ಆಧಾರ್​ನಲ್ಲಿ ಹೆಸರು ತಿದ್ದುಪಡಿಗೆ ಹೊಸ ನಿಯಮಗಳು; ಯಾವ್ಯಾವ ಬದಲಾವಣೆಗೆ ಯಾವ ದಾಖಲೆಗಳು ಬೇಕು, ವಿವರ ಇಲ್ಲಿದೆ…

ಯುಐಡಿಎಐ ಸಂಸ್ಥೆಯು ಆಧಾರ್ ಕಾರ್ಡ್‌ನಲ್ಲಿ ಹೆಸರು ತಿದ್ದುಪಡಿ ಮಾಡಲು ನೂತನ ನಿಯಮಾವಳಿಗಳನ್ನು (SOP) ಜಾರಿಗೆ ತಂದಿದೆ. ಕಾಗುಣಿತ ತಪ್ಪು, ಮದುವೆಯ ನಂತರದ ಹೆಸರು ಬದಲಾವಣೆ, ಸ್ಥಳೀಯ ಭಾಷೆಯ ದೋಷ ಹಾಗೂ ಸಂಪೂರ್ಣ ಹೆಸರು ಬದಲಾವಣೆಗೆ ನಿಯಮ ಪರಿಷ್ಕರಿಸಲಾಗಿದೆ. ಇದಕ್ಕೆ ಅಗತ್ಯವಿರುವ ದಾಖಲೆಗಳ ಸಂಪೂರ್ಣ ವಿವರ ಇಲ್ಲಿದೆ.

ಆಧಾರ್​ನಲ್ಲಿ ಹೆಸರು ತಿದ್ದುಪಡಿಗೆ ಹೊಸ ನಿಯಮಗಳು; ಯಾವ್ಯಾವ ಬದಲಾವಣೆಗೆ ಯಾವ ದಾಖಲೆಗಳು ಬೇಕು, ವಿವರ ಇಲ್ಲಿದೆ...
ಆಧಾರ್ ಕಾರ್ಡ್‌
Image Credit source: Getty Images

Updated on: Oct 05, 2026 | 6:59 PM

ನವದೆಹಲಿ, ಅಕ್ಟೋಬರ್ 5: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ಆಧಾರ್ ಕಾರ್ಡ್‌ನಲ್ಲಿ ಹೆಸರು ಪರಿಷ್ಕರಣೆ ಮತ್ತು ತಿದ್ದುಪಡಿ ಮಾಡುವ ನಿಯಮಾವಳಿಗಳನ್ನು (Standard Operating Procedure – SOP) ಪರಿಷ್ಕರಿಸಿದೆ. ಈ ನೂತನ ಮಾರ್ಗದರ್ಶಿ ಸೂತ್ರಗಳ ಅಡಿಯಲ್ಲಿ ಸಣ್ಣ ಅಕ್ಷರ ತಿದ್ದುಪಡಿ (Spelling mistake), ಮದುವೆ ಅಥವಾ ವಿಚ್ಛೇದನದ ನಂತರದ ಹೆಸರು ಬದಲಾವಣೆ, ಪ್ರಾದೇಶಿಕ ಭಾಷೆಯ ದೋಷ ಪರಿಹಾರ ಹಾಗೂ ಸಂಪೂರ್ಣ ಹೆಸರು ಬದಲಾವಣೆಗೆ ಪ್ರತ್ಯೇಕ ವಿಭಾಗಗಳನ್ನು ಮಾಡಿ, ನಿರ್ದಿಷ್ಟ ದಾಖಲೆಗಳನ್ನು ಕಡ್ಡಾಯಗೊಳಿಸಲಾಗಿದೆ. ಸೆಪ್ಟೆಂಬರ್ 18ರಿಂದ ಹೊಸ ನಿಯಮಗಳು ಜಾರಿಗೆ ಬಂದಿವೆ. ಈ ಹೊಸ ನಿಯಮಗಳ ಮುಖ್ಯಾಂಶಗಳು ಮತ್ತು ಅಗತ್ಯ ದಾಖಲೆಗಳ ವಿವರ ಮುಂದಿದೆ.

