ನವೆಂಬರ್​ನಲ್ಲಿ ಜಿಎಸ್​ಟಿ ಸಂಗ್ರಹ 1.82 ಲಕ್ಷ ಕೋಟಿ ರೂ; ಶೇ. 8.5ರಷ್ಟು ಹೆಚ್ಚಳ

|

Updated on: Dec 02, 2024 | 1:19 PM

2024 November GST collections: 2024ರ ನವೆಂಬರ್ ತಿಂಗಳಲ್ಲಿ 1.82 ಲಕ್ಷ ಕೋಟಿ ರೂನಷ್ಟು ಜಿಎಸ್​ಟಿ ಸಂಗ್ರಹವಾಗಿದೆ. ಕಳೆದ ವರ್ಷದ ನವೆಂಬರ್​ಗೆ ಹೋಲಿಸಿದರೆ ಜಿಎಸ್​ಟಿ ಸಂಗ್ರಹ ಶೇ. 8.5ರಷ್ಟು ಏರಿಕೆ ಆಗಿದೆ. ಹಿಂದಿನ ತಿಂಗಳಿಗೆ ಹೋಲಿಸಿದರೆ ತುಸು ಇಳಿಕೆ ಆಗಿದೆ. ಅಕ್ಟೋಬರ್​ನಲ್ಲಿ 1.87 ಲಕ್ಷ ಕೋಟಿ ರೂ ಜಿಎಸ್​ಟಿ ಸಿಕ್ಕಿತ್ತು.

ನವೆಂಬರ್​ನಲ್ಲಿ ಜಿಎಸ್​ಟಿ ಸಂಗ್ರಹ 1.82 ಲಕ್ಷ ಕೋಟಿ ರೂ; ಶೇ. 8.5ರಷ್ಟು ಹೆಚ್ಚಳ
ಜಿಎಸ್​ಟಿ
Follow us on

ನವದೆಹಲಿ, ಡಿಸೆಂಬರ್ 2: ಒಟ್ಟಾರೆ ಜಿಎಸ್​ಟಿ ಆದಾಯ ನವೆಂಬರ್ ತಿಂಗಳಲ್ಲಿ 1.82 ಲಕ್ಷ ಕೋಟಿ ರೂನಷ್ಟು ದಾಖಲಾಗಿದೆ. ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಸಂಗ್ರಹವಾದ ಜಿಎಸ್​ಟಿ 1.68 ಲಕ್ಷ ಕೋಟಿ ರು. ಅದಕ್ಕೆ ಹೋಲಿಸಿದರೆ ಜಿಎಸ್​ಟಿ ಸಂಗ್ರಹ ಶೇ. 8.5 ಹೆಚ್ಚಳವಾಗಿದೆ. ಆದರೆ, ಹಿಂದಿನ ತಿಂಗಳಾದ 2024ರ ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ಸರಕು ಮತ್ತು ಸೇವಾ ತೆರಿಗೆ ಸಂಗ್ರಹ ತುಸು ಇಳಿಕೆ ಆಗಿದೆ. ಅಕ್ಟೋಬರ್​ನಲ್ಲಿ 1.87 ಲಕ್ಷ ಕೋಟಿ ರೂ ಜಿಎಸ್​ಟಿ ಆದಾಯ ಹರಿದುಬಂದಿತ್ತು.

ನವೆಂಬರ್​ನಲ್ಲಿ ಪಡೆಯಲಾಗಿರುವ ಒಟ್ಟು 1.82 ಲಕ್ಷ ಕೋಟಿ ರೂ ಜಿಎಸ್​ಟಿಯಲ್ಲಿ ಕೇಂದ್ರದ ಜಿಎಸ್​ಟಿ 34,141 ಕೋಟಿ ರೂ ಇದೆ. ರಾಜ್ಯಗಳ ಜಿಎಸ್​ಟಿ 43,047 ಕೋಟಿ ರೂ ಇದೆ. ಐಜಿಎಸ್​ಟಿ 91,828 ಕೋಟಿ ರೂ, ಮತ್ತು ಸೆಸ್ 13,253 ಕೋಟಿ ರೂನಷ್ಟು ಸಿಕ್ಕಿದೆ.

