ಅಹ್ಮದಾಬಾದ್: ಇಲ್ಲಿನ ಸಾನಂದ್ ಬಳಿ 22,500 ಕೋಟಿ ರೂ ಮೌಲ್ಯದ ಸೆಮಿಕಂಡಕ್ಟರ್ ಘಟಕವೊಂದನ್ನು (Semiconductor Unit) ಸ್ಥಾಪಿಸಲು ಗುಜರಾತ್ ಸರ್ಕಾರದ ಜೊತೆ ಅಮೆರಿಕದ ಮೈಕ್ರೋನ್ ಟೆಕ್ನಾಲಜಿ ಸಂಸ್ಥೆ (Micron Technology) ಜೂನ್ 28ರಂದು ಎಂಒಯುಗೆ ಸಹಿಹಾಕಿದೆ. ಸಿಎಂ ಕಚೇರಿಯಲ್ಲಿ ನಿನ್ನೆ ಸಂಜೆ ನಡೆದ ಕಾರ್ಯಕ್ರಮದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಮೈಕ್ರೋನ್ ಟೆಕ್ನಾಲಜಿ ಹಿರಿಯ ಉಪಾಧ್ಯಕ್ಷ ಗುರಶರಣ್ ಸಿಂಗ್ ಅವರು ಎಂಒಯುಗೆ ಸಹಿ ಹಾಕಿದರು. ಈ ವೇಳೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಉಪಸ್ಥಿತರಿದ್ದರು.
93 ಎಕರೆ ಪ್ರದೇಶದಲ್ಲಿ ಸೆಮಿಕಂಡಕ್ಟರ್ ಅಸೆಂಬ್ಲಿ, ಟೆಸ್ಟ್, ಮಾರ್ಕಿಂಗ್ ಮತ್ತು ಪ್ಯಾಕೇಜಿಂಗ್ (ATMP) ಸೌಲಭ್ಯವು ಈ ಘಟಕದಲ್ಲಿ ಇರಲಿದೆ. ಮುಂದಿನ 18 ತಿಂಗಳಲ್ಲಿ 5,000 ನೇರ ಉದ್ಯೋಗ ಸೃಷ್ಟಿಯಾಗುವ ಗುರಿ ಇದೆ. ಪರೋಕ್ಷವಾಗಿ ಇನ್ನೂ ಬಹಳಷ್ಟು ಉದ್ಯೋಗಗಳು ಸೃಷ್ಟಿಯಾಗಬಹುದು. ಹಲವು ಸ್ಟಾರ್ಟಪ್ಗಳ ಸ್ಥಾಪನೆಗೆ ಅವಕಾಶ ಮಾಡಿಕೊಡಬಹುದು.
ಭಾರತದಲ್ಲಿ ಸೆಮಿಕಂಡಕ್ಟರ್ ಘಟಕ ತರಲು ನಾಲ್ಕು ದಶಕಗಳಿಂದಲೂ ಪ್ರಯತ್ನಗಳು ನಡೆದಿದ್ದವು. 1980ರಲ್ಲಿ ಮೊದಲ ಬಾರಿಗೆ ಆ ಪ್ರಯತ್ನವಾಗಿದ್ದು. ಬಳಿಕ 1990 ಹಾಗೂ 2005ರಲ್ಲೂ ಪ್ರಯತ್ನಗಳಾಗಿದ್ದವು. ಕೊನೆಗೆ ಈಗ ಅದು ಸಾಕಾರಗೊಂಡಿದೆ.
ಈ ಒಪ್ಪಂದಕ್ಕಾಗಿ ಕೇಂದ್ರ ಸರ್ಕಾರದ ಅಧಿಕಾರಿಗಳು ಮೈಕ್ರಾನ್ ಟೆಕ್ನಾಲಜಿ ಸಂಸ್ಥೆಯ ಹಿರಿಯ ಅಧಿಕಾರಿಗಳೊಂದಿಗೆ ಕಳೆದ ಹಲವಾರು ತಿಂಗಳಿಂದ ಎಡಬಿಡದೆ ಮಾತುಕತೆ ನಡೆಸಿದ ಫಲವಾಗಿ ಈಗ ಘಟಕ ಸ್ಥಾಪನೆಯ ಉದ್ದೇಶ ಸಾಕಾರಗೊಳ್ಳುತ್ತಿದೆ. ಮೈಕ್ರೋನ್ ಟೆಕ್ನಾಲಜಿ ಸಂಸ್ಥೆಯ ಅಧಿಕಾರಿಗಳೊಂದಿಗೆ 40 ಸಭೆಗಳಲ್ಲಿ 50-60 ಗಂಟೆಗಳಷ್ಟು ಕಾಲ ಮಾತುಕತೆ ನಡೆಸಿದ್ದೆವು ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ವಿಜಯ್ ನೆಹ್ರಾ ಹೇಳಿದ್ದಾರೆ.
