Zomato: ಪ್ರಾಜೆಕ್ಟ್ ಶೆಲ್ಟರ್; ಡೆಲಿವರಿ ಹುಡುಗರಿಗೆ ವಿಶ್ರಾಂತಿ ಮತ್ತು ರೀಚಾರ್ಜಿಂಗ್ ಸ್ಟೇಷನ್ಸ್; ಜೊಮಾಟೋ ಮಹತ್ವಾಕಾಂಕ್ಷೆ ಯೋಜನೆ
Delivery Partners Medical Support: ಡೆಲ್ಲಿ ಮತ್ತು ಗುರುಗ್ರಾಮ್ನಲ್ಲಿ ಡಯಲ್4242 ಸಹಾಯದಿಂದ 2 ವಾರಗಳ ಹಿಂದೆಯೇ ಮೊಬೈಲ್ ಮೆಡಿಕಲ್ ಯೂನಿಟ್ಗಳನ್ನು ನಿರ್ಮಿಸಲಾಗಿದೆ. ಈ ಎರಡು ವಾರದಲ್ಲಿ 500 ಮಂದಿ ಜೊಮಾಟೋ ಡೆಲಿವರಿ ಪಾರ್ಟ್ನರ್ಗಳು ಸೇವೆ ಪಡೆದುಕೊಂಡಿದ್ದಾರೆ ಎಂದು ಜೊಮಾಟೋ ಸಂಸ್ಥೆ ಹೇಳಿದೆ.

ನವದೆಹಲಿ: ಆನ್ಲೈನ್ ಫುಡ್ ಡೆಲಿವರಿ ಸಂಸ್ಥೆ ಜೊಮಾಟೊ (Zomato) ಇದೀಗ ತನ್ನ ಡೆಲಿವರಿ ಪಾರ್ಟ್ನರ್ಸ್ಗೆ ಮೆಡಿಕಲ್ ಸಪೋರ್ಟ್ ಒದಗಿಸಲು ಡಯಲ್4242 ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಜೊಮಾಟೋ ಡೆಲಿವರಿ ಹುಡುಗರಿಗೆ ವೈದ್ಯಕೀಯ ಸೇವೆ, ಆಂಬುಲೆನ್ಸ್ ಸೇವೆ ಉಚಿತವಾಗಿ ಸಿಗಲಿದೆ. ಮೊಬೈಲ್ ಮೆಡಿಕಲ್ ಯೂನಿಟ್ಗಳ ಮೂಲಕ ಇವರು ವೈದ್ಯಕೀಯ ಸೇವೆ ಪಡೆಯಬಹುದು. ತಮಗೆ ಹತ್ತಿರ ಇರುವ ಸ್ಥಳದಲ್ಲಿ ಈ ಡೆಲಿವರಿ ಸಿಬ್ಬಂದಿ ಉಚಿತವಾಗಿ ಆರೋಗ್ಯ ತಪಾಸಣೆ ಮತ್ತು ಕಣ್ಣು ಪರೀಕ್ಷೆ ನಡೆಸಬಹುದು. ಸದ್ಯಕ್ಕೆ ಮೊಬೈಲ್ ಮೆಡಿಕಲ್ ಯೂನಿಟ್ಗಳು (MMU- Mobile Medical Unit) ಡೆಲ್ಲಿ ಮತ್ತು ಗುರುಗ್ರಾಮ್ ಬಳಿ ಕಾರ್ಯನಿರ್ವಹಿಸುತ್ತಿವೆ. ಈ ಸ್ಕೀಮ್ ಯಶಸ್ವಿಯಾದರೆ, ಅಥವಾ ಪರಿಣಾಮಕಾರಿ ಎನಿಸಿದರೆ ಬೆಂಗಳೂರು ಸೇರಿದಂತೆ ದೇಶಾದ್ಯಂತ ವಿಸ್ತರಣೆ ಆಗಬಹುದು.
‘2023 ಜನವರಿಯಿಂದ ಡಯಲ್4242ನ ಆಂಬುಲೆನ್ಸ್ ಸೇವೆಗಳನ್ನು ಪಡೆಯುತ್ತಿದ್ದೇವೆ. ಈಗ ಮೊಬೈಲ್ ಮೆಡಿಕಲ್ ಯೂನಿಟ್ಗಳ ಸ್ಥಾಪನೆಯೊಂದಿಗೆ ಡಯಲ್4242 ಜೊತೆ ನಮ್ಮ ಸಂಬಂಧ ಇನ್ನಷ್ಟು ಆಳಕ್ಕೆ ಹೋಗಿದೆ. ನಮ್ಮ ಡೆಲಿವರಿ ಪಾರ್ಟ್ನರ್ಸ್ಗೆ ಮುಂಜಾಗ್ರತಾ ಮೆಡಿಕಲ್ ಸಪೋರ್ಟ್ ಕೊಡುವುದು ನಮ್ಮ ಉದ್ದೇಶ’ ಎಂದು ಜೊಮಾಟೊದ ಫುಡ್ ಆರ್ಡರಿಂಗ್ ಮತ್ತು ಡೆಲಿವರಿ ಬ್ಯುಸಿನೆಸ್ನ ಸಿಒಒ ರಿನ್ಶುಲ್ ಚಂದ್ರ ಹೇಳುತ್ತಾರೆ.
