BH Registration: ಬದಲಾಯ್ತು ಬಿಎಚ್​​ ನೋಂದಣಿ ನಿಯಮ; ಇನ್ನು ಹಳೆಯ ವಾಹನಕ್ಕೂ ಸಿಗಲಿದೆ ಬಿಎಚ್​ ನಂಬರ್ ಪ್ಲೇಟ್

| Updated By: Ganapathi Sharma

Updated on: Dec 16, 2022 | 4:48 PM

ಈ ಹಿಂದೆ ಹೊಸದಾಗಿ ಖರೀದಿಸುವ ವಾಹನಗಳನ್ನು ಮಾತ್ರವೇ ಬಿಎಚ್​ ಸರಣಿ ಅಡಿ ನೋಂದಣಿ ಮಾಡಲು ಅವಕಾಶವಿತ್ತು. ಈಗ ಎಲ್ಲ ವಾಹನಗಳಿಗೂ ಬಿಎಚ್​​ ನೋಂದಣಿ ಮಾಡಲು ಸರ್ಕಾರ ಅವಕಾಶ ಕಲ್ಪಿಸಿದೆ.

BH Registration: ಬದಲಾಯ್ತು ಬಿಎಚ್​​ ನೋಂದಣಿ ನಿಯಮ; ಇನ್ನು ಹಳೆಯ ವಾಹನಕ್ಕೂ ಸಿಗಲಿದೆ ಬಿಎಚ್​ ನಂಬರ್ ಪ್ಲೇಟ್
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಭಾರತ್ ಸರಣಿಯ ನೋಂದಣಿ (BH Registration) ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಎಲ್ಲ ವಾಹನಗಳಿಗೂ ಬಿಎಚ್​​ ನೋಂದಣಿ ಮಾಡಲು ಅವಕಾಶ ಕಲ್ಪಿಸಿದೆ. ಈ ಹಿಂದೆ ಹೊಸದಾಗಿ ಖರೀದಿಸುವ ವಾಹನಗಳನ್ನು ಮಾತ್ರವೇ ಬಿಎಚ್​ ಸರಣಿ ಅಡಿ ನೋಂದಣಿ ಮಾಡಲು ಅವಕಾಶವಿತ್ತು. ಬಿಎಚ್ ನೋಂದಣಿ ನಿಯಮವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಹಲವಾರು ಸಲಹೆಗಳನ್ನು ಸ್ವೀಕರಿಸಲಾಗಿತ್ತು. ಅದರಂತೆ, ಇದೀಗ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ. ಸಾಮಾನ್ಯ ನಿಯಮದಡಿ ನೋಂದಣಿಯಾಗಿರುವ ವಾಹನಗಳನ್ನೂ ಬಿಎಚ್​ಗೆ ವರ್ಗಾಯಿಸಲು ಅವಕಾಶ ನೀಡಲಾಗಿದೆ. ಬಿಎಚ್​​ ನೋಂದಣಿಯ ಅವಶ್ಯಕತೆ ಇರುವವರು ತಮ್ಮ ವಾಹನಗಳ ನೋಂದಣಿಯನ್ನು ಬಿಎಚ್​ಗೆ ವರ್ಗಾಯಿಸಬಹುದು. ಆದರೆ, ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಬಿಎಚ್​ ಸರಣಿಯ ನೋಂದಣಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಲು ನಿಯಮ ‘48’ಕ್ಕೆ ತಿದ್ದುಪಡಿ ತರುವ ಬಗ್ಗೆಯೂ ಸಚಿವಾಲಯ ಪ್ರಸ್ತಾಪಿಸಿದೆ. ವಾಹನ ನೋಂದಣಿಗೆ ಮನೆಯ ಅಥವಾ ಕೆಲಸದ ಸ್ಥಳ ಈ ಎರಡರಲ್ಲಿ ಯಾವುದನ್ನು ಬೇಕಾದರೂ ಆಧಾರದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡುವ ಬಗ್ಗೆ ಪ್ರಸ್ತಾವಿಸಿದೆ. ದುರುಪಯೋಗವನ್ನು ತಡೆಗಟ್ಟುವುದಕ್ಕಾಗಿ ಖಾಸಗಿ ವಲಯದ ಉದ್ಯೋಗಿಗಳು ಕೆಲಸದ ಪ್ರಮಾಣಪತ್ರವನ್ನು ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.

