
ಬೆಂಗಳೂರು, ಅಕ್ಟೋಬರ್ 11: ಡಾ. ದೇವಿಶೆಟ್ಟಿ ಮಾಲಕತ್ವದ ನಾರಾಯಣ ಹೃದಯಾಲಯ (Narayana Hrudayalaya) ಸಂಸ್ಥೆಯು ಬ್ರಿಟನ್ನ ದೊಡ್ಡ ಆಸ್ಪತ್ರೆ ಸಮೂಹವೊಂದನ್ನು ಖರೀದಿಸಿದೆ. ಯುಕೆ ರಾಷ್ಟ್ರದ ಆರನೇ ಅತಿದೊಡ್ಡ ಹಾಸ್ಪಿಟಲ್ ಚೈನ್ ಎನಿಸಿರುವ ಪ್ರಾಕ್ಟಿಸ್ ಪ್ಲಸ್ ಗ್ರೂಪ್ ಹಾಸ್ಪಿಟಲ್ಸ್ (Practice Plus Group Hospitals) ಅನ್ನು ನಾರಾಯಣ ಹೃದಯಾಲಯವು 188.78 ಮಿಲಿಯನ್ ಪೌಂಡ್ಗೆ ಖರೀದಿಸಿದೆ. 188.78 ಮಿಲಿಯನ್ ಪೌಂಡ್ ಎಂದರೆ ಸುಮಾರು 2,200 ಕೋಟಿ ರೂ ಆಗುತ್ತದೆ. ಖರೀದಿಸಲಾಗಿರುವ ಈ ಸಂಗತಿಯನ್ನು ಸ್ವತಃ ನಾರಾಯಣ ಹೃದಯಾಲಯ ಸಂಸ್ಥೆಯೇ ಹೇಳಿಕೆ ಮೂಲಕ ಖಚಿತಪಡಿಸಿದೆ.
ನಾರಾಯಣ ಹೃದಯಾಲಯಕ್ಕೆ ಸೇರಿದ ನಾರಾಯಣ ಹೆಲ್ತ್ ನೆಟ್ವರ್ಕ್ನ ಭಾಗವಾಗಿರುವ ಹೆಲ್ತ್ ಸಿಟಿ ಕೇಮ್ಯಾನ್ ಐಲೆಂಡ್ಸ್ನ ಅಂಗಸಂಸ್ಥೆಯಾದ ನಾರಾಯಣ ಹೃದಯಾಲಯ ಯುಕೆ ಲಿಮಿಟೆಡ್ ವತಿಯಿಂದ ಈ ಖರೀದಿ ಮಾಡಲಾಗಿದೆ. ಪ್ರಾಕ್ಟೀಸ್ ಪ್ಲಸ್ ಗ್ರೂಪ್ ಹಾಸ್ಪಿಟಲ್ಸ್ನ ಎಲ್ಲಾ ನೂರಕ್ಕೆ ನೂರು ಈಕ್ವಿಟಿ ಷೇರುಗಳನ್ನು ಖರೀದಿಸಲಾಗಿದೆ. ನಾರಾಯಣ ಹೃದಯಾಲಯವು ಬಿಎಸ್ಇಗೆ ಸಲ್ಲಿಸಿದ ಫೈಲಿಂಗ್ನಲ್ಲಿ ಈ ವಿಚಾರವನ್ನು ತಿಳಿಸಿದೆ.
ಇದನ್ನೂ ಓದಿ: 24 ಕ್ಯಾರಟ್ ಚಿನ್ನದ ಮೇಲೆ ಸಿಕ್ಕಾಪಟ್ಟೆ ಹರಿದುಬಂದ ಹೂಡಿಕೆ; ಚಿನ್ನದ ಬೆಲೆ ಇಷ್ಟೊಂದು ಏರಲು ಇದಪ್ಪಾ ಕಾರಣ..!
