TCS: ವಿದೇಶಗಳಿಗೆ ಕಳುಹಿಸುವ ಹಣಕ್ಕೆ ತೆರಿಗೆ ಹೆಚ್ಚಳ; ಹೊಸ ದರ ಜುಲೈ 1 ಬದಲು ಅಕ್ಟೋಬರ್ 1ರಿಂದ ಅನ್ವಯ

|

Updated on: Jun 29, 2023 | 12:55 PM

TCS on Foreign Remittances: ಪ್ರವಾಸ, ಶಿಕ್ಷಣ, ಸಂಬಂಧಿಕರ ಪಾಲನೆ ಇತ್ಯಾದಿ ಕಾರ್ಯಕ್ಕೆ ವಿದೇಶಗಳಿಗೆ ನಾವು ಕಳುಹಿಸುವ ಹಣಕ್ಕೆ ತೆರಿಗೆ ನೀಡಬೇಕಾಗುತ್ತದೆ. ವರ್ಷಕ್ಕೆ 7 ಲಕ್ಷ ರೂ ಮೇಲ್ಪಟ್ಟ ಹಣ ವರ್ಗಾವಣೆಗೆ ಟಿಸಿಎಸ್ ಅನ್ನು ಶೇ. 5ರಿಂದ ಶೇ. 20ಕ್ಕೆ ಹೆಚ್ಚಿಸಲಾಗಿದೆ. ಇದು ಅ. 1ರಿಂದ ಜಾರಿಗೆ ಬರುತ್ತದೆ.

TCS: ವಿದೇಶಗಳಿಗೆ ಕಳುಹಿಸುವ ಹಣಕ್ಕೆ ತೆರಿಗೆ ಹೆಚ್ಚಳ; ಹೊಸ ದರ ಜುಲೈ 1 ಬದಲು ಅಕ್ಟೋಬರ್ 1ರಿಂದ ಅನ್ವಯ
ಹಣ ವರ್ಗಾವಣೆ
Follow us on

ನವದೆಹಲಿ: ವಿದೇಶಗಳಿಗೆ ಭಾರತೀಯರು ಮಾಡುವ ಹಣ ವರ್ಗಾವಣೆಗೆ (Foreign Remittances) ಕೇಂದ್ರ ಸರ್ಕಾರ ತೆರಿಗೆ ಹೆಚ್ಚಿಸಲು ನಿರ್ಧರಿಸಿತ್ತು. ಜುಲೈ 1ಕ್ಕೆ ಹೊಸ ದರ ಜಾರಿಯಾಗಬೇಕಿತ್ತು. ಜೂನ್ 28ರಂದು ಸರ್ಕಾರ ಹೊರಡಿಸಿದ ಅಧಿಸೂಚನೆಯಲ್ಲಿ ಇದನ್ನು ಮೂರು ತಿಂಗಳು ವಿಸ್ತರಿಸಲಾಗಿದೆ. ಜುಲೈ 1ರ ಬದಲು ಅಕ್ಟೋಬರ್ 1ರಿಂದ ಹೊಸ ಟಿಸಿಎಸ್ ದರಗಳು ಅನ್ವಯ ಆಗುತ್ತವೆ. ಸರ್ಕಾರದ ಹೊಸ ನೀತಿ ಪ್ರಕಾರ, ವಿದೇಶಗಳಿಗೆ ನಾವು ಕಳುಹಿಸುವ ಹಣ ಒಂದು ವರ್ಷಕ್ಕೆ 7 ಲಕ್ಷ ರೂ ಒಳಗೆ ಇದ್ದರೆ ಅದಕ್ಕೆ ಯಾವುದೇ ಟಿಸಿಎಸ್ ಇರುವುದಿಲ್ಲ. ಅದಕ್ಕೂ ಮೇಲ್ಪಟ್ಟ ಹಣ ವರ್ಗಾವಣೆಗೆ ಶೇ. 20ರಷ್ಟು ಟಿಸಿಎಸ್ (TCS- Tax Collected at Source) ವಿಧಿಸಲಾಗುವುದು ಎಂದು ಸರ್ಕಾರ ಹೇಳಿದೆ. ಸದ್ಯ ಇಂಥ ವಿದೇಶೀ ವೆಚ್ಚಗಳಿಗೆ ಶೇ. 5ರಷ್ಟು ಟಿಸಿಎಸ್ ವಿಧಿಸಲಾಗುತ್ತಿದೆ.

