ದಾಖಲೆ ಇಲ್ಲದೆ ಒಬ್ಬ ವ್ಯಕ್ತಿ ಎಷ್ಟು ಚಿನ್ನ ಹೊಂದಿರಲು ಅವಕಾಶ? ಆಭರಣ ಖರೀದಿಸುವ ಮುನ್ನ ಇದು ತಿಳಿದಿರಿ…
Rules on how much one person can hold gold without documentation: ಚಿನ್ನ ಈಗ ಬಹಳ ಬೇಡಿಕೆಯಲ್ಲಿರುವ ವಸ್ತು. ಜನಸಾಮಾನ್ಯನಿಂದ ಹಿಡಿದು ರಿಸರ್ವ್ ಬ್ಯಾಂಕ್ವರೆಗೆ ಚಿನ್ನವನ್ನು ಖರೀದಿಸುವ ಭರಾಟೆ ನಡೆಯುತ್ತಿದೆ. ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆ ಬರೆದರೂ ಜನರು ಖರೀದಿಸುವುದು ಕಡಿಮೆ ಮಾಡಿಲ್ಲ. ಭಾರತದಲ್ಲಿ ಚಿನ್ನದ ವಿಚಾರದಲ್ಲಿ ಕೆಲ ನಿರ್ಬಂಧಗಳು ಮತ್ತು ನಿಯಮಗಳು ಇವೆ. ಈ ಬಗ್ಗೆ ಉಪಯುಕ್ತ ಮಾಹಿತಿ ಇಲ್ಲಿದೆ.

ಬಹಳ ಜನರು ಚಿನ್ನ (gold) ಅಥವಾ ಆಭರಣ ಖರೀದಿಸಿದ ಬಳಿಕ ಸಿಗುವ ಬಿಲ್ ಅನ್ನು ಬಿಸಾಡಿಬಿಡುವುದುಂಟು. ಇದು ತಪ್ಪು. ಚಿನ್ನ ಖರೀದಿಸಿದ್ದಕ್ಕೆ ಸಾಕ್ಷ್ಯಾಧಾರವಾಗಿ ಬಿಲ್ ಇಟ್ಟುಕೊಳ್ಳುವುದು ಬಹಳ ಮುಖ್ಯ. ಮುಂದ್ಯಾವಾಗಲಾದರೂ ತೆರಿಗೆ ಅಧಿಕಾರಿಗಳ ಕಣ್ಣಿಗೆ ನಿಮ್ಮ ಚಿನ್ನ ಬಿದ್ದರೆ ಈ ಬಿಲ್ ತೋರಿಸಬೇಕಾಗುತ್ತದೆ. ಇಲ್ಲದಿದ್ದರೆ ಚಿನ್ನ ನಿಮ್ಮ ಕೈತಪ್ಪಿದಂತೆಯೇ ಆಗಬಹುದು. ಅಮ್ಮನಿಂದ ಬಂದ ಒಡವೆ, ಪಾರಂಪರಿಕವಾಗಿ ಬಂದ ಒಡವೆ ಇದ್ದರೆ ಇಲ್ಲಿ ಬಿಲ್ ತರುವುದು? ಈ ಸಂಬಂಧ ಭಾರತದ ಕಾನೂನಿನಲ್ಲಿ ಕೆಲ ನಿಯಮಗಳನ್ನು ರೂಪಿಸಲಾಗಿದೆ. ಒಬ್ಬ ವ್ಯಕ್ತಿ ಬಿಲ್ ಅಥವಾ ದಾಖಲೆ ಇಲ್ಲದೇ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು ಎಂದು ಈ ನಿಯಮಗಳು ಹೇಳುತ್ತವೆ.
ಒಬ್ಬ ವ್ಯಕ್ತಿ ದಾಖಲೆ ಇಲ್ಲದ ಚಿನ್ನ ಎಷ್ಟು ಇಡಬಹುದು?
