ಷೇರುಗಳ ರೀತಿಯಲ್ಲಿ ಮನೆ ಆಸ್ತಿ ಖರೀದಿಸಿ, ಮಾರಿ; ಬರುತ್ತಿದೆ ಫಿಂಟರ್ನೆಟ್ ಕ್ರಾಂತಿ; ನಂದನ್ ನಿಲೇಕಣಿ ಈ ಮೆಗಾ ಪ್ರಾಜೆಕ್ಟ್ ರೂವಾರಿ

Nandan Nilekani unveils Finternet: ಚಿನ್ನ, ಮನೆ, ನಿವೇಶನ ಇತ್ಯಾದಿ ಭೌತಿಕ ಆಸ್ತಿಗಳನ್ನು ಡಿಜಿಟಲ್ ಟೋಕನ್ ಆಗಿ ಮಾರ್ಪಡಿಸಿ ವಹಿವಾಟು ನಡೆಸುವ ಕಾಲ ಬರುತ್ತಿದೆ. ಕಂಪನಿಯ ಮಾಲಕತ್ವವನ್ನು ವಿವಿಧ ಷೇರುಗಳಾಗಿ ವಿಂಗಡಣೆ ಮಾಡಿದಂತೆ ಭೌತಿಕ ಆಸ್ತಿಯನ್ನು ಡಿಜಿಟಲ್ ಟೋಕನ್​ಗಳಾಗಿ ಮಾಡಲಾಗುತ್ತದೆ. ಆಧಾರ್, ಯುಪಿಐ ಪ್ಲಾಟ್​ಫಾರ್ಮ್​ಗಳ ರೂವಾರಿಯಾದ ನಂದನ್ ನಿಲೇಕಣಿ ಈ ಫಿಂಟರ್ನೆಟ್​ನ ಹಿಂದಿನ ಮಾಸ್ಟರ್​ಮೈಂಡ್ ಎನಿಸಿದ್ದಾರೆ.

ಷೇರುಗಳ ರೀತಿಯಲ್ಲಿ ಮನೆ ಆಸ್ತಿ ಖರೀದಿಸಿ, ಮಾರಿ; ಬರುತ್ತಿದೆ ಫಿಂಟರ್ನೆಟ್ ಕ್ರಾಂತಿ; ನಂದನ್ ನಿಲೇಕಣಿ ಈ ಮೆಗಾ ಪ್ರಾಜೆಕ್ಟ್ ರೂವಾರಿ
ನಂದನ್ ನಿಲೇಕಣಿ

Updated on: Oct 10, 2025 | 1:11 PM

ನವದೆಹಲಿ, ಅಕ್ಟೋಬರ್ 10: ಆಧಾರ್, ಯುಪಿಐನಂತಹ ಶ್ರೇಷ್ಠ ಡಿಜಿಟಲ್ ಇನ್​ಫ್ರಾಸ್ಟ್ರಕ್ಚರ್ ಟೆಕ್ನಾಲಜಿಯನ್ನು ಜಗತ್ತಿಗೆ ಕೊಟ್ಟಿರುವ ನಂದನ್ ನಿಲೇಕಣಿ ಇದೀಗ ಫಿಂಟರ್ನೆಟ್ (Fintenet) ಎಂಬ ಹೊಸ ಡಿಜಿಟಲ್ ಫೈನಾನ್ಷಿಯಲ್ ನೆಟ್ವರ್ಕ್ ಅನ್ನು ಅನಾವರಣಗೊಳಿಸಿದ್ದಾರೆ. ಇದು ಅವರ ಅತ್ಯಂತ ಮಹತ್ವಾಕಾಂಕ್ಷಿ ಪ್ರಾಜೆಕ್ಟ್ ಆಗಿದ್ದು, ಭಾರತದ ಡಿಜಿಟಲ್ ಆರ್ಥಿಕತೆಯ ಸ್ವರೂಪವನ್ನೇ ಬದಲಿಸುವ ಸಾಮರ್ಥ್ಯ ಹೊಂದಿದೆ. ಮನೆ, ಚಿನ್ನ, ಹಣ ಇತ್ಯಾದಿ ಆಸ್ತಿಯನ್ನು ಡಿಜಿಟಲ್ ಆಗಿ ರವಾನೆ ಮಾಡಲು ಸಾಧ್ಯವಾಗಿಸುವಂತಹ ಒಂದು ವಿನೂತನ ಟೆಕ್ನಾಲಜಿ ಇದು.

