Manipal Group & Byjus: ಬೈಜುಸ್ ಖರೀದಿಗೆ ಎರಡನೇ ಬಿಡ್ ಸಲ್ಲಿಸಿದ ಮಣಿಪಾಲ್ ಗ್ರೂಪ್

Manipal Group files second bid to acquire Byju's: ಪ್ರಮುಖ ಟ್ಯೂಶನ್ ಸಂಸ್ಥೆಯಾಗಿರುವ ಆಕಾಶ್ ಅನ್ನು ಖರೀದಿಸಲು ಮಣಿಪಾಲ್ ಗ್ರೂಪ್ ಪ್ರಯತ್ನ ಮುಂದುವರಿಸಿದೆ. ಆಕಾಶ್ ಎಜುಕೇಶನ್ ಸರ್ವಿಸ್​ನ ಮಾಲಕಸಂಸ್ಥೆಯಾದ ಬೈಜೂಸ್ ಅನ್ನು ಖರೀದಿಸಲು ಮಣಿಪಾಲ್ ಗ್ರೂಪ್ ಎರಡನೇ ಬಿಡ್ ಸಲ್ಲಿಸಿದೆ. ದಿವಾಳಿ ತಡೆ ಕಾನೂನಿನ ಅಡಿಯಲ್ಲಿ ಬೈಜೂಸ್ ಅನ್ನು ಮಾರಲಾಗುತ್ತಿದೆ. ಅದಕ್ಕಾಗಿ ಮಣಿಪಾಲ್ ಗ್ರೂಪ್ ಬಿಡ್ ಸಲ್ಲಿಸಿರುವುದು.

Manipal Group & Byjus: ಬೈಜುಸ್ ಖರೀದಿಗೆ ಎರಡನೇ ಬಿಡ್ ಸಲ್ಲಿಸಿದ ಮಣಿಪಾಲ್ ಗ್ರೂಪ್
ಬೈಜೂಸ್

Updated on: Nov 14, 2025 | 7:26 PM

ಬೆಂಗಳೂರು, ನವೆಂಬರ್ 14: ದಿವಾಳಿ ಎದ್ದಿರುವ ಬೈಜೂಸ್ ಅನ್ನು ಖರೀದಿಸುವ ಪ್ರಯತ್ನವನ್ನು ಮಣಿಪಾಲ್ ಗ್ರೂಪ್ ಮುಂದುವರಿಸಿದೆ. ಸಾಲ ತೀರುವಳಿ ನಿಯಮಗಳ (Insolvency process) ಅಡಿಯಲ್ಲಿ ಬೈಜೂಸ್​ನ ಮಾತೃ ಸಂಸ್ಥೆಯಾದ ಥಿಂಕ್ ಅಂಡ್ ಲರ್ನ್ ಪ್ರೈ ಲಿ ಸಂಸ್ಥೆಯನ್ನು ಖರೀದಿಸಲು ಮಣಿಪಾಲ್ ಎಜುಕೇಶನ್ ಅಂಡ್ ಮೆಡಿಕಲ್ ಗ್ರೂಪ್ ಸಂಸ್ಥೆ ಎರಡನೇ ಬಾರಿ ಬಿಡ್ ಸಲ್ಲಿಸಿದೆ. ಬೈಜೂಸ್​ನ ಸಂಕಷ್ಟ ಪರಿಹಾರಕರ (RP- Resolution Professional) ಬಳಿ ಇಒಐ (EoI- Expression of Interest) ದಾಖಲೆಗಳನ್ನು ಸಲ್ಲಿಸಿದೆ.

ರಂಜನ್ ಪೈ ಮಾಲಕತ್ವದ ಮಣಿಪಾಲ್ ಗ್ರೂಪ್ ಬೈಜೂಸ್ ಖರೀದಿಗೆ ಬಿಡ್ ಸಲ್ಲಿಸಿದ್ದು ಇದು ಎರಡನೇ ಬಾರಿ. ಬಿಡ್ಡರ್​ಗಳ ಕೊರತೆಯಿಂದಾಗಿ ಆರ್​ಪಿಯವರು ಹೊಸದಾಗಿ ಬಿಡ್​ಗಳನ್ನು ಆಹ್ವಾನಿಸಿದ್ದರು. ಇದಕ್ಕೆ ನಿನ್ನೆ (ನ. 13) ಕೊನೆಯ ದಿನವಾಗಿತ್ತು. ಸದ್ಯಕ್ಕೆ ತಿಳಿದುಬಂದಿರುವ ಮಾಹಿತಿ ಪ್ರಕಾರ, ಬೈಜೂಸ್ ಖರೀದಿಗೆ ಬಿಡ್ ಸಲ್ಲಿರುವುದು ಮಣಿಪಾಲ್ ಗ್ರೂಪ್ ಮಾತ್ರವೇ. ಬೇರಾವುದೇ ಬಿಡ್ ಬಂದಿರುವುದು ಗೊತ್ತಾಗಿಲ್ಲ.

