AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾರ 29 ಷೇರುಗಳ ಲಿಸ್ಟಿಂಗ್; 2026ರಲ್ಲಿ ಐಪಿಒ ಸುಗ್ಗಿ, ಈ ವಾರ ಹೊಸ ಐಪಿಒ ಒಂದೇ ಒಂದು

ಈ ವಾರ ಷೇರು ಮಾರುಕಟ್ಟೆಯಲ್ಲಿ 29 ಕಂಪನಿಗಳ ಷೇರುಗಳು ಲಿಸ್ಟ್ ಆಗುತ್ತಿವೆ. ಆದರೆ, ಒಂದೇ ಒಂದು ಹೊಸ ಐಪಿಒ ಮಾತ್ರ ಪ್ರಾಥಮಿಕ ಬಂಡವಾಳ ಮಾರುಕಟ್ಟೆಗೆ ಈ ವಾರ ಬರುತ್ತಿರುವುದು. ಅದೂ ಆರ್​ಕೆ ಫ್ಯಾಷನ್ ಅಕ್ಸೆಸರೀಸ್ ಎನ್ನುವ ಒಂದು ಸಣ್ಣ ಕಂಪನಿಯ ಐಪಿಒ ಇದು. ಆದರೆ, 2026ರ ವರ್ಷವು ಐಪಿಒ ಮಾರುಕಟ್ಟೆಯಲ್ಲಿ 275 ಕಂಪನಿಗಳು ಬಂದು ಲಕ್ಷಾಂತರ ಕೋಟಿ ರೂ ಬಂಡವಾಳ ಪಡೆದುಕೊಂಡು ಹೋಗಿರುವುದಂತು ಹೌದು.

ಈ ವಾರ 29 ಷೇರುಗಳ ಲಿಸ್ಟಿಂಗ್; 2026ರಲ್ಲಿ ಐಪಿಒ ಸುಗ್ಗಿ, ಈ ವಾರ ಹೊಸ ಐಪಿಒ ಒಂದೇ ಒಂದು
ಷೇರು ಮಾರುಕಟ್ಟೆImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 05, 2026 | 4:36 PM

Share

ನವದೆಹಲಿ, ಅಕ್ಟೋಬರ್ 5: ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ಈ ವಾರ ಹೊಸ ಐಪಿಒಗಳ (Initial Public Offering – IPO) ಬಿಡುಗಡೆ ಮಂದಗತಿಯಲ್ಲಿರಲಿದೆ. ಪ್ರಾಥಮಿಕ ಮಾರುಕಟ್ಟೆಯಲ್ಲಿ (Primary Market) ಯಾವುದೇ ದೊಡ್ಡ ಮೇನ್‌ಬೋರ್ಡ್ (Mainboard) ಐಪಿಒಗಳು ಈ ವಾರ ಸಾರ್ವಜನಿಕ ಚಂದಾದಾರಿಕೆಗೆ ತೆರೆದುಕೊಳ್ಳುತ್ತಿಲ್ಲ. ಆದರೆ, ಕೇವಲ 1 ಎಸ್‌‌ಎಂಇ (SME) ಐಪಿಒ ಮಾತ್ರ ಮಾರುಕಟ್ಟೆಗೆ ಬರಲಿದ್ದು, ಬಿಡ್ಡಿಂಗ್ ಪೂರ್ಣಗೊಂಡಿರುವ ಬೃಹತ್ ಸಂಖ್ಯೆಯ ಅಂದರೆ 29 ನೂತನ ಷೇರುಗಳು ಈ ವಾರ ಲಿಸ್ಟಿಂಗ್ (Listing) ಆಗಲಿವೆ.