ನಂದನ್ ನಿಲೇಕಣಿ ಇಂಥದ್ದೊಂದು ಕ್ರಾಂತಿ ಬಗ್ಗೆ ಒಂದೆರಡು ವರ್ಷದ ಹಿಂದೆಯೇ ಮಾತನಾಡಿದ್ದರು. ಷೇರುಗಳ ರೀತಿ ನಿವೇಶನಗಳನ್ನು ಖರೀದಿಸುವುದು, ಮಾರುವುದು ಮಾಡಬಹುದು ಎಂದು ಅವರು ತಮ್ಮ ಮಹತ್ವಾಕಾಂಕ್ಷಿ ಪ್ರಾಜೆಕ್ಟ್ ಬಗ್ಗೆ ಸುಳಿವು ನೀಡಿದ್ದರು. ಬ್ಯಾಂಕ್ ಆಫ್ ಇಂಟರ್​ನ್ಯಾಷನಲ್ ಸೆಟಲ್ಮೆಂಟ್ಸ್ ಸಹಯೋಗದಲ್ಲಿ ಫಿಂಟರ್ನೆಟ್ ಎನ್ನುವ ನೆಟ್ವರ್ಕ್ ಅನ್ನು ಅಭಿವೃದ್ಧಿಪಡಿಸಲಾಗಿದೆ. 2023ರಲ್ಲಿ ಇದರ ಕಾನ್ಸೆಪ್ಟ್ ಮೊದಲು ಪ್ರಸ್ತಾಪವಾಗಿದ್ದು. ಆಗಸ್ಟಿನ್ ಕಾರ್ಸ್ಟನ್ಸ್, ಸಿದ್ಧಾರ್ಥ್ ಶೆಟ್ಟಿ ಮತ್ತು ಡಾ. ಪ್ರಮೋದ್ ವರ್ಮಾ ಅವರು ಸೇರಿ ಇದನ್ನು ಅಭಿವೃದ್ಧಿಪಡಿಸಿದ್ದಾರೆ. ಕನ್ನಡಿಗ ಸಿದ್ಧಾರ್ಥ್ ಶೆಟ್ಟಿ ಪ್ರಸಕ್ತ ಫಿಂಟರ್ನೆಟ್​ನ ಸಿಇಒ ಆಗಿದ್ದಾರೆ.

ಇದನ್ನೂ ಓದಿ: ಜಗತ್ತಿನಲ್ಲಿ ಎಲ್ಲರೂ ಸಾಲಗಾರರೇ; ಹಾಗಾದ್ರೆ ಸಾಲ ಕೊಡೋರಾರು? ಪತನದತ್ತ ಹೋಗುತ್ತಿದೆಯಾ ಜಾಗತಿಕ ಆರ್ಥಿಕತೆ?

