ನವೆಂಬರ್ನಲ್ಲಿ ಹಣದುಬ್ಬರ ಶೇ. 0.71; ಅಕ್ಟೋಬರ್ಗಿಂತ 46 ಮೂಲಾಂಕಗಳಷ್ಟು ಬೆಲೆ ಹೆಚ್ಚಳ
2025 November inflation rate 0.71%: ಅಕ್ಟೋಬರ್ನಲ್ಲಿ ಶೇ. 0.25ಕ್ಕೆ ಕುಸಿದಿದ್ದ ಹಣದುಬ್ಬರ 2025ರ ನವೆಂಬರ್ನಲ್ಲಿ ಶೇ. 0.71ಕ್ಕೆ ಏರಿದೆ. ಆರ್ಬಿಐ ನಿಗದಿ ಮಾಡಿದ ಹಣದುಬ್ಬರ ತಾಳಿಕೆಯ ಮಿತಿಯಾದ ಶೇ. 2ರ ದರಕ್ಕಿಂತ ಕಡಿಮೆಯೇ ಇದೆ. ಅಕ್ಟೋಬರ್ಗೆ ಹೋಲಿಸಿದರೆ ನವೆಂಬರ್ನಲ್ಲಿ ಆಹಾರವಸ್ತುಗಳ ಬೆಲೆ ಹೆಚ್ಚಿರುವುದರಿಂದ ಹಣದುಬ್ಬರವೂ ಹೆಚ್ಚಿದೆ.

ನವದೆಹಲಿ, ಡಿಸೆಂಬರ್ 12: ಭಾರತದಲ್ಲಿ ನವೆಂಬರ್ ತಿಂಗಳ ರೀಟೇಲ್ ಹಣದುಬ್ಬರ (Inflation) ಶೇ. 0.71ರಷ್ಟಿದೆ. ಅಕ್ಟೋಬರ್ ತಿಂಗಳಲ್ಲಿ ಹಣದುಬ್ಬರ ದರ ಶೇ. 0.25ರಷ್ಟಿತ್ತು. ಅದಕ್ಕೆ ಹೋಲಿಸಿದರೆ ನವೆಂಬರ್ನಲ್ಲಿ 46 ಮೂಲಾಂಕಗಳಷ್ಟು ಪ್ರಮಾಣದಲ್ಲಿ ಹಣದುಬ್ಬರ ಹೆಚ್ಚಿದೆ. ಆದರೂ ಕೂಡ ಆರ್ಬಿಐ ನಿಗದಿ ಮಾಡಿಕೊಂಡ ಹಣದುಬ್ಬರ ಗುರಿಗಿಂತ ಒಳಗೆಯೇ ಇದೆ. ಆಹಾರ ಹಣದುಬ್ಬರ ಮೈನಸ್ ಶೇ. 3.91ರಷ್ಟಿದೆ.
ಹಣದುಬ್ಬರದಲ್ಲಿ ಪ್ರಧಾನವಾಗಿರುವ ಆಹಾರ ವಸ್ತುಗಳು ನವೆಂಬರ್ನಲ್ಲಿ ಬೆಲೆ ಕುಸಿತ ಕಂಡಿರುವುದು ಗಮನಾರ್ಹ. ಆದರೆ, ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ನವೆಂಬರ್ನಲ್ಲಿ ಆಹಾರವಸ್ತುಗಳ ಬೆಲೆ ತುಸು ಏರಿಕೆ ಕಂಡಿವೆ. ತರಕಾರಿ, ಮೊಟ್ಟೆ, ಮಾಂಸ, ಮಸಾಲೆ, ಇಂಧನ, ವಿದ್ಯುತ್ ಇತ್ಯಾದಿ ದರಗಳು ತುಸು ಏರಿಕೆ ಕಂಡಿವೆ. ಹೀಗಾಗಿ, ಅಕ್ಟೋಬರ್ಗಿಂತ ನವೆಂಬರ್ನಲ್ಲಿ ಹಣದುಬ್ಬರ ಮೇಲ್ಮಟ್ಟದಲ್ಲಿದೆ.