ಇದನ್ನೂ ಓದಿ: ನೀವು ಸ್ಮೋಕಿಂಗ್ ಬಿಟ್ಟರೂ ಕಡಿಮೆ ಆಗದು ಇನ್ಷೂರೆನ್ಸ್ ಪ್ರೀಮಿಯಮ್; ಕಾರಣ ಇದು

ಆಕಾಶ್ ಎಜುಕೇಶನ್ ಮೇಲೆ ಮಣಿಪಾಲ್ ಗ್ರೂಪ್ ಕಣ್ಣು

ಬೈಜೂಸ್ ಸಂಸ್ಥೆ ವಿಪರೀತ ಸಾಲ ಹೊಂದಿರುವ ಹಿನ್ನೆಲೆಯಲ್ಲಿ ಕೋರ್ಟ್ ನಿರ್ದೇಶನದ ಮೇರೆಗೆ ಮಾರ್ಗೋಪಾಯ ಹುಡುಕಲಾಗಿದೆ. ಅದರಂತೆ ಬೈಜೂಸ್​ನ ಆಸ್ತಿಗಳನ್ನು ಮಾರಿ ಸಾಲ ತೀರಿಸಲು ರೆಸಲ್ಯೂಶನ್ ಪ್ರೊಫೆಷನಲ್ ಅವರನ್ನು ಆಯ್ಕೆ ಮಾಡಲಾಗಿದೆ. ಇವರೇ ಈಗ ಬಿಡ್​ಗೆ ಆಹ್ವಾನಿಸಿರುವುದು.

ಮಣಿಪಾಲ್ ಗ್ರೂಪ್​ಗೆ ಬೈಜೂಸ್​ಗಿಂತ ಆಕಾಶ್ ಎಜುಕೇಶನ್ ಸರ್ವಿಸಸ್ ಸಂಸ್ಥೆಯ ಮೇಲೆ ಕಣ್ಣು ನೆಟ್ಟಿದೆ. 2021ರಲ್ಲಿ ಆಕಾಶ್ ಸಂಸ್ಥೆಯನ್ನು ಬೈಜೂಸ್ ಖರೀದಿ ಮಾಡಿತ್ತು. ಕೋಚಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ಆಕಾಶ್ ಸಂಸ್ಥೆಯನ್ನು ಖರೀದಿಸಲು ಮಣಿಪಾಲ್ ಗ್ರೂಪ್ ಆಸಕ್ತಿ ಹೊಂದಿದೆ. ಬೈಜೂಸ್​ನ ಕೆಲ ಸಾಲವನ್ನು ರಂಜನ್ ಪೈ ಅವರು ತೀರಿಸಿದ್ದರು. ಅದಕ್ಕೆ ಪ್ರತಿಯಾಗಿ ಆಕಾಶ್ ಸಂಸ್ಥೆಯಲ್ಲಿ ಶೇ. 40ರಷ್ಟು ಪಾಲನ್ನು ಕೊಡಲಾಗಿದೆ.

ಇದನ್ನೂ ಓದಿ: ಕೋಟಿ ರೂ ಸಂಬಳ ಕೊಡ್ತೀನಂದ್ರೂ ಅಮೆರಿಕದಲ್ಲಿ ಸಿಗುತ್ತಿಲ್ಲ ಕೆಲಸಗಾರರು; ಮೆಕ್ಯಾನಿಕ್ಸ್ ಇತ್ಯಾದಿ ಕಾರ್ಮಿಕರಿಗೆ ಸಖತ್ ಬೇಡಿಕೆ

ಈಗ ಬೈಜೂಸ್ ಅನ್ನು ಖರೀದಿಸುವುದರಿಂದ ಆಕಾಶ್ ಎಜುಕೇಶನ್ ಸರ್ವಿಸಸ್ ಸಂಸ್ಥೆಯ ಪೂರ್ಣ ನಿಯಂತ್ರಣವು ಮಣಿಪಾಲ್ ಗ್ರೂಪ್​ಗೆ ಸಿಗುತ್ತದೆ. ಸದ್ಯ ಅದರ ಖರೀದಿಗೆ ಏಕೈಕ ಬಿಡ್ಡರ್ ಕೂಡ ಆಗಿದೆ. ಆದರೆ, ಇದೊಂದೇ ಕಾರಣಕ್ಕೆ ಖರೀದಿಗೆ ಅವಕಾಶ ಸಿಗುತ್ತದೆ ಎಂದು ಖಾತ್ರಿ ಇಲ್ಲ. ಎಲ್ಲವೂ ಕೂಡ ಆರ್​ಪಿ ವಿವೇಚನಾ ನಿರ್ಧಾರದ ಮೇಲೆ ನಿಲ್ಲಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