- ವಿವಾಹಿತ ಮಹಿಳೆ: 500 ಗ್ರಾಮ್ ಚಿನ್ನ
- ಅವಿವಾಹಿತ ಮಹಿಳೆ: 250 ಗ್ರಾಮ್ ಚಿನ್ನ
- ಪುರುಷ: 100 ಗ್ರಾಮ್ ಚಿನ್ನ
ಮೇಲೆ ತಿಳಿಸಿದ ಈ ಪ್ರಮಾಣದಷ್ಟು ಚಿನ್ನಕ್ಕೆ ನೀವು ದಾಖಲಾತಿ ಅಥವಾ ಸಾಕ್ಷ್ಯ ಕೊಡಬೇಕಿಲ್ಲ. ಇನ್ಕಮ್ ಟ್ಯಾಕ್ಸ್ ರೇಡ್ ಮಾಡಿದಾಗ ಅಧಿಕಾರಿಗಳು ಇಷ್ಟು ಚಿನ್ನವನ್ನು ಸೀಜ್ ಮಾಡುವುದಿಲ್ಲ. ಇದಕ್ಕಿಂತ ಹೆಚ್ಚಿರುವ ಚಿನ್ನವನ್ನು ಮಾತ್ರ ವಶಪಡಿಸಿಕೊಂಡು, ಅದಕ್ಕೆ ದಾಖಲಾತಿ ಕೇಳಬಹುದು. ಅಥವಾ ಆ ಚಿನ್ನ ಖರೀದಿಸವಷ್ಟು ಆದಾಯ ಶಕ್ತಿ ಇದೆ ಎಂಬುದನ್ನು ತೋರಿಸಬೇಕು.
ಇದನ್ನೂ ಓದಿ: ಪಿಎಫ್ ಅಕೌಂಟ್ ಹೊಂದಿರುವ ಪ್ರತಿಯೊಬ್ಬರಿಗೂ ಇನ್ಷೂರೆನ್ಸ್ ಕವರೇಜ್ ಇರುತ್ತಾ? ಇವು ತಿಳಿದಿರಿ
ಒಂದು ಕುಟುಂಬದಲ್ಲಿ ಆರು ಜನರಿದ್ದಾರೆ ಎಂದಿಟ್ಟುಕೊಳ್ಳಿ. ಅಪ್ಪ, ಅಮ್ಮ, ಮಗ, ಸೊಸೆ ಮತ್ತು ಮೊಮ್ಮಗ ಮತ್ತು ಮೊಮ್ಮಗಳು ಇದ್ದಾಳೆ ಎಂದು ಭಾವಿಸಿ. ಇಲ್ಲಿ ಇಬ್ಬರು ವಿವಾಹಿತ ಮಹಿಳೆಯರಿದ್ದಾರೆ. ಇಬ್ಬರಿಂದ ದಾಖಲೆರಹಿತವಾಗಿ ಒಂದು ಕಿಲೋ ಚಿನ್ನ ಹೊಂದಿರಬಹುದು. ಅವಿವಾಹಿತಳಾದ ಮೊಮ್ಮಗಳು 250 ರೂ, ಹಾಗೂ ಮೂವರು ಗಂಡಸರು ತಲಾ 100 ಗ್ರಾಮ್, ಹೀಗೆ ಈ ಕುಟುಂಬದಲ್ಲಿ 1,550 ಗ್ರಾಮ್ ಚಿನ್ನವನ್ನು ಯಾವುದೇ ದಾಖಲೆಯ ಗೋಜಲು ಇಲ್ಲದೆ ಹೊಂದಿರಬಹುದು.
ನಿಗದಿಗಿಂತ ಹೆಚ್ಚಿನ ಚಿನ್ನಕ್ಕೆ ದಾಖಲಾತಿ ಇಲ್ಲದಿದ್ದರೆ ಏನಾಗುತ್ತೆ?
