AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವದ ಐದು ಅತಿಪುರಾತನ ಕಂಪನಿಗಳು ಒಂದೇ ದೇಶದಲ್ಲಿ… ಭಾರತದ ಅತಿಹಳೆಯ 10 ಕಂಪನಿಗಳ ಪಟ್ಟಿ

World's oldest surviving companies: ಸಾವಿರಕ್ಕೂ ಹೆಚ್ಚು ವರ್ಷಗಳಿಂದ ಅಸ್ತಿತ್ವದಲ್ಲಿರುವ ಹಲವು ಕಂಪನಿಗಳು ವಿಶ್ವದಲ್ಲಿ ಇವೆ. ಈ ಪೈಕಿ 5 ಅತ್ಯಂತ ಹಳೆಯ ಕಂಪನಿಗಳು ಜಪಾನ್​ನಲ್ಲಿವೆ. ವಿಶ್ವದ 10 ಅತ್ಯಂತ ಹಳೆಯ ಕಂಪನಿಗಳ ಪಟ್ಟಿಯಲ್ಲಿ ಆರು ಕಂಪನಿಗಳು ಜಪಾನ್​ನದ್ದಾಗಿವೆ. ವಿಶ್ವದ ಹತ್ತು ಅತ್ಯಂತ ಹಳೆಯ ಕಂಪನಿಗಳಲ್ಲಿ ಆರು ಜಪಾನ್ ದೇಶದ್ದೇ ಆಗಿವೆ. ಭಾರತದಲ್ಲಿ 18ನೇ ಶತಮಾನದಲ್ಲೇ ಸ್ಥಾಪನೆಯಾಗಿ ಈಗಲೂ ಜೀವಂತ ಇರುವ ಕೆಲ ಕಂಪನಿಗಳಿವೆ.

ವಿಶ್ವದ ಐದು ಅತಿಪುರಾತನ ಕಂಪನಿಗಳು ಒಂದೇ ದೇಶದಲ್ಲಿ... ಭಾರತದ ಅತಿಹಳೆಯ 10 ಕಂಪನಿಗಳ ಪಟ್ಟಿ
ವಿಶ್ವದ ಹಳೆಯ ಕಂಪನಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Oct 10, 2025 | 6:41 PM

Share

ನವದೆಹಲಿ, ಅಕ್ಟೋಬರ್ 10: ಒಂದು ಸಾಮ್ರಾಜ್ಯ ಕಟ್ಟುವುದು ಎಷ್ಟು ಕಷ್ಟವೋ ಅದನ್ನು ಸುದೀರ್ಘ ಕಾಲ ಮುಂದುವರಿಸಿಕೊಂಡು ಹೋಗುವುದು ಅಷ್ಟೇ ಕಷ್ಟ. ಜಗತ್ತಿನ ಹೆಚ್ಚಿನ ಸಾಮ್ರಾಜ್ಯಗಳು ಮೂರ್ನಾಲ್ಕು ಶತಮಾನ ಉಳಿದದ್ದೇ ಹೆಚ್ಚು. ಬ್ಯುಸಿನೆಸ್ ಸಾಮ್ರಾಜ್ಯಗಳೂ ಅಷ್ಟೇ, ಬಹಳ ಕಾಲ ಉಳಿಯುವುದಿಲ್ಲ. ಈಗಿರುವ ಕಂಪನಿಗಳ ಪೈಕಿ ಅತಿ ಹೆಚ್ಚು ಕಾಲದಿಂದ ಇರುವಂಥವು ಎಷ್ಟಿವೆ ಎಂದು ನೋಡಿದಾಗ ಅಚ್ಚರಿ ಹುಟ್ಟಿಸುವ ಸಂಗತಿ ಬೆಳಕಿಗೆ ಬರುತ್ತದೆ. ಜಗತ್ತಿನ ಐದು ಅತ್ಯಂತ ಹಳೆಯ ಕಂಪನಿಗಳೆಲ್ಲವೂ (Oldest surviving companies) ಜಪಾನ್ ದೇಶದವೇ ಆಗಿವೆ. ಈ ಕಂಪನಿಗಳು 13ರಿಂದ 15 ಶತಮಾನಗಳಷ್ಟು ಹಿಂದಿನಿಂದಲೂ ಅಸ್ತಿತ್ವದಲ್ಲಿವೆ.