ಆಸ್ತಿ ಮಾರಾಟ ಬಹಳ ಸುಲಭ

ಫಿಂಟರ್ನೆಟ್ ಒಂದು ಜಾಗತಿಕ ಹಣಕಾಸು ತಂತ್ರಜ್ಞಾನ ನೆಟ್ವರ್ಕ್ ಆಗಿದೆ. ಕ್ರಿಪ್ಟೋಕರೆನ್ಸಿಗೆ ಬಳಸುವ ಬ್ಲಾಕ್​ಚೈನ್ ಮತ್ತು ಓಪನ್ ಆರ್ಕಿಟೆಕ್ಚರ್ ಮೇಲೆ ಫಿಂಟರ್ನೆಟ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಭೂಮಿ, ಚಿನ್ನ, ಬಾಂಡ್ ಇತ್ಯಾದಿ ಭೌತಿಕ ಮತ್ತು ಹಣಕಾಸು ಆಸ್ತಿಗಳನ್ನು ಡಿಜಿಟಲ್ ಟೋಕನ್​ಗಳಾಗಿ ಮಾರ್ಪಡಿಸುತ್ತದೆ. ಹಣದ ವಹಿವಾಟು ಮಾಡುವ ರೀತಿಯಲ್ಲಿ ಈ ಟೋಕನ್​ಗಳನ್ನು ಖರೀದಿಸುವುದೋ ಅಥವಾ ಮಾರುವುದೋ ಮಾಡಬಹುದು.

ಸಾಂಪ್ರದಾಯಿಕ ಬ್ಯಾಂಕಿಂಗ್ ಮತ್ತು ಕ್ರಿಪ್ಟೋ ಟೆಕ್ನಾಲಜಿ ಮೇಳೈಸಿರುವ ಫಿಂಟರ್ನೆಟ್ ಅನ್ನು ಸರ್ಕಾರಗಳು ಮತ್ತು ಕಾನೂನು ಕಟ್ಟಳೆಗಳ ಅಡಿಯಲ್ಲೇ ನಿರ್ಮಿಸಲಾಗಿದೆ. ಪ್ರತಿಯೊಂದು ಡಿಜಿಟಲ್ ಟೋಕನ್ ಕೂಡ ಆ ಆಸ್ತಿಯ ಮಾಲಿಕತ್ವ, ನಿಯಮ ಇತ್ಯಾದಿ ಸಂಗತಿಯನ್ನು ರೆಕಾರ್ಡ್ ಮಾಡಿರುತ್ತದೆ. ಹೀಗಾಗಿ, ಆಸ್ತಿಯ ಮಾಲಕತ್ವದಲ್ಲಿ ಯಾವ ಗೊಂದಲವೂ ಉಳಿಯುವುದಿಲ್ಲ.

ಇದನ್ನೂ ಓದಿ: ಬ್ರಿಟನ್​ನ ಮಾರ್ಟ್​ಲೆಟ್ ಮಿಸೈಲ್ ಪಡೆಯಲಿದೆ ಭಾರತ; 350 ಮಿಲಿಯನ್ ಪೌಂಡ್ ಮೊತ್ತಕ್ಕೆ ಡೀಲ್

ಷೇರುಗಳ ರೀತಿ ಆಸ್ತಿ ಖರೀದಿಸಿ, ಮಾರಬಹುದು….

ಫಿಂಟರ್ನೆಟ್ ಮೂಲಕ ನೀವು ಯಾವುದೇ ಆಸ್ತಿಯನ್ನು ಸುಲಭವಾಗಿ ಖರೀದಿಸಲು ಅವಕಾಶ ಇರುತ್ತದೆ. ಪ್ರಸಕ್ತ ನೀವು ಬೆಂಗಳೂರಿನಲ್ಲಿ ನಿವೇಶನ ಹೊಂದಿದ್ದರೆ ಅದನ್ನು ಮಾರಲು ಸಾಕಷ್ಟು ಹೆಣಗಬೇಕಾಗುತ್ತದೆ. ಆದರೆ ಫಿಂಟರ್ನೆಟ್ ಈ ಕಾರ್ಯವನ್ನು ಸುಲಭ ಮಾಡುತ್ತದೆ. ನಿಮ್ಮ ನಿವೇಶನವನ್ನು ಹಲವು ಡಿಜಿಟಲ್ ಟೋಕನ್​ಗಳಾಗಿ ಮಾರ್ಪಡಿಸುತ್ತದೆ. ನೀವು ಈ ಟೋಕನ್​ಗಳನ್ನು ಷೇರುಗಳ ರೀತಿ ಎಷ್ಟು ಬೇಕಾದರೂ ಮಾರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