ಯಾವುದೇ ದಾಖಲಾತಿ ಇಲ್ಲದ ಚಿನ್ನ ನಿಮ್ಮ ಬಳಿ ಇರುವುದು ಗೊತ್ತಾದರೆ ಆದಾಯ ತೆರಿಗೆ ಅಧಿಕಾರಿ ಈ ಕೆಳಕಾಣಿಸಿದಂತೆ ತೆರಿಗೆ ವಿಧಿಸಬಹುದು:
- ಚಿನ್ನದ ಶೇ. 60ರಷ್ಟು ಮೌಲ್ಯದಷ್ಟು ಟ್ಯಾಕ್ಸ್
- ತೆರಿಗೆಯ ಶೇ 25ರಷ್ಟು ಸರ್ಚಾರ್ಜ್ (ಚಿನ್ನದ ಶೇ. 15 ಮೌಲ್ಯ)
- ಟ್ಯಾಕ್ಸ್ ಮತ್ತು ಸರ್ಚಾರ್ಜ್ ಎರಡೂ ಸೇರಿಸಿ, ಅದರ ಶೇ. 4ರಷ್ಟು ಮೌಲ್ಯ
ಹೀಗೆ ಚಿನ್ನದ ಮೌಲ್ಯದ ಶೇ. 78ರಷ್ಟನ್ನು ಟ್ಯಾಕ್ಸ್ ಆಗಿ ಕಟ್ಟಬೇಕಾಗುತ್ತದೆ. ಅಘೋಷಿತ ಚಿನ್ನದ ಮೌಲ್ಯ 2 ಲಕ್ಷ ರೂ ಇದ್ದರೆ ಅದಕ್ಕೆ 1,56,000 ರೂನಷ್ಟು ತೆರಿಗೆಯನ್ನೇ ಕಟ್ಟಬೇಕಾಗುತ್ತದೆ.
ಇದನ್ನೂ ಓದಿ: ಚಿನ್ನ, ಬೆಳ್ಳಿ ಬೆಲೆಗಳು ಇಳಿಯುತ್ತಿರುವುದು ಯಾಕೆ? ಇನ್ನೆಷ್ಟು ದಿನ ಇರಲಿದೆ ಈ ಇಳಿಕೆ?
ರೇಡ್ ವೇಳೆ ಸಿಕ್ಕಿದರೆ ಇನ್ನೂ ಹೆಚ್ಚು ಹೊರೆ
ನಿಮ್ಮ ಮನೆಗೆ ಆದಾಯ ತೆರಿಗೆ ರೇಡ್ ಆದಾಗ ಸಿಕ್ಕ ಚಿನ್ನಕ್ಕೆ ನಿಮ್ಮ ಬಳಿ ದಾಖಲಾತಿ ಇಲ್ಲದಿದ್ದರೆ ಮೇಲೆ ತಿಳಿಸಿದ ಟ್ಯಾಕ್ಸ್ ಜೊತೆಗೆ ಶೇ. 10ರಷ್ಟು ದಂಡ ಕಟ್ಟಬೇಕು. ಅಂದರೆ, ಚಿನ್ನದ ಮೌಲ್ಯದ ಶೇ. 88ರಷ್ಟು ಹಣವನ್ನು ನೀವು ಕಟ್ಟಬೇಕಾಗುತ್ತದೆ.
ಸ್ವಯಂ ಆಗಿ ಘೋಷಿಸಿಕೊಳ್ಳುವುದು ಸುರಕ್ಷಿತ…
ನಿಮ್ಮ ಬಳಿ ದಾಖಲಾತಿಗಳಿಲ್ಲದ ಚಿನ್ನ ಸಾಕಷ್ಟು ಇದ್ದರೆ ಅದನ್ನು ಆದಾಯ ತೆರಿಗೆ ಇಲಾಖೆಗೆ ನೀವಾಗಿಯೇ ಘೋಷಿಸಿಕೊಳ್ಳುವ ಅವಕಾಶ ಇರುತ್ತದೆ. ಹೀಗೆ ಮಾಡಿದಾಗ ಟ್ಯಾಕ್ಸ್ ಕಟ್ಟಬೇಕಿರುವುದು ಕಡಿಮೆ ಇರುತ್ತದೆ. ಶೇ. 30ರಷ್ಟು ಮೂಲ ತೆರಿಗೆ, ಶೇ. 10 ಸರ್ಚಾರ್ಜ್, ಶೇ. 3 ಸೆಸ್, ಹೀಗೆ ಒಟ್ಟು ಶೇ. 34ರಷ್ಟು ಮಾತ್ರ ಟ್ಯಾಕ್ಸ್ ಕಟ್ಟಿದರೆ ಚಿನ್ನ ನಿಮಗೆ ಅಧಿಕೃತ ಆಸ್ತಿಯಾಗಿ ಪರಿವರ್ತಿತವಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