1. ಕಾಂಗೋ ಗುಮಿ ವಿಶ್ವದ ಅತ್ಯಂತ ಹಳೆಯ ಕಂಪನಿ (ಕ್ರಿ.ಶ. 578)

ಕ್ರಿ.ಶ. 578ರಲ್ಲಿ (6ನೇ ಶತಮಾನ) ಜಪಾನ್​ನ ಒಸಾಕ ಪಟ್ಟಣದಲ್ಲಿ ಸ್ಥಾಪನೆಯಾದ ಕಾಂಗೋ ಗುಮಿ (Kongo Gumi) ಈಗಲೂ ಜೀವಂತ ಇರುವ ವಿಶ್ವದ ಅತ್ಯಂತ ಹಳೆಯ ಕಂಪನಿ ಎನಿಸಿದೆ. ಕಟ್ಟಡ ನಿರ್ಮಾಣ ಮಾಡುವ ಈ ಕಂಪನಿಯು ಬೌದ್ಧ ಮಂದಿರ ವಾಸ್ತುಶಿಲ್ಪದಲ್ಲಿ ಪರಿಣಿತಿ ಹೊಂದಿದೆ. ಸದ್ಯ ಇದು ಸಂಪೂರ್ಣ ಸ್ವತಂತ್ರವಾಗಿ ಅಸ್ತಿತ್ವದಲ್ಲಿಲ್ಲ. 2006ರಲ್ಲಿ ಟಕಮಟ್ಸು ಕನ್ಸ್​ಟ್ರಕ್ಷನ್ ಗ್ರೂಪ್​ನ ಅಂಗಸಂಸ್ಥೆಯಾಗಿ ಮಾರಲ್ಪಟ್ಟಿದೆ.

2. ನಿಶಿಯಾಮ ಒನ್ಸೆನ್ ಕೇಯುಂಕನ್ (ಕ್ರಿ.ಶ. 705)

ಜಪಾನ್​ನ ಯಮನಶಿಯಲ್ಲಿರುವ ನಿಶಿಯಮ ಆನ್ಸೆನ್ ಕೇಯುಂಕನ್ (Nishiyama Onsen Keiunkan) ವಿಶ್ವದ ಎರಡನೇ ಅತಿಹಳೆಯ ಕಂಪನಿ. ಇದು ವಿಶ್ವದ ಅತ್ಯಂತ ಹಳೆಯ ಹೋಟೆಲ್ ಕೂಡ ಹೌದು. ಕ್ರಿ.ಶ. 705ರಲ್ಲಿ ಶುರುವಾದ ಈ ಹೋಟೆಲ್ ಒಂದೇ ಕುಟುಂಬದ 52 ತಲೆಮಾರಿನವರು ನಡೆಸಿಕೊಂಡು ಬಂದಿದ್ದರು. 2017ರಲ್ಲಿ ಮೊದಲ ಬಾರಿಗೆ ಆ ಕುಟುಂಬಕ್ಕೆ ಸೇರದ ವ್ಯಕ್ತಿಯೊಬ್ಬರು ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ. ಆದರೂ ಕೂಡ ಇದು ಅಸ್ತಿತ್ವದಲ್ಲಿ ಇರುವುದು ಗಮನಾರ್ಹ.

3. ಸೆನ್ನೆನ್ ನೋ ಯು ಕೊಮನ್ (ಕ್ರಿ.ಶ. 717)

ಜಪಾನ್​ನ ಕಿನೋಸಾಕಿಯಲ್ಲಿರುವ ಸೆನ್ನೆನ್ ನೊ ಯು ಕೊಮನ್ (Sennen no Yu Koman) 717ರಲ್ಲಿ ಸ್ಥಾಪನೆಯಾದ ಹೋಟೆಲ್. ವಿಶ್ವದ ಮೂರನೇ ಅತಿಹಳೆಯ ಉದ್ಯಮ ಹಾಗೂ ಎರಡನೇ ಅತ್ಯಂತ ಪುರಾತನ ಹೋಟೆಲ್.