ಡೆಲ್ಲಿ ಮತ್ತು ಗುರುಗ್ರಾಮ್ನಲ್ಲಿ ಡಯಲ್4242 ಸಹಾಯದಿಂದ 2 ವಾರಗಳ ಹಿಂದೆಯೇ ಮೊಬೈಲ್ ಮೆಡಿಕಲ್ ಯೂನಿಟ್ಗಳನ್ನು ನಿರ್ಮಿಸಲಾಗಿದೆ. ಈ ಎರಡು ವಾರದಲ್ಲಿ 500 ಮಂದಿ ಜೊಮಾಟೋ ಡೆಲಿವರಿ ಪಾರ್ಟ್ನರ್ಗಳು ಸೇವೆ ಪಡೆದುಕೊಂಡಿದ್ದಾರೆ ಎಂದು ಜೊಮಾಟೋ ಸಂಸ್ಥೆ ಹೇಳಿದೆ.
ಜೊಮಾಟೋದ ಶೆಲ್ಟರ್ ಪ್ರಾಜೆಕ್ಟ್ ಸಾಮಾನ್ಯವಲ್ಲ…
ಜೊಮಾಟೊ ಕಂಪನಿ ಫುಡ್ ಡೆಲಿವರಿಗೆ ಮಾತ್ರ ಸೀಮಿತವಾಗದೇ ತನ್ನ ಸಿಬ್ಬಂದಿಗೆ ಎಲ್ಲಾ ರೀತಿಯ ನೆರವು ಒದಗಿಸುವ ಪ್ರಯತ್ನ ಮಾಡುತ್ತಿರುತ್ತದೆ. ಫುಡ್ ಡೆಲಿವರಿಗೆ ಬೀದಿಗಳಲ್ಲಿ ಹೋಗುವಾಗ ಏನಾದರೂ ಅಪಾಯಗಳಾಗುವ ಸಾಧ್ಯತೆ ಹೆಚ್ಚಿರುವುದರಿಂದ ತುರ್ತು ಸಂದರ್ಭಕ್ಕೆ ಆಂಬುಲೆನ್ಸ್ ಮತ್ತು ಪೊಲೀಸ್ ನೆರವಿಗಾಗಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಸಪೋರ್ಟ್ ಸಿಸ್ಟಂ ಅನ್ನು ಜೊಮಾಟೋ ಹೊಂದಿದೆ.
ಭಾರತದಲ್ಲಿ ಅಸಂಘಟಿತ ಆರ್ಥಿಕ ವಲಯ ಹಾಗುವ ವಿವಿಧ ಕಂಪನಿಗಳ ಡೆಲಿವರಿ ಪಾರ್ಟ್ನರ್ಗಳಿಗೆ ನೆರವು ನೀಡುವಂಥ ಸಾರ್ವಜನಿಕ ಸೌಕರ್ಯ ವ್ಯವಸ್ಥೆಯನ್ನು ತಮ್ಮ ಸಂಸ್ಥೆ ನಿರ್ಮಿಸುತ್ತಿದೆ ಎಂದು ಜೊಮಾಟೋದ ಸ್ಥಾಪಕ ಮತ್ತು ಸಿಇಒ ದೀಪಿಂದರ್ ಗೋಯಲ್ ಇತ್ತೀಚೆಗೆ ಹೇಳಿದ್ದನ್ನು ಈಗ ಸ್ಮರಿಸಬಹುದು. ಅದರಂತೆ ಜೊಮಾಟೋ ‘ದಿ ಶೆಲ್ಟರ್ ಪ್ರಾಜೆಕ್ಟ್’ ಎಂದು ಆರಂಭಿಸುತ್ತಿದೆ. ಡೆಲಿವರಿ ಪಾರ್ಟ್ನರ್ಗಳಿಗಾಗಿ ಅಲ್ಲಲ್ಲಿ ಸ್ಟೇಷನ್ಗಳನ್ನು ನಿರ್ಮಿಸಲಾಗಲಿದ್ದು, ಅದರಲ್ಲಿ ವಿಶ್ರಾಂತಿ ಪಡೆಯಲು, ಕುಡಿಯಲು ನೀರು, ಫೋನ್ ಚಾರ್ಜಿಂಗ್, ವಾಶ್ರೂ, ಇಂಟರ್ನೆಟ್, ಫಸ್ಟ್ ಏಡ್ ಚಿಕಿತ್ಸೆ, 24 ಗಂಟೆ ಹೆಲ್ಪ್ಡೆಸ್ಕ್ ಇತ್ಯಾದಿ ಸೌಲಭ್ಯಗಳಿರಲಿವೆ. ಇದು ಜೊಮಾಟೋಗೆ ಮಾತ್ರವಲ್ಲ ಎಲ್ಲಾ ಡೆಲಿವರಿ ಪ್ಲಾಟ್ಫಾರ್ಮ್ಗಳಲ್ಲಿ ಕೆಲಸ ಮಾಡುವ ಡೆಲಿವರಿ ಹುಡುಗರಿಗೆ ನೀಡಲಾಗುವ ಸೇವೆ ಎಂದೆನ್ನಲಾಗಿದೆ.