24 ಕ್ಯಾರಟ್ ಚಿನ್ನದ ಮೇಲೆ ಸಿಕ್ಕಾಪಟ್ಟೆ ಹರಿದುಬಂದ ಹೂಡಿಕೆ; ಚಿನ್ನದ ಬೆಲೆ ಇಷ್ಟೊಂದು ಏರಲು ಇದಪ್ಪಾ ಕಾರಣ..!
Gold investment in India hits 10 billion USD 2025: ಚಿನ್ನದ ಬೆಲೆ ದಾಖಲೆ ಮಟ್ಟಕ್ಕೆ ಹೋಗಲು ಹೂಡಿಕೆಗಳೇ ಕಾರಣ ಎಂದು ಹೇಳಲಾಗುತ್ತಿತ್ತು. ವರ್ಲ್ಡ್ ಗೋಲ್ಡ್ ಕೌನ್ಸಿಲ್ ಬಿಡುಗಡೆ ಮಾಡಿದ ಮಾಹಿತಿಯು ಈ ಕಾರಣವನ್ನು ಖಚಿತಪಡಿಸಿವೆ. ಜುಲೈನಿಂದ ಸೆಪ್ಟೆಂಬರ್ವರೆಗಿನ ಕ್ವಾರ್ಟರ್ನಲ್ಲಿ ಭಾರತದಲ್ಲಿ 10 ಬಿಲಿಯನ್ ಡಾಲರ್ ಮೊತ್ತದಷ್ಟು ಹೂಡಿಕೆಯು ಚಿನ್ನದ ಮೇಲೆ ಹರಿದಿದೆ ಎನ್ನಲಾಗಿದೆ.

ನವದೆಹಲಿ, ಅಕ್ಟೋಬರ್ 31: ಚಿನ್ನದ ಬೆಲೆ (Gold) ಕಳೆದ ಎರಡು ವಾರದಿಂದ ಇಳಿಮುಖಗೊಳ್ಳುವ ಮುನ್ನ ಯಾರೂ ಊಹಿಸದ ರೇಂಜ್ನಲ್ಲಿ ಏರಿ ಹೊಸ ದಾಖಲೆಯನ್ನೇ ಬರೆದಿತ್ತು. ಒಂದು ವರ್ಷದಲ್ಲಿ ಶೇ. 50ರಿಂದ 60ರ ಶ್ರೇಣಿಯಲ್ಲಿ ಚಿನ್ನದ ಬೆಲೆ ಏರಿದ್ದು ಹಿಂದೆಂದೂ ಕಂಡು ಕೇಳಿದ್ದಿರಲಿಲ್ಲ. ಚಿನ್ನದ ಮೇಲೆ ಹೂಡಿಕೆಗಳು ಹೆಚ್ಚುತ್ತಿರುವುದು ಬೆಲೆ ಏರಿಕೆಗೆ ಕಾರಣ ಎಂದು ಹೇಳಲಾಗುತ್ತಿದೆ. ಇದಕ್ಕೆ ಇಂಬು ಕೊಡುವಂತೆ ವರ್ಲ್ಡ್ ಗೋಲ್ಡ್ ಕೌನ್ಸಿಲ್ನ ವರದಿಯಲ್ಲಿ ಈ ವಿಚಾರವನ್ನು ದೃಢಪಡಿಸಲಾಗಿದೆ.
ವರ್ಲ್ಡ್ ಗೋಲ್ಡ್ ಕೌನ್ಸಿಲ್ ಪ್ರಕಾರ ಸೆಪ್ಟೆಂಬರ್ ಕ್ವಾರ್ಟರ್ನಲ್ಲಿ (ಜುಲೈನಿಂದ ಸೆಪ್ಟೆಂಬರ್) 10 ಬಿಲಿಯನ್ ಡಾಲರ್ನಷ್ಟು ಹೂಡಿಕೆಗಳು ಶುದ್ಧ ಚಿನ್ನದ ಮೇಲೆ ಹರಿದುಬಂದಿವೆ. ಗೋಲ್ಡ್ ಬಾರ್ಗಳು, ಗೋಲ್ಡ್ ಕಾಯಿನ್ಗಳ ಮೇಲೆ ಹೂಡಿಕೆದಾರರು ಸುಮಾರು 88,700 ಕೋಟಿ ರೂ ಹೂಡಿಕೆ ಮಾಡಿದ್ದಾರೆ.
