ಚಿನ್ನ, ಬೆಳ್ಳಿಗೆ ಸಾಲ; ಎಲ್ಟಿವಿ ಹೆಚ್ಚಳ ಇತ್ಯಾದಿ ಆರ್ಬಿಐನ ಹೊಸ ಮಾರ್ಗಸೂಚಿ ಗಮನಿಸಿ…
New RBI guidelines on gold and silver loans: ಚಿನ್ನ ಮತ್ತು ಬೆಳ್ಳಿಗಳನ್ನು ಒತ್ತೆ ಇಟ್ಟು ನೀಡಲಾಗುವ ಸಾಲಗಳ ವಿಚಾರದಲ್ಲಿ ಆರ್ಬಿಐ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಆಭರಣಗಳಿಗೆ ಹೆಚ್ಚು ಸಾಲ ನೀಡಲಾಗುತ್ತದೆ. ಕಡಿಮೆ ಮೊತ್ತದ ಸಾಲಕ್ಕೆ ಬೆಳ್ಳಿ ಮತ್ತು ಚಿನ್ನದ ಮೌಲ್ಯಕ್ಕೆ ಹೆಚ್ಚಿನ ಸಾಲ ಕೊಡಲಾಗುತ್ತದೆ. 2.5 ಲಕ್ಷ ರೂವರೆಗಿನ ಸಾಲಕ್ಕೆ ಎಲ್ಟಿವಿಯನ್ನು ಶೇ. 75ರಿಂದ ಶೇ. 85ಕ್ಕೆ ಏರಿಸಲಾಗಿದೆ.

ನವದೆಹಲಿ, ಅಕ್ಟೋಬರ್ 28: ಬೆಳ್ಳಿ ಬೆಲೆ ಇತ್ತೀಚೆಗೆ ಸಾಕಷ್ಟು ಏರಿಕೆ ಪಡೆಯುತ್ತಿದ್ದು, ಪ್ರಮುಖ ಸ್ವತ್ತೆಂದು ಪರಿಗಣಿತವಾಗಿದೆ. ಬ್ಯಾಂಕುಗಳಲ್ಲಿ ಸಾಲಕ್ಕೆ ಚಿನ್ನದಂತೆ (Gold) ಬೆಳ್ಳಿಯನ್ನೂ ಒತ್ತೆ ಇಡಲು ಅವಕಾಶ ನೀಡಲಾಗುತ್ತಿದೆ. ಈ ಸಂಬಂಧ ಆರ್ಬಿಐ (RBI) ಹೊಸ ಮಾರ್ಗಸೂಚಿ ನೀಡಿದೆ. ಚಿನ್ನ ಮತ್ತು ಬೆಳ್ಳಿಗಳನ್ನು ಅಡಮಾನವಾಗಿ ಇಟ್ಟು ಸಾಲ ನೀಡುವ ಸಂಬಂಧ ಆರ್ಬಿಐ ಈ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಸಣ್ಣ ಸಾಲಗಳಿಗೆ ಹೆಚ್ಚು ಎಲ್ಟಿವಿ
ಎಲ್ಟಿವಿ ಎಂದರೆ ಲೋನ್ ಟು ವ್ಯಾಲ್ಯೂ. ಅಂದರೆ ಚಿನ್ನ ಮತ್ತು ಬೆಳ್ಳಿಯ ನಿರ್ದಿಷ್ಟ ಮೌಲ್ಯಕ್ಕೆ ನೀಡುವ ಸಾಲದ ಮೊತ್ತ. 2.5 ಲಕ್ಷ ರೂವರೆಗಿನ ಸಾಲಕ್ಕೆ ಎಲ್ಟಿವಿಯನ್ನು ಶೇ. 75ರಿಂದ ಶೇ. 85ಕ್ಕೆ ಹೆಚ್ಚಿಸಲಾಗಿದೆ.
ನೀವು ಒತ್ತೆ ಇಡುವ ಚಿನ್ನ ಅಥವಾ ಬೆಳ್ಳಿಯ ಮೌಲ್ಯ 2 ಲಕ್ಷ ರೂ ಇದ್ದರೆ, ನಿಮಗೆ 1,70,000 ರೂವರೆಗೂ ಸಾಲ ಪಡೆಯುವ ಅವಕಾಶ ಇರುತ್ತದೆ.