ಇದನ್ನೂ ಓದಿ: ಭಾರತದ ಮ್ಯೂಚುವಲ್ ಫಂಡ್ಗಳಲ್ಲಿದೆ ಪಾಕ್ ಜಿಡಿಪಿಗಿಂತ ಎರಡು ಪಟ್ಟು ಹೆಚ್ಚು ಹಣ
ಆಹಾರವಸ್ತುಗಳ ಬೆಲೆ ನವೆಂಬರ್ನಲ್ಲಿ ಏರಿಕೆಯಾದರೂ ಒಟ್ಟಾರೆ ಅದು ಡೀಫ್ಲೇಶನ್ ಹಂತದಲ್ಲಿದೆ. ಅಂದರೆ, ಕಳೆದ ವರ್ಷದ ನವೆಂಬರ್ಗೆ ಹೋಲಿಸಿದರೆ ಅವುಗಳ ಬೆಲೆ ಶೇ. 3.91ರಷ್ಟು ಕಡಿಮೆ ಆಗಿದೆ. ಅಕ್ಟೋಬರ್ನಲ್ಲಿ ಇದು ಮೈನಸ್ ಶೇ. 5.02 ಇತ್ತು.
ಇನ್ನು, ಗ್ರಾಮೀಣ ಭಾಗದಲ್ಲಿ ಹಣದುಬ್ಬರ ಅಕ್ಟೋಬರ್ನಲ್ಲಿ ಮೈನಸ್ ಶೇ. 0.25 ಇತ್ತು. ನವೆಂಬರ್ನಲ್ಲಿ ಅದು ಶೇ. 0.10ಕ್ಕೆ ಏರಿದೆ. ಇದೇ ಗ್ರಾಮೀಣ ಭಾಗದಲ್ಲಿ ಆಹಾರ ಹಣದುಬ್ಬರ ಮೈನಸ್ ಶೇ. 4.05 ಇದೆ.
ನಗರ ಭಾಗದಲ್ಲಿ ಅಕ್ಟೋಬರ್ನಲ್ಲಿ ಶೇ. 0.88ರಷ್ಟಿದ್ದ ಹಣದುಬ್ಬರ, ನವೆಂಬರ್ನಲ್ಲಿ ಶೇ. 1.40ಕ್ಕೆ ಏರಿದೆ. ಇಲ್ಲಿ ಆಹಾರ ಹಣದುಬ್ಬರ ಮೈನಸ್ ಶೇ. 5.18ರಿಂದ ಮೈನಸ್ ಶೇ. 3.60ಗೆ ಏರಿದೆ.
ಇದನ್ನೂ ಓದಿ: ಬೆಂಗಳೂರು, ಚೆನ್ನೈನಲ್ಲಿ ಮೆಗಾಫ್ಯಾಕ್ಟರಿ ನಿರ್ಮಾಣಕ್ಕೆ ಆ್ಯಪಲ್ ಯೋಜನೆ: ವಿ ಅನಂತನಾಗೇಶ್ವರನ್
ಈ ವರ್ಷ (2025-26) ಹಣದುಬ್ಬರ ಶೇ. 2ರಷ್ಟಿರಬಹುದು ಎಂದು ಆರ್ಬಿಐ ಎಂಪಿಸಿ ಸಭೆಯಲ್ಲಿ ಅಂದಾಜಿಸಲಾಗಿದೆ. ಒಟ್ಟಾರೆ, ಸರ್ಕಾರವು ಹಣದುಬ್ಬರವನ್ನು ಶೇ. 4ರ ಆಸುಪಾಸಿಗೆ ನಿಲ್ಲಿಸಬೇಕು ಎಂದು ಆರ್ಬಿಐಗೆ ಗುರಿ ಕೊಟ್ಟಿದೆ. ಈ ನಿಟ್ಟಿನಲ್ಲಿ ತಾಳಿಕೆ ಮಿತಿಯಾಗಿ ಶೇ. 2ರಿಂದ ಶೇ. 6 ಅನ್ನು ಆರ್ಬಿಐ ನಿಗದಿ ಮಾಡಿದೆ. ಕಳೆದ ಕೆಲ ತಿಂಗಳಿಂದ ಹಣದುಬ್ಬರವು ಈ ತಾಳಿಕೆಯ ಮಿತಿಗಿಂತ ಕೆಳಗೆಯೇ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




