಫಂಡ್ (PF) ನಿಯಮ ಸೆಪ್ಟೆಂಬರ್​ 1, 2021ರಿಂದ ಬದಲಾವಣೆ ಆಗಲಿದೆ. ಕಾರ್ಮಿಕರ ಭವಿಷ್ಯ ನಿಧಿ ಒಕ್ಕೂಟ (ಇಪಿಎಫ್​ಒ)ದ ಪ್ರಕಾರ, ಆಗಸ್ಟ್ 31, 2021ರೊಳಗೆ ಕಾರ್ಮಿಕರ ಭವಿಷ್ಯ ನಿಧಿ ಖಾತೆದಾರರು ತಮ್ಮ ಆಧಾರ್​ ಸಂಖ್ಯೆಯನ್ನು ಪ್ರಾವಿಡೆಂಟ್ ಫಂಡ್​ಗೆ ಜೋಡಣೆ ಮಾಡಬೇಕು. ಈ ದಿನಾಂಕದೊಳಗೆ ಇಪಿಎಫ್​ ಅನ್ನು ಆಧಾರ್​ ಜತೆ ಜೋಡಣೆ ಮಾಡದಿದ್ದಲ್ಲಿ ಉದ್ಯೋಗದಾತರು ಸಿಬ್ಬಂದಿಯ ಪಿಎಫ್​ಗೆ ನೀಡುವ ಕೊಡುಗೆ ನಿಲ್ಲುತ್ತದೆ. ಎಲ್ಲ ಸಿಬ್ಬಂದಿಯೂ ಯುಎಎನ್​ (ಯೂನಿವರ್ಸಲ್ ಅಕೌಂಟ್ ನಂಬರ್) ಪಡೆಯುವಂತೆ ಇಪಿಎಫ್​ಒದಿಂದ ಸೂಚನೆ ನೀಡಲಾಗಿದೆ. ಜತೆಗೆ ಆಧಾರ್​ ಜತೆ ದೃಢೀಕರಿಸುವಂತೆ ತಿಳಿಸಲಾಗಿದೆ. ಈ ಹಿಂದೆ, ಇಪಿಎಫ್​- ಆಧಾರ್ ಜೋಡಣೆ ಅಂತಿಮ ದಿನಾಂಕ ಮೇ 30, 2021 ಇತ್ತು. ಆದರೆ ಆ ನಂತರದಲ್ಲಿ ಇಪಿಎಫ್​ಒದಿಂದ ಗಡುವನ್ನು ಆಗಸ್ಟ್ 31, 2021ಕ್ಕೆ ವಿಸ್ತರಿಸಲಾಯಿತು.

ಇಪಿಎಫ್​ಒದಿಂದ ಪಿಎಫ್​ ಖಾತೆಯಲ್ಲಿನ ನಿಯಮ ಬದಲಾವಣೆ ಬಗ್ಗೆ ಉದ್ಯೋಗದಾತರಿಗೆ ಸಂದೇಶ ಕಳುಹಿಸಲಾಗಿದೆ. “ಪ್ರಿಯ ಉದ್ಯೋಗದಾತರೇ, ಸಾಮಾಜಿಕ ಭದ್ರತೆ ನೀತಿ ಸಂಹಿತೆ, 2020ರ ಸೆಕ್ಷನ್ 142 ಜಾರಿಯಾದ ಮೇಲೆ ಯುಎಎನ್​ ಜತೆಗೆ ಆಧಾರ್ ಸಂಖ್ಯೆ ಜೋಡಣೆಯಾದ ಹಾಗೂ ದೃಢೀಕೃತವಾದಂಥ ಖಾತೆದಾರರ ಇಸಿಆರ್​ ಮಾತ್ರ ಫೈಲ್ ಮಾಡುವುದಕ್ಕೆ ಸಾಧ್ಯ,” ಎನ್ನಲಾಗಿದೆ. “ಅದರ ಪ್ರಕಾರ, ಸೇವೆಯಲ್ಲಿ ಯಾವುದೇ ವ್ಯತ್ಯಯ ಆಗಬಾರದು ಮತ್ತು ಏನೂ ಸಮಸ್ಯೆ ಆಗಬಾರದು ಎಂದಾದಲ್ಲಿ ಕೊಡುಗೆ ನೀಡುವ ಎಲ್ಲ ಸದಸ್ಯರ ಆಧಾರ್ ಜೋಡಣೆಯನ್ನು ಖಾತ್ರಿಪಡಿಸಿಕೊಳ್ಳಬೇಕು,” ಎಂದು ತಿಳಿಸಲಾಗಿದೆ.

ಇಪಿಎಫ್- ಆಧಾರ್ ಜೋಡಣೆ ಆನ್​ಲೈನ್​ನಲ್ಲಿ ಮಾಡುವುದು ಹೇಗೆ?
1. ಇಪಿಎಫ್​ಒ ಲಿಂಕ್ — iwu.epfindia.gov.in/eKYC/; ಇದಕ್ಕೆ ಲಾಗಿನ್ ಆಗಬೇಕು.
2. ನಿಮ್ಮ UAN ಮತ್ತು ಆಧಾರ್- ನೋಂದಾಯಿತ ಮೊಬೈಲ್ ಸಂಖ್ಯೆ ನಮೂದಿಸಬೇಕು;
3. ‘Generate OTP’ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು;
4. OTP ಭರ್ತಿ ಮಾಡಿ ಹಾಗೂ ಲಿಂಗ ಎಂಬುದನ್ನು ಆಯ್ಕೆ ಮಾಡಬೇಕು;
5. ಆಧಾರ್ ಸಂಖ್ಯೆಯನ್ನು ನಮೂದಿಸಿ ಹಾಗೂ ‘ಆಧಾರ್ ದೃಢೀಕರಣ’ ವಿಧಾನವನ್ನು ಆರಿಸಿ;
6. ‘ಮೊಬೈಲ್ ಅಥವಾ E-mail ಆಧಾರಿತ ದೃಢೀಕರಣ’ ಆಯ್ಕೆಯಲ್ಲಿ ಯಾವುದು ಎಂಬುದನ್ನು ಆರಿಸಿಕೊಳ್ಳಿ;
7. ಮತ್ತೊಂದು OTP ನಿಮ್ಮ ಮೊಬೈಲ್ ಸಂಖ್ಯೆಗೆ ಬರುತ್ತದೆ;
8. ಎರಡನೇ OTP ನಮೂದಿಸಿ; ಮತ್ತು
9. ನಿಮ್ಮ EPF, UAN ಆಧಾರ್ ಜೋಡಣೆ ಪೂರ್ತಿಗೊಳಿಸಿ.

ಇದನ್ನೂ ಓದಿ: How To Activate PPF: ನಿಷ್ಕ್ರಿಯ ಪಿಪಿಎಫ್​ ಖಾತೆಯನ್ನು ಸಕ್ರಿಯಗೊಳಿಸುವುದು ಹೇಗೆ?

(Mandatory To Link Aadhaar With PF UAN From September 1st)