
ನವದೆಹಲಿ, ಡಿಸೆಂಬರ್ 12: ಬ್ಯುಸಿನೆಸ್ಮ್ಯಾನ್ಗಳು ಬಿಡುವಿನ ವೇಳೆಯಲ್ಲಿ ಏನ್ ಮಾಡ್ತಾರೆ? ಸಾಮಾನ್ಯವಾಗಿ ವೀಕೆಂಡ್ ಪ್ರವಾಸ ಹೋಗ್ತಾರೆ, ರಿಸಾರ್ಟ್ಗೆ ಹೋಗ್ತಾರೆ, ಅಥವಾ ಇಂಥವೇ ಯಾವುದಾದರೂ ಮೋಜು ಮಸ್ತಿಯಲ್ಲಿ ತೊಡಗುತ್ತಾರೆ. ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲ (Satya Nadella) ಅವರು ತಮ್ಮ ಬಡುವಿನ ವೇಳೆಯಲ್ಲಿ ಸ್ವಂತವಾಗಿ ಕ್ರಿಕೆಟ್ ಅನಾಲಿಸಿಸ್ ಅಪ್ಲಿಕೇಶನ್ಗೆ ಕೋಡಿಂಗ್ ಬರೆಯುತ್ತಿದ್ದಾರಂತೆ. ಅದೂ ಡೀಪ್ ರಿಸರ್ಚ್ ಎಐ ಬಳಸಿ ಈ ಆ್ಯಪ್ ಅಭಿವೃದ್ಧಿಪಡಿಸುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಸತ್ಯ ನಾದೆಲ್ಲಾ ಅವರು ಭಾರತ ಮೂಲದವರಾದ್ದರಿಂದಲೋ ಏನೋ ಅವರಿಗೆ ಕ್ರಿಕೆಟ್ ಎಂದರೆ ಸಿಕ್ಕಾಪಟ್ಟೆ ಪ್ರೀತಿ. ಭಾರತದ ಅನೇಕ ಕ್ರಿಕೆಟಿಗರು ಅವರಿಗೆ ಫೇವರಿಟ್. ಕ್ರಿಕೆಟ್ ಅಭಿಮಾನಿ ಮಾತ್ರವಲ್ಲ, ಸಕ್ರಿಯವಾಗಿ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಬ್ರಿಟನ್ನ 100 ಬಾಲ್ ಕ್ರಿಕೆಟ್ ಲೀಗ್ನಲ್ಲಿ ಆಡುವ ಲಂಡನ್ ಸ್ಪಿರಿಟ್ ಎನ್ನುವ ತಂಡದ ಶೇ. 49ರಷ್ಟು ಪಾಲುದಾರರು ಅವರು. ಅಮೆರಿಕದ ಎಂಎಲ್ಸಿ ಕ್ರಿಕೆಟ್ ಲೀಗ್ನಲ್ಲಿ ಆಡುವ ಸಿಯಾಟಲ್ ಆರ್ಕಾಸ್ ಎನ್ನುವ ತಂಡದ ಪಾಲುದಾರರೂ ಹೌದು.
ಇದನ್ನೂ ಓದಿ: ಭಾರತದಲ್ಲಿ ಎಐ ಸೌಕರ್ಯ ನಿರ್ಮಾಣಕ್ಕೆ ಮೈಕ್ರೋಸಾಫ್ಟ್ನಿಂದ 1.50 ಲಕ್ಷ ಕೋಟಿ ರೂ ಹೂಡಿಕೆ
ಮೈಕ್ರೋಸಾಫ್ಟ್ ಸಿಇಒ ಅವರಿಗೆ ಕ್ರಿಕೆಟ್ ಮತ್ತು ಕೋಡಿಂಗ್, ಈ ಎರಡು ಸಿ ಎಂದರೆ ಅಚ್ಚುಮೆಚ್ಚು. ಹೀಗಾಗಿ, ಬಿಡುವಿನ ವೇಳೆಯಲ್ಲಿ ಕ್ರಿಕೆಟ್ ವಿಶ್ಲೇಷಣೆ ಮಾಡಬಲ್ಲ ಆ್ಯಪ್ ನಿರ್ಮಿಸಲು ಕೋಡಿಂಗ್ ಬರೆಯುತ್ತಿದ್ದಾರೆ. ಕೃತಕ ಬುದ್ಧಿಮತ್ತೆಯ ರೀಸನಿಂಗ್ ಸಾಮರ್ಥ್ಯ ಬಳಸಿ ಕ್ರಿಕೆಟ್ ಆಟದ ವಿಶ್ಲೇಷಣೆಯನ್ನು ಹೇಗೆ ಮಾಡಬಹುದು ಎಂದು ಅನ್ವೇಷಿಸುವ ಅಥವಾ ಪ್ರಯೋಗ ಮಾಡುವ ಕೆಲಸ ಮಾಡುತ್ತಿದ್ದಾರೆ.
ತಮ್ಮ ತಂಡದ ಪ್ಲಾನಿಂಗ್ ಮತ್ತು ಎಕ್ಸಿಕ್ಯೂಶನ್ಗೆ ಈ ಅಪ್ಲಿಕೇಶನ್ ಎಷ್ಟರಮಟ್ಟಿಗೆ ಸಹಾಯವಾಗಬಲ್ಲುದು ಎಂಬುದು ಅವರಿಗಿರುವ ಆಸಕ್ತಿ ಮತ್ತು ಕುತೂಹಲ. ಬಹುಶಃ, ಇದು ಮುಂದಿನ ದಿನಗಳಲ್ಲಿ ಕ್ರಿಕೆಟ್ ಕ್ಷೇತ್ರಕ್ಕೆ ಎಐ ನೆರವು ಮತ್ತಷ್ಟು ಹೆಚ್ಚಲು ಕಾರಣವಾಗಬಹುದು.
ಇದನ್ನೂ ಓದಿ: ಬೆಂಗಳೂರು, ಚೆನ್ನೈನಲ್ಲಿ ಮೆಗಾಫ್ಯಾಕ್ಟರಿ ನಿರ್ಮಾಣಕ್ಕೆ ಆ್ಯಪಲ್ ಯೋಜನೆ: ವಿ ಅನಂತನಾಗೇಶ್ವರನ್
ಮೈಕ್ರೋಸಾಫ್ಟ್ ಸಿಇಒ ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದರು. ಭಾರತದಲ್ಲಿ ಮುಂದಿನ ಐದು ವರ್ಷದಲ್ಲಿ 17.5 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿರುವುದಾಗಿ ಅವರು ಘೋಷಿಸಿದ್ದರು. ಎಐ ಮತ್ತು ಕ್ಲೌಂಡ್ ಇನ್ಫ್ರಾಸ್ಟ್ರಕ್ಚರ್ ಅಭಿವೃದ್ಧಿಪಡಿಸುವ ವಿವಿಧ ಯೋಜನೆಗಳನ್ನು ಮೈಕ್ರೋಸಾಫ್ಟ್ ಕೈಗೊಳ್ಳಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:30 pm, Fri, 12 December 25