ಎಲೆಕ್ಟ್ರಾನಿಕ್ಸ್ ವಸ್ತುಗಳಿಗೆ ಸೆಮಿಕಂಡಕ್ಟರ್ ಬಹಳ ಅಗತ್ಯ ಇರುವ ಹೂರಣ. ಮೊಬೈಲ್ ಪೋನ್ನಿಂದ ಹಿಡಿದು ಎಲೆಕ್ಟ್ರಿಕ್ ವಾಹನಗಳವರೆಗೆ ನಾನಾ ಎಲೆಕ್ಟ್ರಾನಿಕ್ಸ್ ಉಪಕರಣಗಳಿಗೆ ಸೆಮಿಕಂಡಕ್ಟರ್ ಬೇಕೇ ಬೇಕು. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಪ್ರಕಾರ, ಭಾರತ 3 ಲಕ್ಷ ಕೋಟಿ ರೂ ಮೊತ್ತದ ಸೆಮಿಕಂಡಕ್ಟರ್ಗಳನ್ನು ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಮೆಮೋರಿ ಕಾರ್ಡ್ ಆಮದು ಮೌಲ್ಯವೇ 1 ಲಕ್ಷ ಕೋಟಿ ರೂನಷ್ಟಿದೆ. ಮೈಕ್ರಾನ್ ಸಂಸ್ಥೆ ಈ ಮೆಮೋರಿ ಚಿಪ್ಗಳನ್ನು ತಯಾರಿಸುವ ಅತಿದೊಡ್ಡ ಕಂಪನಿಗಳಲ್ಲಿ ಒಂದು. ಈಗ ಭಾರತದಲ್ಲಿ ಮೈಕ್ರೋನ್ ಟೆಕ್ನಾಲಜಿಯ ಘಟಕ ಸ್ಥಾಪನೆಯಾದರೆ ಮೆಮೋರಿ ಚಿಪ್ ತಯಾರಿಕೆಯಲ್ಲಿ ಭಾರತ ಸ್ವಾವಲಂಬನೆ ಸಾಧಿಸುವತ್ತ ದೊಡ್ಡ ಹೆಜ್ಜೆಯಾಗಲಿದೆ ಎಂದು ವೈಷ್ಣವ್ ಹೇಳಿದ್ದಾರೆ.
ಮೈಕ್ರೋನ್ ಟೆಕ್ನಾಲಜಿಯ ಹಿರಿಯ ಉಪಾಧ್ಯಕ್ಷ ಗುರಶರಣ್ ಸಿಂಗ್ ಅವರು, ಸೆಮಿಕಂಡಕ್ಟರ್ ಘಟಕ ಸ್ಥಾಪನೆಯಿಂದ ಭಾರತವು ಈ ಕ್ಷೇತ್ರದಲ್ಲಿ ಮ್ಯಾನುಫ್ಯಾಕ್ಚರಿಂಗ್ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಭರವಸೆ ನೀಡಿದ್ದಾರೆ.
ಕುತೂಹಲವೆಂದರೆ ಭಾರತದಲ್ಲಿ ಸೆಮಿಕಂಡಕ್ಟರ್ ಸ್ಥಾಪನೆಗೆ ಮೈಕ್ರೋನ್ ಜೊತೆ ಎಂಒಯು ನಡೆಯುವ ಮುನ್ನ ಫಾಕ್ಸ್ಕಾನ್ ಮತ್ತು ಗುಜರಾತ್ ಸರ್ಕಾರದ ಮಧ್ಯೆ ಎಂಒಯು ಆಗಿತ್ತು. ಫಾಕ್ಸ್ಕಾನ್ ಮತ್ತು ವೇದಾಂತ ಕಂಪನಿಗಳು ಜಂಟಿಯಾಗಿ ಸೇರಿ ಸ್ಥಾಪಿಸಲುದ್ದೇಶಿಸಿರುವ ಸೆಮಿಕಂಡಕ್ಟರ್ ಘಟಕಕ್ಕೆ ಕೇಂದ್ರದಿಂದ ಇನ್ನೂ ಅನುಮೋದನೆ ಸಿಕ್ಕಿಲ್ಲ. ಶೀಘ್ರದಲ್ಲೇ ಅದಕ್ಕೂ ಅನುಮೋದನೆ ದೊರೆಯುವ ನಿರೀಕ್ಷೆ ಇದೆ. ಹಾಗಾದಲ್ಲಿ, ಅದೂ ಕೂಡ ಗುಜರಾತ್ನಲ್ಲೇ ಸ್ಥಾಪನೆಯಾಗಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