
ವಾಷಿಂಗ್ಟನ್: ಮುಂದಿನ ವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಅಮೆರಿಕಕ್ಕೆ ಭೇಟಿ ಮಾಡುತ್ತಿರುವುದು ಅಲ್ಲಿನ ರಾಜಕೀಯ ಮತ್ತು ಉದ್ಯಮ ವಲಯದ ನಿರೀಕ್ಷೆಗಳು ಹೆಚ್ಚಾಗಿವೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ (Joe Biden) ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 21 (ಬುಧವಾರ) ರಿಂದ ಜೂನ್ 24 (ಶನಿವಾರ) ವರೆಗೂ ಅಮೆರಿಕದ ಭೇಟಿ ಮಾಡಲಿದ್ದಾರೆ. ಈ ವೇಳೆ ಅವರು ಅಮೆರಿಕದ ಸಂಸತ್ತಿನಲ್ಲಿ ಜಂಟಿ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಟ್ರಂಪ್ ಅಧ್ಯಕ್ಷರಾಗಿದ್ದ ಅವಧಿಯಲ್ಲೂ ಮೋದಿ ಅವರು ಅಮೆರಿಕ ಸಂಸತ್ತಿನಲ್ಲಿ ಮಾತನಾಡಿದ್ದರು. ಜೂನ್ 22ರಂದು ಅವರು ಅಮೆರಿಕ ಅಧ್ಯಕ್ಷರ ಗೃಹ ಕಚೇರಿ ಎನಿಸಿದ ವೈಟ್ ಹೌಸ್ನಲ್ಲಿ ಅಧ್ಯಕ್ಷ ಜೋ ಬೈಡನ್ ಮತ್ತವರ ಪತ್ನಿ ಜಿಲ್ ಬೈಡನ್ ಅವರು ನರೇಂದ್ರ ಮೋದಿಗೆ ಔತಣಕೂಟದ ಆತಿಥ್ಯ ವಹಿಸಲಿದ್ದಾರೆ.
ಇದೆಲ್ಲಕ್ಕಿಂತ ಮುಖ್ಯವಾಗಿ ನರೇಂದ್ರ ಮೋದಿ ಅವರ ಭೇಟಿಯಿಂದ ಭಾರತ ಮತ್ತು ಅಮೆರಿಕದ ನಡುವಿನ ವಿವಿಧ ರೀತಿಯ ಸಂಬಂಧ, ಬಾಂಧವ್ಯಗಳು ವೃದ್ಧಿಸಬಹುದು ಎಂಬ ನಿರೀಕ್ಷೆ ಅಲ್ಲಿನವರಲ್ಲಿದೆ. ಜಾಗತಿಕವಾಗಿ ಬದಲಾಗುತ್ತಿರುವ ರಾಜಕೀಯ ಮತ್ತು ಭೌಗೋಳಿಕ ಸಮೀಕರಣದಲ್ಲಿ ಭಾರತದ ಅವಶ್ಯಕತೆ ಅಮೆರಿಕಕ್ಕೆ ಬಹಳ ಇದೆ. ಹೀಗಾಗಿ, ಭಾರತದೊಂದಿಗೆ ಸಂಬಂಧವೃದ್ಧಿಗೆ ಇರುವ ಯಾವ ಅವಕಾಶವನ್ನೂ ಅಮೆರಿಕ ತಪ್ಪಿಸದು. ಈಗ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ಕೊಡುತ್ತಿರುವ ಬಗ್ಗೆ ಹಾಗೂ ಈ ಭೇಟಿಯಿಂದ ಆಗಬಹುದಾದ ಲಾಭದ ಬಗ್ಗೆ ಅಲ್ಲಿನ ಸಂಸದ ಅಮಿ ಬೆರಾ ಒಂದಷ್ಟು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಬೆಳೆಯುತ್ತಿರುವುದನ್ನು ನೋಡುತ್ತಿದ್ದೀರಿ. ಈ ಸಂಬಂಧಕ್ಕೆ ಇನ್ನಷ್ಟು ಪುಷ್ಟಿ ಕೊಡುವ ಅವಕಾಶ ಇದೆ. ಕೋವಿಡ್ ಸಾಂಕ್ರಾಮಿಕದಿಂದ ಹೊರಬರುವ ಮತ್ತು ಸರಬರಾಜು ಸರಪಳಿ ವ್ಯವಸ್ಥೆ ಸುಧಾರಿಸುವ ಬಗ್ಗೆ ನಾವು ಬಹಳಷ್ಟು ಮಾತನಾಡುತ್ತಿದ್ದೇವೆ. ಈಗ ಎರಡೂ ದೇಶಗಳು ಒಟ್ಟಿಗೆ ಬೆಳೆಯಲು ನೈಜ ಅವಕಾಶ ಇದೆ ಎಂದು ಅಮಿ ಬೇರಾ ಅಭಿಪ್ರಾಯಪಟ್ಟಿದ್ದಾರೆ.
F
ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡುವ ಕಾರ್ಯಕ್ರಮಕ್ಕೆ ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಗಿರುವುದು ಗಮನಾರ್ಹ. ಆಡಳಿತಾರೂಢ ಡೆಮಾಕ್ರಾಟ್ ಪಕ್ಷ ಹಾಗೂ ವಿಪಕ್ಷ ರಿಪಬ್ಲಿಕನ್ ಇಬ್ಬರೂ ಕೂಡ ಒಮ್ಮತದಿಂದ ಮೋದಿ ಭೇಟಿಗೆ ಅಸ್ತು ಎಂದಿದ್ದಾರೆ. ಮೋದಿ ಅವರ ಈ ಭೇಟಿಯಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಜೊತೆಗಾರಿಕೆಗೆ ಪುಷ್ಟಿ ಸಿಗಬಹುದಾ ಎಂಬ ಕುತೂಹಲವೂ ಇದೆ. ಸರಬರಾಜು ಸರಪಳಿ ವ್ಯವಸ್ಥೆಯಲ್ಲಿ ಚೀನಾ ಮೇಲೆ ಅಮೆರಿಕ ಹಾಗೂ ವಿಶ್ವದ ಹಲವು ದೇಶಗಳು ಅವಲಂಬಿತವಾಗಿವೆ. ಈ ಹಿನ್ನೆಲೆಯಲ್ಲಿ ಸಪ್ಲೈ ಚೈನ್ ವ್ಯವಸ್ಥೆಗೆ ಚೀನಾಗೆ ಭಾರತ ಪರ್ಯಾಯ ಅವಕಾಶ ಎನಿಸಿದೆ. ಆ್ಯಪಲ್ ಸಂಸ್ಥೆ ತನ್ನ ಉತ್ಪನ್ನಗಳ ತಯಾರಿಕೆಯನ್ನು ಹಂತ ಹಂತವಾಗಿ ಭಾರತಕ್ಕೆ ವರ್ಗಾವಣೆ ಮಾಡುತ್ತಿರುವುದು ಇಲ್ಲಿ ಪ್ರಸ್ತುತ. ಇದು ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ವ್ಯಾಪಕವಾಗಿ ನಡೆಯಬಹುದು. ಈ ನಿಟ್ಟಿನಲ್ಲಿ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ಕೊಡುತ್ತಿರುವುದು ಗಮನಾರ್ಹ ಎನಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:31 pm, Fri, 16 June 23