Namma Yatri: ಬೆಂಗಳೂರಿನಲ್ಲಿ ನಮ್ಮ ಯಾತ್ರಿ ಮಿಂಚಿನ ಸಂಚಾರ; ಇದು ವಿಶ್ವದ ಮೊದಲ ಪರಿಪೂರ್ಣ ಓಪನ್ ಮೊಬಿಲಿಟಿ ಆ್ಯಪ್

|

Updated on: Mar 17, 2023 | 6:46 PM

World's First Full Open-mobility App: ನಮ್ಮ ಯಾತ್ರಿ ಅಪ್ಲಿಕೇಶನ್ ವಿಶ್ವದ ಮೊದಲ ಪರಿಪೂರ್ಣ ಓಪನ್ ಮೊಬಿಲಿಟಿ ಪ್ಲಾಟ್​ಫಾರ್ಮ್ ಎಂದು ಹೆಸರು ಮಾಡಿದೆ. ಕೆಲವೇ ತಿಂಗಳಲ್ಲಿ 4 ಲಕ್ಷ ಗ್ರಾಹಕರನ್ನು ಸೆಳೆದಿರುವ ಈ ಆ್ಯಪ್​ಗೆ 43,000 ಆಟೊರಿಕ್ಷಾ ಚಾಲಕರು ಜೋಡಿಸಿಕೊಂಡಿದ್ದಾರೆ.

Namma Yatri: ಬೆಂಗಳೂರಿನಲ್ಲಿ ನಮ್ಮ ಯಾತ್ರಿ ಮಿಂಚಿನ ಸಂಚಾರ; ಇದು ವಿಶ್ವದ ಮೊದಲ ಪರಿಪೂರ್ಣ ಓಪನ್ ಮೊಬಿಲಿಟಿ ಆ್ಯಪ್
ಆಟೊರಿಕ್ಷಾ
Follow us on

ಬೆಂಗಳೂರು: ಊಬರ್ ಮತ್ತು ಒಲಾ ಕ್ಯಾಬ್​ಗಳಿಗೆ ಸೆಡ್ಡು ಹೊಡೆಯಲು ರೂಪಿಸಲಾದ ಬೆಂಗಳೂರಿನ ಆಟೊಚಾಲಕರದ್ದೇ ಆದ ನಮ್ಮ ಯಾತ್ರಿ ಅ್ಯಪ್ (Namma Yatri App) ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತಿದೆ. ಮಧ್ಯವರ್ತಿ ಬದಲು ನೇರವಾಗಿ ಗ್ರಾಹಕ ಮತ್ತು ಆಟೊಚಾಲಕರ ಮಧ್ಯೆ ಸೇವೆ ಮತ್ತು ಪಾವತಿ ಎರಡೂ ಕೊಡಲಾಗುತ್ತಿರುವ ವಿಶೇಷ ವ್ಯವಸ್ಥೆಯನ್ನು ನಮ್ಮ ಯಾತ್ರಿ ಒದಗಿಸಿರುವುದು ಬೆಂಗಳೂರಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಓಲಾ ಮತ್ತು ಊಬರ್ ಕ್ಯಾಬ್ ವ್ಯವಸ್ಥೆಗೆ ಬೆಂಗಳೂರು ಒಗ್ಗಿಹೋಗಿದ್ದರೂ ನಮ್ಮ ಯಾತ್ರಿ ಆ್ಯಪ್ 4 ಲಕ್ಷ ಮಂದಿ ಗ್ರಾಹಕರನ್ನು ಪಡೆದಿದೆ. 43,000 ಆಟೊಚಾಲಕರು ಈ ಸೇವೆಗೆ ನೊಂದಾಯಿಸಿಕೊಂಡಿದ್ದಾರೆ.

ನಮ್ಮ ಯಾತ್ರಿ ಪ್ಲಾಟ್​ಫಾರ್ಮ್ ನೀಡಿರುವ ಮಾಹಿತಿ ಪ್ರಕಾರ ಇದು ವಿಶ್ವದ ಮೊದಲ ಪರಿಪೂರ್ಣ ಓಪನ್ ಮೊಬಿಲಿಟಿ (100% Open-Mobility App) ಆ್ಯಪ್ ಆಗಿದೆ. ಇದರಲ್ಲಿ ಆಟೊಚಾಲಕರು ಮತ್ತು ಪ್ರಯಾಣಿಕರ ಮಧ್ಯೆ ನೇರ ಸಂಪರ್ಕ ಇರುತ್ತದೆ. ಕ್ಯಾಬ್ ಅಗ್ರಿಗೇಟರ್ ರೀತಿ ಮಧ್ಯವರ್ತಿ ಎಂಬುದಿರುವುದಿಲ್ಲ. ಗ್ರಾಹಕರು ನೀಡುವ ಪೇಮೆಂಟ್ ನೇರವಾಗಿ ಮತ್ತು ಸಂಪೂರ್ಣವಾಗಿ ಚಾಲಕರಿಗೆ ಸೇರುತ್ತದೆ. ಓಲಾ, ಊಬರ್​ನಂತಹ ಕ್ಯಾಬ್ ಸೇವೆಗಳಲ್ಲಿ ಚಾಲಕರು ಇಂತಿಷ್ಟು ಹಣವನ್ನು ಕಮಿಷನ್ ಆಗಿ ಕ್ಯಾಬ್ ಅಗ್ರಿಗೇಟರ್​ಗೆ ಕೊಡಬೇಕು. ಆದರೆ ನಮ್ಮ ಯಾತ್ರಿಯಲ್ಲಿ ಚಾಲಕರು ಕಮಿಷನ್ ಕೊಡುವುದು ತಪ್ಪುತ್ತದೆ. ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಸೇವೆ ಕೊಡಲು ಇದರಿಂದ ಸಾಧ್ಯವಾಗುತ್ತದೆ. ಚಾಲಕ ಮತ್ತು ಪ್ರಯಾಣಿಕ ಇಬ್ಬರಿಗೂ ಲಾಭ ತರುತ್ತದೆ. ನಮ್ಮ ಯಾತ್ರಿ ಆ್ಯಪ್​ನ ವಿಶೇಷತೆಯೇ ಇದು. ಆಂಡ್ರಾಯ್ಡ್ ಮತ್ತು ಆ್ಯಪಲ್ ಸ್ಟೋರ್​ಗಳಲ್ಲಿ ನಮ್ಮ ಯಾತ್ರಿ ಅ್ಯಪ್​ಗೆ 4.8 ರೇಟಿಂಗ್ ಇದೆ.