4. ಹೋಶಿ ರಯೋಕನ್ (ಕ್ರಿ.ಶ. 718)

ಜಪಾನ್​ನ ಅವಝು ಆನ್ಸೆನ್​ನಲ್ಲಿ ಕ್ರಿ.ಶ. 718ರಲ್ಲಿ ಜನ್ಮತಳೆದ ಹೋಟೆಲ್ ಹೋಶಿ ರಯೋಕನ್ (Hoshi Ryokan). ತಲೆಮಾರುಗಳು ಕಳೆದರೂ ಒಂದೇ ಕುಟುಂಬದವರು ಇದನ್ನು ನಡೆಸಿಕೊಂಡು ಬಂದಿದ್ದಾರೆ.

ಇದನ್ನೂ ಓದಿ: ಷೇರುಗಳ ರೀತಿಯಲ್ಲಿ ಮನೆ ಆಸ್ತಿ ಖರೀದಿಸಿ, ಮಾರಿ; ಬರುತ್ತಿದೆ ಫಿಂಟರ್ನೆಟ್ ಕ್ರಾಂತಿ; ನಂದನ್ ನಿಲೇಕಣಿ ಈ ಮೆಗಾ ಪ್ರಾಜೆಕ್ಟ್ ರೂವಾರಿ

ಇತರ ಟಾಪ್-10 ಅತ್ಯಂತ ಹಳೆಯ ಬ್ಯುಸಿನೆಸ್​ಗಳು

  • ಗೆಂಡಾ ಶಿಗ್ಯೋ, ಜಪಾನ್: ಕ್ರಿ.ಶ. 771ರಲ್ಲಿ ಸ್ಥಾಪನೆ. ಕಾಗದ ಉತ್ಪನ್ನಗಳನ್ನು ತಯಾರಿಸುವ ಕಂಪನಿ.
  • ಸೇಂಟ್ ಪೀಟರ್ ಸ್ಟಿಫ್ಸುಕುಲಿನೇರಿಯಂ, ಆಸ್ಟ್ರಿಯಾ: ಕ್ರಿ.ಶ. 803ರಲ್ಲಿ ಸ್ಥಾಪನೆ. ಇದು ಯೂರೋಪ್​ನ ಅತ್ಯಂತ ಹಳೆಯ ಹೋಟೆಲ್.
  • ಸ್ಟಾಫೆಲ್ಟರ್ ಹಾಫ್, ಜರ್ಮನಿ: ಕ್ರಿ.ಶ. 862ರಲ್ಲಿ ಸ್ಥಾಪನೆ. ಇದು ಮದ್ಯ ತಯಾರಿಸುವ ಕಂಪನಿ.
  • ಮಾನ್ನೇ ಡೀ ಪ್ಯಾರಿಸ್, ಫ್ರಾನ್ಸ್: ಕ್ರಿ.ಶ. 864ರಲ್ಲಿ ಸ್ಥಾಪನೆಯಾದ ಇದು ನಾಣ್ಯ, ಕರೆನ್ಸಿಗಳನ್ನು ಮುದ್ರಿಸುವ ಕಂಪನಿ.
  • ಟನಕ ಇಗಾ, ಜಪಾನ್: ಕ್ರಿ.ಶ. 885ರಲ್ಲಿ ಸ್ಥಾಪನೆ. ಇದು ಬೌದ್ಧ ಧಾರ್ಮಿಕ ಸರಕುಗಳನ್ನು ತಯಾರಿಸುತ್ತದೆ.
  • ರಾಯಲ್ ಮಿಂಟ್, ಬ್ರಿಟನ್: ಕ್ರಿ.ಶ. 886ರಲ್ಲಿ ಸ್ಥಾಪನೆ. ಇದೂ ಕೂಡ ನಾಣ್ಯ, ಕರೆನ್ಸಿಗಳನ್ನು ಮುದ್ರಿಸುತ್ತದೆ.

ಅತ್ಯಂತ ಹಳೆಯ ಕಂಪನಿಗಳು ಹೆಚ್ಚಾಗಿ ಜಪಾನ್​ನದ್ದಾಗಿರುವುದು ಯಾಕೆ?