ಇದನ್ನೂ ಓದಿ: ಆದಾಯ ತೆರಿಗೆ ಪಾವತಿ: ಮಹಿಳೆಯರ ಸಂಖ್ಯೆಯಲ್ಲಿ ಶೇ. 25ರಷ್ಟು ಏರಿಕೆ; ಎರಡು ಕೋಟಿಗೂ ಅಧಿಕ ಮಹಿಳೆಯರಿಂದ ಐಟಿಆರ್ ಸಲ್ಲಿಕೆ

ಸರ್ಕಾರ ನಿನ್ನೆ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಆಂತರಿಕವಾಗಿ ನಡೆದ ವಹಿವಾಟುಗಳಿಂದ ಬಂದ ಜಿಎಸ್​ಟಿಯೇ ಅಧಿಕ. ಸುಮಾರು 1.40 ಲಕ್ಷ ಕೋಟಿ ರೂನಷ್ಟು ತೆರಿಗೆಯು ಆಂತರಿಕ ವಹಿವಾಟುಗಳಿಂದ ಸಿಕ್ಕಿದೆ. ಕಳೆದ ವರ್ಷದ ನವೆಂಬರ್​ಗೆ ಹೋಲಿಸಿದರೆ ಈ ತೆರಿಗೆ ಸಂಗ್ರಹದಲ್ಲಿ ಶೇ. 9.4ರಷ್ಟು ಏರಿಕೆ ಆಗಿದೆ. ಇನ್ನು, ಆಮದು ಸುಂಕಗಳ ಮೂಲಕ ಬಂದಿರುವ ಜಿಎಸ್​ಟಿ 42,591 ಕೋಟಿ ರೂ. ಇದು ಸುಮಾರು ಆರು ಪ್ರತಿಶತದಷ್ಟು ಏರಿಕೆ ಆಗಿದೆ.

ನಿವ್ವಳ ಜಿಎಸ್​ಟಿ ಸಂಗ್ರಹದಲ್ಲಿ ಶೇ. 11ರಷ್ಟು ಹೆಚ್ಚಳ

ಒಟ್ಟು ಜಿಎಸ್​ಟಿ ಸಂಗ್ರಹದಲ್ಲಿ 19,259 ಕೋಟಿ ರೂನಷ್ಟು ರೀಫಂಡ್​ಗಳನ್ನು ತೆರಿಗೆ ಪಾವತಿದಾರರಿಗೆ ಮರಳಿಸಲಾಗಿದೆ. ಇದನ್ನು ಕಳೆದು ಸಿಗುವ ನಿವ್ವಳ ಜಿಎಸ್​ಟಿ 1.63 ಲಕ್ಷ ಕೋಟಿ ರೂ ಆಗಿದೆ. ಕಳೆದ ವರ್ಷದಕ್ಕೆ ಹೋಲಿಸಿದರೆ ಈ ಬಾರಿಯ ನವೆಂಬರ್​ನಲ್ಲಿ ಜಿಎಸ್​ಟಿ ರೀಫಂಡ್​ಗಳು ಶೇ. 8.9ರಷ್ಟು ಕಡಿಮೆ ಆಗಿವೆ. ಹೀಗಾಗಿ, ನಿವ್ವಳ ಜಿಎಸ್​ಟಿ ಸಂಗ್ರಹ ಶೇ. 11ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರದ ಗಮನ; ಶೇ. 25ರಷ್ಟು ಬಂಡವಾಳ ವೆಚ್ಚ ಹೆಚ್ಚುವ ನಿರೀಕ್ಷೆ: ಜೆಫರೀಸ್

ಈ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ, ಅಂದರೆ, 2024ರ ಏಪ್ರಿಲ್​ನಿಂದ ನವೆಂಬರ್ ತಿಂಗಳವರೆಗೆ ಸಂಗ್ರಹವಾದ ಜಿಎಸ್​ಟಿ 14.57 ಲಕ್ಷ ಕೋಟಿ ರೂ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