ಇದನ್ನೂ ಓದಿ: ದಾಖಲೆ ಇಲ್ಲದೆ ಒಬ್ಬ ವ್ಯಕ್ತಿ ಎಷ್ಟು ಚಿನ್ನ ಹೊಂದಿರಲು ಅವಕಾಶ? ಆಭರಣ ಖರೀದಿಸುವ ಮುನ್ನ ಇದು ತಿಳಿದಿರಿ…
2.5 ಲಕ್ಷ ರೂನಿಂದ 5 ಲಕ್ಷ ರೂ ಸಾಲ ಪಡೆಯುತ್ತಿದ್ದರೆ ಚಿನ್ನ ಮತ್ತು ಬೆಳ್ಳಿಯ ಶೇ. 80ರಷ್ಟು ಮೌಲ್ಯವನ್ನು ಪರಿಗಣಿಸಲಾಗುತ್ತದೆ. ಇನ್ನು, ಐದು ಲಕ್ಷ ರೂ ಮೇಲ್ಪಟ್ಟ ಸಾಲಗಳಿಗೆ ಶೇ. 75ರಷ್ಟು ಮೌಲ್ಯವನ್ನು ಪರಿಗಣಿಸಲಾಗುತ್ತದೆ.
ಉದಾಹರಣೆಗೆ ನೀವು 6 ಲಕ್ಷ ರೂ ಸಾಲ ಪಡೆಯಬೇಕೆಂದರೆ ಕನಿಷ್ಠ ಎಂಟು ಲಕ್ಷ ರೂ ಮೌಲ್ಯದ ಚಿನ್ನಾಭರಣ ಅಥವಾ ಬೆಳ್ಳಿಯ ವಸ್ತುಗಳನ್ನು ಅಡ ಇಡಬೇಕಾಗುತ್ತದೆ.
ಒತ್ತೆ ಇಡುವ ಚಿನ್ನ, ಬೆಳ್ಳಿಗೆ ಮಿತಿ
ಆರ್ಬಿಐ ಮಾರ್ಗಸೂಚಿ ಪ್ರಕಾರ ಚಿನ್ನದ ಬಿಸ್ಕತ್, ಬೆಳ್ಳಿ ಬಾರ್ಗಳನ್ನು ಗಿರವಿ ಇಟ್ಟು ಸಾಲ ಪಡೆಯಲು ಅವಕಾಶ ಇರುವುದಿಲ್ಲ. ಚಿನ್ನ ಮತ್ತು ಬೆಳ್ಳಿಯ ಆಭರಣಗಳು, ಕಾಯಿನ್, ದೀಪ, ಬಟ್ಟಲು ಇತ್ಯಾದಿಯನ್ನು ಅಡವಿಡಬಹುದು. ಸಿಲ್ವರ್ ಕಾಯಿನ್ ಇಡಬಹುದು.
ಒತ್ತೆ ಇಡಲು ಮಿತಿ
- ಚಿನ್ನಾಭರಣಕ್ಕೆ 1 ಕಿಲೋ ಮಿತಿ
- ಗೋಲ್ಡ್ ಕಾಯಿನ್ 50 ಗ್ರಾಮ್
- ಬೆಳ್ಳಿ ಆಭರಣಗಳು 10 ಕಿಲೋ
- ಬೆಳ್ಳಿ ಕಾಯಿನ್ 500 ಗ್ರಾಮ್
ಇದನ್ನೂ ಓದಿ: ಚಿನ್ನ, ಬೆಳ್ಳಿ ಬೆಲೆಗಳು ಇಳಿಯುತ್ತಿರುವುದು ಯಾಕೆ? ಇನ್ನೆಷ್ಟು ದಿನ ಇರಲಿದೆ ಈ ಇಳಿಕೆ?
ಚಿನ್ನ ಮತ್ತು ಬೆಳ್ಳಿ ಒತ್ತೆ ಇಟ್ಟು ಪಡೆಯುವ ಸಾಲವನ್ನು ತೀರಿಸಿದ ದಿನವೇ ಅವನ್ನು ಮರಳಿಸಬೇಕು ಎನ್ನುವ ನಿಯಮ ಮಾಡಲಾಗಿದೆ. ಆವತ್ತೇ ಆಗದಿದ್ದರೂ ಏಳು ಕಾರ್ಯದಿನದೊಳಗೆ ನೀಡಬೇಕು. ತಪ್ಪಿದಲ್ಲಿ, ದಿನಕ್ಕೆ 5,000 ರೂನಂತೆ ಪರಿಹಾರವನ್ನು ಬ್ಯಾಂಕುಗಳು ನೀಡಬೇಕಾಗುತ್ತದೆ. ಆರ್ಬಿಐನ ಹೊಸ ಮಾರ್ಗಸೂಚಿಗಳು ಮುಂದಿನ ಹಣಕಾಸು ವರ್ಷದಿಂದ (2026ರ ಏಪ್ರಿಲ್ 1) ಜಾರಿಗೆ ಬರುತ್ತವೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