ಇದನ್ನೂ ಓದಿ: Nitin Gadkari: 5 ವರ್ಷಗಳಲ್ಲಿ ಭಾರತದಲ್ಲಿ ಪೆಟ್ರೋಲ್ ಬಳಕೆಗೆ ಇರುವುದಿಲ್ಲ ಎಂದ ನಿತಿನ್ ಗಡ್ಕರಿ

ವಾಹನದ ಮಾಲೀಕತ್ವವನ್ನು ಇತರರಿಗೆ ವರ್ಗಾವಣೆ ಮಾಡುವ ಸಂದರ್ಭದಲ್ಲಿಯೂ ಬಿಎಚ್​​ ಸರಣಿಯಡಿ ನೋಂದಣಿಗೆ ಅವಕಾಶ ನೀಡಲಾಗುವುದು ಎಂದೂ ಪ್ರಕಟಣೆಯಲ್ಲಿ ಹೇಳಲಾಗಿದೆ.

ಏನಿದು ಬಿಎಚ್​ ಸರಣಿಯ ನೋಂದಣಿ?

ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಾಹನಗಳನ್ನು ಒಯ್ಯಬೇಕಾದ ಸಂದರ್ಭ ಬಂದಾಗ ಸಮಸ್ಯೆ ಆಗಬಾರದೆಂಬ ಕಾರಣಕ್ಕೆ ಭಾರತ್ ಸರಣಿ ಅಥವಾ ಬಿಎಚ್​ ಸರಣಿಯ ನೋಂದಣಿ ನಿಯಮವನ್ನು ಕೇಂದ್ರ ಸರ್ಕಾರ ರೂಪಿಸಿತ್ತು. 2021ರ ಆಗಸ್ಟ್​ನಲ್ಲಿ ಬಿಎಚ್​ ಸರಣಿಯ ನೋಂದಣಿಗೆ ನಿಯಮ ರೂಪಿಸಲಾಗಿದ್ದು, ಸೆಪ್ಟೆಂಬರ್​ನಿಂದ ಬಿಎಚ್​ ನಂಬರ್ ಪ್ಲೇಟ್ ನೀಡಲು ಆರಂಭಿಸಿತ್ತು. ಈವರೆಗೆ ಹೊಸದಾಗಿ ಖರೀದಿಸಲ್ಪಡುವ ವಾಹನಗಳಿಗಷ್ಟೇ ಬಿಎಚ್​ ನೋಂದಣಿ ಮಾಡಲಾಗುತ್ತಿತ್ತು. ಹೊಸ ನಿಯಮದಡಿ ನೋಂದಣಿಯಾಗುವ ವಾಹನಗಳನ್ನು ಬೇರೆ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮರು ನೋಂದಣಿ ಮಾಡಬೇಕಾದ ಸಂದರ್ಭ ಬಂದರೆ ಉಚಿತವಾಗಿ ಮಾಡಬಹುದು ಎಂದು ಸರ್ಕಾರ ತಿಳಿಸಿತ್ತು.

ಈವರೆಗೆ ಬಿಎಚ್​ ಸರಣಿಯ ಅಡಿಯಲ್ಲಿ 49,600 ವಾಹನಗಳು ನೋಂದಣಿಯಾಗಿವೆ. ಗರಿಷ್ಠ ನೋಂದಣಿ ಮಹಾರಾಷ್ಟ್ರದಲ್ಲಿ ಆಗಿದ್ದು, ಅಲ್ಲಿ 13,625 ವಾಹನಗಳನ್ನು ನೋಂದಣಿ ಮಾಡಲಾಗಿದೆ. ಉತ್ತರ ಪ್ರದೇಶದಲ್ಲಿ 5,698 ಹಾಗೂ ರಾಜಸ್ಥಾನದಲ್ಲಿ 5,615 ವಾಹನಗಳು ನೋಂದಣಿಯಾಗಿವೆ ಎಂದು ಸಚಿವಾಲಯ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:46 pm, Fri, 16 December 22