ಭಾರತೀಯರು ವಿದೇಶಕ್ಕೆ ಹೋದಾಗ ಲಿಬರಲೈಸ್ಡ್ ರೆಮಿಟೆನ್ಸ್ ಸ್ಕೀಮ್ (ಎಲ್​ಆರ್​ಎಸ್) ಅಡಿಯಲ್ಲಿ ಒಂದು ವರ್ಷಕ್ಕೆ ಮಾಡಬೇಕಾದ ವೆಚ್ಚಕ್ಕೆ ಮಿತಿ ಇದೆ. ಎಲ್​ಆರ್​ಎಸ್ ಪ್ರಕಾರ ಒಂದು ವರ್ಷಕ್ಕೆ 2 ಕೋಟಿ ರೂನಷ್ಟು ಹಣವನ್ನು ಕಳುಹಿಸಬಹುದು. ಇದರಲ್ಲಿ ಪ್ರಯಾಣ, ಬ್ಯುಸಿನೆಸ್ ಟ್ರಿಪ್, ಉದ್ಯೋಗಕ್ಕೆ ಹೋಗುವುದು, ವೈದ್ಯಕೀಯ ಸೇವೆ, ಶಿಕ್ಷಣ, ಗಿಫ್ಟ್, ದಾನ, ಸಂಬಂಧಿಕರ ಪಾಲನೆ ಇವೇ ಇತ್ಯಾದಿ ಕಾರ್ಯಗಳಿಗೆ ವಿದೇಶಗಳಲ್ಲಿ ಮಾಡುವ ವೆಚ್ಚ ಅಥವಾ ವಿದೇಶಗಳಿಗೆ ಹಣ ಕಳುಹಿಸುವುದು ಇವೆಲ್ಲವೂ ಎಲ್​ಆರ್​ಎಸ್ ಸ್ಕೀಮ್ ಅಡಿಯಲ್ಲಿ ಬರುತ್ತದೆ.

ಇದನ್ನೂ ಓದಿAadhaar-PAN Updates: ಪ್ಯಾನ್ ಆಧಾರ್ ಲಿಂಕ್ ಮಾಡಲು ಜೂನ್ 30 ಕೊನೆಯ ದಿನ; ಡೆಡ್​ಲೈನ್ ವಿಸ್ತರಣೆ ಆಗುತ್ತಾ?

ಇದೀಗ ವರ್ಷಕ್ಕೆ 7 ಲಕ್ಷ ರೂವರೆಗಿನ ವೆಚ್ಚಕ್ಕೆ ಟಿಸಿಎಸ್ ಇರುವುದಿಲ್ಲ. ಅದಕ್ಕೂ ಮೇಲ್ಪಟ್ಟ ವೆಚ್ಚ ಅಥವಾ ಹಣ ವರ್ಗಾವಣೆಗೆ ಶೇ. 20ರಷ್ಟು ತೆರಿಗೆ ಅನ್ವಯ ಆಗುತ್ತದೆ. ಆದರೆ, ಉನ್ನತ ಶಿಕ್ಷಣಕ್ಕಾಗಿ ನೀವು ತೆಗೆದುಕೊಂಡ ಸಾಲ 7 ಲಕ್ಷಕ್ಕಿಂತ ಹೆಚ್ಚು ಇದ್ದರೆ ಶೇ. 0.5ರಷ್ಟು ಮಾತ್ರವೇ ಟಿಸಿಎಸ್ ಅನ್ವಯ ಆಗುತ್ತದೆ. ಇದೆಲ್ಲವೂ ಅಕ್ಟೋಬರ್ 1ರಿಂದ ಅನ್ವಯಕ್ಕೆ ಬರುತ್ತದೆ.

ಕ್ರೆಡಿಟ್ ಕಾರ್ಡ್ ಬಳಕೆಗೆ ಸದ್ಯಕ್ಕೆ ಟಿಸಿಎಸ್ ಇಲ್ಲ

ಈ ಹಿಂದೆ ಕೇಂದ್ರ ಸರ್ಕಾರ ವಿದೇಶಗಳಲ್ಲಿ ಭಾರತೀಯರು ಬಳಸುವ ಅಂತಾರಾಷ್ಟ್ರೀಯ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ವೆಚ್ಚವನ್ನು ಎಲ್​ಆರ್​ಎಸ್ ವ್ಯಾಪ್ತಿಗೆ ತರಲು ನಿರ್ಧರಿಸಿತ್ತು. ಸದ್ಯಕ್ಕೆ ಅದನ್ನು ತಾತ್ಕಾಲಿಕವಾಗಿ ಕೈಬಿಟ್ಟಿದೆ. ವಿದೇಶಗಳಲ್ಲಿರುವ ಬ್ಯಾಂಕುಗಳು ಈ ನಿಯಮಕ್ಕೆ ಬದ್ಧವಾಗಬೇಕಾದ್ದರಿಂದ ಸದ್ಯಕ್ಕೆ ಕ್ರೆಡಿಟ್ ಕಾರ್ಡ್​ಗೆ ಎಲ್​ಆರ್​ಎಸ್ ಅಡಿಯಲ್ಲಿ ಟಿಸಿಎಸ್ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಇದನ್ನು ಜಾರಿಗೊಳಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