ಪ್ರಾಕ್ಟೀಸ್ ಪ್ಲಸ್ ಗ್ರೂಪ್ ಹಾಸ್ಪಿಟಲಲ್ಸ್ ಸಂಸ್ಥೆಯು ಬ್ರಿಡ್ಜ್ಪಾಯಿಂಟ್ ಎನ್ನುವ ಹೂಡಿಕೆದಾರರ ಒಡೆತನದಲ್ಲಿ ಇತ್ತು. ಯುಕೆ ರಾಷ್ಟ್ರದ ಐದನೇ ಅತಿದೊಡ್ಡ ಖಾಸಗಿ ಪ್ರೈವೇಟ್ ಆಸ್ಪತ್ರೆ ಎನಿಸಿದೆ. ಈ ಗ್ರೂಪ್ನಲ್ಲಿ ಒಟ್ಟು ಏಳು ಆಸ್ಪತ್ರೆಗಳು, ಮೂರು ಸರ್ಜಿಕಲ್ ಸೆಂಟರ್ಗಳು, ಎರಡು ತುರ್ತು ಚಿಕಿತ್ಸಾ ಘಟಕಗಳು, ಹಲವು ತಪಾಸಣಾ ಮತ್ತು ಆಫ್ತಲ್ಮಾಲಜಿ ಸೆಂಟರ್ಗಲು ಇವೆ. ಒಟ್ಟಾರೆ 330 ಬೆಡ್ಗಳು ಇದ್ದು, 2,500 ಸಿಬ್ಬಂದಿ ಹಾಗೂ 1,300 ಕ್ಲಿನಿಕಲ್ ಪ್ರೊಫೆಷನಲ್ಗಳು ಕೆಲಸ ಮಾಡುತ್ತಾರೆ. ವರ್ಷಕ್ಕೆ 80,000 ಶಸ್ತ್ರಚಿಕಿತ್ಸೆಗಳು ಈ ಆಸ್ಪತ್ರೆಗಳಲ್ಲಿ ನಡೆಯುತ್ತವೆ. 2024-25ರಲ್ಲಿ ಪ್ರಾಕ್ಟೀಸ್ ಪ್ಲಸ್ ಹಾಸ್ಟಿಟಲ್ಗಳಿಂದ 250 ಮಿಲಿಯನ್ ಪೌಂಡ್ ವಹಿವಾಟು ನಡೆದಿರುವುದು ತಿಳಿದುಬಂದಿದೆ.
ನಾರಾಯಣ ಹೃದಯಾಲಯ ಸಂಸ್ಥೆಯ ಸ್ಥಾಪಕರಾದ ಡಾ. ದೇವಿ ಶೆಟ್ಟಿ ಅವರು ಈ ಕುರಿತು ಮಾತನಾಡಿದ್ದು, ‘ಪ್ರಾಕ್ಟೀಸ್ ಪ್ಲಸ್ ಗ್ರೂಪ್ ಮತ್ತು ನಾವು ಇಬ್ಬರೂ ಕೂಡ ಒಂದೇ ತೆರನಾದ ದೃಷ್ಟಿಕೋನ ಹೊಂದಿದ್ದೇವೆ. ಹೆಲ್ತ್ಕೇರ್ ಅನ್ನು ಎಲ್ಲರಿಗೂ ಕೈಗೆಟುಕುವಂತೆ ತಲುಪಿಸುವುದು ನಮ್ಮ ಉದ್ದೇಶ’ ಎಂದಿದ್ದಾರೆ.
ಇದನ್ನೂ ಓದಿ: ಗೂಗಲ್-ಜಿಯೋ ಪಾರ್ಟ್ನರ್ಶಪ್; ಒಂದೂವರೆ ವರ್ಷ ಉಚಿತ ಎಐ ಪ್ರೋ ಕೊಡುಗೆ
ಬ್ರಿಟನ್ನಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಜರಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಶಸ್ತ್ರಚಿಕಿತ್ಸೆಗಳಲ್ಲಿ ಪ್ರಾವೀಣ್ಯತೆ ಹೊಂದಿರುವ ನಾರಾಯಣ ಹೃದಯಾಲಯವು ಈ ಬೇಡಿಕೆಯನ್ನು ಪೂರೈಸಲು ಸಮರ್ಥವಾಗಿದೆ. ಹೆಲ್ತ್ಸಿಟಿ ಕೇಮನ್ ಐಲೆಂಡ್ಸ್ ಮೂಲಕ ಕೆರಿಬಿಯನ್ ನಾಡಿನಲ್ಲಿ ತನ್ನ ಅಸ್ತಿತ್ವ ವಿಸ್ತರಿಸಿರುವ ನಾರಾಯಣ ಹೃದಯಾಲಯವು ಈಗ ಇನ್ನಷ್ಟು ಪ್ರಬಲ ಜಾಗತಿಕ ಹೆಲ್ತ್ಕೇರ್ ಬ್ರ್ಯಾಂಡ್ ಆಗಿ ಬೆಳೆಯಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