ಹೆಸರಿನ ಸಣ್ಣ ತಿದ್ದುಪಡಿಗಳು

ಹೆಸರಿನ ಮೊದಲಕ್ಷರ ವಿಸ್ತರಣೆ (Initial expansion), ಇನಿಷಿಯಲ್ ಸೇರ್ಪಡೆ/ತೆಗೆಯುವಿಕೆ, ಮನೆಹೆಸರು (Surname) ಸೇರ್ಪಡೆ, ಹೆಸರಿನ ಪದಗಳ ಕ್ರಮ ಬದಲಾವಣೆ ಹಾಗೂ ಉಚ್ಚಾರಣೆಯಲ್ಲಿ ಒಂದೇ ರೀತಿಯಿರುವ ಸಣ್ಣ ಕಾಗುಣಿತ (Spelling) ತಪ್ಪುಗಳ ತಿದ್ದುಪಡಿ ಇತ್ಯಾದಿ ಮಾಡಲು ಅವಕಾಶ ಇದೆ.

ಅಗತ್ಯ ದಾಖಲೆಗಳು ಹೀಗಿವೆ: ಮಾನ್ಯತೆ ಪಡೆದ ಯಾವುದೇ ಗುರುತಿನ ಪುರಾವೆ (Proof of Identity – PoI) ಅಂದರೆ ಪಾಸ್‌ಪೋರ್ಟ್, ಪಾನ್ ಕಾರ್ಡ್ (PAN Card), ಮತದಾರರ ಗುರುತಿನ ಚೀಟಿ ಅಥವಾ ಚಾಲನಾ ಪರವಾನಗಿ (Driving License).

ಇದನ್ನೂ ಓದಿ: ಫಾಸ್ಟ್‌ಟ್ಯಾಗ್ ಯುಗ ಹೋಯ್ತು; MLFF ವ್ಯವಸ್ಥೆ ಬರುತ್ತಿದೆ; ಹೆದ್ದಾರಿ ಟೋಲ್ ಕಲೆಕ್ಷನ್ ಸಿಸ್ಟಂನಲ್ಲಿ ಕ್ರಾಂತಿಕಾರಿ ಬದಲಾವಣೆ ನಿರೀಕ್ಷಿಸಿ

ಮದುವೆ ಅಥವಾ ವಿಚ್ಛೇದನದ ನಂತರದ ಹೆಸರು ಬದಲಾವಣೆ

ಮದುವೆಯ ನಂತರ ಗಂಡನ ಮನೆಹೆಸರು ಸೇರ್ಪಡೆ ಅಥವಾ ವಿಚ್ಛೇದನದ ನಂತರ ಹೆಸರು ಬದಲಾವಣೆ ಮಾಡಲು ಅವಕಾಶವಿದೆ. ಮಾನ್ಯವಾದ ಗುರುತಿನ ಪುರಾವೆಯೊಂದಿಗೆ (PoI), ಯುಐಡಿಎಐ ನಿಗದಿಪಡಿಸಿದ ನಮೂನೆಯಲ್ಲಿ (Annexure-D) ಪ್ರಮಾಣಪತ್ರ/ಅಫಿಡವಿಟ್ (Affidavit) ಹಾಗೂ ವಿವಾಹ ನೋಂದಣಿ ಪ್ರಮಾಣಪತ್ರ (Marriage Certificate) ಸಲ್ಲಿಸಬೇಕಾಗುತ್ತದೆ.

ಪ್ರಾದೇಶಿಕ ಭಾಷೆಯ ದೋಷ ತಿದ್ದುಪಡಿ

ಆಧಾರ್‌ನಲ್ಲಿ ಇಂಗ್ಲಿಷ್ ಹೆಸರು ಸರಿಯಿದ್ದು, ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಯಲ್ಲಿ ಹೆಸರು ತಪ್ಪಾಗಿ ಮುದ್ರಿತವಾಗಿದ್ದರೆ ತಿದ್ದಲು ಅಗತ್ಯ ಗುರುತಿನ ಪುರಾವೆಯೊಂದಿಗೆ (PoI) ನಿಗದಿತ ನಮೂನೆಯ ಅಫಿಡವಿಟ್ ಸಲ್ಲಿಸಬೇಕಾಗುತ್ತದೆ.