ಆರ್​ಕೆ ಫ್ಯಾಷನ್ ಅಕ್ಸೆಸರೀಸ್ ಐಪಿಒ: ಈ ವಾರ ಸಾರ್ವಜನಿಕ ಹೂಡಿಕೆಗೆ ಲಭ್ಯವಿರುವುದು ಕೇವಲ ಒಂದೇ ಒಂದು ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮದ (SME) ಐಪಿಒ. ಕೋಲ್ಕತಾ ಮೂಲದ ಆಭರಣ ಕಂಪನಿಯಾದ ಆರ್​ಕೆ ಫ್ಯಾಷನ್ ಅಕ್ಸೆಸರೀಸ್ ಇವತ್ತು ಐಪಿಒ ಆರಂಭಿಸಲಿದೆ. ಪ್ರತೀ ಷೇರಿಗೆ 77 ರೂನಿಂದ 82 ರೂವರೆಗೆ ಬೆಲೆ ಇರುವ 42.67 ಲಕ್ಷ ಷೇರುಗಳನ್ನು ಬಿಡುಗಡೆ ಮಾಡಲಿದ್ದು, 34.99 ಕೋಟಿ ರೂ ಬಂಡವಾಳ ಗಿಟ್ಟಿಸುವ ನಿರೀಕ್ಷೆಯಲ್ಲಿದೆ. ಇದು ಬಿಟ್ಟರೆ ಮೇನ್‌ಬೋರ್ಡ್ ವಿಭಾಗದಲ್ಲಿ ಯಾವುದೇ ದೊಡ್ಡ ಕಂಪನಿಗಳು ಈ ವಾರ ಹೊಸದಾಗಿ ಷೇರು ಬಿಡುಗಡೆ ಮಾಡುತ್ತಿಲ್ಲ.

ಇದನ್ನೂ ಓದಿ: ಫುಯೆಲ್ ಚಾರ್ಜ್ ಹೆಚ್ಚಿಸಿದ ಇಂಡಿಗೋ; ವಿಮಾನ ಪ್ರಯಾಣ ದರವೂ ಏರಿಕೆ

ಆದರೆ, ಕಳೆದ ವಾರದ ಕೊನೆಯಲ್ಲಿ ಆರಂಭವಾಗಿರುವ ಕೆಲ ಐಪಿಒಗಳು ಈ ವಾರ ಕೆಲ ದಿನಗಳವರೆಗೂ ಚಾಲನೆಯಲ್ಲಿರಲಿವೆ. ಒಮಾರ ವೆಂಚರ್ಸ್, ಇವೆನ್ಷನ್ಸ್, ಎಸ್​ಜೆಪಿ ಅಲ್ಟ್ರಾಸಾನಿಕ್ಸ್, ಸಾಲ್​ಫೀಜ್ ಸ್ಮಾರ್ಟ್ ಎಲೆಕ್ಟ್ರಾನಿಕ್ಸ್ ಐಪಿಒ ಸಬ್​ಸ್​ಕ್ರೈಬ್ ಆಗಲು ನಾಳೆಯವರೆಗೆ ಕಾಲಾವಕಾಶ ಇದೆ.

29 ಕಂಪನಿಗಳು ಷೇರು ವಿನಿಮಯ ಕೇಂದ್ರಗಳಿಗೆ ಪದಾರ್ಪಣೆ

ಕಳೆದ ವಾರಗಳಲ್ಲಿ ಬಿಡ್ಡಿಂಗ್ ಪ್ರಕ್ರಿಯೆ ಪೂರ್ಣಗೊಳಿಸಿ ಯಶಸ್ವಿಯಾದ ಕಂಪನಿಗಳ ಷೇರುಗಳು ಬಿಎಸ್‌ಇ (BSE) ಹಾಗೂ ಎನ್‌ಎಸ್‌ಇ (NSE) ಮಾರುಕಟ್ಟೆಗಳಲ್ಲಿ ಲಿಸ್ಟಿಂಗ್ ಆಗಲಿವೆ. ಒಟ್ಟು 29 ಕಂಪನಿಗಳ ಷೇರುಗಳು ಈ ವಾರ ಹೂಡಿಕೆದಾರರ ಡಿಮ್ಯಾಟ್ ಖಾತೆಗಳನ್ನು ಸೇರಲಿದ್ದು, ಮಾರುಕಟ್ಟೆಯಲ್ಲಿ ವಹಿವಾಟು ಆರಂಭಿಸಲಿವೆ.