ಇದನ್ನೂ ಓದಿTruecaller Office: ಬೆಂಗಳೂರಿಗೆ ಮತ್ತೊಂದು ದೊಡ್ಡ ಕಂಪನಿ; ಉದ್ಯಾನನಗರಿಯಲ್ಲಿ ಟ್ರ್ಯೂಕಾಲರ್​ನ ವಿಶಾಲ ಕಚೇರಿ ಉದ್ಘಾಟನೆ

ನಮ್ಮ ಯಾತ್ರಿ ಹಿಂದಿನ ತಾಂತ್ರಿಕ ಶಕ್ತಿ ನಂದನ್ ನಿಲೇಕಣಿ, JUSPAY

ನಮ್ಮ ಯಾತ್ರಿ ಆ್ಯಪ್ ಅನ್ನು ಬೆಕನ್ ಪ್ರೊಟೊಕಾಲ್​ನಲ್ಲಿ (Beckn Protocol) ರೂಪಿಸಲಾಗಿದೆ. ಇದರ ನಂದನ್ ನಿಲೇಕಣಿ ಅವರ ಬೆಕನ್ ಫೌಂಡೇಶನ್ (Beckn Foundation) ಇದೆ. ಬೆಕನ್ ಫೌಡೇಶನ್ ಸಹಯೋಗದಲ್ಲಿ ಜಸ್​ಪೇ (JUSPAY) ಈ ಆ್ಯಪ್ ಅಭಿವೃದ್ಧಿಪಡಿಸಿದೆ. ಇದೇ ಮಾದರಿಯಲ್ಲಿ ಕೇರಳ ಕೊಚ್ಚಿಯಲ್ಲೂ ಬೆಕನ್ ಫೌಂಡೇಶನ್, ಜಸ್​ಪೇ ಮೊದಲಾದ ವಿವಿಧ ಸಂಸ್ಥೆಗಳು ಸೇರಿ ಓಪನ್ ಮೊಬಿಲಿಟಿ ನೆಟ್ವರ್ಕ್ ಅಭಿವೃದ್ಧಿಪಡಿಸಿವೆ. ಅಲ್ಲಿ ವಿವಿಧ ಸಾರಿಗೆಗಳ ಮೊಬೈಲ್ ಅಪ್ಲಿಕೇಶನ್​ಗಳನ್ನು ಏಕೀಕೃತಗೊಳಿಸಿ ಒಂದೇ ಪ್ಲಾಟ್​ಫಾರ್ಮ್ ಅಡಿಗೆ ತರಲಾಗಿದೆ. ಬೆಂಗಳೂರಿನಲ್ಲೂ ಇಂತಹದ್ದೇ ವ್ಯವಸ್ಥೆ ಮಾಡುವ ಉದ್ದೇಶವಿದೆ. ಸದ್ಯ ಅಟೊಚಾಲಕರ ನಮ್ಮ ಯಾತ್ರಿ ಆ್ಯಪ್ ಮಾತ್ರ ಈ ಪ್ಲಾಟ್​ಫಾರ್ಮ್​ನಲ್ಲಿದೆ. ಮುಂದೆ ಬೇರೆ ಸಾರಿಗೆಗಳ ಸೇವೆ ಇದರಲ್ಲಿ ಸೇರಬಹುದು. ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ.

ಇದೇ ವೇಳೆ, ನಮ್ಮ ಯಾತ್ರಿ ಅಪ್ಲಿಕೇಶನ್ ಬಗ್ಗೆ ಆಟೊರಿಕ್ಷಾ ಚಾಲಕರ ಸಂಘದ (ಎಆರ್​ಡಿಯು) ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಾದ್ಯಂದ ಆಟೊಚಾಲಕರು ನಮ್ಮ ಯಾತ್ರಿಗೆ ಬೆಂಬಲ ನೀಡುತ್ತಿದ್ದಾರೆ. ನಮಗೆ ಇದು ಬಹಳ ನಿರಾಳ ತರುವ ಅನುಭವ. ಚಾಲಕರು ಮತ್ತು ಪ್ರಯಾಣಿಕರಿಗೂ ಖುಷಿಯ ಸಂಗತಿ. ಪ್ರಯಾಣಿಕರ ಜೊತೆ ನಮ್ಮ ಬಾಂಧವ್ಯ ಇನ್ನಷ್ಟು ಗಟ್ಟಿಗೊಂಡಿದೆ ಎಂಬುದು ನಮ್ಮ ಭಾವನೆ ಎಂದು ರುದ್ರಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