ಸಂಪೂರ್ಣ ಹೆಸರು ಬದಲಾವಣೆ

ವ್ಯಕ್ತಿಯೊಬ್ಬರು ತಮ್ಮ ಮೂಲ ಹೆಸರನ್ನೇ ಸಂಪೂರ್ಣವಾಗಿ ಹೊಸ ಹೆಸರಿಗೆ ಬದಲಾಯಿಸಲು ಬಯಸಿದರೆ, ಅದಕ್ಕೆ ಬೇಕಾಗುವ ಅಗತ್ಯ ದಾಖಲೆಗಳು ಈ ಕೆಳಕಂಡಂತಿವೆ:

ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಧಿಕೃತ ಗೆಜೆಟ್ ಅಧಿಸೂಚನೆ (Gazette Notification) ಕಡ್ಡಾಯ. ಗೆಜೆಟ್ ಪತ್ರದ ಜೊತೆಗೆ ನೂತನ ಹೆಸರಿರುವ ಗುರುತಿನ ಪುರಾವೆ (PoI) ಹಾಗೂ ಪತ್ರಿಕಾ ಜಾಹೀರಾತಿನ ಪ್ರತಿಯನ್ನು ಸಲ್ಲಿಸಬೇಕಾಗುತ್ತದೆ.

ಇದನ್ನೂ ಓದಿ: ಈ ವಾರ 29 ಷೇರುಗಳ ಲಿಸ್ಟಿಂಗ್; 2026ರಲ್ಲಿ ಐಪಿಒ ಸುಗ್ಗಿ, ಈ ವಾರ ಹೊಸ ಐಪಿಒ ಒಂದೇ ಒಂದು

ನಿಯಮಾವಳಿಯ ಪ್ರಕಾರ ಜನಸಂಖ್ಯಾ ವಿವರಗಳ (Demographic Update) ತಿದ್ದುಪಡಿಗೆ ನಿಯಮಿತ ಶುಲ್ಕ (₹75) ಅನ್ವಯವಾಗುತ್ತದೆ. ಪ್ರಸ್ತುತ ಆನ್‌ಲೈನ್ ಮೈಆಧಾರ್ (myAadhaar) ಪೋರ್ಟಲ್‌ನಲ್ಲಿ ವಿಳಾಸ ತಿದ್ದುಪಡಿಗೆ ಮಾತ್ರ ಅವಕಾಶವಿದೆ. ಹೆಸರು ತಿದ್ದುಪಡಿಗಾಗಿ ಸಾರ್ವಜನಿಕರು ಅಗತ್ಯ ದಾಖಲೆಗಳೊಂದಿಗೆ ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ (Aadhaar Seva Kendra) ಭೇಟಿ ನೀಡಿ ಬಯೋಮೆಟ್ರಿಕ್ ದೃಢೀಕರಣ ಪೂರ್ಣಗೊಳಿಸಬೇಕಾಗುತ್ತದೆ.

ಸಾಮಾನ್ಯವಾಗಿ ಆಧಾರ್‌ನಲ್ಲಿ ಹೆಸರನ್ನು ಜೀವನದಲ್ಲಿ ಗರಿಷ್ಠ 2 ಬಾರಿ ಮಾತ್ರ ಬದಲಾಯಿಸಲು ಅವಕಾಶವಿದ್ದು, ಹೊಸ ನಿಯಮಗಳು ಅರ್ಜಿಗಳ ನೈಜತೆಯನ್ನು ಪರಿಶೀಲಿಸಲು ಮತ್ತು ನಕಲಿ ದಾಖಲೆಗಳನ್ನು ತಡೆಯಲು ಹೆಚ್ಛಿನ ಆದ್ಯತೆ ನೀಡಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us