ಲಿಸ್ಟ್ ಆಗಲಿರುವ 29 ಹೊಸ ಷೇರುಗಳ ಪೈಕಿ 21 ಷೇರುಗಳು ಎಸ್​ಎಂಇಗಳದ್ದಾಗಿವೆ. ಎಂಟು ಮಾತ್ರ ದೊಡ್ಡ ಮಟ್ಟದ ಕಂಪನಿಗಳ ಷೇರುಗಳಾಗಿವೆ. ಓರಿಯೆಂಟ್ ಕೇಬಲ್ಸ್, ರನ್​ವಲ್ ಎಂಟರ್​ಪ್ರೈಸಸ್, ಏಸ್​ವೆಕ್ಟರ್ ಮತ್ತು ಜರ್ಮನ್ ಗ್ರೀನ್ ಸ್ಟೀಲ್ ಸಂಸ್ಥೆಗಳ ಷೇರುಗಳು ಇವತ್ತು ಲಿಸ್ಟ್ ಆಗಿವೆ. ಶಾ ಇನ್ವೆಸ್ಟರ್ಸ್ ಹೋಮ್, ಎಸ್​ಆರ್​ಐಟಿ ಷೇರುಗಳು ನಾಳೆ ಲಿಸ್ಟ್ ಆಗುತ್ತವೆ. ವಿಶಾಲ್ ನಿರ್ಮಿತಿ, ನಿತ್ಯಾಸ್ ಜೆಮ್ಸ್ ಅಂಡ್ ಜ್ಯೂವೆಲರಿ ಅ. 8ರಂದು ಲಿಸ್ಟ್ ಆಗಲಿವೆ.

ಇದನ್ನೂ ಓದಿ: ಈ ವಾರ ಜಿಎಸ್​ಟಿ ಕೌನ್ಸಿಲ್ ಸಭೆ; ಸಣ್ಣ ಇ-ಕಾಮರ್ಸ್ ವರ್ತಕರಿಗೆ ನಿರಾಳ ತರುವ ಕ್ರಮಗಳಿಗೆ ನಿರೀಕ್ಷೆ

ಈ ವರ್ಷ (2026ರ ಜನವರಿಯಿಂದ) ಪ್ರಾಥಮಿಕ ಬಂಡವಾಳ ಮಾರುಕಟ್ಟೆ ಎನಿಸಿದ ಐಪಿಒ ಬಹಳ ಕಂಪನಿಗಳನ್ನು ಕಂಡಿದೆ. ಮೊದಲ 9 ತಿಂಗಳಲ್ಲಿ 275 ಕಂಪನಿಗಳು ಐಪಿಒ ನಡೆಸಿವೆ. ಒಟ್ಟಾರೆ 1.21 ಲಕ್ಷ ಕೋಟಿ ರೂನಷ್ಟು ಬಂಡವಾಳ ದಕ್ಕಿಸಿಕೊಂಡಿವೆ. ಎನ್​ಎಸ್​ಇ ಇಂಡಿಯಾ, ಎಸ್​ಬಿಐ ಫಂಡ್ಸ್ ಮ್ಯಾನೇಜ್ಮೆಂಟ್, ಮಣಿಪಾಲ್ ಹೆಲ್ತ್ ಎಂಟರ್​ಪ್ರೈಸಸ್, ಇಂಡೋ ಎಂಐಎಂ ಇತ್ಯಾದಿ ಐಪಿಒಗಳು ದೊಡ್ಡ ಪ್ರಮಾಣದ ಬಂಡವಾಳ ಪಡೆಯುವಲ್ಲಿ ಯಶಸ್ವಿಯಾಗಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More