ಇದನ್ನೂ ಓದಿ: ಮೆಚ್ಯೂರಿಟಿಗೆ ಬಂದ 2017-18ರ ಸಾವರಿನ್ ಗೋಲ್ಡ್ ಬಾಂಡ್; 2,971 ರೂನಿಂದ 11,922 ರೂಗೆ ಏರಿಕೆ
ಕುತೂಹಲ ಎಂದರೆ, ಭಾರತದಲ್ಲಿ ಸಾಂಪ್ರದಾಯಿಕವಾಗಿ ಜನರು ಚಿನ್ನದ ಖರೀದಿ ಮಾಡುತ್ತಾರೆ ಎಂದರೆ ಅದು ಆಭರಣಗಳ ಖರೀದಿಯೇ ಹೆಚ್ಚು. ದೇಶದಲ್ಲಿ ಆಗುವ ಒಟ್ಟಾರೆ ಚಿನ್ನ ಖರೀದಿಯಲ್ಲಿ ಆಭರಣಗಳ ಪಾಲು ಅತಿಹೆಚ್ಚು ಇರುತ್ತದೆ. ಹೂಡಿಕೆಯಾಗಿ ಚಿನ್ನ ಖರೀದಿಸುವುದು ಕಡಿಮೆಯೇ. ಕಳೆದ ಕೆಲ ತಿಂಗಳಿಂದ ಹೂಡಿಕೆಗಾಗಿ ಚಿನ್ನದ ಖರೀದಿ ಹೆಚ್ಚುತ್ತಿದೆ. ಇದೇ ಕಾರಣಕ್ಕೆ ಜಾಗತಿಕ ಮಾರುಕಟ್ಟೆಗೆ ಹೋಲಿಸಿದರೆ ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಹೆಚ್ಚು ವ್ಯತ್ಯಯಗಳಾಗುತ್ತಿರಬಹುದು.
‘ಚಿನ್ನವನ್ನು ಈಗ ಪ್ರಮುಖ ಆಸ್ತಿಯಾಗಿ ಪರಿಗಣಿಸಲಾಗುತ್ತಿರುವುದು ಹೆಚ್ಚುತ್ತಿದೆ. ಹೆಚ್ಚು ಹೂಡಿಕೆದಾರರು ಚಿನ್ನವನ್ನು ಸೇರಿಸಿ ತಮ್ಮ ಪೋರ್ಟ್ಫೋಲಿಯೋಗಳನ್ನು ವಿಸ್ತರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲೂ ಹೂಡಿಕೆದಾರರಿಗೆ ಚಿನ್ನದ ಮೇಲಿನ ಆಸಕ್ತಿ ಮುಂದುವರಿಯಬಹುದು ಎಂದು ಭಾವಿಸಿದ್ದೇನೆ’ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ಸಿಇಒ ಸಚಿನ್ ಜೈನ್ ಹೇಳುತ್ತಾರೆ.
ಇದನ್ನೂ ಓದಿ: ಚಿನ್ನ, ಬೆಳ್ಳಿಗೆ ಸಾಲ; ಎಲ್ಟಿವಿ ಹೆಚ್ಚಳ ಇತ್ಯಾದಿ ಆರ್ಬಿಐನ ಹೊಸ ಮಾರ್ಗಸೂಚಿ ಗಮನಿಸಿ…
ವಿಶ್ವಾದ್ಯಂತ ಸೆಪ್ಟೆಂಬರ್ ಕ್ವಾರ್ಟರ್ನಲ್ಲಿ ಚಿನ್ನದ ಖರೀದಿ ಭರಾಟೆ
ಜಾಗತಿಕವಾಗಿಯೂ ಕೂಡ ಸೆಪ್ಟೆಂಬರ್ ಅಂತ್ಯದ ಕ್ವಾರ್ಟರ್ನಲ್ಲಿ ಚಿನ್ನಕ್ಕೆ ಭರ್ಜರಿ ಬೇಡಿಕೆ ಇತ್ತು. ಬರೋಬ್ಬರಿ 1,313 ಟನ್ ಚಿನ್ನ ಬಿಕರಿಯಾಗಿದೆ. ಈ ಪೈಕಿ ಹೂಡಿಕೆಗೆಂದೇ 524 ಟನ್ ಚಿನ್ನ ಖರೀದಿಯಾಗಿದೆ. ಭಾರತದಲ್ಲೇ 91.6 ಟನ್ ಚಿನ್ನದ ಮೇಲೆ ಹೂಡಿಕೆಯಾಗಿದೆ. ಇದರಲ್ಲಿ ಗೋಲ್ಡ್ ಕಾಯಿನ್, ಗೋಲ್ಡ್ ಬಾರ್ಗಳು ಮಾತ್ರವಲ್ಲ, ಗೋಲ್ಡ್ ಇಟಿಎಫ್ಗಳಲ್ಲೂ ಹೂಡಿಕೆ ಹೆಚ್ಚಿರುವುದು ಹೌದು. ಆರ್ಥಿಕ ಅನಿಶ್ಚಿತ ಪರಿಸ್ಥಿತಿಯಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚುತ್ತದೆ ಎನ್ನುವ ಟ್ರೆಂಡ್ ನಿಜವೆಂಬುದು ಮತ್ತೆ ಖಚಿತಗೊಂಡಿದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