ಬಹಳ ವರ್ಷ ಕಾಲ ನಡೆಯುವ ಬ್ಯುಸಿನೆಸ್​ಗಳು ಸಾಮಾನ್ಯವಾಗಿ ಫ್ಯಾಮಿಲಿ ಬ್ಯುಸಿನೆಸ್​ಗಳೇ. ಜಪಾನ್​ನಲ್ಲಿ ಮೊದಲಿಂದಲೂ ಫ್ಯಾಮಿಲಿ ಬ್ಯುಸಿನೆಸ್​ಗಳೇ ಹೆಚ್ಚಾಗಿವೆ. ಭಾರತದಲ್ಲಿ ನೇಕಾರರು, ಕುಂಬಾರರು ಇತ್ಯಾದಿ ಜನರು ತಲೆತಲೆಮಾರುಗಳಿಂದ ಅದೇ ಕಸುಬು ಮಾಡಿಕೊಂಡು ಬಂದ ರೀತಿಯಲ್ಲಿ ಜಪಾನ್​ನಲ್ಲೂ ಫ್ಯಾಮಿಲಿ ಬ್ಯುಸಿನೆಸ್ ಹೆಚ್ಚಿದೆ. ಹೀಗಾಗಿ, ತಲೆಮಾರಿನಿಂದ ತಲೆಮಾರಿಗೆ ಇದು ಸುಲಭವಾಗ ವರ್ಗಾವಣೆ ಆಗುತ್ತಾ ಬಂದಿದೆ. ಯೂರೋಪ್​ನಲ್ಲೂ ಇಂಥ ಪ್ರವೃತ್ತಿಯನ್ನು ಕಾಣಬಹುದು.

ಇದನ್ನೂ ಓದಿ: ಜಗತ್ತಿನಲ್ಲಿ ಎಲ್ಲರೂ ಸಾಲಗಾರರೇ; ಹಾಗಾದ್ರೆ ಸಾಲ ಕೊಡೋರಾರು? ಪತನದತ್ತ ಹೋಗುತ್ತಿದೆಯಾ ಜಾಗತಿಕ ಆರ್ಥಿಕತೆ?

ಭಾರತದ ಅತ್ಯಂತ ಹಳೆಯ ಕಂಪನಿಗಳು

  1. ವಾಡಿಯಾ ಗ್ರೂಪ್, ಕ್ರಿ.ಶ. 1736 (ಹಡಗು ನಿರ್ಮಾಣ)
  2. ಕಾಕ್ಸ್ ಅಂಡ್ ಕಿಂಗ್ಸ್, ಕ್ರಿ.ಶ. 1758: ಟ್ರಾವಲ್ ಕಂಪನಿ.
  3. ಫೋರ್ಬ್ಸ್ ಅಂಡ್ ಕಂಪನಿ, 1767: ಟ್ರೇಡಿಂಗ್.
  4. ಇಐಡಿ ಪ್ಯಾರಿಸ್, 1788: ಸಕ್ಕರೆ ಉದ್ಯಮ
  5. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ, 1806: ಬ್ಯಾಂಕು
  6. ಆರ್​ಪಿಜಿ ಗ್ರೂಪ್, 1820: ಟ್ರೇಡಿಂಗ್ ಮತ್ತು ಕೈಗಾರಿಕೆ
  7. ಟಾಟಾ ಗ್ರೂಪ್, 1868: ವಿವಿಧ ಉದ್ಯಮಗಳು
  8. ಬಾಂಬೆ ಬರ್ಮಾ ಟ್ರೇಡಿಂಗ್ ಕಾರ್ಪೊರೇಶನ್, 1863: ಟ್ರೇಡಿಂಗ್ ಕಂಪನಿ.
  9. ಡಾಬರ್, 1884: ಆಯುರ್ವೇದ ಉತ್ಪನ್ನಗಳು
  10. ಗೋದ್ರೇಜ್ ಗ್ರೂಪ್, 1897: ಬೀಗದಿಂದ ಹಿಡಿದು ವಿವಿಧ ಸರಕುಗಳ ತಯಾರಿಸುವ ಕಂಪನಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:20 pm, Fri, 10 October 25