ಮಹೀಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) 5ನೇ ಬಾರಿ ಐಪಿಎಲ್ ಚಾಂಪಿಯನ್ ಎನಿಸಿದೆ. ಮೇ 29ರಂದು ಅಹ್ಮದಾಬಾದ್ನಲ್ಲಿ ನಡೆದ ಐಪಿಎಲ್ 2023 ಫೈನಲ್ನಲ್ಲಿ (IPL Final) ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡವನ್ನು ಸಿಎಸ್ಕೆ 5 ವಿಕೆಟ್ಗಳಿಂದ ಮಣಿಸಿತು. ಸಾಧಾರಣ ತಂಡವೇ ಇರಲಿ, ಬಲಿಷ್ಠ ಆಟಗಾರರಿರುವ ತಂಡವೇ ಇರಲಿ ಎಂಎಸ್ ಧೋನಿ ಗರಡಿಯಲ್ಲಿ ಸಿಎಸ್ಕೆ ಐಪಿಎಲ್ನಲ್ಲಿ ಧಮಾಕ ನಡೆಸುವುದನ್ನು ತಪ್ಪಿಸುವುದಿಲ್ಲ. ಅಂಥ ಮ್ಯಾಜಿಕ್ ಮನುಷ್ಯ ಎಂಎಸ್ಡಿ. ಸಿಎಸ್ಕೆ ಒಂದು ಐಪಿಎಲ್ ಫ್ರಾಂಚೈಸಿ ಮಾತ್ರವಲ್ಲ, ಅದೊಂದು ಖಾಸಗಿ ಕಂಪನಿಯಾಗಿದೆ. ಷೇರುಪೇಟೆಯಲ್ಲಿ ಲಿಸ್ಟ್ ಆಗದಿದ್ದರೂ ಅನ್ಲಿಸ್ಟೆಟ್ ಮಾರುಕಟ್ಟೆಯಲ್ಲಿ (Unlisted Market) ಸಿಎಸ್ಕೆ ಮಿಂಚು ಹರಿಸುತ್ತಿರುವುದು ಹೌದು.
ಸಿಎಸ್ಕೆಯ ಮೌಲ್ಯ 9,442 ಕೋಟಿ ರೂ ಎಂದು ಅಂದಾಜು ಮಾಡಲಾಗಿದೆ. ಕಳೆದ 5 ವರ್ಷದಲ್ಲಿ ಸಿಎಸ್ಕೆ ಷೇರುಬೆಲೆ 15 ಪಟ್ಟು ಹೆಚ್ಚಾಗಿದೆ. ಇಂಡಿಯಾ ಸಿಮೆಂಟ್ಸ್ ಒಡೆತನದಲ್ಲಿದ್ದ ಸಿಎಸ್ಕೆ 2018ರಲ್ಲಿ ಡೀಮರ್ಜ್ ಆಯಿತು. ಅಂದರೆ ಇಂಡಿಯಾ ಸಿಮೆಂಟ್ಸ್ನಿಂದ ಸಿಎಸ್ಕೆ ಬೇರ್ಪಟ್ಟಿತು. ಇಂಡಿಯಾ ಸಿಮೆಂಟ್ಸ್ನ ಷೇರುದಾರರಿಗೆ 1:1 ಅನುಪಾತದಲ್ಲಿ ಸಿಎಸ್ಕೆ ಷೇರು ಸಿಕ್ಕಿತು. 2018ರಲ್ಲಿ ಸಿಎಸ್ಕೆ ಪ್ರತ್ಯೇಕಗೊಂಡಾಗ ಅನ್ಲಿಸ್ಟೆಡ್ ಮಾರುಕಟ್ಟೆಯಲ್ಲಿ ಅದರ ಷೇರು ಮೌಲ್ಯ 12ರಿಂದ 15 ರೂ ಇತ್ತು. ಇದೀಗ ಅದರ ಷೇರುಬೆಲೆ ಹತ್ತಿರಹತ್ತಿರ 200 ರೂ ಇದೆ. ಸಿಎಸ್ಕೆ 2023ರ ಐಪಿಎಲ್ ಚಾಂಪಿಯನ್ ಆದ ಬೆನ್ನಲ್ಲೇ ಅದರ ಷೇರುಗಳಿಗೆ ಬೇಡಿಕೆ ಹೆಚ್ಚಿದೆ.
ಇದನ್ನೂ ಓದಿ: MS Dhoni Tears: ಸಿಎಸ್ಕೆ ಗೆಲ್ಲುತ್ತಿದ್ದಂತೆ ಜಡೇಜಾರನ್ನು ಅಪ್ಪಿ ಮೈದಾನದಲ್ಲೇ ಕಣ್ಣೀರಿಟ್ಟ ಎಂಎಸ್ ಧೋನಿ
2021-22ರ ವರ್ಷದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ನ ಒಟ್ಟು ಆದಾಯ 349.14 ಕೋಟಿ ರೂ ಇತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಆದಾಯದಲ್ಲಿ ಶೇ. 38ರಷ್ಟು ಹೆಚ್ಚಳವಾಗಿದೆ. ಆದರೆ, ಅದರ ನಿವ್ವಳ ಆದಾಯ ಮಾತ್ರ ಶೇ. 22ರಷ್ಟು ಕುಸಿದು 32.13 ಕೋಟಿ ರೂ ಮಾತ್ರ ಗಳಿಕೆ ಕಂಡಿದೆ. ಈ ಸೀಸನ್ನಲ್ಲಿ ಆಟಗಾರರಿಗೆ ಮಾಡಿರುವ ವೆಚ್ಚವು ಇದಕ್ಕೆ ಕಾರಣವಿದ್ದಿರಬಹುದು. ತಜ್ಞರ ಪ್ರಕಾರ, ಮುಂದಿನ ದಿನಗಳಲ್ಲಿ ಸಿಎಎಸ್ಕೆ ಆದಾಯ ಹೆಚ್ಚುವ ನಿರೀಕ್ಷೆ ಇದೆ. ಅನ್ಲಿಸ್ಟೆಡ್ ಮಾರುಕಟ್ಟೆಯಲ್ಲಿ ಅದರ ಷೇರು ಬೆಲೆ 300 ರೂ ದಾಟುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಷೇರುಪೇಟೆಯಲ್ಲಿ ಲಿಸ್ಟ್ ಆಗದ, ಇನ್ನೂ ಐಪಿಒಗೆ ತೆರೆದುಕೊಳ್ಳದ ಕಂಪನಿಗಳ ಷೇರುಗಳು ಅನ್ಲಿಸ್ಟೆಡ್ ಮಾರುಕಟ್ಟೆಗಳಲ್ಲಿ ಲಭಿಸುತ್ತವೆ. ಬಿಎಸ್ಇ, ಎನ್ಎಸ್ಇಯಂತೆಯೇ ಇಂತಹ ಖಾಸಗಿ ಮಾರುಕಟ್ಟೆಗಳಲ್ಲೂ ಷೇರುಗಳ ವಹಿವಾಟು ನಡೆಯುತ್ತವೆ. ಖಾಸಗಿ ಕಂಪನಿಯ ಷೇರುಗಳನ್ನು ಆ ಕಂಪನಿಯ ಪ್ರೊಮೋಟರ್ಗಳ ಮುಖಾಂತರವಾಗಿ ಪಡೆಯಬಹುದು. ವಿವಿಧ ಏಜೆನ್ಸಿಗಳ ಮೂಲಕ ಪಡೆಯಬಹುದು.